ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2021: ಯಾದಗಿರಿ ಜಿಲ್ಲೆಯ ಜನರ ನನಸಾಗದ ನಿರೀಕ್ಷೆ

₹ 1,478 ವೆಚ್ಚದಲ್ಲಿ ಕಡೇಚೂರಿನಲ್ಲಿ ಬಲ್ಕ್ ಡ್ರಗ್ ಪಾರ್ಕ್ ಘೋಷಣೆ
Last Updated 9 ಮಾರ್ಚ್ 2021, 4:18 IST
ಅಕ್ಷರ ಗಾತ್ರ

ಯಾದಗಿರಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಿದ ಆಯವ್ಯಯದಲ್ಲಿ ಜಿಲ್ಲೆಗೆ ಬಲ್ಕ್ ಡ್ರಗ್(ಸಗಟು ಔಷಧಿ ತಯಾರಿಕೆ) ಪಾರ್ಕ್ ನಿರ್ಮಾಣ ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ. ಇದನ್ನು ಬಿಟ್ಟರೆ ಹೇಳಿಕೊಳ್ಳುವಂತ ಯಾವ ಯೋಜನೆಯೂ ಮಂಜೂರು ಆಗಿಲ್ಲ. ಜಿಲ್ಲೆಯ ಜನತೆ ಬೇಡಿಕೆ ಇಟ್ಟಿದ್ದ ಯಾವ ಯೋಜನೆಗಳೂ ಸಿಕ್ಕಿಲ್ಲ.

ಕೃಷಿ, ನೀರಾವರಿ, ಬ್ಯಾರೇಜ್‌ ಕಂ ಬ್ರೀಜ್‌, ಹತ್ತಿ ಸಂಸ್ಕರಣಾ ಘಟಕ, ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಆಕಾಂಕ್ಷೆಯನ್ನು ಜಿಲ್ಲೆಯ ಜನತೆ ಇಟ್ಟುಕೊಂಡಿದ್ದರು. ಆದರೆ, ಇದಾವುದಕ್ಕೂ ಅನುದಾನ ಮೀಸಲಿಟ್ಟಿಲ್ಲ.

ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರು, ತಲಾ ಒಂದು ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿದ್ದಾರೆ. ಆದರೆ, ಯಾವ ಯೋಜನೆಗಳನ್ನೂ ತರಲು ಆಗಿಲ್ಲ.

ಬಂದಾರಾ ಅವಶ್ಯವಿತ್ತು: ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ಎಲ್ಲ ಕಡೆ ನೀರಾವರಿ ಇಲ್ಲ. ಹೀಗಾಗಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡಿ ಏತನೀರಾವರಿ ಮೂಲಕ ಕೃಷಿಗೆ ಆದ್ಯತೆ ನೀಡಬೇಕಾಗಿತ್ತು. ಆದರೆ, ಸರ್ಕಾರ ಇದನ್ನು ಕಡೆಗಣಿಸಿದೆ.

ಮೂಲ ಸೌಕರ್ಯಕ್ಕಿಲ್ಲ ಒತ್ತು: ಜಿಲ್ಲೆಯಾಗಿ 10 ವರ್ಷ ಕಳೆದರೂ ಜಿಲ್ಲಾ ಕೇಂದ್ರ ಒಳಗೊಂಡು ವಿವಿಧ ತಾಲ್ಲೂಕುಗಳಲ್ಲಿ ಮೂಲಸೌಕರ್ಯಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರ ನಿವಾರಣೆಗೆ ಅನುದಾನ ಕಲ್ಪಿಸಬೇಕಿತ್ತು ಎಂದು ನಗರ ನಿವಾಸಿಗಳ ಆಗ್ರಹವಾಗಿದೆ.

ಸಣ್ಣ ಕೈಗಾರಿಕೆಗಳಿಗೆ ಸೌಕರ್ಯ ಇಲ್ಲ: ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಸೌಕರ್ಯ ಇಲ್ಲದೆ ಸೊರಗಿ ಹೋಗಿವೆ. ಆಶನಾಳ ಗ್ರಾಮದಲ್ಲಿ ಸಣ್ಣ ಕೈಗಾರಿಕೆಗಳಿಗೆ ಜಾಗ ಮೀಸಲಿಟ್ಟರೂ ಇನ್ನೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಇದರಿಂದ ಬೇಡಿಕೆ ನೆನೆಗುದಿಗೆ ಬಿದ್ದಂತಾಗಿದೆ.

ಬಲ್ಕ್ ಡ್ರಗ್ ಪಾರ್ಕ್ ಆದ್ಯತೆ: ಯಾದಗಿರಿ ತಾಲ್ಲೂಕಿನ ಕಡೇಚೂರು ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಬಲ್ಕ್ ಡ್ರಗ್ಪಾರ್ಕ್ ನಿರ್ಮಿಸಲು ಪ್ಯಾಕೇಜ್‌ ಘೋಷಣೆ ಮಾಡಲಾಗಿದೆ. ಆದರೆ, ಅನುದಾನ ಮಂಜೂರು ಮಾಡಿಲ್ಲ. ಇದರ ಜೊತೆಗೆ ಕೈಗಾರಿಕೆಗಳನ್ನು ಆಕರ್ಷಿಸುವ ಯಾವ ಯೋಜನೆಗಳಿಲ್ಲ.

ಸ್ವಯಂ ಉದ್ಯೋಗಕ್ಕೆ ಕೈಗಾರಿಕೆ ಸ್ಥಾಪಿಸುವುದು ಅವಶ್ಯವಿದೆ. ಆದರೆ, ಇದಕ್ಕೆ ಆದ್ಯತೆ ಸಿಕ್ಕಿಲ್ಲ. ಇದರಿಂದ ಗುಳೆ ನಿರಂತರ ಪ್ರಕ್ರಿಯೆ ಆಗಿದೆ.

‘2021-22ನೇ ಸಾಲಿನ ಕರ್ನಾಟಕ ಸರ್ಕಾರ ಮಂಡಿಸಿದ ಆಯವ್ಯಯ ನಿರಾಸೆ ತಂದಿದೆ. ಈ ಆಯವ್ಯಯದಲ್ಲಿ ಜಿಲ್ಲೆಗೆ ಕೃಷ್ಣಾ ಮೇಲ್ದಂಡೆ ಹಂತ- 3, ಕಡೇಚೂರಿನಲ್ಲಿ ಬಲ್ಕ್‌ ಡ್ರಗ್ ಪಾರ್ಕ್‌ ಸಂಬಂಧಿಸಿದಂತೆ ಕೇವಲ 2 ವಿಷಯಗಳನ್ನು ಮಾತ್ರ ಪರಿಗಣಿಸಿದ್ದಾರೆ. ಈ ಬಾರಿಯೂ ವಿಶ್ವವಿದ್ಯಾಲಯದ ಕನಸು ಕನಸಾಗಿಯೇ ಉಳಿಯಿತು’ ಎನ್ನುತ್ತಾರೆ ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಪ್ರಸಾದ ಹೊಸಮನಿ
ಹೇಳುತ್ತಾರೆ.

***

‘ಬೆದರಿಕೆ ಹಾಕಿದವರಿಗೆ ಅನುದಾನ’

‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾರು ಬೆದರಿಕೆ ಹಾಕುತ್ತಾರೋ ಅವರಿಗೆ ಮಾತ್ರ ಅನುದಾನ ಕೊಡುತ್ತಾರೆ. ಇಲ್ಲದಿದ್ದರೆ ಇಲ್ಲ’ ಎಂದು ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಆರೋಪಿಸಿದರು.

‘ಸಮಾಜ ಕಲ್ಯಾಣ, ಸಣ್ಣ ನೀರಾವರಿ, ಪಂಚಾಯತ್‌ ರಾಜ್‌ ಸೇರಿದಂತೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಪ್ರತ್ಯೇಕ ಯಾವ ಅನುದಾನವೂ ಘೋಷಣೆ ಮಾಡಿಲ್ಲ. ಕೆಕೆಆರ್‌ಡಿಬಿಯಿಂದ ಫಂಡ್‌ ಇದೆ. ಅಲ್ಲಿ ತೆಗೆದುಕೊಳ್ಳಿ ಎನ್ನುತ್ತಾರೆ. 2019ರಿಂದ ಇಲ್ಲಿಯವರೆಗೆ ಶಹಾಪುರ ಕ್ಷೇತ್ರಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಉದ್ಯೋಗ ಸೃಷ್ಟಿ ಮಾಡಲು ಯೋಜನೆ ರೂಪಿಸಿಲ್ಲ’ ಎಂದು ಟೀಕಿಸಿದರು.

‘ಶಾಸಕರು ಎಲ್ಲಿ ತಮ್ಮನ್ನು ಕೈ ಬಿಡುತ್ತಾರೋ ಎಂದು ಹೆದರಿ ಬಿಜೆಪಿ ಕ್ಷೇತ್ರಗಳಿಗೆ ಅನುದಾನ ಘೋಷಿಸಿದ್ದಾರೆ. ಆರ್‌ಎಸ್‌ಎಸ್‌ ಪ್ರಭಾವ ಇರುವ ಶಾಸಕರಿಗೆ ಹೆಚ್ಚಿನ ಅನುದಾನ ಘೋಷಿಸಿದ್ದಾರೆ. ವಿರೋಧ ಪಕ್ಷದ ಶಾಸಕರಿಗೆ ಬಿಡಿಗಾಸು ನೀಡಿಲ್ಲ. ಉದ್ಯೋಗಗಳಿಗೆ ವೇತನ ನೀಡಿಲ್ಲ. ಇನ್ನೂ ನಮ್ಮ ಜಿಲ್ಲೆಗೆ ಕೆಲಸಕ್ಕೆ ಬಾರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಇದರಿಂದ ಸ್ಥಳೀಯರಿಗೆ ಯಾವುದೇ ಉಪಯೋಗವಿಲ್ಲ. ಇದು ಕೂಡ ಟೆಕ್ಸ್‌ಟೈಲ್‌ ಪಾರ್ಕ್‌ನಂತೆ ಘೋಷಣೆಗೆ ಸೀಮಿತವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT