ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಕಾರಹುಣ್ಣಿಮೆ ಸಂಭ್ರಮ

ಎತ್ತುಗಳಿಗೆ ಸಿಂಗರಿಸಿ ಪೂಜೆ, ಗ್ರಾಮೀಣ ಭಾಗದಲ್ಲಿ ರೈತರ ಸಡಗರ
Last Updated 25 ಜೂನ್ 2021, 4:23 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ವಿವಿಧೆಡೆ ರೈತರ ಮುಂಗಾರಿನ ಮೊದಲ ಹಬ್ಬ ಕಾರಹುಣ್ಣಿಮೆಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.

ನಗರ, ಪಟ್ಟಣಕ್ಕಿಂತ ಗ್ರಾಮೀಣ ಭಾಗದಲ್ಲಿ ರೈತರ ಸಂಭ್ರಮ ಮೇಳೈಸಿತ್ತು. ಬೆಳಿಗ್ಗೆ ರೈತರು ತಮ್ಮ ಎತ್ತು, ಹಸುಗಳಿಗೆ ಹಳ್ಳ, ಕೆರೆ, ನದಿ ದಂಡೆಗಳಲ್ಲಿ ಸ್ನಾನ ಮಾಡಿಸಿ ವಿವಿಧ ಬಗೆಯ ಅಲಂಕಾರ ಮಾಡಿದರು.

ಎತ್ತುಗಳಿಗೆ ವಿವಿಧ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಕಾಲು, ಕುತ್ತಿಗೆ, ಟೊಂಕ, ಕೊಂಬುಗಳಿಗೆ ವಿಶೇಷ ಬಣ್ಣಗಳಿಂದ ಸಿಂಗರಿಸಲಾಗಿತ್ತು. ಮನೆಯವರು ಪಾದಮುಟ್ಟಿ ನಮಸ್ಕರಿಸಿ ಪೂಜೆ ಸಲ್ಲಿಸಲಾಯಿತು.

ಸಂಜೆ ವೇಳೆ ರೈತರು ಎತ್ತುಗಳಿಂದ ಕರಿ ಹರಿಯುವ ಮೂಲಕ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು. ಮುಂಗಾರು ಮಳೆ ಆಗಾಗ ಸಿಂಚನವಾಗುತ್ತಿದ್ದು, ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಹೀಗಾಗಿ ಗುರುವಾರ ಬಿಡುವು ನೀಡಿ ರೈತಾಪಿ ವರ್ಗ ಖುಷಿಪಟ್ಟರು.

ಗ್ರಾಮೀಣ ಭಾಗದಲ್ಲಿಯೂ ಈಗ ಎತ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಇದ್ದವರು ಮಾತ್ರ ವಿಶೇಷ ಪೂಜೆ ಮಾಡಿದರು.

ಸರಳ ಆಚರಣೆ

ಶಹಾಪುರ: ಕೋವಿಡ್ ಸಂಕಷ್ಟದ ನಡುವೆ ಗ್ರಾಮೀಣ ಪ್ರದೇಶದಲ್ಲಿ ರೈತರು ಗುರುವಾರ ಕಾರ ಹುಣ್ಣಿಮೆಯನ್ನು ಸರಳವಾಗಿ ಆಚರಿಸಿದರು.

ರೈತರ ಸಂಗಾತಿಯಂತಿರುವ ಎತ್ತು, ಹೋರಿ ಮೈತೊಳೆದು ಕೊಂಬುಗಳಿಗೆ ವಿವಿಧ ಬಣ್ಣಗಳಲ್ಲಿ ಗುಲಾಲ್ ಹಚ್ಚಿದರು. ಜೊತೆಗೆ ಗಂಟೆ, ಕುರಣಿಗಿ, ಗೊಗ್ಗರಿ, ಅಣಿಗೆಜ್ಜೆ, ಜುಲಾ, ಅಣಕ, ಮೈಮೇಲೆ ವಿಶೇಷವಾದ ಚಿತ್ತಾರ ಬಿಡಿಸಿ ಮೆರವಣಿಗೆ ಮಾಡಿದರು.

ಕಾರಂಗ ಸಡಗರ

ಗುರುಮಠಕಲ್: ತಾಲ್ಲೂಕಿನ ಗ್ರಾಮಗಳಲ್ಲಿ ಕೋವಿಡ್ ಮಾರ್ಗಸೂಚಿಗಳ ಕಾರಣದಿಂದ ಸರಳವಾಗಿ ಕಾರ ಹುಣ್ಣಿಮೆಯನ್ನು ಆಚರಿಸಿದ ರೈತಾಪಿ ಕುಟುಂಬಗಳು. ಎತ್ತುಗಳ ಮೈತೊಳೆದು, ಕಾರಂಗ ಕುಡಿಸುವುದು ಹಾಗೂ ಎತ್ತುಗಳ ಮೈಮೇಲೆ ಬಣ್ಣಗಳಿಂದ ಚಿತ್ತಾರಗಳನ್ನು ಮೂಡಿಸುವಷ್ಟಕ್ಕೆ ಹಬ್ಬದ ಸಂಭ್ರಮವನ್ನು ಸೀಮಿತಗೊಳಿಸಿದರು.

ಬೆಳಿಗ್ಗೆಯಿಂದ ರೈತ ಕುಟುಂಬಗಳಲ್ಲಿ ಎತ್ತುಗಳನ್ನು ಮೈತೊಳೆಯುವುದು, ಅಲಂಕರಿಸುವುದು, ಒಬ್ಬರ ನಂತರ ಒಬ್ಬರಂತೆ ಸರತಿಯಲ್ಲಿ ಸ್ನೇಹಿತರ ಮನೆಗಳಿಗೆ ತೆರಳಿ ಎತ್ತುಗಳಿಗೆ ಕಾರಂಗ ಕುಡಿಸುವ ದೃಶ್ಯಗಳು ತಾಲ್ಲೂಕಿನಾದ್ಯಂತ ಕಂಡುಬಂದವು.

ಮಳೆಗಾಲದ ಸಮಯದಲ್ಲಿ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರಾಗದಂತೆ ಹಾಗೂ ದೈಹಿಕ ಉಷ್ಣತೆಯು ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಲಿ ಎಂದು ಗಿಡ ಮೂಲಿಕೆಗಳ ಮಿಶ್ರಣವಾದ ಕಾರಂಗವನ್ನು ಕುಡಿಸಲಾಗುತ್ತದೆ.

‘ಜಾನುವಾರುಗಳು ಸಹ ಮನೆ ಸದಸ್ಯರಂತೆ ನೋಡಲಾಗುತ್ತದೆ. ಅವುಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಕಾರಂಗ ಕುಡಿಸುತ್ತಾ ಬಂದದ್ದೇವೆ‘ ಎಂದು ಕೃಷಿಕರಾದ ಮಾಣಿಕಪ್ಪ, ಮಲ್ಲಪ್ಪ, ರಘಪ್ಪ ಹಾಗೂ ಶಿವಲಿಂಗಪ್ಪ ತಿಳಿಸಿದರು.

***

ಎತ್ತುಗಳ ಮೆರವಣಿಗೆ

ಯರಗೋಳ: ಗ್ರಾಮದಲ್ಲಿ ರೈತರು ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು.

ಕಾರ ಹುಣ್ಣಿಮೆ ಹಬ್ಬಕ್ಕೆ ರೈತರು ಜಾನುವಾರುಗಳಿಗೆ, ಹಳ್ಳ, ಕೆರೆ, ನದಿ ದಂಡೆಗಳಲ್ಲಿ ಸ್ನಾನ ಮಾಡಿಸಿ, ತಲೆಗೆ ಹೂವಿನ ಗೊಂಡೆ, ಕೊರಳಿಗೆ ಗೆಜ್ಜೆ, ಟೊಂಕಕ್ಕೆ ಕಪ್ಪುದಾರ, ಕೋಡಿಗೆ ಪೇಂಟ್, ದೇಹಕ್ಕೆ ಕೆಂಪು, ಹಳದಿ ಬಣ್ಣ ಹಚ್ಚಿ, ಶೃಂಗಾರಗೊಳಿಸಿ, ಗ್ರಾಮದ ರಸ್ತೆಗಳಲ್ಲಿ ಮೆರವಣಿಗೆ ಮಾಡಿ, ಕುಣಿದು, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು.

ಕೆಲವು ಗ್ರಾಮಗಳಲ್ಲಿ ಎತ್ತುಗಳಿಗೆ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಿದರು. ಯುವಕರು ಎತ್ತುಗಳ ಜೊತೆಯಲ್ಲಿ ಕುಣಿತ ಹಾಕಿದರು. ಹಿರಿಯರು ಜನಪದ ಹಾಡುಗಳು ಹಾಡಿದರು. ಮೆರವಣಿಗೆಯನ್ನು ವೀಕ್ಷಿಸಲು ನೂರಾರು ಸಂಖ್ಯೆಯ ಜನರು ಸೇರಿದ್ದರು.

ಯರಗೋಳ, ಅಲ್ಲಿಪುರ, ಹೆಡಗಿಮದ್ರ, ಹೊನಗೇರಾ, ಹತ್ತಿ ಕುಣಿ, ಬಂದಳ್ಳಿ, ಯಡ್ಡಳ್ಳಿ, ಚಾಮನಳ್ಳಿ, ಬೆಳಗೇರಾ, ಖಾನಳ್ಳಿ, ಬಸವಂತಪುರ, ಕ್ಯಾಸಪನಳ್ಳಿ, ಹೋರುಂಚ, ಅಚ್ಚೋಲ, ಮುದ್ನಾಳ, ಮಲಕಪ್ಪನಳ್ಳಿ, ಕಂಚಗಾರಳ್ಳಿ, ಅಬ್ಬೆತುಮಕೂರು, ಬಾಚವಾರ, ಬೊಮ್ಮಚಟ್ನಳ್ಳಿ, ಸಮಣಪುರ ಗ್ರಾಮಗಳಲ್ಲಿ ಕಾರ ಹುಣ್ಣಿಮೆ ಸಂಭ್ರಮ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT