ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಹೊಲಗಳಿಗೆ ನುಗ್ಗಿದ ನೀರು

ಹತ್ತಿ, ಭತ್ತ, ಸಜ್ಜೆ, ಹೆಸರು, ಸೂರ್ಯಪಾನ ಬೆಳೆಗಳಿಗೆ ಹಾನಿ; ಜನರಲ್ಲಿ ಹೆಚ್ಚಿದ ಆತಂಕ
Last Updated 29 ಜುಲೈ 2021, 5:07 IST
ಅಕ್ಷರ ಗಾತ್ರ

‌ಶಹಾಪುರ/ವಡಗೇರಾ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 4 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿಬಿಟ್ಟಿದ್ದರಿಂದ ನೀರಿನ ಪ್ರವಾಹ ಹೆಚ್ಚಳವಾಗಿದೆ. ನದಿ ದಂಡೆಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು ಬೆಳೆಹಾನಿಯಾಗಿವೆ.

ಕಳೆದ ಶುಕ್ರವಾರದಿಂದ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಶಹಾಪುರ-ದೇವದುರ್ಗ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಭಾನುವಾರ ಮತ್ತು ಸೋಮವಾರ ತುಸು ಕಡಿಮೆಯಾಗಿತ್ತು. ಈಗ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜನರಲ್ಲಿ ಭೀತಿಉಂಟಾಗಿದೆ.

ಶಹಾಪುರ ತಾಲ್ಲೂಕಿನ ಗೌಡೂರ ಗ್ರಾಮದ ಮನೆ ಹತ್ತಿರಕ್ಕೆ ನೀರು ನುಗ್ಗುತ್ತಲಿವೆ. ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಕಂದಾಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ. ಅಲ್ಲದೆ ವಡಗೇರಾ ತಾಲ್ಲೂಕಿನ ಯಕ್ಷಿಂತಿ ಗ್ರಾಮದ ತಗ್ಗು ಪ್ರದೇಶದ ಮನೆ ಬಳಿ ನೀರು ಬರುತ್ತಿದೆ.

ಗೊಂದೆನೂರ, ಚೆನ್ನೂರ, ಐಕೂರ, ಅನಕಸೂಗೂರ ಶಿವಪುರ, ಬೆಂಡಬೆಂಬಳಿ ಹೀಗೆ ಹಲವಾರು ಹಳ್ಳಿಗಳು ಪ್ರವಾಹದ ಆತಂಕದ ಕ್ಷಣಗಳನ್ನು ಎದುರಿಸುವಂತೆ ಆಗಿದೆ ಎನ್ನುತ್ತಾರೆ ಗೌಡೂರ ಗ್ರಾಮದ ದೇವಿಂದ್ರ ಛಲವಾದಿ.

ನದಿ ದಂಡೆಯ ಅಕ್ಕಪಕ್ಕದಲ್ಲಿ ಬಿತ್ತನೆ ಮಾಡಿದ್ದ ಹತ್ತಿ, ಭತ್ತ, ಸಜ್ಜೆ, ಹೆಸರು, ಸೂರ್ಯಪಾನ ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೆ ಫಲವತ್ತಾದ ಮಣ್ಣು ಪ್ರವಾಹದ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದೆ. ವಾರದ ಹಿಂದೆ ನದಿ ಪಾತ್ರದ ಜನತೆಯು ನದಿ ದಂಡೆಯಲ್ಲಿ ಅಳವಡಿಸಿದ್ದ ವಿದ್ಯುತ್ ಪಂಪಸೆಟ್‌ಗಳನ್ನು ಸುರಕ್ಷಿತಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದರಿಂದ ನಾಟಿ ಮಾಡಿದ ಭತ್ತಕ್ಕೆ ನೀರಿಲ್ಲದೆ

ಒಣಗಿದೆ. ಒಂದೆಡೆ ಹಸಿ ಬರವನ್ನು ಎದುರಿಸುತ್ತಿದ್ದರೆ ಇನ್ನೊಂದಡೆ ಅದೇ ಪ್ರದೇಶದಲ್ಲಿ ಬೆಳೆಗೆ ನೀರಿಲ್ಲದೆ ಬಿರುಕು ಬಿಟ್ಟಂತೆ ಕಾಣಿಸುತ್ತಿದೆ ಎನ್ನುತ್ತಾರೆ ಕೊಳ್ಳೂರ ಗ್ರಾಮದ ಶಿವರಡ್ಡಿ.

ಕೃಷ್ಣಾ ನದಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಬಂದರೆ ಜನರಿಗೆ ಅಪಾಯ ತಗುಲುತ್ತದೆ. ಅಲ್ಲದೆ ಕೃಷ್ಣಾ ನದಿ ದಂಡೆಯಿಂದ ಹಳ್ಳಿಗಳು ಎತ್ತರ ಪ್ರದೇಶದಲ್ಲಿ ಇರುವುದರಿಂದ ಅಪಾಯ ಕಡಿಮೆ. ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾಳಜಿ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು ಮಾಹಿತಿ ನೀಡಿದರು.

ಕಾಂಗ್ರೆಸ್ ಮುಖಂಡರಿಂದ ವೀಕ್ಷಣೆ: ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಚೆನ್ನಾರಡ್ಡಿ ತುನ್ನೂರ, ಮರಿಗೌಡ ಪಾಟೀಲ್ ಹುಲಕಲ್ ನೇತೃತ್ವದಲ್ಲಿ ಪ್ರವಾಹ ಉಂಟಾದ ಪ್ರದೇಶಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರು ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ಅಲ್ಲದೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT