ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್: ತೊಗರಿ ಇಳುವರಿ ಕುಸಿಯುವ ಭೀತಿ

ತೇವಾಂಶ ಹೆಚ್ಚಳದಿಂದ ಉದುರುವ ಹೂ, ಮೊಗ್ಗು: ಆತಂಕದಲ್ಲಿ ರೈತರು
Last Updated 16 ನವೆಂಬರ್ 2021, 16:30 IST
ಅಕ್ಷರ ಗಾತ್ರ

ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಮಂಜು ಹೆಚ್ಚುತ್ತಿದ್ದು, ತೊಗರಿ ಇಳುವರಿ ಕುಸಿಯುವ ಭೀತಿ ಎದುರಾಗಿದೆ.

‘ನಿರಂತರವಾಗಿ ಸುರಿದ ಮಳೆಗೆ ಸ್ವಲ್ಪ ಬೆಳೆ ಸತ್ತಿದೆ. ಉಳಿದ ಬೆಳೆಯಾದರೂ ಚೆನ್ನಾಗಿರುತ್ತದೆ ಎಂದರೆ ಈಗ ಪ್ರತಿನಿತ್ಯ ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿದೆ. ತೊಗರಿಗೆ ರೋಗದ ಜತೆಗೆ ಎಲೆ, ಹೂ, ಮೊಗ್ಗುಗಳು ಉದುರುತ್ತಿವೆ. ಎಲೆಗಳಲ್ಲಿ ಚುಕ್ಕೆಗಳು ಕಾಣಿಸಿಕೊಳ್ಳುತ್ತಿವೆ. ನಿರೀಕ್ಷಿತ ಫಸಲು ಸಿಗದೆ, ಇಳುವರಿ ಕುಸಿಯುವ ಸಾಧ್ಯತೆಯಿದೆ’ ಎನ್ನುವುದು ರೈತರಾದ ಅನೀಲ್ ಕಂದಕೂರ, ಪ್ರಸಾದ ಅವರ ಆತಂಕದ ನುಡಿಗಳು.

ಒಂದು ವಾರದಿಂದ ವಾತಾವರಣದ ಉಷ್ಣಾಂಶ ಇಳಿಕೆಯಾಗಿದೆ. ಗಾಳಿಯಲ್ಲಿ ತೇವಾಂಶ ಹೆಚ್ಚುತ್ತಿದೆ. ಮಂಜಿನಿಂದಾಗಿ ವಾತಾವರಣದಲ್ಲಿ ತಂಪು ಪಸರುತ್ತಿದೆ. ಬೆಳಗಿನ ಜಾವ ಮಂಜು ದಟ್ಟವಾಗಿ ಹಬ್ಬುತ್ತಿದೆ. ರೋಗ ನಿಯಂತ್ರಣದ ಖರ್ಚು ಹೆಚ್ಚುತ್ತದೆ. ಇಳುವರಿ ಕುಸಿಯುತ್ತದೆ.

ಹೀಗಾಗಿ ನಷ್ಟದ ಭೀತಿ ಎದುರಾಗಿದೆ ಎಂದು ಮಹಾದೇವ ಅವರು ವಿವರಿಸಿದರು.

ದೀರ್ಘಾವಧಿಯ ತೊಗರಿ ಹೂ ಬಿಡುತ್ತಿದೆ. ಮಧ್ಯಮ ಅವಧಿಯ ತೊಗರಿ ಕಾಯಿ ಬಿಡುತ್ತಿದೆ. ಅಲ್ಪಾವಧಿಯ ತೊಗರಿ ಬೀಜ ಕಟ್ಟುತ್ತಿದೆ. ಅಲ್ಪಾವಧಿಯ ತೊಗರಿಗೆ ಅಷ್ಟೊಂದು ಸಮಸ್ಯೆಯಾಗದು. ದೀರ್ಘಾವಧಿ, ಮಧ್ಯಮಾವಧಿ ತೊಗರಿಯ ಹೂ ಮತ್ತು ಕಾಯಿ ಉದುರುತ್ತದೆ. ಮಂಜಿನ ಕಣಗಳು ಹೂ, ಮೊಗ್ಗಿನಲ್ಲಿ ಸೇರಿ ಕೊಳೆಯುವಂತೆ ಮಾಡುವ ಕಾರಣ ಉದುರುತ್ತವೆ. ವಾತಾವರಣದ ಏರಿಳಿತದಿಂದ ಈ ಸಮಸ್ಯೆಯಾಗುತ್ತಿದೆ.

ಅದಕ್ಕಾಗಿ ಪಲ್ಸ್ ಮ್ಯಾಜಿಕ್‌ನಂಥ ಲಘು ಪೋಷಕಾಂಶ ಸಿಂಪಡಣೆ ಮಾಡಬೇಕು. ಅದು ಪರಿಣಾಮಕಾರಿ ಎಂದು ಕೃಷಿ ವಿಸ್ತೀರ್ಣ ಶಿಕ್ಷಣ ಕೇಂದ್ರದ ಡಾ.ಶಿವಾನಂದ ಹೊನ್ನಾಳಿ ಸಲಹೆ ನೀಡಿದರು.

****

ಮಂಜು ಕವಿಯುವುದರಿಂದ ಬಿಳಿ ಜೋಳಕ್ಕೆ ಸಮಸ್ಯೆಯಿಲ್ಲ. ತೊಗರಿ ಇಳುವರಿ ಕಡಿಮೆಯಾಗುವ ಭೀತಿ ಇದೆ ಪಿ.ತಮ್ಮರೆಡ್ಡಿ, ಕೃಷಿಕ

***

ಬೆಳೆಯ ಹೂ, ಕಾಯಿ ಉದುರುತ್ತಿದೆ. ಎನ್‌ಎಎ ಲಘು ಪೋಷಕಾಂಶ ಮಿಶ್ರಣ ಮತ್ತು ಬೋರಾನ್ ಬಳಸಬೇಕು ಮಲ್ಲಿಕಾರ್ಜುನ ವಾರದ, ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT