ಗುರುವಾರ , ಫೆಬ್ರವರಿ 25, 2021
19 °C
ಸುರಪುರ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸತೀಶ ಜಾರಕಿಹೊಳಿ ಹೇಳಿಕೆ

ಪಕ್ಷ ಸಂಘಟನೆಗೆ ಮೊದಲ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ದೊಡ್ಡ ಆಸ್ತಿ. ಅವರ ಹಿತಾಸಕ್ತಿ ರಕ್ಷಣೆ ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಕಾರ್ಯಾಧ್ಯಕ್ಷನಾಗಿ ರಾಜ್ಯದಾದ್ಯಂತ ಸಂಚರಿಸುತ್ತಿದ್ದು, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪ್ರತ್ನಿಸುತ್ತಿದ್ದೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಮಾಜಿ ಶಾಸಕರ ನಿವಾಸದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗುರುವಾರ ರಾತ್ರಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದರೂ ಪಕ್ಷ ಹಿನ್ನಡೆ ಅನುಭವಿಸುತ್ತಿರುವುದು ಅಘಾತಕಾರಿ ಸಂಗತಿ. ನಾವು ಎಲ್ಲಿ ಎಡವಿದ್ದೇವೆ. ಹಿನ್ನಡೆಗೆ ಕಾರಣಗಳೇನು ಎಂದು ಈಗಾಗಲೇ ಮುಖಂಡರೆಲ್ಲರೂ ಸೇರಿ ಚಿಂತಿಸಿದ್ದೇವೆ. ಅಂತಿಮವಾಗಿ ತೀರ್ಮಾನಕೆ ಬಂದಿದ್ದು, ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ಏರ್ಪಡಿಸಿ ಕಾರ್ಯಕರ್ತರನು ಒಗ್ಗೂಡಿಸುವ ಕೆಲಸ ನಡೆಯುತ್ತಿದೆ ಎಂದರು.

ತಾಲೂಕಿನಲ್ಲಿ ಬೋಗಸ್ ಮತದಾರರ ಸೇರ್ಪಡೆಯಾಗಿದೆ ಎಂಬ ಆರೋಪ ಅಘಾತಕಾರಿ. ಇಷ್ಟೊಂದು ಪ್ರಮಾಣದಲ್ಲಿ ಅದು ಹೇಗೆ ಬೋಗಸ್ ನಡೆಯಿತು. ಮೊದಲೇ ಎಚ್ಚೆತ್ತುಕೊಂಡಿದ್ದರೆ ಈ ತಪ್ಪು ಆಗುತ್ತಿರಲಿಲ್ಲ. ಮುಂದಾದರೂ ಎಚ್ಚರಿಕೆ ವಹಿಸಬೇಕು. ಚುನಾವಣೆ ಬಂದಾಗಲೆ ಕೆಲಸ ಮಾಡಿದರೆ ಗೆಲ್ಲಲು ಸಾಧ್ಯವಿಲ್ಲ. ಚುನಾವಣೆಗೆ ಸಾಕಷ್ಟು ಸಮಯವಿದೆ. ಈಗಿನಿಂದಲೇ ಪಕ್ಷ ಸಂಘಟನೆ ಮಾಡಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಮಾಡಿ ಕಾರ್ಯಕರ್ತರ ಕಷ್ಟ–ಸುಖಗಳಲ್ಲಿ ಭಾಗಿಯಾಗಿ ಅವರನ್ನು ಹಿಡಿದಿಟ್ಟುಕೊಂಡರೆ ಗೆಲುವು ಸುಲಭ ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣವನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ನಮ್ಮಲ್ಲಿ ಐಟಿ ತಂಡದ ಕೊರತೆ ಇದೆ. ಆದರೆ ಬಿಜೆಪಿಯವರ ತಂಡ ಪ್ರಭಾವಿಯಾಗಿ ಕೆಲಸ ಮಾಡುತ್ತಿದೆ. ಇದಕ್ಕೆ ಸವಾಲು ಹೊಡೆಯಲು ಅನುಭವಿ ಯುವಕರನ್ನು ಗುರುತಿಸಲಾಗುತ್ತಿದೆ. ಅವರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಒಟ್ಟಾರೆಯಾಗಿ ತಾವೆಲ್ಲರೂ ಸೇರಿ ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವು ಸಂಕಲ್ಪ ಮಾಡಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಪ್ರಮುಖರಾದ ವಿಠ್ಠಲ ಯಾದವ್, ರಾಜಾ ವೇಣುಗೋಪಾಲ ನಾಯಕ, ರಾಜಾ ರೂಪಕುಮಾರ ನಾಯಕ, ರಾಜಾ ಸಂತೋಷ ನಾಯಕ, ರಾಜಕುಮಾರ ನಾಯಕ, ರಾಜಾ ಪಿಡ್ಡ ನಾಯಕ ತಾತಾ, ಮಲ್ಲಣ್ಣ ಸಾಹು ಮುದೋಳ, ಅಬ್ದಲ್‍ಅಲಿಂ ಗೋಗಿ, ಅಬ್ದುಲ್ ಗಫರ್ ನಗನೂರಿ, ರಮೇಶ ದೊರೆ ಆಲ್ದಾಳ ಹಾಗೂ ದೇವಿಂದ್ರಪ್ಪ ಪತ್ತಾರ ಇದ್ದರು. ವೆಂಕಟೇಶ ನಾಯಕ ಬೇಟೆಗಾರ ಸ್ವಾಗತಿಸಿದರು. ಆದಪ್ಪ ಹೊಸಮನಿ ನಿರೂಪಿಸಿ, ವಂದಿಸಿದರು.

‘ಸಿದ್ದರಾಮಯ್ಯರನ್ನು ಸೋಲಿಸಿದ್ದು ಮತದಾರರು’

ಸುರಪುರ: ‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಆ ಕ್ಷೇತ್ರದ ಮತದಾರರೇ ಹೊರತು ಪಕ್ಷದವರು ಅಲ್ಲ. ಇದು ವ್ಯರ್ಥ ಚರ್ಚೆ. ಇದರಲ್ಲಿ ಹುರುಳಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವುದು ಪಕ್ಷದವರಿಗೆ ಬೇಕಿರಲಿಲ್ಲ. ಷಡ್ಯಂತ್ರ ನಡೆಸಿದರು ಎಂಬುದೆಲ್ಲ ತಪ್ಪು ಕಲ್ಪನೆ. ನಾವ್ಯಾರೂ ಅವರಿಗೆ ಅಡ್ಡಗಾಲು ಹಾಕಿಲ್ಲ. ಎಲ್ಲರು ಸೇರಿ ಅವರನ್ನು ಮುಖ್ಯಮಂತ್ರಿ ಮಾಡಿದೆವು ಹೊರತು ಅವರೇ ನೇರ ಮುಖ್ಯಮಂತ್ರಿ ಆಗಿಲ್ಲ’ ಎಂದರು.

‘ಸೋಲನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕೆ ಹೊರತು ಇನ್ನೊಬ್ಬರ ಮೇಲೆ ಆರೋಪಿಸಬಾರದು. ಚುನಾವಣೆ ಮುಗಿದು ಮೂರು ವರ್ಷವಾಗಿದ್ದು, ಅದರ ಬಗ್ಗೆ ಚರ್ಚೆ ಈಗ ಅನಗತ್ಯ’ ಎಂದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬದ್ಧತೆ ಇಲ್ಲ. ಮುಂಜಾನೆ ಜಾರಿಗೆ ತಂದ ನಿಯಮ ಸಂಜೆ ವೇಳೆಗೆ ಹಿಂಪಡೆಯುತ್ತದೆ.

ದಿನಕ್ಕೊಂದು ಕಾನೂನು ಜಾರಿಗೆ ತಂದು ಜನರನ್ನು ಗೊಂದಲ ಮೂಡಿಸುತ್ತಿದೆ’ ಎಂದು ಆರೋಪಿಸಿದರು.

‘ಬೆಳಗಾವಿ ಲೋಕಸಭಾ ಚುನಾವಣೆ ಸ್ಪರ್ಧಿಸಲು ನನ್ನ ಹೆಸರು ಕೇಳಿ ಬಂದಿದೆ. ಪಕ್ಷದ ಹೈಕಮಾಂಡ್‌ಗೆ ಶಿಫಾರಸು ಕೂಡ ಕಳುಹಿಸಲಾಗಿದೆ. ಆದರೆ, ಈ ಬಗ್ಗೆ ನಾನು ಇನ್ನೂ ವೈಯಕ್ತಿಕ ನಿರ್ಧಾರ ತೆಗೆದುಕೊಂಡಿಲ್ಲ. ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದೇವೆ’ ಎಂದರು.

ಮಸ್ಕಿ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ವೇಣುಗೋಪಾಲ ಗೌಡ, ಶಾಸಕರ ಪುತ್ರ ರಾಜಾ ವೇಣುಗೋಪಾಲ ನಾಯಕ, ರಾಜಾ ರೂಪಕುಮಾರ ನಾಯಕ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು