ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿಯಲ್ಲಿ ಅನ್ಯಾಯ; ಗ್ರಾಮಲೆಕ್ಕಿಗರಿಂದ ಪ್ರತಿಭಟನೆ

Last Updated 18 ಜುಲೈ 2019, 5:58 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮ ಲೆಕ್ಕಾಧಿಕಾರಿಗಳ ಕುಂದು ಕೊರತೆ ಆಲಿಸಬೇಕು ಮತ್ತು ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ನಿರಂತರ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಸಿದ್ಧಯ್ಯ ಸ್ವಾಮಿ ಮಾತನಾಡಿ, ‘ಬೇರೆ ಇಲಾಖೆಯ ಕೆಲಸದ ಒತ್ತಡವನ್ನು ನಮ್ಮ ಇಲಾಖೆಯ ನೌಕರರ ಮೇಲೆ ಹೇರಲಾಗುತ್ತಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಆದರೂ ನಮ್ಮ ಮನವಿಗೆ ಸ್ಪಂದನೆ ದೊರೆತಿಲ್ಲ’ ಎಂದು ದೂರಿದರು.

‘ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಬೇಕು ಎಂದು ಸರ್ಕಾರ ಆದೇಶ ನೀಡಿದ್ದರೂ ಹಲವು ಕಡೆ ಸಾರ್ವತ್ರಿಕ ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರಲಾಗುತ್ತಿದೆ. ಇದರಿಂದ ಕೌಟುಂಬಿಕ ಸಮಸ್ಯೆಗಳು ಉಂಟಾಗುತ್ತಿವೆ. ಹಾಗಾಗಿ ರಜಾ ದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಜೇಷ್ಠತೆ ಆಧಾರದಲ್ಲಿ ವೇತನ ಹೆಚ್ಚಳ, ಪರಿಷ್ಕೃತ ಜಾಬ್ ಚಾರ್ಟ್ ನೀಡಬೇಕು. ಮರಳು ದಂಧೆಕೋರರಿಂದ ಹತ್ಯೆಯಾದ ಗ್ರಾಮಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಬೇಕು. ಗ್ರಾಮ ಸಹಾಯಕ ಹುದ್ದೆ ಖಾಯಂಗೊಳಿಸಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬೆಂಗಳೂರಿನಲ್ಲಿ ಕುಟುಂಬ ಸಮೇತರಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸೋಗಿ, ಕೊಟ್ರಯ್ಯ ಸ್ವಾಮಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT