ಮಂಗಳವಾರ, ಸೆಪ್ಟೆಂಬರ್ 28, 2021
23 °C

ಸುರಪುರ: ಶ್ರಾವಣಕ್ಕೆ ಹೆಚ್ಚಾಯಿತು ಹೂವಿನ ದರ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ನಾಡಿನಾದ್ಯಂತ ಶ್ರಾವಣ ಮಾಸ ರಂಗೇರುತ್ತಿದ್ದು, ತಿಂಗಳಾಂತ್ಯದವರೆಗೂ ದೇವರ ಪೂಜಾ ಕೈಂಕರ್ಯಗಳಿಗೆ ಅವಶ್ಯವಾದ ಹೂಗಳ ದರ ಗಗನಮುಖಿಯಾಗಿದೆ.

ನಾಗರ ಪಂಚಮಿಯಿಂದ ಶುರು ವಾಗುವ ಪೂಜಾ ಕಾರ್ಯಗಳು ಬಿಡುವಿಲ್ಲದೆ ತಿಂಗಳ ಪೂರ್ತಿ ನಡೆ ಯುತ್ತವೆ. ಬೇರೆ ತಿಂಗಳಲ್ಲಿ ಮಾರಾಟವಾಗುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಶ್ರಾವಣ ಮಾಸದಲ್ಲಿ ಮಾರಾಟವಾಗುತ್ತದೆ. ಆದರೆ ಈ ಬಾರಿ ಹೂವಿನ ದರ ಸಾಮಾನ್ಯ ದಿನಗಳಿಗಿಂತ ಮೂರು ಪಟ್ಟು ಹೆಚ್ಚಾಗಿದ್ದು, ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕೆ.ಜಿ. ಮಲ್ಲಿಗೆ ಹೂ ₹250, ಕೆ.ಜಿ ಕನಕಾಂಬರಿ ₹250, ಕೆ.ಜಿ ಸೇವಂತಿಗೆ ₹80 ಮತ್ತು ₹5ಕ್ಕೆ 3 ಗುಲಾಬಿ ಹೂವು ಮಾರಾಟ ಆಗುತ್ತಿದ್ದವು. ಈಗ ಮೂರುಪಟ್ಟು ಅಧಿಕವಾಗಿವೆ.

ತಾಲ್ಲೂಕಿನಲ್ಲಿ ಕೇವಲ 3 ಜನ ಹೂ ಕೃಷಿಕರಿದ್ದು, ಶೇ 90ರಷ್ಟು ಹೊರಗಿನಿಂದ ಆವಕವಾಗುತ್ತದೆ. 7 ಅಂಗಡಿಗಳು ಹಾಗೂ 15 ವರ್ತಕರು ಮನೆ ಮನೆಗೆ ತೆರಳಿ ಮಾರುತ್ತಾರೆ.

‘ಹಬ್ಬ ದಿನಗಳಲ್ಲಿ ರೈತರು ತಮ್ಮ ಇಚ್ಛೆಯಂತೆ ಬೆಲೆ ಹೆಚ್ಚಿಸುತ್ತಾರೆ. ಇದರಿಂದ ವರ್ತಕರಿಗೆ ಹೆಚ್ಚಿನ ಲಾಭ ಸಿಗುವುದಿಲ್ಲ‘ ಎನ್ನುತ್ತಾರೆ ಹೂ ವ್ಯಾಪಾರಿ.

‘ಒಂದು ಕೆ.ಜಿ. ಹೂವಿನಿಂದ 50 ಮೊಳ ಮಾಲೆ ತಯಾರಿಸಬಹುದು. ಒಂದು ಮೊಳ ಮಾಲೆ ಕಟ್ಟಲು ಶ್ರಮ ಸೇರಿ ₹18 ಖರ್ಚಾಗುತ್ತದೆ. ₹20ಕ್ಕೆ ಒಂದು ಮೊಳ ಮಾರಿದರೂ ನಷ್ಟವಾಗುತ್ತದೆ. ದರ ಹೆಚ್ಚಳದಿಂದ ವ್ಯಾಪಾರ ಕುಸಿದಿದ್ದು, ಗ್ರಾಹಕರು ಮಾರುಕಟ್ಟೆಗೆ ಬರುತ್ತಿಲ್ಲ. ಇದನ್ನೇ ನಂಬಿದ ವರ್ತಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ‘ ಎಂದು ಅಲವತ್ತುಕೊಂಡರು.

‘ಪುಷ್ಪ ಕೃಷಿ ಕಷ್ಟದಾಯಕ. ಹಬ್ಬದ ದಿನಗಳಲ್ಲಿ ಮಾತ್ರವೇ ಆ ನಷ್ಟ ಸರಿ ದೂಗಿಸಿಕೊಳ್ಳಬೇಕು. ಶ್ರಾವಣ, ದಸರಾ, ದೀಪಾವಳಿ ದಿನಗಳಲ್ಲಿ ಹೆಚ್ಚು ಬೆಲೆ ಸಿಗುತ್ತದೆ. ಉಳಿದ ದಿನಗಳಲ್ಲಿ ವ್ಯಾಪಾರಿಗಳಿಗೆ ಲಾಭ‘ ಎಂಬುದು ಬೆಳೆಗಾರರ ವಾದ.

‘ನಾಗರ ಪಂಚಮಿ, ಗೌರಿ ಪೂಜೆಯಂತಹ ಹಬ್ಬಗಳಿಗೆ ಹೆಚ್ಚಿನ ಹೂವುಗಳ ಅಗತ್ಯವಿದೆ. ಮನೆ ಮನೆಗೆ ಅರಿಷಿಣ, ಕುಂಕುಮಕ್ಕೆ ಹೋಗುವ ಮಹಿಳೆಯರಿಗೆ ಹೂವು ನೀಡಬೇಕು. ಬೆಲೆ ಹೆಚ್ಚಳದಿಂದ ಹಬ್ಬದ ಸಂಭ್ರಮ ಕಸಿದುಕೊಂಡಂತಾಗಿದೆ‘ ಎನ್ನುತ್ತಾರೆ ಗ್ರಾಹಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.