ಯಾದಗಿರಿ: ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ಶಿಕ್ಷಕರ ಕೊರತೆ ನಡುವೆ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಶಿಕ್ಷಣ ಇಲಾಖೆ ಇನ್ನಿಷ್ಟು ಕಸರತ್ತು ನಡೆಸಿದೆ.
2022–23ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಕೊನೆ ಸ್ಥಾನ ಲಭಿಸಿತ್ತು. 35ನೇ ಸ್ಥಾನ ಗಳಿಸಿ ಶೇ 75.49 ಫಲಿತಾಂಶ ಬಂದಿತ್ತು. 2021–2022ನೇ ಸಾಲಿನಲ್ಲಿ ಶೇ 78.69 ಫಲಿತಾಂಶ ಬಂದಿತ್ತು. 2020–21ರಲ್ಲಿ ಶೇ 3.02ರಷ್ಟು ಫಲಿತಾಂಶ ಕುಸಿತವಾಗಿದೆ. ಕಳೆದ ಎರಡು ವರ್ಷವೂ ಜಿಲ್ಲೆ ‘ಬಿ‘ ಗ್ರೇಡ್‌ನಲ್ಲಿತ್ತು.
ಪ್ರಸಕ್ತ ಬಾರಿ ಹೆಚ್ಚಿನ ಫಲಿತಾಂಶಕ್ಕಾಗಿ ಶಿಕ್ಷಕರು ಹೆಚ್ಚಿನ ನಿಗಾವಹಿಸಿ ಹಲವಾರು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ವಿಜ್ಞಾನ ಮತ್ತು ಗಣಿತ ಸೂತ್ರ ಸೇರಿದಂತೆ ರಂಗೋಲಿ ಚಿತ್ರ ಸೇರಿದಂತೆ ವಿಭಿನ್ನ ಪ್ರಯೋಗಗಳ ಮೂಲಕ ಫಲಿತಾಂಶ ಹೆಚ್ಚಳಕ್ಕೆ ಈ ಬಾರಿ ಪ್ರಯೋಗಗಳನ್ನು ಮಾಡಲಾಗುತ್ತಿದೆ.
ಗ್ರಾಮೀಣ ಪ್ರದೇಶದ ಮಕ್ಕಳ ಅಭ್ಯಾಸ ತುಂಬಾ ಹದಗೆಟ್ಟು ಹೋಗಿದೆ. ಕಠಿಣ ವಿಷಯಗಳಾದ ಇಂಗ್ಲಿಷ್, ಗಣಿತ, ವಿಜ್ಞಾನ ವಿಷಯಗಳ ಶಿಕ್ಷಕರು ಇಲ್ಲದೆ ಹಲವು ವರ್ಷ ಕಳೆದಿವೆ. ಅಲ್ಲದೇ ಪ್ರಸಕ್ತ ವರ್ಷ ಸಾಮಾನ್ಯ ವರ್ಗಾವಣೆಯಲ್ಲಿ ಹಲವಾರು ನುರಿತ ಶಿಕ್ಷಕರು ವರ್ಗಾವಣೆಗೊಂಡರು. ಶಾಲೆಯಲ್ಲಿ ಶಿಕ್ಷಕರು ಇಲ್ಲದೆ ಫಲಿತಾಂಶ ಹೆಚ್ಚಳ ಎನ್ನುವುದು ವ್ಯರ್ಥ ಪ್ರಯತ್ನ ಇದಾಗಿದೆ ಎಂದು ಗ್ರಾಮೀಣ ಪ್ರದೇಶದ ಮಕ್ಕಳ ಪಾಲಕರು ಬೇಸರ ವ್ಯಕ್ತಪಡಿಸುತ್ತಾರೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿ ದಿನ ಶಾಲೆ ಆರಂಭಕ್ಕೆ ಒಂದು ಗಂಟೆ ಮುಂಚೆ ಮತ್ತು ಶಾಲಾ ಸಮಯ ಮುಕ್ತಾಯದ ನಂತರ ಒಂದು ಗಂಟೆ ವಿಶೇಷ ತರಗತಿಗಳನ್ನು ಹೆಚ್ಚುವರಿಯಾಗಿ ನಡೆಸಲಾಗುತ್ತಿದೆ.
ಪ್ರತಿ ಶನಿವಾರ ಪಠ್ಯಕ್ರಮವನ್ನು ಕ್ವಿಜ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಪ್ರತಿ ಶಿಕ್ಷಕರು ಸಂಖ್ಯೆಗೆ ಅನುಗುಣವಾಗಿ 5ರಿಂದ 10 ಮಕ್ಕಳನ್ನು ದತ್ತು ತೆಗೆದುಕೊಂಡು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಬೋಧನೆ ಮಾಡಲಾಗುತ್ತಿದೆ.
ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಕಲಬುರಗಿ ಮತ್ತು ಧಾರವಾಡದ ಪರಿಣಿತರನ್ನು ಕರೆಸಿ ವಿಶೇಷ ತರಬೇತಿ ನೀಡಲಾಗಿದೆ. ಇನ್ನಷ್ಟು ತರಬೇತಿ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ.
ಎರಡನೇ ಮತ್ತು ನಾಲ್ಕನೇ ಶನಿವಾರ ವಿಷಯವಾರು ಶಿಕ್ಷಕರಿಗೆ ಮಾಸ್ಟರ್ ತರಬೇತುದಾರರಿಂದ ವಿಶೇಷ ತರಬೇತಿ ವ್ಯವಸ್ಥೆ ಮಾಡಲಾಗಿದೆ.
ಫಲಿತಾಂಶ ಹೆಚ್ಚಳದ ಗುರಿ:
ಸುರಪುರ ತಾಲ್ಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಲು ಶಿಕ್ಷಣ ಇಲಾಖೆ ಸಕಲ ಪ್ರಯತ್ನದಲ್ಲಿ ತೊಡಗಿದೆ. ಕಳೆದ ವರ್ಷ ಶೇ 74 ಫಲಿತಾಂಶ ದೊರಕಿತ್ತು. ಇದನ್ನು ಶೇ 10ರಿಂದ 15ರಷ್ಟು ಹೆಚ್ಚಳದ ಗುರಿ ಇಟ್ಟುಕೊಂಡಿದೆ.
ಮಾನಸಿಕ ಸಾಮರ್ಥ್ಯ ಹೆಚ್ಚಳಕ್ಕೆ ಕಾರ್ಯಕ್ರಮ
ಯಾದಗಿರಿ ಜಿಲ್ಲಾ ಹಂತದಲ್ಲಿ ಮಕ್ಕಳಿಗೆ ಜಸ್ಟೀಸ್ ಶಿವರಾಜ ಪಾಟೀಲ ಫೌಂಡೇಶನ್ ಹಾಗೂ ಸಮರ್ಥ ಮಂತ್ರಾ ಫಾರ್ ಚೇಂಜ್ ಸಂಸ್ಥೆ ಹಾಗೂ ನಂದೀಶ್ವರ ನೈಪುಣ್ಯ ಸಂಸ್ಥೆ ರಾಣೆಬೆನ್ನೂರು ಅವರಿಂದ ಕಾರ್ಯಾಗಾರ ಪರೀಕ್ಷಾ ಭಯ ನಿವಾರಣೆ ಮಾನಸಿಕ ಸಾಮಾರ್ಥ್ಯ ಹೆಚ್ಚಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರೇರಣೆ ನೀಡಲಾಗಿದೆ. ಪ್ರೊ. ನಾಗರಾಜಯ್ಯ ನೇತೃತ್ವದಲ್ಲಿ ತಾಲ್ಲೂಕುವಾರು ಸೆಪ್ಟೆಂಬರ್ ತಿಂಗಳಲ್ಲಿ ಶಾಲಾ ಭೇಟಿ ಮಾಡಿ ಮಕ್ಕಳೊಂದಿಗೆ ಸಂವಾದ ಶಿಕ್ಷಕರು ಅಧಿಕಾರಿಗಳೊಂದಿಗೆ ಸಭೆ ಮಾಡಲಾಗಿದೆ. ಶಾಲೆಗಳನ್ನು ದತ್ತು ನೀಡಿ ಡಯಟ್ ಉಪನಿರ್ದೇಶಕರ ಕಾರ್ಯಾಲಯದಿಂದ ಶಾಲಾ ಭೇಟಿ ಮಾಡಲಾಗಿದೆ. ಶಿಕ್ಷಕರೊಂದಿಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗಿದೆ. ವಿಷಯ ಶಿಕ್ಷಕರ ಕಾರ್ಯಾಗಾರವನ್ನು ತಾಲ್ಲೂಕು ಹಂತದಲ್ಲಿ ಹಮ್ಮಿಕೊಂಡು ಭಾಷೆ ಹಾಗೂ ಕೋರ್ ವಿಷಯಗಳ ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಬೆಳಿಗ್ಗೆ ಮತ್ತು ಸಂಜೆ ಶಾಲಾ ಅವಧಿಯ ನಂತರ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಮಕ್ಕಳಿಗಾಗಿ ವಿಷಯವಾರು ಗುಂಪುಗಳಲ್ಲಿ ಕಲಿಕೆಯಲ್ಲಿ ಹಿಂದುಳಿದವರಿಗೆ ಆದ್ಯತೆ ನೀಡಲಾಗುತ್ತಿದೆ.
ಕಳೆದ ಶೇ 69.90 ಫಲಿತಾಂಶ
ಶಹಾಪುರ: ತಾಲ್ಲೂಕಿನಲ್ಲಿ 2022–2023ರಲ್ಲಿ ಶೇ 69.90 ಫಲಿತಾಂಶ ಬಂದಿತ್ತು. ತಾಲ್ಲೂಕಿನಲ್ಲಿ ಒಟ್ಟು 470 ಮಂಜುರಾದ ಹುದ್ದೆಯಲ್ಲಿ 249 ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. 221 ಹುದ್ದೆ ಖಾಲಿ ಇವೆ. ಅಲ್ಲದೆ 171 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಸರ್ಕಾರಿ ಪ್ರೌಢ ಹಾಗೂ ಅನುದಾನಿತ, ಅನುದಾನರಹಿತ ಮತ್ತು ಸರ್ಕಾರಿ ವಸತಿ ಶಾಲೆ ಸೇರಿ ಒಟ್ಟು 83 ಶಾಲೆಗಳಿವೆ. ಪ್ರಸಕ್ತ ವರ್ಷ 5,347 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಬಿಇಒ ಶಿಬಾ ಜಲಿಯನ್ ತಿಳಿಸಿದರು.
ವಿದ್ಯಾರ್ಥಿಗಳ ಸಾಮರ್ಥ್ಯ ಆಧಾರದ ಮೇಲೆ ಗುಂಪುಗಳ ರಚನೆ. ಪ್ರತಿ ತಿಂಗಳು ಪಾಲಕರ ಸಭೆ, ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರೆ ಮನೆ ಮನೆಗೆ ಭೇಟಿ ನೀಡುವುದು ಹೀಗೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಗುರುಮಠಕಲ್: 1 ಎಸ್ಎ, 3 ಎಫ್ಎ ಪರೀಕ್ಷೆ
ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಈಗಾಗಲೇ 1 ಎಸ್ಎ (ಸಮ್ಮಿಟೀವ್ ಅಸೆಸ್ಮೆಂಟ್) ಮತ್ತು 3 ಎಫ್ಎ (ಫಾರ್ಮೇಟಿವ್ ಅಸೆಸ್ಮೆಂಟ್) ಪರೀಕ್ಷೆಗಳನ್ನು ನಡೆಸಲಾಗಿದೆ. ಮಕ್ಕಳು ಪಡೆದುಕೊಂಡ ಗ್ರೇಡ್‌ವಾರು ಫಲಿತಾಂಶ ವಿಶ್ಲೇಷಣೆ ಮಾಡಲಾಗಿದ್ದು, ಅದರನ್ವಯ ಮಕ್ಕಳ ಫಲಿತಾಂಶ ಹೆಚ್ಚಳಕ್ಕೆ ಪೂರಕವಾದ ಕ್ರಿಯಾಯೋಜನೆ ಮೂಲಕ ಶಾಲೆಗಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿವೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಶ್ರೀನಿವಾಸ ಕರ್ಲಿ ಮಾಹಿತಿ ನೀಡಿದರು.
ಯಾದಗಿರಿ ಮತ್ತು ಗುರುಮಠಕಲ್ ತಾಲ್ಲೂಕುಗಳು ಇನ್ನೂ ಶೈಕ್ಷಣಿಕವಾಗಿ ಒಂದೇ ತಾಲ್ಲೂಕಾಗಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 6,312 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿಯಾಗಿದೆ. ಗುರುಮಠಕಲ್ ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಸಾಲಿನಲ್ಲಿ ಪಟ್ಟಣದ ಐದು ಸೇರಿದಂತೆ ಒಟ್ಟು 9 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಹಂಚಿಕೆಯಾಗಿತ್ತು. ಆದರೆ, ಈ ವರ್ಷ ಇನ್ನೂ ಪರೀಕ್ಷಾ ಕೇಂದ್ರಗಳ ನಿಗದಿಯಾಗಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
‘ಶಾಲೆಗಳಲ್ಲಿ ಬೆಳಿಗ್ಗೆ ವಿಶೇಷ ತರಗತಿಗಳು ಮತ್ತು ಸಂಜೆ ವೇಳೆ ಗುಂಪು ಚರ್ಚೆಯ ಚಟುವಟಿಕೆ ನಡೆಸಲಾಗುತ್ತಿದ್ದು, ಇದರಿಂದಾಗಿ ಸಿ-ಗ್ರೇಡ್ ಪಡೆಯುವ ಮಕ್ಕಳು ಇನ್ನೂ ಉತ್ತಮ ಅಂಕಗಳಿಕೆಗೆ ಪ್ರೋತ್ಸಾಹ ಸಿಗಲಿದೆ’ ಎಂದು ಮುಖ್ಯ ಶಿಕ್ಷಕ ಕೆ.ಮೊಗುಲಪ್ಪ ಯಾನಾಗುಂದಿ ಮಾಹಿತಿ ನೀಡಿದರು.
‘ನಮ್ಮ ಇಲಾಖೆ ಮತ್ತು ಮೇಲಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳ ನಿರ್ದೇಶನದಂತೆ ಮಕ್ಕಳನ್ನು ಶಾಲಾ ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಿ ‘ದತ್ತು ಶಿಕ್ಷಕರು’ ಅವರಿಗೆ ವಹಿಸಿದ ಮಕ್ಕಳ ಫಲಿತಾಂಶ ಸುಧಾರಣೆಗೆ ಬೇಕಾದ ಯೋಜನೆ ಮತ್ತು ಚಟುವಟಿಕೆ ನಡೆಸುತ್ತಿದ್ದಾರೆ. ಈ ಬಾರಿ ನಮ್ಮ ಶಾಲೆಯಿಂದ ನಿರೀಕ್ಷಿತ ಮಟ್ಟಕ್ಕಿಂತಲೂ ಹೆಚ್ಚಿನ ಫಲಿತಾಂಶ ಸಿಗಲಿದೆ’ ಎಂದು ಹಣಮಂತರಾವ ಗೋಂಗ್ಲೆ ಭರವಸೆ ವ್ಯಕ್ತಪಡಿಸಿದರು.
ಹುಣಸಗಿ ತಾಲೂಕಿನಲ್ಲಿ ಶಿಕ್ಷಕರ ಕೊರತೆ
ತಾಲೂಕಿನಲ್ಲಿ 27 ಸರ್ಕಾರಿ ಹಾಗೂ 6 ಖಾಸಗಿ ಪ್ರೌಢ ಶಾಲೆಗಳಿದ್ದು ಈ ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ 2800 ಮಕ್ಕಳು ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಎಫ್ 12 ಪರೀಕ್ಷೆಯಲ್ಲಿ ಸಿ ಮತ್ತು ಸಿ ಪ್ಲಸ್ ಫಲಿತಾಂಶ ಪಡೆದ ಸುಮಾರು 1500 ಮಕ್ಕಳನ್ನು ಗುರುತಿಸಲಾಗಿದ್ದು ಆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಹೇಳಿದರು. ಶಾಲಾ ಅವಧಿಯ ನಂತರ ಈ ಮಕ್ಕಳಿಗೆ ಗುಂಪು ಚರ್ಚೆ ಕೈಗೊಳ್ಳುವ ಮೂಲಕ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ತಿಂಗಳ ಒಂದು ಹಾಗೂ ಮೂರನೇ ಶನಿವಾರ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಪ್ರತಿಭಾವಂತ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕರೆಸಿ ಅವರಿಂದ ಬೋಧನೆ ಮಾಡಿಸಲಾಗುತ್ತದೆ ಎಂದು ಇಸಿಒ ಬಸವರಾಜ ಹೇಳಿದರು. ಹುಣಸಗಿ ತಾಲ್ಲೂಕಿನಲ್ಲಿ ಗಣಿತ ಇಂಗ್ಲಿಷ್ ವಿಜ್ಞಾನ ವಿಷಯ ಬೋಧನಾ ಶಿಕ್ಷಕರ ಕೊರತೆ ಸಾಕಷ್ಟಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ್ ಬಿರಾದಾರ್ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದ ಫಲಿತಾಂಶ ಗಮನಿಸಿದಲ್ಲಿ ಈಗಾಗಲೇ ಜಿಲ್ಲೆಯ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಕಷ್ಟು ಹಿಂದೆ ಇದೆ. ಆದರೆ ಅದರಲ್ಲೂ ಕಳೆದ ಕೆಲ ದಿನಗಳ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ವರ್ಗಾವಣೆಯಾಗಿದ್ದರಿಂದಾಗಿ ಆ ಸ್ಥಾನಗಳು ಸಹಿತ ಅತಿಥಿ ಶಿಕ್ಷಕರೇ ನಿಭಾಯಿಸುತ್ತಿದ್ದಾರೆ. ಇದರಿಂದಾಗಿ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಹಿಂದುಳಿದ ಜಿಲ್ಲೆಯಾದ ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಕರನ್ನು ನಿಯೋಜಿಸುವ ಮೂಲಕ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಕಾಳಜಿ ವಹಿಸಲಿ ಎಂದು ಬಸವರಾಜ ಚನ್ನೂರ್ ಆಗ್ರಹಿಸಿದ್ದಾರೆ.
ಯಾರು ಏನಂದರು?
2023–24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಈ ಬಾರಿ ಸಾಕಷ್ಟು ಪ್ರಯೋಗಗಳನ್ನು ಮಾಡಿಕೊಳ್ಳಲಾಗಿದೆ. ಶಿಕ್ಷಕರ ವರ್ಗಾವಣೆ ಯಾವುದೇ ಪರಿಣಾಮ ಬೀರುವುದಿಲ್ಲ. ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆಬ – ಗರಿಮಾ ಪಂವಾರ್, ಜಿಲ್ಲಾ ಪಂಚಾಯಿತಿ ಸಿಇಒ
ಪ್ರಸ್ತುತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವು ಕಳೆದ ಬಾರಿಗಿಂತ ಕನಿಷ್ಠ 8ರಿಂದ 10 ಸ್ಥಾನ ಮೇಲೆರಿಸುವ ಗುರಿಯೊಂದಿಗೆ ಪ್ರತಿ ಶಾಲೆಯಲ್ಲೂ ಶೇ 10ರಿಂದ 15 ಹೆಚ್ಚಿಸಲು ಕಾರ್ಯಕ್ರಮ ರೂಪಿಸಲಾಗಿದೆ– ಮಂಜುನಾಥ ಎಚ್.ಟಿ., ಡಿಡಿಪಿಐ
ಶಿಕ್ಷಕರು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಲು ಶ್ರಮಿಸುತ್ತಿದ್ದಾರೆ. ಕಳೆದ ಬಾರಿಗಿಂತ ಫಲಿತಾಂಶ ಹೆಚ್ಚಳವಾಗಲಿದೆ ಎಂಬ ಭರವಸೆ ಇದೆ– ಪಂಡಿತ ನಿಂಬೂರ, ಶಿಕ್ಷಣ ಸಮನ್ವಯಾಧಿಕಾರಿ ಸುರಪುರ
ಶಿಕ್ಷಕರು ಪರಿಣಾಮಕಾರಿ ಬೋಧನೆ ಮಾಡಲು ಎಸ್‌ಟಿಎಫ್ (ವಿಷಯವಾರು ಶಿಕ್ಷಕರ ತಂಡ) ರಚಿಸಲಾಗಿದೆ. ಶಿಕ್ಷಕರ ಸ್ಪಂದನೆ ಉತ್ತಮವಾಗಿದೆ – ಬಸವರಾಜ ಕಲ್ಲದೇವನಹಳ್ಳಿ, ನೋಡಲ್ ಅಧಿಕಾರಿ
ನಮ್ಮನ್ನು ಹೆಚ್ಚು ಓದಲು ಪ್ರೇರೇಪಿಸಲಾಗುತ್ತಿದೆ. ನಮ್ಮ ಪಾಲಕರಿಗೂ ಮನೆ ಕೆಲಸ ಹಚ್ಚದಂತೆ ತಿಳಿಸಲಾಗಿದೆ. ಓದುವ ಅಭಿರುಚಿ ಹೆಚ್ಚಲು ತೆಗೆದುಕೊಳ್ಳುತ್ತಿರುವ ಕ್ರಮಗಳು ಪೂರಕವಾಗಿವೆ – ಶ್ರೀನಿಧಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸುರಪುರ
ಎಸ್ಎ ಎಫ್ಎ ಫಲಿತಾಂಶ ವಿಶ್ಲೇಷಣೆಯ ಆಧಾರದಲ್ಲಿ ಮಕ್ಕಳ ಕಲಿಕೆಯ ಅಗತ್ಯತೆಗೆ ಅನುಗುಣವಾಗಿ ಆಯಾ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಮುತುವರ್ಜಿಯಿಂದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರಗಳ ಮೂಲಕ ಫಲಿತಾಂಶ ಸುಧಾರಣೆಗೆ ಯೋಜನೆ ರೂಪಿಸಲಾಗಿದೆ – ಶ್ರೀನಿವಾಸ ಕರ್ಲಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ
ನಮ್ಮ ಶಾಲೆಯಲ್ಲಿ ದಿನ ಬೆಳಿಗ್ಗೆ 7ರಿಂದ ದಿನಕ್ಕೊಂದು ವಿಷಯದ ಅಭ್ಯಾಸ ತರಗತಿ ಮತ್ತು ಸಂಜೆ ಅಭ್ಯಾಸ ಮಾಡಿಸುತ್ತಿದ್ದಾರೆ. 40 ಅಂಕಗಳ ಪರೀಕ್ಷೆ ಜತೆಗೆ ಶಿಕ್ಷಕರಿಂದ ವಿಷಯದಲ್ಲಿನ ಸಮಸ್ಯೆ ನಿವಾರಿಸಿಕೊಳ್ಳುತ್ತಿದ್ದೇವೆ – ಅಶ್ವಿನಿ ಚಂಡ್ರಿಕಿ, ವಿದ್ಯಾರ್ಥಿನಿ
ನಮ್ಮ ಮಕ್ಕಳಿಗೆ ಶಾಲೆಯಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸುತ್ತಿದ್ದಾರೆ. ಜತೆಗೆ ಸಮಸ್ಯೆಯಿರುವ ಮಕ್ಕಳಿಗಾಗಿ ವಿಶೇಷ ಕಾಳಜಿ ಮತ್ತು ಪೋಷಕರೊಂದಿಗೂ ಶಿಕ್ಷಕರು ಮಾತನಾಡಿ ಮಕ್ಕಳಿಗೆ ಸಹಾಯವಾಗುವಂತೆ ಪ್ರೋತ್ಸಾಹ ನೀಡುವ ಕುರಿತು ತಿಳಿಸುತ್ತಿದ್ದಾರೆ– ಅಲ್ಲಾವುದ್ದೀನ್, ಪಾಲಕ
ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.