ಮಂಗಳವಾರ, ಮೇ 18, 2021
22 °C

ಸರ್ಕಾರದಿಂದ ವರ್ಷಕ್ಕೆ ಎರಡು ಬಾರಿ ಜಂತುಹುಳು ನಿವಾರಣೆ ಮಾತ್ರೆ ವಿತರಣೆ: ಮುದ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತುಹುಳುವಿನ ಬಾಧೆಯಿಂದ ಅವರನ್ನು ಹೊರತರುವ ನಿಟ್ಟಿನಲ್ಲಿ ಸರ್ಕಾರ ಜಂತು ಹುಳು ನಿವಾರಣೆ ದಿನ ಆಚರಿಸುತ್ತಿದ್ದು, ತಪ್ಪದೇ ಎಲ್ಲಾ ಮಕ್ಕಳು ಮಾತ್ರೆಗಳನ್ನು ನುಂಗಬೇಕು ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ ತಿಳಿಸಿದರು.

ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ. ಇದರ ಪರಿಣಾಮ ಮಕ್ಕಳು ಲಾಡಿಹುಳು, ಜಂತುಹುಳು, ಕೊಕ್ಕೆ ಹುಳು ಬಾಧೆಯಿಂದ ನರಳುತ್ತಿದ್ದು, ಇದರಿಂದ ಮಕ್ಕಳ ಜ್ಞಾಪಕ ಶಕ್ತಿ, ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಇದರ ನಿವಾರಣೆಗೆ ಸರ್ಕಾರ ವರ್ಷಕ್ಕೆ ಎರಡು ಬಾರಿ ಆಲ್ಬಂಡಝೋಲ್ ಮಾತ್ರೆಗಳನ್ನು ವಿತರಿಸುತ್ತಿದೆ ಎಂದರು.

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿ, ಮಕ್ಕಳು ಅಪೌಷ್ಟಿಕತೆ, ರಕ್ತಹೀನತೆಯಿಂದ ಹೊರಬರಲು ಜಂತುಹುಳು ನಿಯಂತ್ರಣ ಮಾತ್ರೆ ನೀಡುತ್ತಿದ್ದು, ಆ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಮಕ್ಕಳನ್ನು ಈ ರೋಗದಿಂದ ಹೊರತರುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ವರ್ಷ 1 ವರ್ಷದಿಂದ 19 ವರ್ಷದವರೆಗಿನ ಮಕ್ಕಳಿಗೆ ಜಂತು ಹುಳುವಿನ ಮಾತ್ರೆಯನ್ನು ಉಚಿತವಾಗಿ ವಿತರಿಸುತ್ತದೆ. ಯಾವುದೇ ಅಡ್ಡಪರಿಣಾಮವಿಲ್ಲದ ಈ ಮಾತ್ರೆಯನ್ನು ಎಲ್ಲಾ ಮಕ್ಕಳು ಸೇವಿಸಬಹುದು. ಮಾತ್ರೆಯನ್ನು ನುಂಗುವುದರ ಬದಲಾಗಿ, ಚೀಪಿದರೆ ಹೆಚ್ಚು ಲಾಭ ದೊರೆಯುತ್ತದೆ. ಆದ್ದರಿಂದ ತಂದೆ ತಾಯಿಗಳು, ಶಾಲೆಯ ಶಿಕ್ಷಕರು, ಅಂಗನವಾಡಿಯ ಕಾರ್ಯಕರ್ತೆಯರು ಇದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಮಾತ್ರೆ ತೆಗೆದುಕೊಳ್ಳುವಂತೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ ಸುಮಾರು 5,12,056 ಮಕ್ಕಳು ಹಾಗೂ 1,63,312 ಅಂಗನವಾಡಿಯ ಮಕ್ಕಳು, ಅಂಗನವಾಡಿ ಕೇಂದ್ರದಿಂದ ಹೊರಗುಳಿದ 6,224 ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸುವ ಮೂಲಕ ಜಂತುಹುಳು ನಿವಾರಣೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 400 ಎಂ.ಜಿ.ಯ ಮಾತ್ರೆಗಳನ್ನು ನೀಡುವ ಮೂಲಕ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ತಡೆಗಟ್ಟಬೇಕು ಎಂದು ತಿಳಿಸಿದರು.

ಇದೇ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಚಂಡ್ರಿಕಿ, ನಗರಸಭೆಯ ಅಧ್ಯಕ್ಷ ವಿಲಾಸ ಪಾಟೀಲ, ನಗರಸಭೆಯ ಪೌರಯುಕ್ತ ಬಿ.ಟಿ.ನಾಯಕ, ಆರ್.ಸಿ.ಎಚ್ ಡಾ.ಸೂರ್ಯಪ್ರಕಾಶ ಕಂದಕೂರು, ಡಾ.ಎಸ್.ಕೆ.ವಿನಿತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದನ್, ಸಿಡಿಪಿಒ ವೀರಪ್ಪ, ಕಾರ್ಯಕ್ರಮ ಸಹಾಯಕ ಅಧಿಕಾರಿ ಮಹೇಂದ್ರ ಇದ್ದರು.

ದಂಡ ವಿಧಿಸಿದ ಜಿಲ್ಲಾಧಿಕಾರಿ
ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಕಾರಣದಿಂದ ಸರ್ಕಾರ ಕೆಲವು ಕಠಿಣ ಮಾರ್ಗಗಳನ್ನು ಜಾರಿಗೊಳಿಸಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಸೇರಿ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿರುವ ಬೆನ್ನಲ್ಲೇ ಶುಕ್ರವಾರ ನಗರದ ಗಾಂಧಿ ವೃತ್ತದ ಸುತ್ತಮುತ್ತಲಿನ ಜನ ದಟ್ಟಣೆ ಇರುವ ಗಾಂಧಿ ಬಜಾರ್‌ನಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಮೂಲಕ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಜಾಗೃತಿ ಮೂಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.