ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ: ರಾಮಲಿಂಗ ಬೆಟ್ಟಕ್ಕೆ ಬೇಕಿದೆ ಕಾಯಕಲ್ಪ

Published 18 ಫೆಬ್ರುವರಿ 2024, 4:26 IST
Last Updated 18 ಫೆಬ್ರುವರಿ 2024, 4:26 IST
ಅಕ್ಷರ ಗಾತ್ರ

ಕೆಂಭಾವಿ: ದೇಶದಲ್ಲೀಗ ಶ್ರೀರಾಮಚಂದ್ರನದ್ದೇ ಸದ್ದು, ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ರಾಮಮಂದಿರ ಲೋಕಾರ್ಪಣೆ ಕೂಡಾ ಆಗಿದೆ. ರಾಮ ಕರ್ನಾಟಕಕ್ಕೂ ಬಂದು ಹೋಗಿರುವ ಹಲವು ಕುರುಹುಗಳು ಮತ್ತು ಪೌರಾಣಿಕ ಮಾತಿದೆ. ಅದರಲ್ಲಿ ಕೆಂಭಾವಿ ಪಟ್ಟಣದ ಸೀಮಾಂತರ ಪ್ರದೇಶದಲ್ಲಿರುವ ರಾಮಲಿಂಗೇಶ್ವರ ಬೆಟ್ಟ ಸಹ ಒಂದು ಎನ್ನುವುದು ಈ ಭಾಗದ ಜನರ ನಂಬಿಕೆ.

ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಿಂದ ಶ್ರೀರಾಮಲಿಂಗೇಶ್ವರ ಬೆಟ್ಟ ಕೂಗಳತೆಯಲ್ಲಿದೆ. ನಿಸರ್ಗಪ್ರಿಯರು ಒಮ್ಮೆ ಭೇಟಿ ಕೊಡಲೆಬೇಕು. ಸ್ವಚ್ಛ ಗಾಳಿ, ಸುಂದರ ವಾತಾವರಣ, ಪ್ರಶಾಂತತೆಯ ಅನುಭವದ ಮಧ್ಯೆ ಹಕ್ಕಿಗಳ ಕಲರವ, ದುಂಬಿಗಳ ಝೇಂಕಾರ, ನೀರಿನ ಜುಳು ಜುಳು ನಾದ ಇವೆಲ್ಲವೂ ಕೈಬೀಸಿ ಕರೆಯುತ್ತವೆ.

ಇಂತಹ ನಿಸರ್ಗದ ಮಡಿಲಲ್ಲಿ ರಾಮಲಿಂಗೇಶ್ವರ ನೆಲೆನಿಂತ ಕಾರಣ ಈ ಪ್ರದೇಶಕ್ಕೆರಾಮಲಿಂಗನ ಬೆಟ್ಟ ಎಂಬ ಪ್ರತೀತಿ ಇದೆ. ಬೆಟ್ಟದ ಮೇಲಿನ ದೇವಾಲಯ ಹಾಗೂ ಇಲ್ಲಿನ ಪರಿಸರ ಹಲವು ವಿಶೇಷತೆಗಳಿಂದ ಕೂಡಿದೆ. ನಾಡಿನ ಹಲವೆಡೆ ರಾಮಲಿಂಗನ ದೇವಾಲಗಳು ಇವೆ. ಪೌರಾಣಿಕ ಹಾಗೂ ಜನಪದ ವಾಣಿಯಂತೆ ಶ್ರೀರಾಮನು ವನವಾಸ ಸಂದರ್ಭದಲ್ಲಿ ಶಿವನ ಆರಾಧನೆಗಾಗಿ ಲಿಂಗ ಸ್ಥಾಪನೆ ಮಾಡುತ್ತಾನೆ. ಅಂತಹ ಸ್ಥಳಗಳನ್ನು ರಾಮಲಿಂಗ, ರಾಮಲಿಂಗೇಶ್ವರ ಎಂದು ಕರೆಯಲಾಗುತ್ತದೆ. ಹೀಗೆ ಪೌರಾಣಿಕ ಹಿನ್ನೆಲೆ ಏನೇ ಇದ್ದರೂ ನಿಸರ್ಗ ಪ್ರಿಯರ ಸುಂದರತಾಣ ಈ ಪ್ರದೇಶ.

ಬೃಹತ್ ಬಂಡೆಗಳಿಂದ ನಿರ್ಮಾಣವಾದ ಸರಕಿನಲ್ಲಿ ರಾಮಲಿಂಗನನ್ನು ಸ್ಥಾಪಿಸಲಾಗಿದ್ದು, ಬಂಡೆಗಲ್ಲಿಗೆ ಹೊಂದಿಕೊಂಡಂತೆ ಗೋಡೆಕಟ್ಟಿ ಗರ್ಭಗುಡಿ ನಿರ್ಮಿಸಿರುವ ದೇವಾಲಯವು ಕೆಂಭಾವಿ, ಕಿರದಳ್ಳಿ, ನಗನೂರ ಹಾಗೂ ಪರಸನಹಳ್ಳಿ ಸೇರಿ ನಾಲ್ಕು ಸೀಮೆಗಳು ಸಂಧಿಸುವ ಸ್ಥಳದಲ್ಲಿಯೇ ಇರುವುದು ಮತ್ತೊಂದು ವಿಶೇಷ. ಹಲವು ಗ್ರಾಮಗಳ ಸಾಕಷ್ಟು ಭಕ್ತರ ಸಮೂಹವನ್ನು ಹೊಂದಿದ್ದು ರಾಮಲಿಂಗನಿಗೆ ಶ್ರಾವಣ ಮಾಸದಲ್ಲಿ ನಿತ್ಯ ಪ್ರಾರ್ಥನೆ, ಭಜನೆ ವಿಶೇಷ ಪೂಜೆಗಳು ಬಹುಕಾಲದಿಂದ ಬಂದ ಸಂಪ್ರದಾಯ. ಈ ಪ್ರದೇಶಕ್ಕೆ ತಲುಪಲು ಕೆಂಭಾವಿ-ಸುರಪುರ ರಾಜ್ಯ ಹೆದ್ದಾರಿಯಿಂದ 3 ಕಿ.ಮಿವರೆಗೆ ಸರಿಯಾದ ರಸ್ತೆ ಸಂಪರ್ಕವಿಲ್ಲದಿರುವುದರಿಂದ ಬೈಕ್ ಇಲ್ಲವೆ ಕಾಲ್ನಡಿಗೆ ಅನಿವಾರ್ಯವಾಗಿದೆ.

ರಾಮಲಿಂಗ ಬೆಟ್ಟಕ್ಕೆ ಬೇಕಿದೆ ಕಾಯಕಲ್ಪ: ಐತಿಹಾಸಿಕ ರಾಮಲಿಂಗ ಬೆಟ್ಟ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅಭಿವೃದ್ಧಿ ಶೂನ್ಯವಾಗಿದೆ ಎನ್ನುತ್ತಾರೆ ಸಾರ್ವಜನಿಕರು. ಈ ನಿಟ್ಟಿನಲ್ಲಿ ಇದಕ್ಕೆ ಕಾಯಕಲ್ಪ ಕಲ್ಪಿಸುವುದು ಅಗತ್ಯವಾಗಿದ್ದು, ದೇವಸ್ಥಾನದ ಸಮಗ್ರ ಅಭಿವೃದ್ಧಿಯೊಂದಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಲಿ ಎನ್ನುವುದು ರಾಮಲಿಂಗೇಶ್ವರ ಭಕ್ತರ ಮನವಿಯಾಗಿದೆ.

ಸಿಡಿಲ ಬಾವಿ: ರಾಮಲಿಂಗನ ಬೆಟ್ಟದ ಇಳಿಜಾರಿನಲ್ಲಿ ಸಿಡಿಲಿನಿಂದ ನಿರ್ಮಾಣವಾಗಿದೆ ಎನ್ನಲಾದ ಸಿಡಿಲು ಬಾವಿ ಕೂಡ ಇಲ್ಲಿನ ವಿಶೇಷತೆಗಳಲ್ಲಿ ಒಂದು. ಈ ಬಾವಿಯಲ್ಲಿನ ನೀರು ಯಾವತ್ತೂ ಬತ್ತಿದ ಉದಾಹರಣೆ ಇಲ್ಲ. ಮಳೆಗಾಲದಲ್ಲಿ ತುಂಬಿ ಹರಿದರೆ, ಉಳಿದ ದಿನಗಳಲ್ಲಿ ಕೇವಲ ಕೈಗೆ ಎಟುಕುವ ಅಂತರದಲ್ಲಿ ಸದಾ ನೀರು ತುಂಬಿರುವ ಈ ಚಿಕ್ಕ ಬಾವಿಯೇ ಇಲ್ಲಿನ ಭಕ್ತರ ಧಾರ್ಮಿಕ ವಿಧಿ ವಿಧಾನಗಳಿಗೆ ಪ್ರಮುಖ ನೀರಿನ ಮೂಲವಾಗಿದೆ.

ರಾಮಲಿಂಗನ ಬೆಟ್ಟಕ್ಕೆ ಹೋಗಲು ರಸ್ತೆ ಸೇರಿದಂತೆ ಅಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು.
ವೀರಣ್ಣ ಕಲಕೇರಿ, ಸಾಹಿತಿ
ರಾಮಲಿಂಗೇಶ್ವರ ದೇವಸ್ಥಾನ
ರಾಮಲಿಂಗೇಶ್ವರ ದೇವಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT