ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ವಿಧಾನಸಭೆ ಚುನಾವಣೆ | ಟಿಕೆಟ್‌ ಘೋಷಣೆ ಮುನ್ನವೇ ಕ್ಷೇತ್ರ ಸಂಚಾರ

ಜಾಲತಾಣಗಳಲ್ಲಿ ಸಕ್ರಿಯವಾದ ಆಕಾಂಕ್ಷಿಗಳು, ಸಣ್ಣ ಕಾರ್ಯಕ್ರಮಕ್ಕೂ ಹಾಜರಿ
Last Updated 30 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ವಿವಿಧ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಕ್ಷೇತ್ರ ಸುತ್ತಾಟ ನಡೆಸಿದ್ದಾರೆ.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಕ್ಕೂ ಹಾಜರಾಗಿ ತಮ್ಮ ಸ್ಪರ್ಧೆಯನ್ನು ‍ಪ್ರಚುರ ಪಡಿಸುತ್ತಿದ್ದಾರೆ. ಒಂದೊಂದು ದಿನ ಆಯಾ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ ಯಾದಗಿರಿ, ಸುರಪುರದಲ್ಲಿ ಬಿಜೆಪಿ ಶಾಸಕರಿದ್ದು, ಶಹಾಪುರದಲ್ಲಿ ಕಾಂಗ್ರೆಸ್‌, ಗುರುಮಠಕಲ್‌ನಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಈ ಬಾರಿ ಹಲವು ಹೊಸ ಮುಖಗಳು ವಿವಿಧ ಪಕ್ಷಗಳಿಂದ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಬಿಎಸ್‌ಪಿ, ಎಎಪಿ, ಕೆಆರ್‌ಎಸ್ ಮುಂತಾದ ಪಕ್ಷಗಳು ಈ ಬಾರಿ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡು ಕ್ಷೇತ್ರದಲ್ಲಿ ತಿರುಗಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ: ಆಯಾ ಪಕ್ಷದ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ತಮ್ಮ ಆಗು ಹೋಗುಗಳನ್ನು ಕಾರ್ಯಕರ್ತರು, ಅಭಿಮಾನಿಗಳ ಮೂಲಕ ಹರಿಬಿಡುತ್ತಿದ್ದಾರೆ.

ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಈ ವರ್ಷದ ಆರಂಭ ದಿಂದಲೇ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳನ್ನು ರಚಿಸಿ ತಮ್ಮ ಕುರಿತು ಜಾಲತಾಣಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ.

ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌ನಲ್ಲಿ ಆಯಾ ಪಕ್ಷದ ಆಕಾಂಕ್ಷಿಗಳು ತಮ್ಮ ಭಾವಚಿತ್ರಗಳನ್ನು ಹಾಕುತ್ತಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಚಿವರು ಹಾಕುವಂತೆ ಪ್ರವಾಸದ ವಿವರವನ್ನು ಆಯಾ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಕ್ಷೇತ್ರ ಸುತ್ತಾಟದ ಮಿನಿಟ್ ಮಿನಿಟ್‌ ಕಾರ್ಯಕ್ರಮವನ್ನು ಹಾಕುತ್ತಿದ್ದಾರೆ.

ಈಚೆಗೆ ಆಲಿಕಲ್ಲು ಮಳೆಯಾದಾಗ ಬೆಳೆ ಹಾನಿಯಾದ ಪ್ರದೇಶಕ್ಕೆ ಆಯಾ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ತೆರಳಿ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ. ಆಡಳಿತದಲ್ಲಿರುವ ಶಾಸಕರು ಸರ್ಕಾರದಿಂದ ಪರಿಹಾರ ನೀಡುವ ಭರವಸೆಯನ್ನು ನೀಡಿದರೆ, ವಿರೋಧ ಪಕ್ಷದ ನಾಯಕರು ಸರ್ಕಾರಕ್ಕೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ ಜಮೀನುಗಳಿಗೆ ಭೇಟಿ ನೀಡಿದ ಭಾವಚಿತ್ರ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ಜನರಿಗೆ ತಮ್ಮ ಸ್ಪರ್ಧೆಯನ್ನು ತೋರ್ಪಡಿಸಿಕೊಂಡಿದ್ದಾರೆ.

ಈ ಬಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಸಕ್ರಿಯಯವಾಗಿರುವ ಪಕ್ಷಗಳ ಹೆಸರಿನಲ್ಲಿ ಸಂಘಟನೆ ಮಾಡಲಾಗುತ್ತಿದೆ. ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಆಮ್‌ ಆದ್ಮಿ ಪಾರ್ಟಿ (ಎಎಪಿ), ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಮುಂತಾದ ಪಕ್ಷಗಳ ಆಕಾಂಕ್ಷಿಗಳು ಕ್ಷೇತ್ರ ಸುತ್ತಾಡಿ ಫೇಸ್‌ಬುಕ್‌ಗಳಲ್ಲಿ ಲೈವ್‌ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

‘ಆಧುನಿಕ ತಂತ್ರಜ್ಞಾನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಥದಲ್ಲಿ ಸಾವಿರಾರು ಜನರಿಗೆ ವಿಷಯ ಮುಟ್ಟುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ನಮ್ಮ ಕಾರ್ಯ ಚಟುವಟಿಕೆಗಳನ್ನು ಅಭಿ ಮಾನಿಗಳು, ಕಾರ್ಯಕರ್ತರಿಗೆ ತಿಳಿಸುತ್ತೇವೆ’ ಎಂದು ಪಕ್ಷಗಳ ಮುಖಂಡರು ತಿಳಿಸುತ್ತಾರೆ.

ಯಾದಗಿರಿ ಮತಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳು
ಜಿಲ್ಲಾ ಕೇಂದ್ರವಾದ ಯಾದಗಿರಿ ಮತಕ್ಷೇತ್ರದಲ್ಲಿ ಮೂರು ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಮದುವೆ ಸಮಾರಂಭ, ಕಾರ್ಯಕರ್ತರನ್ನು ಭೇಟಿಯಾಗಲು ಗ್ರಾಮಗಳಿಗೆ ಎಡತಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ಗುರುಮಠಕಲ್‌ ಕ್ಷೇತ್ರದಲ್ಲಿ ಮಾತ್ರ ರಾಜ್ಯ ಜೆಡಿಎಸ್‌ ಯುವ ಮುಖಂಡ ಶರಣಗೌಡ ಕಂದಕೂರ ಅವರ ಹೆಸರನ್ನು ಜೆಡಿಎಸ್‌ ಟಿಕೆಟ್‌ ಘೋಷಿಸಿದೆ. ಉಳಿದ ಮೂರು ಕಡೆ ಜೆಡಿಎಸ್‌ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಆದರೂ ಟಿಕೆಟ್ ಆಕಾಂಕ್ಷಿಗಳು ಯಾದಗಿರಿ, ಸುರಪುರದಲ್ಲಿ ಕ್ಷೇತ್ರ ಸುತ್ತಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಯಾದಗಿರಿ, ಶಹಾ‍ಪುರ, ಸುರಪುರ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ಎನ್ನಲಾಗುತ್ತಿದ್ದರೂ ಬಹಿರಂಗವಾಗಿ ಆಯಾ ಪಕ್ಷಗಳು ಹೆಸರು ಘೋಷಣೆ ಮಾಡಿಲ್ಲ. ಇದರಿಂದ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಲೇ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT