ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಊರು ವಾಗಣಗೇರಿ; ಇಲ್ಲಿ ದಾರ್ಶನಿಕರ ವೃತ್ತ, ನಾಮಫಲಕ ಇಲ್ಲ!

Published 29 ಜುಲೈ 2023, 23:53 IST
Last Updated 29 ಜುಲೈ 2023, 23:53 IST
ಅಕ್ಷರ ಗಾತ್ರ

ಸುರಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ವಾಗಣಗೇರಿ ಸುರಪುರ ಸಂಸ್ಥಾನದ ಮೊದಲ ರಾಜಧಾನಿ. ಸುರಪುರದಿಂದ 8 ಕಿ.ಮೀ ದೂರದಲ್ಲಿರುವ ಈ ಊರಿನಲ್ಲಿ ಯಾವುದೇ ದಾರ್ಶನಿಕರ, ರಾಷ್ಟ್ರನಾಯಕರ ಹೆಸರಿನಲ್ಲಿ ವೃತ್ತ, ಕಟ್ಟೆ, ನಾಮಫಲಕ, ಪುತ್ಥಳಿ ಇಲ್ಲ.

ಇಲ್ಲಿ ಆಳ್ವಿಕೆ ನಡೆಸಿದ ಸುರಪುರ ಗೋಸಲ ದೊರೆಗಳ ಆರಾಧ್ಯ ದೈವ ವೇಣುಗೋಪಾಲ. ವಾಗಣಗೇರಿ ಕೋಟೆಯಲ್ಲಿ ವೇಣುಗೋಪಾಲ ದೇವಸ್ಥಾನವಿದೆ. ಸಹಜವಾಗಿ ಗ್ರಾಮಸ್ಥರೆಲ್ಲರೂ ಈ ದೇವರ ಆರಾಧಕರು.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ವಾಗಣಗೇರಿ. ತಾಲ್ಲೂಕು ಪಂಚಾಯಿತಿ ಕ್ಷೇತ್ರವೂ ಹೌದು. ಊರಿನ ಜನಸಂಖ್ಯೆ ಅಂದಾಜು 5 ಸಾವಿರ ಇದೆ. ಬಸ್ ನಿಲ್ದಾಣದ ಹತ್ತಿರ ವೇಣುಗೋಪಾಲ ಹೆಸರಿನಲ್ಲಿ ಮಾತ್ರ ಏಕೈಕ ನಾಮಫಲಕ ಇದೆ. ಹೀಗಾಗಿ ಈ ಊರಿನಲ್ಲಿ ದಾರ್ಶನಿಕರ ನಾಮಫಲಕಗಳಿಗೆ ಅವಮಾನ, ವೃತ್ತಕ್ಕೆ ಧಕ್ಕೆ ಇತರ ಕಲಹಗಳು ಉಂಟಾಗಿಲ್ಲ. ಆಗುವುದೂ ಇಲ್ಲ. ಗ್ರಾಮ ಈ ದಿಸೆಯಲ್ಲಿ ಸೌಹಾರ್ದದಿಂದ ಇದ್ದು ಇತರರಿಗೆ ಮಾದರಿಯಾಗಿದೆ.

ಸಾಮಾನ್ಯವಾಗಿ ಎಲ್ಲ ಜಾತಿಯವರೂ ತಮ್ಮ ಜಾತಿಯವರ ದಾರ್ಶನಿಕರ ನಾಮಫಲಕ, ಪುತ್ಥಳಿ ಕೂಡಿಸಲು ಬಯಸುತ್ತಾರೆ. ಈ ಸಂಬಂಧ ಏರ್ಪಡುವ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಪರದಾಡುವುದನ್ನು ಕಾಣುತ್ತೇವೆ. ಗ್ರಾಮದಲ್ಲಿ ಕುರುಬ, ವಾಲ್ಮೀಕಿ, ಮರಾಠಾ, ಉಪ್ಪಾರ, ಪರಿಶಿಷ್ಟ ಜಾತಿ, ಕಬ್ಬಲಿಗ, ಲಿಂಗಾಯತ, ಮುಸ್ಲಿಂ, ಬ್ರಾಹ್ಮಣ ಎಲ್ಲಾ ಜಾತಿ ಜನಾಂಗದವರಿದ್ದಾರೆ. ಆದರೆ, ಇದುವರೆಗೂ ಯಾವ ಜಾತಿಯವರು ತಮ್ಮ ಪುಣ್ಯಪುರುಷರ, ದಾರ್ಶನಿಕರ ಕಟ್ಟೆ, ಪುತ್ಥಳಿ, ನಾಮಫಲಕ ಅಳವಡಿಸದಿರುವುದು ವೈಶಿಷ್ಟ್ಯ.

ವೃತ್ತ, ಕಟ್ಟೆ, ನಾಮಫಲಕ, ಪುತ್ಥಳಿ ಸಂಬಂಧ ಅಲ್ಲಲ್ಲಿ ಉಂಟಾಗುತ್ತಿದ್ದ ಘರ್ಷಣೆಗಳು, ಪ್ರತಿಭಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಗ್ರಾಮದ ಹಿರಿಯರು 30 ವರ್ಷಗಳ ಹಿಂದೆಯೇ ಗ್ರಾಮಸ್ಥರ ಸಭೆ ಸೇರಿಸಿ ನಿರ್ಣಯ ತೆಗೆದುಕೊಂಡರು. ‘ಗ್ರಾಮದಲ್ಲಿ ವೇಣುಗೋಪಾಲಸ್ವಾಮಿ ನಾಮಫಲಕ ಬಿಟ್ಟು ಬೇರೆ ಇಲ್ಲ. ನೆಮ್ಮದಿಯಿಂದ ಇದ್ದೇವೆ. ಇದನ್ನು ಮುಂದುವರಿಸೋಣ. ಯಾವುದೇ ಪುತ್ಥಳಿ, ವೃತ್ತ, ಕಟ್ಟೆ, ನಾಮಫಲಕ ಹಾಕುವುದು ಬೇಡ’ ಎಂದು ತೆಗೆದುಕೊಂಡ ನಿರ್ಣಯಕ್ಕೆ ಗ್ರಾಮಸ್ಥರು ಈಗಲೂ ಬದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ.

ನಿರ್ಣಯದಂತೆ ಆಯಾ ದಾರ್ಶನಿಕರ, ರಾಷ್ಟ್ರನಾಯಕರ ಜಯಂತಿಗಳನ್ನು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಾತ್ರ ಆಚರಿಸುತ್ತಾರೆ. ಜಯಂತಿಯಲ್ಲಿ ಜಾತಿಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಆಸಕ್ತರು ಸಿಹಿ ಹಂಚುತ್ತಾರೆ. ಶುಭಾಶಯ ಕೋರಿ ಮನೆಗೆ ತೆರಳುತ್ತಾರೆ.

ಸುರಪುರ ತಾಲ್ಲೂಕಿನ ವಾಗಣಗೇರಿ ಗ್ರಾಮದಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನ
ಸುರಪುರ ತಾಲ್ಲೂಕಿನ ವಾಗಣಗೇರಿ ಗ್ರಾಮದಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನ
30 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಣಯಣಕ್ಕೆ ಗ್ರಾಮಸ್ಥರು ಬದ್ಧರಾಗಿ ನಡೆದುಕೊಳ್ಳುತ್ತಿರುವುದು ನನಗೆ ಸಂತಸ ನೀಡಿದೆ. ಇದು ಹೀಗೆಯೇ ಮುಂದುವರಿಯಬೇಕು
ಭೀಮರಾಯ ಮಾಸ್ಟರ್ ಗ್ರಾಮದ ಹಿರಿಯ
ನಮ್ಮ ದೇಶ ಜಾತ್ಯತೀತವಾಗಿದೆ. ಎಲ್ಲ ಸಮುದಾಯದವರು ಅಣ್ಣ–ತಮ್ಮಂದಿರಂತೆ ಬಾಳಿದರೆ ಗ್ರಾಮ ಸ್ವರ್ಗವಾಗುತ್ತದೆ. ನನ್ನ ವಾಗಣಗೇರಿ ನನಗೆ ಹೆಮ್ಮೆ.
ಯಂಕೋಬಗೌಡ ಮಾಲಿಪಾಟೀಲ ಗ್ರಾಮದ ಹಿರಿಯ

ಜಾತ್ಯತೀತ ತತ್ವದ ಅರಸರು

ಸುರಪುರದ ದೊರೆಗಳು ಜಾತ್ಯತೀತ ತತ್ವ ಅನುಸರಿಸಿಕೊಂಡು ಬಂದಿದ್ದರು. ತಮ್ಮ ಆಸ್ಥಾನದಲ್ಲಿ ಎಲ್ಲ ಹುದ್ದೆಗಳಲ್ಲಿ ಎಲ್ಲ ಜಾತಿಯವರಿಗೆ ಪ್ರಾತಿನಿಧ್ಯ ನೀಡಿದ್ದರು. ಮಂದಿರಗಳನ್ನು ಕಟ್ಟಿಸಿದ ಹಾಗೆ ಮಸೀದಿಗಳನ್ನೂ ಕಟ್ಟಿಸಿಕೊಟ್ಟಿದ್ದಾರೆ. ರಾಜರ ಈ ಭ್ರಾತೃತ್ವ ಸಿದ್ಧಾಂತವನ್ನು ವಾಗಣಗೇರಿ ಗ್ರಾಮಸ್ಥರು ಅನುಸರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT