ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಗಾರಿಕೆಯಲ್ಲಿ ಅಕ್ರಮ ಸಂಗ್ರಹ; 750 ಕೆ.ಜಿ. ಸ್ಫೋಟಕ ವಶ

ಆಲ್ಹಾಳ ಗ್ರಾಮದ ಕಲ್ಲು ಗಣಿಗಾರಿಕೆಯಲ್ಲಿ ಪರವಾನಗಿ ಇಲ್ಲದ ಸ್ಫೋಟಕ ವಸ್ತು ಪತ್ತೆ
Last Updated 7 ಮಾರ್ಚ್ 2021, 17:04 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಕೆಂಭಾವಿ ಸಮೀಪದ ಆಲ್ಹಾಳ ಗ್ರಾಮದ ಕಲ್ಲು ಗಣಿಗಾರಿಕೆಯಲ್ಲಿ ಪರವಾನಗಿ ಇಲ್ಲದೆ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡ ಆರೋಪದ ಮೇಲೆಕಲಬುರ್ಗಿ–ಯಾದಗಿರಿ ಆಂತರಿಕ ಭದ್ರತಾ ವಿಭಾಗ, ಜಿಲ್ಲಾ ಪೊಲೀಸರು ದಾಳಿ ನಡೆಸಿ ಸುಮಾರು 750 ಕೆ.ಜಿಜಿಲೆಟಿನ್‌ ಕಡ್ಡಿಗಳನ್ನುಜಪ್ತಿ ಮಾಡಿದ್ದಾರೆ.

ಸ್ಫೋಟಕ ವಸ್ತು ಸಾಗಿಸುತ್ತಿದ್ದ ವಾಹನ ಚಾಲಕ ಮೌಲಾಲಿ ಮಹಿಬೂಬಸಾಬ, ರವಿ ಬಿರಾದಾರ, ಕ್ರಶರ್ ಮ್ಯಾನೇಜರ್ ಆನಂದ ಶರಣಗೌಡ, ಜಮೀನಿನ ಮಾಲೀಕ ಶಾಂತಗೌಡ ವಿರುದ್ಧ ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನ ಚಾಲಕ ಮೌಲಾಲಿ ಮಹಿಬೂಬಸಾಬ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

30 ಬಾಕ್ಸ್‌ನಲ್ಲಿದ್ದ 750 ಕೆಜಿ ಅಮೋನಿಯಮ್ ನೈಟ್ರೇಟ್ ಮಿಕ್ಚರ್, 150 ತುಂಡು ನಾನ್ ಎಲೆಕ್ಟ್ರಾ ಡೆಟೋನೆಟರ್ ಹಾಗೂ 7 ಅಡಿ ಕಾರ್ಡೆಕ್ಸ್ ಪತ್ತೆ ಹಚ್ಚಿದ್ದಾರೆ.₹28,500 ಮೌಲ್ಯದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.

ಕಲಬುರ್ಗಿ–ಯಾದಗಿರಿ ಆಂತರಿಕ ಭದ್ರತಾ ವಿಭಾಗದ ಸಿಪಿಐ ಅಡವಪ್ಪ ಬನ್ನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಭೇಟಿ ನೀಡಿದ್ದಾರೆ. ಕಲ್ಲು ಗಣಿಗಾರಿಕೆ ಜಾಗಪ್ರಭಾವಿಯೊಬ್ಬರಿಗೆ ಸೇರಿದ್ದು ಎನ್ನಲಾಗುತ್ತಿದೆ.

ಇತ್ತೀಚೆಗೆ ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲು ಗಣಿಗಾರಿಕೆಯಲ್ಲಿ ಜಿಲೆಟಿನ್ ಸ್ಫೋಟಗೊಂಡು ಅನೇಕರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಅಪಾರ ಪ್ರಮಾಣದ ಜಿಲೆಟಿನ್‌ ಕಡ್ಡಿಗಳ ದಾಸ್ತಾನು ಸಾರ್ವಜನಿಕರಲ್ಲಿ ಅಚ್ಚರಿ ಜೊತೆಗೆ ಭಯ ಹುಟ್ಟಿಸಿದೆ.ಅದೃಷ್ಟವಶಾತ್‌ ಅಧಿಕಾರಿಗಳ ಕಾರ್ಯಾಚರಣೆಯಿಂದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಯಾವುದೇ ಸ್ಪೋಟಕ ವಸ್ತುಗಳನ್ನು ಸಾಗಣೆ ಮಾಡಬೇಕಾದರೆ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಬೇಕು. ಆಯಾ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎನ್ನುವ ನಿಯಮವಿದೆ. ಇವು ಯಾವುದನ್ನೂ ಪಾಲಿಸಿಲ್ಲ. ಕೇವಲ ಚಾಲಕನೊಂದಿಗೆ ಸ್ಫೋಟಕ ಸಾಗಿಸಿರುವುದು ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಇಂಥ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ಆಕಸ್ಮಿಕವಾಗಿ ಸ್ಫೋಟಗೊಂಡು ದೊಡ್ಡಪ್ರಮಾಣದ ಹಾನಿ ಸಂಭವಿಸಿದರೆ ಇದಕ್ಕೆ ಯಾರು ಹೊಣೆಗಾರರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

‘ಗಣಿಗಾರಿಕೆ ಮೇಲೆ ದಾಳಿ ಮಾಡಿರುವ ವಿಷಯ ನನಗೆ ಗೊತ್ತಿಲ್ಲ. ನಮ್ಮ ಗಮನಕ್ಕೆ ಬಂದಿಲ್ಲ’ ಎಂದು ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಸೈಫುಲ್ಲ ಮಾಹಿತಿ ನೀಡಿದರು.

ದಾಳಿ ಸಂದರ್ಭದಲ್ಲಿ ಆಂತರಿಕ ಭದ್ರತಾ ವಿಭಾಗದ ಬೀದರ್‌ ಇನ್ಸ್‌ಪೆಕ್ಟರ್ ಅಮರಪ್ಪ, ಬಾಂಬ್ ನಿಷ್ಕ್ರೀಯ ದಳದ ರಮೇಶ ರಾಠೋಡ, ಮುಖ್ಯ ಪೇದೆ ಶಾಂತಯ್ಯ, ನಾಗರಾಜ, ಪ್ರಕಾಶ, ದೊಡ್ಡೇಶ ಹಾಗೂ ರಾಜಕುಮಾರ ಇದ್ದರು.

***

ಕ್ರಮ ಕೈಗೊಳ್ಳದ ಅಧಿಕಾರಿಗಳು: ಆರೋಪ
ಕೆಂಭಾವಿ ವಲಯದಲ್ಲಿ ಕೆಲವರು ಸರ್ಕಾರದ ಅನುಮತಿಯಿಲ್ಲದೆ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೂ ಭೂ ವಿಜ್ಞಾನ ಇಲಾಖೆ ಅಧಿಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

***

ಆರಾಧ್ಯ ಕ್ರಷರ್ ಮತ್ತು ಕಲ್ಲಿನ ಕ್ವಾರಿ ಮೇಲೆ ದಾಳಿ ಮಾಡಲಾಗಿದ್ದು, 30 ಬಾಕ್ಸ್‌ನಲ್ಲಿ ತಲಾ 25 ಕೆ.ಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
-ಋಷಿಕೇಶ ಭಗವಾನ್‌ ಸೋನವಣೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT