ಸೋಮವಾರ, ಫೆಬ್ರವರಿ 24, 2020
19 °C
ಗುರುಮಠಕಲ್ ಕ್ಷೇತ್ರ; ಕನ್ನಡ ಬೆಳೆಸುವ ಕಾರ್ಯದಲ್ಲಿ ನಿರತವಾದ ಮಠ

ಖಾಸಾ ಮಠ ಧಾರ್ಮಿಕ ಚಟುವಟಿಕೆಗೆ ಸೀಮಿತವಲ್ಲ; ಇಲ್ಲಿ ನಿತ್ಯ ಕನ್ನಡ ಕಲರವ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪಟ್ಟಣದ ಖಾಸಾ ಮಠ ಕೇವಲ ಧಾರ್ಮಿಕ ಚಟುವಟಿಕೆಗೆ ಸೀಮಿತವಾಗದೇ ಕನ್ನಡ ಕಟ್ಟುವ, ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಕಳೆದ 18 ವರ್ಷಗಳಿಂದ ಈ ಹಿಂದಿನ ಪೀಠಾಧಿಪತಿ ಸಂಗಮೇಶ್ವರ ಶ್ರೀಗಳ ಪುಣ್ಯ ಸ್ಮರಣೆಯನ್ನು ಗಡಿನಾಡು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿಗಳ ಆಸ್ಥೆಯೇ ಕಾರಣ. ಈ ಮೂಲಕ ಮಠದಿಂದಲೂ ಕನ್ನಡದ ಕೆಲಸ ಮಾಡಬಹುದು ಎಂದು ಅವರು ತೋರಿಸಿಕೊಟ್ಟಿದ್ದಾರೆ.

ಸಂಗಮೇಶ್ವರ ಶ್ರೀಗಳು ಹಳ್ಳಿ ಹಳ್ಳಿಗೂ ಹೋಗಿ ವಚನ ಸಾಹಿತ್ಯವನ್ನು ಪಸರಿಸುವ ಕೆಲಸ ಮಾಡುತ್ತಿದ್ದರು. ಆ ಮೂಲಕ ಗ್ರಾಮಗಳಲ್ಲಿ ಕನ್ನಡದ ವಾತಾವರಣವನ್ನು ಸೃಷ್ಟಿಸುತ್ತಿದ್ದರು.

ಪ್ರತಿ ವರ್ಷ ಗಡಿ ಭಾಗದಲ್ಲಿ ಖಾಸಾ ಮಠದಿಂದ ಕನ್ನಡದ ಕಲರವ ನಡೆಯುತ್ತದೆ. ಸಂಗಮೇಶ ಶ್ರೀಗಳ ಪುಣ್ಯಸ್ಮರಣೆ ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ‌.

ಬೇರೆ ಕಡೆ ಪುಣ್ಯಸ್ಮರಣೆ ವೇಳೆ ಗದ್ದುಗೆಗೆ ಪೂಜೆ‌, ಅಭಿಷೇಕ, ಪ್ರಸಾದ ವಿತರಣೆ ಮಾಡಿ ಮುಗಿಸುತ್ತಾರೆ. ಆದರೆ, ಖಾಸಾ ಮಠದಲ್ಲಿ ಕನ್ನಡದ ಉತ್ಸವದ ಮೂಲಕ ಕನ್ನಡಿಗರನ್ನು ಜಾಗೃತಗೊಳಿಸುವ ಕಾರ್ಯ ನಡೆಯುತ್ತಿದೆ.

ಗುರುಮಠಕಲ್ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾಗಿ ಶ್ರೀಗಳು ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕು ಸಮ್ಮೇಳನ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಅಲ್ಲದೆ ಶಾಲೆಗಳಲ್ಲಿ ಪರಿಷತ್ತಿನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಭಾಷೆ ಬೆಳೆವಣಿಗೆಗೆ ಶ್ರಮಿಸುತ್ತಿದ್ದಾರೆ.

ಮಠದಲ್ಲಿ ಕವಿಗೋಷ್ಠಿ, ಸಾಂಸ್ಕೃತಿಕ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಮಠದ ಆಶ್ರಯದಲ್ಲಿ ಕನ್ನಡ ಶಾಲೆ: ಖಾಸಾ ಮಠದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಡೆಸಲಾಗುತ್ತಿದೆ. ಈ ಮುಖಾಂತರ ಗಡಿ ಭಾಗದಲ್ಲಿ ಕನ್ನಡ ಬೆಳವಣಿಗೆಗೆ ಮಠದಿಂದ ಸೇವೆ ಮಾಡಲಾಗುತ್ತಿದೆ.

ಮಠದಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ: ಗುರುಮಠಕಲ್ ಕ್ಷೇತ್ರದಲ್ಲಿ 2017ರಲ್ಲಿ ಯಾದಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲಾಗಿದೆ‌.

‘ಕನ್ನಡದ ಅಭಿಮಾನಿಗಳು, ಸಾಹಿತಿಗಳು, ಕನ್ನಡದ ಪ್ರಶಸ್ತಿ ಪಡೆದವರು ಗಡಿ ಭಾಗಕ್ಕೆ ಬಂದು ಇಲ್ಲಿಯ ಭಾಷೆ ಬಗ್ಗೆ ಚಿಂತನ ಮಂಥನ ಮಾಡಬೇಕು. ಭಾಷೆ ಬಗ್ಗೆ ಕೇವಲ ಪತ್ರಿಕೆ, ವಾಹಿನಿಗಳಲ್ಲಿ ಮಾತ್ರ ಕಾಣಿಸಿಕೊಳ್ಳದೆ ಈ ಭಾಗಕ್ಕೆ ಆಗಾಗ ಬಂದು ಕನ್ನಡದ ಚಟುವಟಿಕೆ ನಡೆಸಬೇಕು. ಆಗ ಮಾತ್ರ ಕನ್ನಡ ಉಳಿವಿಗೆ ಸಾಧ್ಯವಾಗಲಿದೆ’ ಎಂದು ಖಾಸಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳುತ್ತಾರೆ.

‘ಇಂದಿಗೂ ಕನ್ನಡ ಶಾಲೆಗಳಲ್ಲಿ ತೆಲುಗು ಬೋಧಿಸಿ ಅರ್ಥ ಮಾಡಿಸುವ ಮಟ್ಟಿಗೆ ಕನ್ನಡ ಇಲ್ಲಿ ಮರೆತು ಹೋಗಿದೆ. ಶೇಕಡ 80 ರಷ್ಟು ತೆಲುಗು ಮಾತನಾಡುವವರು ಸಿಗುತ್ತಾರೆ. ಹೀಗಾಗಿ ಇದನ್ನು ತಡೆಯುವ ಕೆಲಸವಾಗಬೇಕಿದೆ. ಆ ಮೂಲಕ ಕನ್ನಡ ಪಸರಿಸುವ ಕೆಲಸ ಮಾಡಬೇಕು’ ಎನ್ನುತ್ತಾರೆ ಅವರು.

***

ಗಡಿ ಭಾಗದಲ್ಲಿ ಕನ್ನಡ ಭಾಷೆ ತಡೆಗೋಡೆಯಾಗಿ ನಿಲ್ಲಬೇಕು. ಅನ್ಯ ಭಾಷಾ ಚಟುವಟಿಕೆಗಳು ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು
- ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಖಾಸಾ ಮಠ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು