ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಶಕ್ತಿ ಯೋಜನೆ: ಪ್ರಯಾಣಿಕರ ನಿಯಂತ್ರಣಕ್ಕೆ ‘ಹೋಂ ಗಾರ್ಡ್’

Published 15 ಜೂನ್ 2023, 23:30 IST
Last Updated 15 ಜೂನ್ 2023, 23:30 IST
ಅಕ್ಷರ ಗಾತ್ರ

ಬಿ.ಜಿ.ಪ್ರವೀಣಕುಮಾರ

ಯಾದಗಿರಿ ಜಿಲ್ಲೆಯ ನಾಲ್ಕು ಬಸ್‌ ಡಿಪೊಗಳಿದ್ದು, ಬೀದರ್‌ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿರುವ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೂನ್‌ 10ರಿಂದಲೇ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಪ್ರಯಾಣಿಕರಿಗೆ ಸೂಕ್ತ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಯಾದಗಿರಿ: ರಾಜ್ಯ ಸರ್ಕಾರ ಮಹಿಳಾ ಪ್ರಯಾಣಿಕರಿಗೆ ಜೂನ್‌ 11ರಿಂದ ಆರಂಭಿಸಿರುವ ‘ಶಕ್ತಿ ಯೋಜನೆ’ಯಡಿ ಉಚಿತ ಪ್ರಯಾಣದ ವೇಳೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ನಿಯಂತ್ರಿಸಲು, ನೂಕುನುಗ್ಗಲು ತಪ್ಪಿಸಲು ಮಹಿಳಾ ಗೃಹ ರಕ್ಷಕ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಜಿಲ್ಲೆಯಲ್ಲಿ ನಾಲ್ಕು ಬಸ್‌ ಡಿಪೊಗಳಿದ್ದು, ಬೀದರ್‌ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿರುವ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿದೆ. ಜೂನ್‌ 10ರಿಂದಲೇ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಪ್ರಯಾಣಿಕರಿಗೆ ಸೂಕ್ತ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಯಾದಗಿರಿ ಹೊಸ ಬಸ್‌ ನಿಲ್ದಾಣದಲ್ಲಿ 8 ಜನ, ಹಳೇ ಬಸ್‌ ನಿಲ್ದಾಣದಲ್ಲಿ 7 ಮಂದಿ, ಶಹಾಪುರ, ಸುರಪುರದಲ್ಲಿ ತಲಾ 10 ಜನ, ಗುರುಮಠಕಲ್‌ ಬಸ್‌ ನಿಲ್ದಾಣದಲ್ಲಿ ಐವರು ಸೇರಿದಂತೆ ಒಟ್ಟು ಮಹಿಳಾ ಗೃಹ ರಕ್ಷಕ ದಳದ 40 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿಯೋಜಿತ ಗೃಹರಕ್ಷಕ ದಳದ ಸಿಬ್ಬಂದಿಗೆ ಡಿಪೊಗಳ ವತಿಯಿಂದ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಜಿಲ್ಲೆಯಲ್ಲಿ ಗೃಹ ರಕ್ಷಕ ದಳದಲ್ಲಿ ಮಹಿಳಾ ಸಿಬ್ಬಂದಿ ಇಲ್ಲದ ಕಾರಣ ಬೀದರ್‌ನ 40 ಸಿಬ್ಬಂದಿಯನ್ನು ಜಿಲ್ಲೆಯ ನಾಲ್ಕು ಡಿಪೊಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ
ಬಸವೇಶ್ವರ ಹೀರಾ, ಪ್ರಭಾರ ಕಮಾಂಡರ್, ಗೃಹ ರಕ್ಷಕ ದಳ ಯಾದಗಿರಿ ಜಿಲ್ಲೆ

ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌ ಡಿಪೊದಿಂದ ನೂರಾರು ಬಸ್‌ಗಳು ನಿತ್ಯ ಸಂಚರಿಸುತ್ತವೆ. ಮಹಿಳಾ ಪ್ರಯಾಣಿಕರು ಹತ್ತುವಾಗ, ಇಳಿಯುವಾಗ ನೂಕುನುಗ್ಗಲು ತಪ್ಪಿಸಲು ಸಿಬ್ಬಂದಿ  ಗೃಹ ರಕ್ಷಕ ಸಿಬ್ಬಂದಿ ನೆರವಾಗುತ್ತಿದ್ದಾರೆ.

ಬಸ್‌ ನಿಲ್ದಾಣದಲ್ಲಿ ಸೀಟಿಗಾಗಿ ನೂಕುನುಗ್ಗಲು ಗಲಾಟೆಗಳು ನಡೆಯುವ ಸಂಭವ ಇರುವುದರಿಂದ ಅವರಿಗೆ ಸೂಕ್ತ ತಿಳಿವಳಿಕೆ ನೀಡಲಾಗುತ್ತಿದೆ
ಜರಮ್ಮ ಮೆಸಣ್ಣನವರ್, ಹೋಂ ಗಾರ್ಡ್

ಅಲ್ಲದೇ, ಮಹಿಳಾ ಸಿಬ್ಬಂದಿ ಜೊತೆಗೆ 40 ಪುರುಷ ಗೃಹ ರಕ್ಷಕ ದಳ ಸಿಬ್ಬಂದಿಯೂ ನಾಲ್ಕು ಡಿಪೊಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಯಾದಗಿರಿಯಲ್ಲಿ ವಾರದ ಮಟ್ಟಿಗೆ ವಿಶೇಷ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಅಂತರರಾಜ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇಲ್ಲದಿರುವ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ
ಲಕ್ಷ್ಮೀ ಬಾಳೆಕಟ್ಟೆ‍, ಹೋಂ ಗಾರ್ಡ್‌

‘ಬಸ್‌ ನಿಲ್ದಾಣಗಳಲ್ಲಿ ಕೆಲವರು ನಿರ್ವಾಹಕರ ಜೊತೆ ವಾಗ್ವಾದ ನಡೆಸುತ್ತಾರೆ. ನಾವು ಮಧ್ಯೆ ಪ್ರವೇಶಿಸಿ ಪ್ರಯಾಣಿಕರಿಗೆ ಸೂಕ್ತ ತಿಳಿವಳಿಕೆ ಹೇಳುತ್ತೇವೆ. ಅಂತರ ರಾಜ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ಇಲ್ಲದ ಕುರಿತು ಮಾಹಿತಿ ನೀಡುತ್ತಿದ್ದೇವೆ’ ಎಂದು ಗೃಹ ರಕ್ಷಕ ದಳ ಸಿಬ್ಬಂದಿ ಶಿವಯೋಗಿ ಎಸ್.ಜಿ., ಮಲ್ಲಪ್ಪ ಎನ್‌ ಎಮ್ಮೆನೂರು ತಿಳಿಸಿದರು.

ಬೀದರ್‌ನಿಂದ ಬಂದಿರುವ ಮಹಿಳಾ ಸಿಬ್ಬಂದಿಗೆ ನಗರ ಹೊರವಲಯದಲ್ಲಿ ಊಟ ವಸತಿ ವ್ಯವಸ್ಥೆ ಮಾಡಲಾಗಿದೆ. ಜೂನ್‌ 18ರ ವರೆಗೆ ಬಸ್‌ ನಿಲ್ದಾಣಗಳಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ
ವಿಶ್ವನಾಥ, ಪ್ರಭಾರಿ ಘಟಕಾಧಿಕಾರಿ, ಗೃಹ ರಕ್ಷಕ ದಳ ಯಾದಗಿರಿ

ಜಿಲ್ಲೆಯಲ್ಲಿಲ್ಲ ಮಹಿಳಾ ಸಿಬ್ಬಂದಿ:

ಜಿಲ್ಲೆಯಲ್ಲಿ 470 ಪುರುಷ ಗೃಹ ರಕ್ಷಕ ಸಿಬ್ಬಂದಿ ಇದ್ದಾರೆ. ಚುನಾವಣೆ, ಪ್ರವಾಹ ಸೇರಿದಂತೆ ಯಾವುದೇ ತುರ್ತು ಸಂದರ್ಭಗಳಲ್ಲಿ ಅವರನ್ನು ನಿಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗೃಹರಕ್ಷಕ ಮಹಿಳಾ ಸಿಬ್ಬಂದಿ ಇಲ್ಲದ ಕಾರಣ, ಬೀದರ್‌ ಜಿಲ್ಲೆಯಿಂದ ಗೃಹರಕ್ಷಕ ಮಹಿಳಾ ಸಿಬ್ಬಂದಿಯ ಸೇವೆ ಪಡೆಯಲಾಗಿದೆ.

ಐದು ತಾಲ್ಲೂಕುಗಳಲ್ಲಿ ಮಾತ್ರ ಗೃಹ ರಕ್ಷಕದಳ ಘಟಕ

ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಐದು ತಾಲ್ಲೂಕುಗಳಲ್ಲಿ ಮಾತ್ರ ಗೃಹ ರಕ್ಷಕದಳ ಘಟಕ ಕಾರ್ಯನಿರ್ವಹಿಸುತ್ತಿದೆ. ವಡಗೇರಾ ತಾಲ್ಲೂಕು ಘಟಕ ಇನ್ನೂ ರಚಿಸಿಲ್ಲ. ಇದರಿಂದ ಈ ಭಾಗದ ಗೃಹ ರಕ್ಷಕ ದಳದಲ್ಲಿ ಕೆಲಸ ಮಾಡಲು ಇಚ್ಛಿಸುವ ಆಕಾಂಕ್ಷಿಗಳು ನಿರಾಶೆಗೊಳ್ಳುವಂತೆ ಮಾಡಿದೆ.

ಪ್ರಭಾರ ಹುದ್ದೆಗಳು

ಕಳೆದ ಒಂದೂವರೆ ವರ್ಷದಿಂದ ಜಿಲ್ಲಾ ಕಮಾಡೆಂಟ್‌ ಹುದ್ದೆಯೂ ಪ್ರಭಾರಿಯಲ್ಲಿ ನಡೆಯುತ್ತಿದೆ. ಅಲ್ಲದೇ ಯಾದಗಿರಿ ಘಟಕವೂ ಪ್ರಭಾರಿಯಲ್ಲಿ ನಡೆಯುತ್ತಿದೆ. ನಿಷ್ಕಾಮ ಸೇವೆ ಮಾಡುವ ಮೂಲಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಮತ್ತಷ್ಟು ಗೌರವ ಧನ ಹೆಚ್ಚು ಮಾಡಬೇಕು ಎಂದು ಸಿಬ್ಬಂದಿಯ ಒತ್ತಾಯವಾಗಿದೆ.

ಜಿಲ್ಲೆ ರಚನೆಯಾದ ನಂತರ ಗೃಹ ರಕ್ಷಕ ದಳದ ಕಂಪನಿ ಕಮಾಂಡರ್ ಪ್ರವೀಣ್‌ ದೇಶಮುಖ್‌ ಅವರು ಸುದೀರ್ಘವಾಗಿ ಕೆಲಸ ಮಾಡಿದ್ದರು. ಅವರ ನಿವೃತ್ತಿ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಅಧಿಕಾರ ಹಸ್ತಾಂತರಿಸಲಾಗಿತ್ತು. ಸದ್ಯ ಯಾದಗಿರಿ ಡಿವೈಎಸ್ಪಿ ಬಸವೇಶ್ವರ ಹೀರಾ ಅವರು ಗೃಹ ರಕ್ಷಕ ದಳದ ಪ್ರಭಾರಿ ಕಂಪನಿ ಕಮಾಂಡರ್ ಆಗಿದ್ದಾರೆ.

ಯಾದಗಿರಿ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಗೃಹ ರಕ್ಷಕ ದಳ ಪುರುಷ ಮಹಿಳಾ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿವಳಿಕೆ ಮೂಡಿಸುತ್ತಿರುವುದು
ಯಾದಗಿರಿ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಗೃಹ ರಕ್ಷಕ ದಳ ಪುರುಷ ಮಹಿಳಾ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿವಳಿಕೆ ಮೂಡಿಸುತ್ತಿರುವುದು
ಯಾದಗಿರಿ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಗೃಹ ರಕ್ಷಕ ದಳ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವುದು
ಯಾದಗಿರಿ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಗೃಹ ರಕ್ಷಕ ದಳ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT