ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ 15 ದಿನಗಳಿಂದ ಆಗಾಗ ಮಳೆ ಸುರಿಯುತ್ತಿದ್ದು, ಬೆಟ್ಟ, ಗುಡ್ಡ ಸೇರಿದಂತೆ ಎಲ್ಲೆಡೆ ಹಸಿರು ಹೊದಿಕೆ ಆವರಿಸಿದೆ.
ಜಿಲ್ಲೆಯಲ್ಲಿ 2024ರ ಜನವರಿ 1 ರಿಂದ ಸೆಪ್ಟೆಂಬರ್ 6ರವರೆಗೆ ವಾಡಿಕೆ ಮಳೆ 450 ಮಿಲಿ ಮೀಟರ್ (ಎಂಎಂ) ಇದ್ದು, 555 ಎಂಎಂ ಮಳೆ ಸುರಿದಿದೆ. ಜೂನ್ ಒಂದರಿಂದ ಸೆಪ್ಟೆಂಬರ್ 6ರವರೆಗೆ 383 ಎಂಎಂ ವಾಡಿಕೆ ಮಳೆ ಇದ್ದು, 467 ಎಂಎಂ ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳ 1ರಿಂದ 6ನೇ ತಾರೀಖಿನವರೆಗೆ 26 ಎಂಎಂ ಮಳೆಯಾಗಬೇಕಾಗಿತ್ತು. 67 ಎಂಎಂ ಮಳೆ ಸುರಿದಿದೆ.
ಕಳೆದ ಒಂದು ವಾರದಲ್ಲಿ ಸುರಿದ ಉತ್ತಮ ಮಳೆಯಿಂದ ರಸ್ತೆಯ ಇಕ್ಕೆಲಗಳಲ್ಲಿ ಇರುವ ಮರಗಳು ಸಮೃದ್ಧವಾಗಿ ಹಸಿರಿನಿಂದ ನಳನಳಿಸುತ್ತಿವೆ. ಬೆಟ್ಟ ಗುಡ್ಡಗಳಲ್ಲಿ ಇರುವ ಗಿಡಗಳು ಮಳೆಯಿಂದ ಪುಟಿದೆದ್ದಿದ್ದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಇದರಿಂದ ಬೆಟ್ಟ ಗುಡ್ಡಗಳು ಹಸಿರು ಹೊದಿಕೆ ಹೊದ್ದುಕೊಂಡಂತೆ ಭಾಸವಾಗುತ್ತಿದೆ.
ಆಗಸ್ಟ್ ಕೊನೆಯ ವಾರ ಹಾಗೂ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ ಹತ್ತಿ ಹಾಗೂ ತೊಗರಿ ಬೆಳೆಯಲ್ಲಿ ಜೀವ ಕಳೆ ಬಂದಿದೆ.
ಜೂನ್ ತಿಂಗಳಲ್ಲಿ ಬಂದ ಅಲ್ಪ ಸ್ವಲ್ಪ ಮಳೆಯಿಂದಾಗಿ ಜಮೀನಿನಲ್ಲಿ ಇದ್ದ ಹತ್ತಿ ಬೆಳೆ ಒಣಗುವ ಹಂತ ತಲುಪಿದ್ದವು. ಸಾಲ ಸೋಲ ಮಾಡಿ ದುಬಾರಿ ಬೆಲೆಯ ಹತ್ತಿ ಬೀಜಗಳನ್ನು ತಂದು ಜಮೀನಲ್ಲಿ ಬಿತ್ತನೆಯನ್ನು ಮಾಡಿದ್ದರು. ಇದರ ಜತೆಗೆ ರಾಸಾಯನಿಕ ಗೊಬ್ಬರವನ್ನೂ ಹಾಕಿದ್ದರು. ಆದರೆ, ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ರೈತರ ಮುಖದಲ್ಲಿ ಕರಾಳಛಾಯೆ ಆವರಿಸಿತ್ತು.
ಆದರೆ, ಕಳೆದ ಒಂದು ವಾರದಿಂದ ಧರೆಗೆ ಇಳಿದ ವರುಣನಿಂದಾಗಿ ಹತ್ತಿ ಬೆಳೆಯಲ್ಲಿ ಚೇತರಿಕೆ ಕಂಡು ಬರುವುದರ ಜತೆಗೆ ಬೆಳೆಯಲ್ಲಿ ಹೂವು ಹಾಗೂ ಕಾಯಿಗಳು ಬಿಡಲು ಆರಂಭಿಸಿವೆ. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಸತತವಾಗಿ ಬಂದ ಮಳೆಯಿಂದಾಗಿ ಬರಡು ಜಮೀನು ಈಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಹತ್ತಿ ಬೆಳೆಯ ಬೆಳೆಗಳನ್ನು ನೋಡಿದಾಗ ಭೂಮಾತೆಯು ಹಸಿರು ಸೀರೆಯನ್ನು ಉಟ್ಟು ಸಂಭ್ರಮಿಸುತಿದ್ದಾಳೆ ಎಂಬ ಭಾವನೆ ಮೂಡುತ್ತಿದೆ.
ಉತ್ತಮ ಮಳೆಯಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಬಾಡಿ ಹೋಗುತ್ತಿದ್ದ ಹತ್ತಿ, ತೊಗರಿ, ಸೂರ್ಯಕಾಂತಿ ಬೆಳೆಗಳಿಗೆ ಜೀವಕಳೆ ಬಂದಿದೆ.
ರೈತ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಬೆಳೆಗಳ ಮಧ್ಯೆ ಬೆಳೆದಿರುವ ಕಳೆ ತೆಗೆಯುತ್ತಿದ್ದಾನೆ. ಹೆಸರು ಬೆಳೆ ರಾಶಿಯಾಗಿದ್ದು ಅಷ್ಟೇನು ಉತ್ತಮ ಫಸಲು ಬಂದಿಲ್ಲ.
ಹಸಿರು, ಕೆಂಪು, ಬಿಳಿ ಬಣ್ಣ ಸೇರಿದಂತೆ ವಿವಿಧ ಬಣ್ಣಗಳಿಂದ ಗಿಡ ಮರಗಳು, ಸಸಿಗಳು ಕಂಗೊಳಿಸುತ್ತಿವೆ.
ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ನಾಮದೇವ ವಾಟ್ಕರ್
ಮಳೆ ಅಭಾವದಿಂದ ಬರ ಆವರಿಸಿ ಪ್ರಕೃತಿ ಬೋಳಾಗಿತ್ತು. ಉತ್ತಮ ವರ್ಷಧಾರೆಯಿಂದ ನಿಸರ್ಗ ಮೈದುಂಬಿಕೊಂಡಿದ್ದು ಕಣ್ಣಿಗೆ ಹಬ್ಬ ಉಂಟು ಮಾಡುತ್ತಿದೆಕನಕಪ್ಪ ವಾಗಣಗೇರಿ ಪರಿಸರ ಪ್ರೇಮಿ
ಮಳೆ ಅಭಾವದಿಂದ 10 ಎಕರೆಯಲ್ಲಿ ಬೆಳೆದ ಹತ್ತಿ ಬೆಳೆ ಸಂಪೂರ್ಣ ನಾಶವಾಗುತ್ತದೆ ಎಂಬ ಆತಂಕ ಕಾಡುತ್ತಿತ್ತು. ವರುಣ ನಮ್ಮ ಕೈಹಿಡಿದಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದೇನೆವಿಶ್ವರಾಜ ಒಂಟೂರ ರೈತ ಚಂದಲಾಪುರ
ಕಳೆದ ಒಂದು ವಾರದಿಂದ ಬರುತ್ತಿರುವ ಮಳೆಯಿಂದಾಗಿ ಹತ್ತಿ ಬೆಳೆಯಲ್ಲಿ ಚೆನ್ನಾಗಿ ಇಳುವರಿ ಬರುವ ನಿರೀಕ್ಷೆ ಇದೆಯಂಕಣ್ಣ ಬಸಂತಪುರ ಪ್ರಗತಿಪರ ರೈತ ವಡಗೇರಾ
ಅತಿಯಾದ ಮಳೆಯಿಂದಾಗಿ ಹತ್ತಿ ಬೆಳೆಗೆ ಕೆಲವೊಂದು ರೋಗಗಳು ಬರುವ ಸಂಭವ ಉಂಟು. ರೋಗಗಳನ್ನು ಹೇಗೆ ತಡೆಗಟ್ಟಬೇಕು ಎಂಬ ಮಾಹಿತಿಯನ್ನು ರೈತರಿಗೆ ನೀಡಲಾಗಿದೆಗಣಪತಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ವಡಗೇರಾ
ಕಳೆದ ವರ್ಷ ಬರ ಎದುರಿಸಿ ನಿಟ್ಟುಸಿರು ಬಿಟ್ಟ ರೈತರಿಗೆ ಪ್ರಸಕ್ತ ಬಾರಿ ಉತ್ತಮ ಮಳೆಯಾಗಿದೆ. ಕಾಲುವೆ ನೀರು ಸಾಕಷ್ಟು ಹರಿದು ಬರುತ್ತಿದೆ. ಸದ್ಯಕ್ಕೆ ಯಾವುದೇ ಸಮಸ್ಯೆ ಉದ್ಭವಿಸಿಲ್ಲ. ನಮಗೆ ಮುಂದೆ ಉತ್ತಮ ಬೆಲೆ ಸಿಗಬೇಕು ಅಷ್ಟೆಮಾನಪ್ಪ ಮುಡಬೂಳ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.