ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ದಂಧೆ ತಡೆಗೆ ಚೆಕ್‌ಪೋಸ್ಟ್ ಹೆಚ್ಚಿಸಿ: ಡಿಸಿ ಡಾ. ರಾಗಪ್ರಿಯಾ

ಡಿಸಿ ಡಾ.ರಾಗಪ್ರಿಯಾ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಮರಳು ಮೇಲ್ವಿಚಾರಣಾ ಸಮಿತಿ ಸಭೆ
Last Updated 2 ಜೂನ್ 2021, 2:04 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣ ಮಾಡುವ ಸಂಬಂಧ ಇನ್ನೂ ಹೆಚ್ಚಿನ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಮಾನಿಟರಿಂಗ್ ಸಮಿತಿಯ ಅಧ್ಯಕ್ಷೆ ಡಾ. ರಾಗಪ್ರಿಯಾ ಆರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಮರಳು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಸದ್ಯ ಶಹಾಪುರ ತಾಲ್ಲೂಕಿನ ಹತ್ತಿಗೂಡುರು ಕ್ರಾಸ್ ಹತ್ತಿರ ಮತ್ತು ಸುರಪುರ ತಾಲ್ಲೂಕಿನ ಶೆಳ್ಳಗಿ ಕ್ರಾಸ್ ಹತ್ತಿರ ಚೆಕ್‌ಪೋಸ್ಟ್‌ಗಳಿವೆ. ಅಕ್ರಮ ಮರಳು ಸಾಗಾಣಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮ, ವಡಗೇರಾ ಕ್ರಾಸ್ ಹಾಗೂ ಸುರಪುರ ತಾಲ್ಲೂಕಿನ ಬಂಡೋಳಿ ಕ್ರಾಸ್ ಹತ್ತಿರ ಚೆಕ್‌ಪೋಸ್ಟ್‌ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಚೆಕ್‌ಪೋಸ್ಟ್‌ಗಳಲ್ಲಿ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಇನ್ನಿತರ ಸಿಬ್ಬಂದಿಯನ್ನು ನಿಯೋಜಿಸಿ ಎಂದು ಆಯಾ ತಾಲ್ಲೂಕಿನ ತಹಶೀಲ್ದಾರರಿಗೆ ತಿಳಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಫ್ಯಾಬ್ರಿಕೇಟೆಡ್ ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿದರೆ ಸಿಬ್ಬಂದಿ ಕಾರ್ಯನಿರ್ವಹಿಸಲು ಯೋಗ್ಯಕರ ವಾತಾವರಣ ಇರಲಿದೆ ಎಂದು ಸಭೆಯ ಗಮನಕ್ಕೆ ತಂದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಪನ್ ಫಂಡ್ ಬಳಸಿಕೊಂಡು ಏಜೆನ್ಸಿ ಮೂಲಕ ಸದರಿ ಚೆಕ್‍ಪೋಸ್ಟ್‌ಗಳನ್ನು ನಿರ್ಮಾಣ ಮಾಡಲು ಸೂಚಿಸಿದರು.

ಯಾದಗಿರಿ ತಾಲ್ಲೂಕು ಹಾಗೂ ಸುರಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ 2 ವಾಹನಗಳನ್ನು 3ರಿಂದ 4 ತಿಂಗಳ ಕಾಲ ಗಸ್ತು ಕಾರ್ಯಕ್ಕೆ ಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಕಾರ್ಪಸ್ ಫಂಡ್ ಮೂಲಕ ಪಡೆಯಲು ಸೂಚಿಸಿದರು. ಈ ಸಂಬಂಧ ಮೇಲುಸ್ತುವಾರಿಯನ್ನು ಮಾಡುವಂತೆ ಸಹಾಯಕ ಆಯುಕ್ತರಿಗೆ ತಿಳಿಸಿದರು.

ಇದೇ ವೇಳೆ ರಾಯಚೂರು ಜಿಲ್ಲೆಯ ಮರಳು ಸಾಗಾಟ ವಾಹನಗಳು ಓಡಾಟ ಸಂಬಂಧ ಸಮಿತಿಯು ಚರ್ಚಿಸಿ ಹೇರು ಭಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ನಿರ್ಣಯಿಸಿತು. ಅದರಂತೆ ಪರವಾನಗಿ ಇಲ್ಲದ ಸಾಗಾಟ ವಾಹನಗಳು ಕಂಡು ಬಂದಲ್ಲಿ ಅಂಥ ವಾಹನಗಳನ್ನು ಜಪ್ತಿ ಪಡಿಸಿಕೊಂಡು ಗಣಿ ಇಲಾಖೆಗೆ ಕ್ರಮ ವಹಿಸಲು ತಿಳಿಸಿತು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಪುಷ್ಪಾವತಿ ಮಾತನಾಡಿ, ಹೊಸ ಮರಳು ನೀತಿ 2020 ಪ್ರಕಾರ ಒಟ್ಟು 6 ಮರಳು ಬ್ಲಾಕ್‌ಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 10 ಮರಳು ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ವಡಗೇರಾ ತಾಲ್ಲೂಕಿನ ಯಕ್ಷಂತಿ, ಸುರಪುರ ತಾಲ್ಲೂಕಿನ ಹೇಮನೂರು, ಚೌಡೇಶ್ವರಹಾಳ, ಹೆಮ್ಮಡಗಿ, ಸೂಗೂರು ಹಾಗೂ ಶೆಳ್ಳಿಗಿ ಗ್ರಾಮಗಳ ನದಿ ಪಾತ್ರದಲ್ಲಿ ತಲಾ 1 ಹೊಸ ಮರಳು ಬ್ಲಾಕ್‌ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ, ಹಿರಿಯ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಇನ್ನಿತರ ಅಧಿಕಾರಿಗಳು ಇದ್ದರು.

ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತಂತೆ ಹೆಚ್ಚಿಗೆ ದೂರುಗಳು ಬರುತ್ತಿದ್ದು, ಅಕ್ರಮ ಮರಳು ಸಾಗಾಣೆ ಮೇಲೆ ದಿನದ 24X7 ರಂತೆ ನಿಗಾ ವಹಿಸಬೇಕು.
ಡಾ.ರಾಗಪ್ರಿಯಾ, ಜಿಲ್ಲಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT