ಯಾದಗಿರಿ: ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಹಮ್ಮಿಕೊಂಡಿದ್ದ ಮಾನವ ಸರಪಳಿಯಲ್ಲಿ ವಡಗೇರಾ ತಾಲ್ಲೂಕಿನ ರೊಟ್ನಡಗಿ ಕ್ರಾಸ್ ಸಮೀಪದಲ್ಲಿ ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಶರಣಗೌಡ ಪಾಟೀಲ ನೇತೃತ್ವದಲ್ಲಿ ಸೇರಿದ್ದ ನೂರಾರು ಸಂಖ್ಯೆಯ ಅಂಗವಿಕಲರು ಪರಸ್ಪರ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿ ಯಶಸ್ವಿಗೊಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅಂಗವಿಕಲರು ಜಿಲ್ಲಾಡಳಿತ ಸೂಚಿಸಿದ ನಿಗದಿತ ರಸ್ತೆ ಬದಿಯಲ್ಲಿ ಸಾಲಾಗಿ ನಿಂತು ಮಾನವ ಸರಪಳಿ ನಿರ್ಮಿಸಿಕೊಂಡರು. ತದನಂತರ ಸಾಮೂಹಿಕವಾಗಿ ನಾಡಗೀತೆ ಹಾಡಲಾಯಿತು. ಈ ವೇಳೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಶರಣಗೌಡ ಪಾಟೀಲ ಅವರು ಸಂವಿಧಾನದ ಪ್ರಸ್ತಾವನೆ ಹಾಗೂ ಪ್ರಜಾಪ್ರಭುತ್ವದ ಮಹತ್ವ ತಿಳಿಸಿದರು. ಕೊನೆಗೆ ಜೈ ಹಿಂದ್ ಜೈ ಕರ್ನಾಟಕ ಘೋಷಣೆ ಕೂಗುವ ಮೂಲಕ ಮಾನವ ಸರಪಳಿ ಕೈ ಬಿಡಲಾಯಿತು.
ಈ ವೇಳೆ ಎಂಆರ್‌ಡಬ್ಲ್ಯೂ ಭೀಮರಾಯ ಕೌಳೂರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ವೆಂಕಟೇಶ ನಾಯಕ ಕೂಡ್ಲೂರು, ಬನ್ನಪ್ಪ ಮಾಧ್ವಾರ, ಬನಶಂಕರ ಕಾಳೆಬೆಳಗುಂದಿ, ಸಿದ್ದಪ್ಪ ಮಲ್ಹಾರ, ತಾಯಪ್ಪ ಸೈದಾಪುರ, ಬಸವರಾಜ ಬೆಳಗುಂದಿ, ಬಸವರಾಜ ಬಾಡಿಯಾಳ ಭಾಗವಹಿಸಿದ್ದರು.