ಸೋಮವಾರ, ಸೆಪ್ಟೆಂಬರ್ 27, 2021
22 °C
ಸಂಪೂರ್ಣ ಲಾಕ್‌ಡೌನ್‌ ವೇಳೆಯೂ ಎಗ್ಗಿಲ್ಲದೇ ವ್ಯಾಪಾರ– ವಹಿವಾಟು, ಮಾಸ್ಕ್‌ ಧರಿಸದೇ ನಿರ್ಲಕ್ಷ್ಯ

ಯಾದಗಿರಿ ಜಿಲ್ಲೆಯ ಹಳ್ಳಿಗಳಲ್ಲಿ ಕೋವಿಡ್‌ ನಿಯಮಕ್ಕೆ ಎಳ್ಳುನೀರು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೋವಿಡ್‌ ಮೊದಲ ಅಲೆಯಲ್ಲಿ ನಗರ, ಪಟ್ಟಣಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದವು. ಈಗ ಹಳ್ಳಿಗಳೇ ಕೋವಿಡ್‌ ಹಾಟ್‌ಸ್ಪಾಟ್‌ ಆಗಿವೆ. ಇದಕ್ಕೆ ಮುಖ್ಯ ಕಾರಣ ಕೋವಿಡ್‌ ನಿಯಮ ಪಾಲನೆ ಮಾಡದಿರುವುದಾಗಿದೆ.

ಹಳ್ಳಿಗಳಲ್ಲಿ ಕೋವಿಡ್‌ ಯಾವುದೇ ನಿಮಯ ಪಾಲನೆ ಆಗುತ್ತಿಲ್ಲ. ವಿದ್ಯಾವಂತರೂ ಮಾಸ್ಕ್‌ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬೈಕ್‌ಗಳಲ್ಲಿ ತಿರುಗಾಡುವುದು ಸಾಮಾನ್ಯವಾಗಿದೆ.

ಕೋವಿಡ್‌ ಸರಪಳಿ ಮುರಿಯಲು ಮಾಸ್ಕ್‌ ಧರಿಸುವಿಕೆ, ಅಂತರ ಕಾಪಾಡಿಕೊಳ್ಳುವುದು ಮುಖ್ಯ ಎಂದು ಸರ್ಕಾರ, ಜಿಲ್ಲಾಡಳಿತ ಹೇಳುತ್ತಿದ್ದರೂ ಇದು ಗ್ರಾಮೀಣ ಪ್ರದೇಶದಲ್ಲಿ ಎಳ್ಳಷ್ಟು ಪ್ರಭಾವ ಬಿದ್ದಿಲ್ಲ.

ಮಾಸ್ಕ್ ಧರಿಸದ ಹಳ್ಳಿಗರು:
ಜಿಲ್ಲೆಯ ವಡಗೇರಾ, ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್‌, ಯಾದಗಿರಿ ತಾಲ್ಲೂಕುಗಳ ಹಳ್ಳಿಗಳಲ್ಲಿ ಮಾಸ್ಕ್‌ ಧರಿಸದೇ ಸಂಚರಿಸುವವರ ಸಂಖ್ಯೆಯೇ ಹೆಚ್ಚು ಕಂಡು ಬರುತ್ತಿದೆ. ಮಾಸ್ಕ್‌ ಧರಿಸುವುದು ಜೀವನದ ಒಂದು ಭಾಗವಾಗಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ.

ತರಕಾರಿ, ಕಿರಾಣ ವ್ಯಾಪಾರ ಜೋರು:
ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತ ಮಾಡಲಾಗಿದೆ. ಆದರೆ, ಜಿಲ್ಲೆಯ ಕೆಲ ಕಡೆ ರಾಜಾರೋಷವಾಗಿ ಕಿರಾಣ ಅಂಗಡಿ, ತರಕಾರಿ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದನ್ನು ಖರೀದಿಸಲು ಗುಂಪುಗೂಡುವುದು ಸಾಮಾನ್ಯವಾಗಿ ನಡೆದುಕೊಂಡು ಬರುತ್ತಿದೆ.

ವಡಗೇರಾ ಪಟ್ಟಣದ ಪ್ರಮುಖ ವೃತ್ತವಾದ ವಾಲ್ಮೀಕಿ ವೃತ್ತದಲ್ಲಿ ಗುಂಪುಗುಂಪಾಗಿ ತರಕಾರಿ ಖರೀದಿಗೆ ಮುಗಿಬಿದ್ದಿರುವುದು ಪ್ರತಿನಿತ್ಯ ಕಂಡುಬರುತ್ತಿದೆ. ಅಲ್ಲದೇ ಅಲ್ಲೇ ಇರುವ ಕಿರಾಣ ಅಂಗಡಿಗಳ ಶೆಟರ್‌ ತೆಗೆದು ವ್ಯಾಪಾರ ನಡೆಸುವುದು ಗುಟ್ಟಾಗಿ ಉಳಿದಿಲ್ಲ.

ಸಂಪೂರ್ಣ ಲಾಕ್‌ಡೌನ್‌ ಇದ್ದರೂ ಗ್ರಾಮೀಣ ಭಾಗದಲ್ಲಿ ತರಕಾರಿ ಮಾರಾಟ ನಿರಂತರವಾಗಿ ನಡೆಯುತ್ತಿದೆ. ನಗರ, ಪಟ್ಟಣ ಪ್ರದೇಶದಲ್ಲಿ ಮಾತ್ರ ತರಕಾರಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ತೋಟ ಇದ್ದವರು ಹೊಲದಲ್ಲಿ ತರಕಾರಿ ಬಿಟ್ಟರೆ ಕೊಳೆತು ಹೋಗಲಿದೆ. ಹೀಗಾಗಿ ಮಾರಾಟ ಇಲ್ಲಿ ಅನಿವಾರ್ಯವಾಗಿದೆ ಎಂದು ವ್ಯಾಪಾರಿಗಳು ಹೇಳುವ ಮಾತಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಮೂಹೂರ್ತ ಪ್ರಕಾರ ಮದುವೆ ನಿಶ್ಚಯವಾಗಿದ್ದು, ಅಡುಗೆಗೆ ಬೇಕಾಗುವ ಸಾಮಾಗ್ರಿ ಇಂಥ ಅಂಗಡಿಗಳಲ್ಲಿ ಕಳ್ಳ ವ್ಯಾಪಾರ ನಡೆಯುತ್ತಿದೆ.

ಮಾಸ್ಕ್‌ ಧರಿಸದ ಜನತೆ:
ಜಿಲ್ಲೆಯಲ್ಲಿ ವಿದ್ಯಾವಂತರೂ ಮಾಸ್ಕ್‌ ಹಾಕಿಕೊಳ್ಳದೇ ದಂಡ ಕಟ್ಟಿತ್ತಿರುವುದು ಸಾಮಾನ್ಯವಾಗಿದೆ. ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಿಂತು ಮಾಸ್ಕ್‌ ಹಾಕದವರಿಗೆ ದಂಡ ವಿಧಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ದಂಡ ವಸೂಲಿ:
ಸಂಪೂರ್ಣ ಲಾಕ್‌ಡೌನ್ ಇದ್ದರೂ ಗ್ರಾಮೀಣ ಭಾಗದಲ್ಲಿ ತಿರುಗಾಡುವುದು ನಿಂತಿಲ್ಲ. ಹೀಗಾಗಿ ಪೊಲೀಸ್‌ ಇಲಾಖೆ ಅಧಿಕಾರಿಗಳು ಬೀದಿಗಿಳಿದ ದಂಡ ವಸೂಲಿ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಮೇ 10ರಿಂದ ಮೇ 27 ರ ವರೆಗೆ 1,944 ದ್ವಿಚಕ್ರ ವಾಹನ, 70-ತ್ರಿ ಚಕ್ರ ವಾಹನ, 72 ನಾಲ್ಕು ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾಸ್ಕ್ ಧರಿಸದೇ ಇದ್ದವರ ವಿರುದ್ಧ 19,919 ಪ್ರಕರಣಗಳನ್ನು ದಾಖಲಿಸಿ ₹19,91,900 ದಂಡ ಹಾಕಲಾಗಿದೆ. ಇದರಿಂದ ಕೋವಿಡ್‌ ನಿಯಮಗಳು ಎಷ್ಟು ಉಲ್ಲಂಘನೆಯಾಗುತ್ತಿವೆ ಎನ್ನುವುದು ತಿಳಿದು ಬರುತ್ತಿದೆ.

ಜಿಲ್ಲೆಯ ಹಳ್ಳಿಯ ಜನರಲ್ಲಿ ಜಾಗೃತಿ ಕೊರತೆ ಇದ್ದು, ಟಾಸ್ಕ್‌ ಫೋರ್ಸ್‌ ಸಮಿತಿಯಿಂದ ಪ್ರತಿನಿತ್ಯ ಅರಿವಿನ ಕಾರ್ಯಕ್ರಮಗಳ ನಡೆಯಬೇಕು. ಗುಂಪು ಗೂಡದಂತೆ ಮಾಡಬೇಕು.
ಚಂದ್ರಶೇಖರಗೌಡ ಮಾಗನೂರ, ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ

ಹಳ್ಳಿಗಳಲ್ಲಿ ಮೊಬೈಲ್‌ ಹಿಡಿದು ಐದಾರು ಜನರು ಗುಂಪುಗೂಡಿ ಇರುವುದನ್ನು ಕಂಡಿದ್ದೇನೆ. ಇಂಥ ಕೆಲಸ ಮಾಡದೇ ಮನೆಯಲ್ಲಿಯೇ ಇದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು.
ಡಾ.ಹರ್ಷವರ್ಧನ ರಫಾಗರ್‌, ಸುರಪುರ ಕೋವಿಡ್‌ ಆಸ್ಪತ್ರೆ ನೋಡಲ್‌ ಅಧಿಕಾರಿ

ಕರ್ನಾಟಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅಡಿಯಲ್ಲಿ 25 ಪ್ರಕರಣಗಳು, ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ-2005 ಅಡಿಯಲ್ಲಿ 4 ಪ್ರಕರಣಗಳು ದಾಖಲಿಸಲಾಗಿದೆ.
ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಸಂಪೂರ್ಣ ಲಾಕ್‌ಡೌನ್‌ ಕಾರಣದಿಂದ ನಗರ ಪ್ರದೇಶದಲ್ಲಿ ಚಲನೆ ಕಡಿಮೆ ಇದ್ದರಿಂದ ಕೋವಿಡ್‌ ಪ್ರಕರಣಗಳು ತಗ್ಗಿವೆ. ಆದರೆ, ಗ್ರಾಮೀಣ ಪ್ರದೇಶ ಪಾಲನೆ ಮಾಡದಿರುವುದು ಸಮಸ್ಯೆಯಾಗಿದೆ.
ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು