ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಗಿದ ಮಣ್ಣೆತ್ತಿನ ಹಬ್ಬದ ಸಂಭ್ರಮ

ಲಾಕ್‌ಡೌನ್‌ ಪರಿಣಾಮ ಮಣ್ಣೆತ್ತುಗಳ ದರ ಏರಿಕೆ
Last Updated 20 ಜೂನ್ 2020, 16:22 IST
ಅಕ್ಷರ ಗಾತ್ರ

ಯಾದಗಿರಿ: ಆಧುನಿಕತೆಯ ಪರಿಣಾಮ ಗ್ರಾಮೀಣ ಭಾಗದ ಹಬ್ಬಗಳು ಸೊರಗಿವೆ. ಮಣ್ಣೆತ್ತಿನ ಖರೀದಿಯೂ ಕಡಿಮೆಯಾಗಿದೆ.

ಭಾನುವಾರ ಮಣ್ಣೆತ್ತಿನ ಅಮಾವಾಸ್ಯೆ ಇದ್ದು, ನಗರದ ಮೆಥೋಡಿಸ್ಟ್‌ ಚರ್ಚ್‌ ಬಳಿ ಬಣ್ಣ ಬಣ್ಣದ ಮಣ್ಣೆತ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಆದರೆ, ಖರೀದಿದಾರರಿಲ್ಲ ಎನ್ನುವುದು ಕುಂಬಾರರ ಮಾತಾಗಿದೆ.

‘ಶನಿವಾರ ಬೆಳಿಗ್ಗೆಯಿಂದ ಮಾರಾಟಕ್ಕೆ ಕುಳಿತುಕೊಂಡಿದ್ದೇವೆ. ಆದರೆ, ಖರೀದಿದಾರರೇ ಇಲ್ಲದಂತಾಗಿದೆ. ಬೇರೆ ಕಡೆಯಿಂದ ಖರ್ಚು ಮಾಡಿ ತಂದರೂ ವ್ಯಾಪಾರವೇ ಇಲ್ಲ’ ಎಂದುವ್ಯಾಪಾರಿ ಲಕ್ಷ್ಮಿ ಕುಂಬಾರ ಹೇಳಿದರು.

‘ಚಿಕ್ಕ ಗಾತ್ರದ ಮಣ್ಣೆತ್ತುಗಳು ₹40 ರಿಂದ ಆರಂಭವಾಗುತ್ತವೆ. ಬಣ್ಣ ಬಳಿದ ಎತ್ತುಗಳು ₹120ಕ್ಕೆ ಜೋಡಿ ಮಾರಾಟ ಮಾಡಲಾಗುತ್ತಿದೆ. ಬೇರೆ ರಾಜ್ಯದಿಂದ ತರಿಸುವ ಕಾರಣ ಬೆಲೆ ದುಬಾರಿ ಆಗಿದೆ. ರೈತಾಪಿ, ಧಾರ್ಮಿಕ ಹಿನ್ನೆಲೆಯುಳ್ಳವರು ಮಣ್ಣೆತ್ತುಗಳನ್ನು ಖರೀದಿಸುತ್ತಾರೆ. ಲಾಕ್‌ಡೌನ್‌ನಿಂದ ಮೊದಲೇ ಜರ್ಝರಿತರಾಗಿದ್ದೇವೆ. ಈಗ ವ್ಯಾಪಾರ ಇಲ್ಲದಿದ್ದರೆ ಮತ್ತಷ್ಟು ಸಮಸ್ಯೆಗೆ ಸಿಲುಕಿಕೊಳ್ಳುತ್ತೇವೆ. ಭಾನುವಾರ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಮುದ್ನಾಳ ಕೆರೆಯಿಂದ ಜೇಡಿ ಮಣ್ಣು ತಂದು ಮಣ್ಣೆತ್ತುಗಳನ್ನು ತಯಾರಿಸಿದ್ದೇವೆ. ಒಂದು ತಿಂಗಳಿಂದ ಇದಕ್ಕೆ ತಯಾರಿ ನಡೆದಿದೆ. ಲಾಕ್‌ಡೌನ್‌ ವೇಳೆ ನಮ್ಮ ಸಮುದಾಯಕ್ಕೆ ಸರ್ಕಾರದಿಂದ ಯಾವುದೇ ಸಹಾಯಧನ ಬರಲಿಲ್ಲ. ಇವುಗಳು ಬಿಕರಿಯಾದರೆ ನಮಗೆ ಅನ್ನ ಸಿಗುತ್ತದೆ’ ಎಂದು ನಾಗಪ್ಪಕುಂಬಾರ ತಿಳಿಸಿದರು.

‘ಸಣ್ಣವರು ಇರುವಾಗ ಊರು ಕೆರೆಯ ಮಣ್ಣನ್ನು ತಂದು ದೊಡ್ಡ ಗಾತ್ರದ ಎತ್ತುಗಳನ್ನು ತಯಾರಿಸುತ್ತಿದ್ದೀವಿ. ಈಗ ಕೆರೆಗಳು ಇಲ್ಲ. ಅಂಥ ಜೇಡಿ ಮಣ್ಣು ಸಿಗುವುದಿಲ್ಲ. ಹೀಗಾಗಿ ಕುಂಬಾರರು ತಯಾರಿಸಿದ ಮಣ್ಣೆತ್ತುಗಳ ಖರೀದಿಗೆ ಬಂದಿದ್ದೇನೆ. ಅಂದಿನ ದಿನಗಳು ಮಾಯವಾಗಿವೆ’ ಎಂದು ಹಿರಿಯರಾದ ಮಲ್ಲಿಕಾರ್ಜುನ ರೆಡ್ಡಿ ಹೇಳಿದರು.

‘ಮನೆಯಲ್ಲಿ ಮಣ್ಣೆತ್ತುಗಳನ್ನು ಪೂಜೆ ಮಾಡಲಾಗುತ್ತಿತ್ತು. ಯುವಕರು ಸೇರಿಕೊಂಡು ದೊಡ್ಡ ಮಣ್ಣೆತ್ತು ಮಾಡಿ ಊರೆಲ್ಲ ಮೆರವಣಿಗೆ ಮಾಡಲಾಗಿತ್ತು. ಆ ನಂತರ ದೇವಸ್ಥಾನ ಮೇಲೆ ಅದನ್ನು ಇಡಲಾಗುತ್ತಿತ್ತು. ಮಳೆ ಭರಪೂರ ಆಗಿ ಕರಗಿಹೋಗುತ್ತಿತ್ತು’ ಎಂದು ತಮ್ಮ ಅನುಭವ ಹಂಚಿಕೊಂಡರು.

ಕಳೆದ ವರ್ಷಕ್ಕಿಂತ ಈ ಬಾರಿ ದರ ಹೆಚ್ಚಳ

ಲಾಕ್‌ಡೌನ್‌ ಪರಿಣಾಮ ಕಳೆದ ವರ್ಷಕ್ಕಿಂತ ಈ ಬಾರಿ ದರ ಹೆಚ್ಚಳವಾಗಿದೆ. ಅಕ್ಕಲಕೋಟ, ಸೊಲ್ಲಾಪುರ ಕಡೆಯಿಂದ ಬಣ್ಣದ ಮಣ್ಣೆತ್ತುಗಳನ್ನು ತರಿಸಿದ್ದೇವೆ ಎಂದು ವ್ಯಾಪಾರಿ ನೇತ್ರಾವತಿ ವಿಶ್ವನಾಥ ಕುಂಬಾರ ಅಭಿಪ್ರಾಯಪಟ್ಟಿದ್ದಾರೆ.

ಮೂರು ಬಗೆಯ ಮಣ್ಣೆತ್ತುಗಳು

ನಮ್ಮಲ್ಲಿ ಮೂರು ವಿದಧ ಮಣ್ಣೆತ್ತುಗಳಿವೆ. ₹40ರಿಂದ ₹600 ತನಕ ಬೆಲೆ ಇದೆ. ಗ್ರಾಹಕರು ಬಣ್ಣ, ಮಣ್ಣೆತ್ತುಗಳನ್ನು ಖರೀದಿಸುತ್ತಿದ್ದಾರೆ.
ಎಂದು ವ್ಯಾಪಾರಿ ಶ್ರೀಕಾಂತ ಕುಂಬಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT