ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ಧಗೆ

ಎಳನೀರು, ಕಲ್ಲಂಗಡಿ ಹಣ್ಣಿಗೆ ಬೇಡಿಕೆ; ಅಟ್ಟ ಸೇರಿದ್ದ ಮಡಕೆಗಳ ಬಳಕೆ
Last Updated 1 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಫೆಬ್ರುವರಿ ಕೊನೆ ವಾರದಿಂದಲೇ ಬಿಸಿಲಿನ ಜಳ ಅನುಭವಕ್ಕೆ ಬಂದಿದೆ. ಈಗ ಮಾರ್ಚ್‌ ತಿಂಗಳುಆರಂಭವಾಗಿದ್ದು, ಏಪ‍್ರಿಲ್‌, ಮೇ ತಿಂಗಳಲ್ಲಿ ಬಿಸಿಲುಹೇಗಿರಲಿದೆ ಎನ್ನುವುದು ಊಹೆಗೆ ಸಿಗುತ್ತಿಲ್ಲ.

ಬೆಳಿಗ್ಗೆ 8 ಗಂಟೆಯಿಂದಲೇ ನೆತ್ತಿ ಸುಡುವ ಬಿಸಿಲು ಆರಂಭವಾಗಿ ಸಂಜೆಯಾದರೂ ತಂಪಿನ ವಾತಾವರಣ ಸುಳಿಯುತ್ತಿಲ್ಲ. ಬೀಸುವ ಗಾಳಿಯೂ ಬಿಸಿಯಾಗಿದ್ದು, ಆರ್ದ್ರತೆ ಶೇ 29ರಷ್ಟಿದೆ. ಗಂಟೆಗೆ 5–6 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಆದಾಗಿಯೂ ತಂಪಿನ ವಾತಾವರಣ ಕಂಡು ಬರುತ್ತಿಲ್ಲ.

ಕಳೆದ ವರ್ಷ ಅಟ್ಟ ಸೇರಿದ್ದ ಮಡಿಕೆಗಳು ಈಗ ನೀರು ಹಾಕಿ ಬಳಕೆ ಮಾಡಲಾಗುತ್ತಿದೆ. ಕೂಲರ್ ಸಣ್ಣಪುಟ್ಟ ದುರಸ್ತಿಯೂ ನಡೆಯುತ್ತಿದೆ.

ಎಳನೀರು, ಕಲ್ಲಂಗಡಿಗೆ ಬೇಡಿಕೆ: ಒಂದೇಡೆ ಬಿಸಿಲು ಜಾಸ್ತಿಯಾಗುತ್ತಿದ್ದಂತೆ ಇತ್ತ ಕಲ್ಲಂಗಡಿ ಹಣ್ಣು, ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ.

ನಗರದ ವಿವಿಧ ಕಡೆ ಕಲ್ಲಂಗಡಿ ಹಣ್ಣುಗಳನ್ನು ಗುಡ್ಡೆ ಹಾಕಿ ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ಶುಭಾಷ ವೃತ್ತದ ಸಮೀಪ ಎರಡು ಬದಿಯೂ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಒಂದು ಕಲ್ಲಂಗಡಿ ₹30ರಿಂದ ಆರಂಭವಾಗಿ ಗಾತ್ರಕ್ಕೆ ಅನುಗುಣವಾಗಿ ₹70–80ರ ತನಕ ದರ ನಿಗದಿ ಮಾಡಲಾಗಿದೆ. ಮುಂದೆ ಬಿಸಿಲು ಹೆಚ್ಚಾದಾಗ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಇನ್ನೊಂದೆಡೆ ಎಳನೀರು ವ್ಯಾಪಾರವೂ ಜೋರಾಗಿದೆ. ನಗರದ ಪ್ರಮುಖ ವೃತ್ತ, ಶಾಲಾ–ಕಾಲೇಜು, ಪೊಲೀಸ್‌ ಸ್ಟೇಷನ್‌ ಸಮೀಪ ಎಳನೀರು ಅಂಗಡಿಗಳಿವೆ. ಅಲ್ಲಲ್ಲಿ ಭರ್ಜರಿ ವ್ಯಾಪಾರ ಆಗುತ್ತಿದೆ. ಒಂದೊಂದು ಕಡೆ 60ರಿಂದ 70 ಎಳನೀರು ಮಾರಾಟವಾದರೆ ಅರ್ಧದಷ್ಟು ಮನೆಗೆ ಕೊಂಡೊಯ್ಯುತ್ತಾರೆ.

‘ನಗರದ ಪ್ರಮುಖ ಮಂಡಿಯಿಂದ ಎಳನೀರು ಖರೀದಿ ಮಾಡುತ್ತೇವೆ. ನಮಗೆ ₹28ರಿಂದ ₹30ಗೆ ನೀಡುತ್ತಾರೆ. ನಮ್ಮ ಖರ್ಚು ವೆಚ್ಚ ತೆಗೆದರೆ ಒಂದಿಷ್ಟು ಲಾಭ ಸಿಗುತ್ತದೆ. ಬೇರೆ ಕಡೆಯಿಂದ ಎಳನೀರು ಬರುವುದರಿಂದ ದರ ಮತ್ತಷ್ಟು ಹೆಚ್ಚಳವಾಗಬಹುದು. ಹೆಚ್ಚಳವಾದರೆ ನಾವು ದರ ಏರಿಸುತ್ತೇವೆ’ ಎನ್ನುತ್ತಾರೆ ಎಳನೀರು ವ್ಯಾಪಾರಿ ಅಬ್ರಾಹಂ ದಾಸನಕೇರಿ.

‘ಸದ್ಯ ಕಂಪನಿ ಕೂಲರ್ ದರ ₹7 ಸಾವಿರದಿಂದ ₹8 ಸಾವಿರ ದರ ಇದೆ. ಕಳೆದ ವರ್ಷಕ್ಕಿಂತ ಈ ವರ್ಷ ಬೆಲೆ ಏರಿಕೆಯಾಗಿದೆ. ಬೇಡಿಕೆ ಹೆಚ್ಚಳವಾದರೆ ಸ್ಥಳೀಯ ಕಂಪನಿಗಳಿಂದ ಕೂಲರ್‌ ತರಿಸುತ್ತೇವೆ’ ಎಂದು ಎಲೆಕ್ಟ್ರಾನಿಕ್‌ ಅಂಗಡಿ ಮಾಲೀಕ ಬಸವರಾಜ ಅವರ ಮಾತು.

***

40–42 ಡಿಗ್ರಿ ಉಷ್ಣಾಂಶ ಇಲ್ಲಿ ಸಾಮಾನ್ಯ!

ಪ್ರತಿ ಬೇಸಿಗೆಯಲ್ಲಿ40ರಿಂದ 42 ಡಿಗ್ರಿ ಉಷ್ಣಾಂಶ ಇಲ್ಲಿ ಸಾಮಾನ್ಯವಾಗಿರುತ್ತದೆ. ಬೆಟ್ಟಗುಡ್ಡಗಳಿಂದ ಆವೃತವಾಗಿರುವ ಗಿರಿ ಜಿಲ್ಲೆ ಯಾದಗಿರಿಯು ಬಿಸಿಲಿಗೆ ಖ್ಯಾತಿ ಪಡೆದಿದೆ.

ಕಳೆದ ಒಂದು ವಾರದಿಂದ ಉಷ್ಣಾಂಶ ಏರುಗತಿಯಲ್ಲಿದೆ. ಸದ್ಯ 36ರಿಂದ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಮುಂದಿನ ಏಪ್ರಿಲ್‌, ಮೇ ತಿಂಗಳಲ್ಲಿ 40ರ ಗಡಿ ದಾಟುತ್ತದೆ. ಬಿಸಿಲು ಹೆಚ್ಚಿರುವ ಕಾರಣದಿಂದ ಬೇಸಿಗೆಯಲ್ಲಿ ಸರ್ಕಾರಿ ಕಚೇರಿಗಳ ಸಮಯವನ್ನು ಸರ್ಕಾರ ಬದಲಾವಣೆ ಮಾಡುತ್ತಿತ್ತು. ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರ ತನಕ ಕಚೇರಿಗಳು ಕಾರ್ಯನಿರ್ವವಹಿಸುತ್ತಿದ್ದವು.

***

ಬಿಸಿಲು ಜಾಸ್ತಿಯಾಗುತ್ತಿರುವುದರಿಂದ ಎಳನೀರು ಸೇವಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಮೈಸೂರು, ಮದ್ದೂರು ಕಡೆಯಿಂದ ಎಳನೀರು ಬರುತ್ತವೆ

-ಅಬ್ರಾಹಂ ದಾಸನಕೇರಿ,ಎಳನೀರು ವ್ಯಾಪಾರಿ

***

ಈಗಾಗಲೇ ಹಲವಾರು ಗ್ರಾಹಕರು ಹವಾನಿಯಂತ್ರಿತ ಯಂತ್ರ, ಕೂಲರ್‌ ದರ ಬಗ್ಗೆ ವಿಚಾರಿಸಿಕೊಂಡು ಹೋಗುತ್ತಿದ್ದಾರೆ. ಬೇಸಿಗೆ ಮಧ್ಯದಲ್ಲಿ ಹೆಚ್ಚಿನ ವಹಿವಾಟು ಆಗುತ್ತದೆ

-ಬಸವರಾಜ, ಎಲೆಕ್ಟ್ರಾನಿಕ್‌ ಅಂಗಡಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT