ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ, ಭೀಮಾ ಪ್ರವಾಹ: ಈಡೇರದ ಭರವಸೆ

ಮಾತಿನಲ್ಲಿ ಉಳಿದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಗ್ರಾಮ ಸ್ಥಳಾಂತರ, ನದಿ ದಂಡೆಯ ಜನತೆ ತಪ್ಪದ ಸಂಕಷ್ಟ
Last Updated 21 ಜೂನ್ 2021, 1:51 IST
ಅಕ್ಷರ ಗಾತ್ರ

ಯಾದಗಿರಿ: ಪ್ರತಿ ವರ್ಷ ಮಳೆಗಾಲದಲ್ಲಿ ಕೃಷ್ಣಾ, ಭೀಮಾ ನದಿ ದಂಡೆಯಲ್ಲಿರುವ ಗ್ರಾಮಸ್ಥರು ಪ್ರವಾಹ ಪರಿಸ್ಥಿತಿ ಎದುರಿಸುತ್ತಾರೆ. ಜನಪ್ರನಿಧಿಗಳು, ಅಧಿಕಾರಿಗಳು ಭೇಟಿ ನೀಡಿ, ಸ್ಥಳಾಂತರದ ಭರವಸೆ ಕೊಡುತ್ತಾರೆ. ಆದರೆ, ಅದು ಕಾರ್ಯರೂಪಕ್ಕೆ ಬರುವುದಿಲ್ಲ.

ಲಕ್ಷಾಂತರ ಜನರಿಗೆ ಕೃಷ್ಣಾ, ಭೀಮಾ ನದಿ ನೀರಿನಿಂದ ಕೃಷಿಗೆ ಅನುಕೂಲವಾಗಿದೆ. ಅದೇ ನದಿಗಳು ಜನರಿಗೆ ಕಂಟಕವಾಗಿವೆ. ಕಳೆದ ಕೆಲ ವರ್ಷಗಳಿಂದ ಬೆಂಬಿಡದೇ ಪ್ರವಾಹ ಪರಿಸ್ಥಿತಿ ಕಾಡುತ್ತಿದ್ದು, ಜನರು ಭಯಗ್ರಸ್ಥರನ್ನಾಗಿಸಿದೆ.

ಈ ವರ್ಷವೂ ಮುಂಗಾರು ಮತ್ತು ನದಿ ಜಲನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಸವಸಾಗರ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಜುಲೈ ಎರಡನೇ ವಾರಕ್ಕಿಂತ ಮುಂಚಿತವಾಗಿಯೇ ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆ ಇದೆ.

2009ರಿಂದ ಪ್ರವಾಹ ಪರಿಸ್ಥಿತಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ 2009ರಲ್ಲಿ ಭೀಕರ ಪ್ರವಾಹ ಉಂಟಾಗಿ ಅಪಾರ ಹಾನಿಯಾಗಿತ್ತು. ಕೃಷ್ಣಾ, ಭೀಮಾ ಉಕ್ಕಿ ಹರಿದಿದ್ದವು. ನದಿಯಂಚಿನ ಗ್ರಾಮಸ್ಥರು ರಾತ್ರೋರಾತ್ರಿ ಗ್ರಾಮ ತೊರೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಿದ್ದರು. ಆದರೆ, ಇದಾದ ನಂತರ ಕೆಲ ವರ್ಷ ಬರಗಾಲ ಬಂದಿತ್ತು. 2019ರಿಂದ ಸತತ ಎರಡು ವರ್ಷಗಳಿಂದ ಪ್ರವಾಹದಿಂದ ನದಿಗಳು ತಲ್ಲಣ ಸೃಷ್ಟಿಸಿವೆ.

2020ರಲ್ಲಿ ಕೃಷ್ಣಾ ನದಿಗಿಂತ ಭೀಮಾ ನದಿ ಅಬ್ಬರ ಜಾಸ್ತಿಯಾಗಿತ್ತು. ಶೇಕಡ 90ರಷ್ಟು ನದಿಯಂಚಿನ ಗ್ರಾಮಗಳ ಜಮೀನುಗಳು ಮುಳುಗಡೆಯಾಗಿದ್ದವು. ಭತ್ತ, ಹತ್ತಿ ಸಂಪೂರ್ಣ ನಾಶವಾಗಿದ್ದವು.

ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಗ್ರಾಮಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬ್ರೀಜ್‌ ಕಂ ಬ್ಯಾರೇಜ್‌ ನಿರ್ಮಿಸುವ ಬಗ್ಗೆ ಗ್ರಾಮಸ್ಥರು ನೀಡಿದ್ದ ಮನವಿಗೆ ಸ್ಪಂದಿಸಿದ್ದರು. ಆದರೆ, ಇಂದಿಗೂ ಅದೇ ಅದು ಭರವಸೆಯಾಗಿ ಉಳಿದುಕೊಂಡಿದೆ.

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.50 ಲಕ್ಷ ಕ್ಯುಸೆಕ್‌ ನೀರು ಬಂದರೆ ಸೇತುವೆ ಮುಳುಗಡೆಯಾಗುತ್ತದೆ. ಇದು ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುತ್ತಿದೆ. ಇದರಿಂದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಸುತ್ತಿದೆ.

ಪ್ರವಾಹದ ನೀರು ಸದ್ಭಳಕೆ ಆಗುತ್ತಿಲ್ಲ: ಲಕ್ಷಾಂತರ ಕ್ಯುಸೆಕ್‌ ನೀರು ನದಿಯಿಂದ ಸಮುದ್ರದ ಪಾಲಾಗುತ್ತದೆ. ಆದರೆ, ಇದೇ ನೀರನ್ನು ಉಪಯೋಗಿಸಿಕೊಂಡು ಕೆರೆ ನಿರ್ಮಿಸುವ ಕೆಲಸ ಅಧಿಕಾರಿಗಳಿಂದ ಆಗುತ್ತಿಲ್ಲ. ನದಿಗೆ ನೀರು ಹರಿಸುವುದರಿಂದ ಕೆಳ ಭಾಗಕ್ಕೆ ಹೋಗುತ್ತದೆ. ನದಿ ನೀರನ್ನು ಹಿಡಿದುಕೊಂಡು ಕೃಷಿಗೆ ಬಳಸಿಕೊಳ್ಳುವ ಸಾಧ್ಯತೆಗಳಿದ್ದರೂ ಇದು ಕಾರ್ಯರೂಪಕ್ಕೆ ಬರುತ್ತಿಲ್ಲ.

ಭೀಮಾ ನದಿ ಪ್ರವಾಹದಿಂದಮನೆಗಳಿಗೆ ನೀರು ನುಗ್ಗಿದ 293 ಕುಟುಂಬಗಳಿಗೆ ತಲಾ ₹10 ಸಾವಿರ ಪರಿಹಾರ ನೀಡಲಾಗಿದೆ. 2019–20ರಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾದ ಬೆಳೆ ಹಾನಿಗೆ 4,900 ರೈತರಿಗೆ ₹1416.54 ಲಕ್ಷ ಪರಿಹಾ ನೀಡಲಾಗಿದೆ. 2020–21ನೇ ಸಾಲಿನಲ್ಲಿ 53,411 ರೈತರಿಗೆ ₹33.24ಕೋಟಿ ಪರಿಹಾರ ನೀಡಲಾಗಿದೆ.

‘ಕಳೆದ ವರ್ಷ ಉಂಟಾದ ಪ್ರವಾಹದಿಂದ ಹಾನಿಯಾದ ಪ್ರದೇಶಗಳಿಗೆ ಸೂಕ್ತ ಪರಿಹಾರ ನೀಡಬೇಕು. ಪ್ರವಾಹದ ಮುನ್ನವೇ ಜಿಲ್ಲಾಡಳಿತ ನದಿ ಪಕ್ಕದ ಗ್ರಾಮಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಡಂಗೂರ ಸಾರಿಸಿ ಜನರಿಗೆ ತಿಳಿವಳಿಕೆ ನೀಡಬೇಕು. ಏಕಾಏಕಿ ನೀರು ಬಿಡುವುದನ್ನು ಜನರಿಗೆ ತಿಳಿಸಬೇಕು’ ಎಂದು ಗ್ರಾಮಸ್ಥರು ಹೇಳುತ್ತಾರೆ.

***

ಪ್ರವಾಹ ಪೀಡಿತ ಸಂಭನೀಯ ಗ್ರಾಮಗಳು

ಯಾದಗಿರಿ: ಜಿಲ್ಲೆಯಲ್ಲಿ ಕೃಷ್ಣಾ ನದಿ ತೀರದಲ್ಲಿ 38 ಗ್ರಾಮಗಳು, ಭೀಮಾ ನದಿ ತೀರದಲ್ಲಿ 32 ಒಟ್ಟಾರೆ 70 ಗ್ರಾಮಗಳು ಎರಡು ನದಿಗಳ ತೀರದಲ್ಲಿವೆ.

ಕೃಷ್ಣಾ ನದಿಯ ವ್ಯಾಪ್ತಿಯ ಸುರಪುರ ತಾಲ್ಲೂಕಿನ 10, ಹುಣಸಗಿ ತಾಲ್ಲೂಕಿನ 1, ಶಹಾಪುರ ತಾಲ್ಲೂಕಿನ 1, ವಡಗೇರಾ ತಾಲ್ಲೂಕಿನ 5 ಸೇರಿದಂತೆ 17 ಗ್ರಾಮಗಳನ್ನು ಗುರುತಿಸಲಾಗಿದೆ.

ಭೀಮಾ ನದಿ ವ್ಯಾಪ್ತಿಯ ಶಹಾಪುರ ತಾಲ್ಲೂಕಿನ 4, ವಡಗೇರಾ ತಾಲ್ಲೂಕಿನ 7, ಯಾದಗಿರಿ ತಾಲ್ಲೂಕಿನ 5 ಸೇರಿದಂತೆ 16 ಗ್ರಾಮಗಳು ಪ್ರವಾಹ ಪೀಡಿತ ಸಂಭನೀಯ ಗ್ರಾಮಗಳಾಗಿವೆ.

ಹುಣಸಗಿ ತಾಲ್ಲೂಕಿನ ಜುಮಾಲಪುರ, ಸುರಪುರ ತಾಲ್ಲೂಕಿನ ಲಿಂಗದಳ್ಳಿ, ಹಳೆ ಬಂಡೋಳ್ಳಿ, ದೇವಾಪುರ, ನಾಗರಾಳ, ಆಲ್ದಾಳ, ಹಾವಿನಾಳ, ಶೆಳ್ಳಗಿ, ಮುಷ್ಠಳ್ಳಿ, ಸೂಗೂರು, ತಿಂಥಣಿ, ವಡಗೇರಾ ತಾಲ್ಲೂಕಿನ ಯಕ್ಷಂತಿ, ಐಕೂರು, ಅನಕಸೂಗೂರು, ಚನ್ನೂರು, ಗೊಂದೆನೂರು, ಶಿವನೂರು, ಕುಮನೂರು, ಗೋಡಿಹಾಳ, ಅರ್ಜುಣಗಿ, ಮಾಚನೂರ, ಬೆನಕನಹಳ್ಳಿ, ಬೂದನಾಳ, ಶಹಾಪುರ ತಾಲ್ಲೂಕಿನ ಗೌಡೂರು, ಹಳೆ ಹುರಸಗುಂಡಗಿ, ರೋಜಾ ಎಸ್‌ ಶಿರವಾಳ, ಹಬ್ಬಳ್ಳಿ, ಯಾದಗಿರಿ ತಾಲ್ಲೂಕಿನ ಹೆಡಗಿಮದ್ರಾ, ಲಿಂಗೇರಿ, ಆನೂರ (ಕೆ), ಆನೂರ (ಬಿ), ಗೂಡೂರು ಗ್ರಾಮಗಳು ಕೃಷ್ಣಾ, ಭೀಮಾ ನದಿ ತೀರದಲ್ಲಿವೆ.
___

2020ರಲ್ಲಿ ಪ್ರವಾಹ/ಅತಿವೃಷ್ಟಿಯಿಂದ ಮನೆಗಳ ಹಾನಿ ವಿವರ

ಗ್ರಾಮೀಣದಲ್ಲಿ ಭಾಗಶಃ ಹಾನಿ; 41

ಗ್ರಾಮೀಣದಲ್ಲಿ ಅಲ್ಪಸ್ವಲ್ಪ ಹಾನಿ; 2,829

ನಗರದಲ್ಲಿ ಅಲ್ಪಸ್ವಲ್ಪ ಹಾನಿ;111

ಒಟ್ಟು;2,981
____

ಜಿಲ್ಲಾಡಳಿತದಿಂದ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚನೆ

ಯಾದಗಿರಿ ಜಿಲ್ಲೆಯಲ್ಲಿ ಪ್ರತಿ ವರ್ಷ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಪ್ರವಾಹ ಪರಿಸ್ಥಿತಿ ಏರ್ಪಡುತ್ತಿದ್ದು, ಇದನ್ನು ನಿವಾರಿಸಲು ಕೆಲ ಜಿಲ್ಲೆಗಳ ಅಧಿಕಾರಿಗಳು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದಾರೆ.

ಯಾದಗಿರಿ, ಬಾಗಲಕೋಟೆ, ಕಲಬುರ್ಗಿ, ರಾಯಚೂರು, ಬಾಗಲಕೋಟೆ ಕಂದಾಯ ಅಧಿಕಾರಿಗಳು ಈ ಗ್ರೂಪ್‌ನಲ್ಲಿದ್ದು, ಪ್ರವಾಹದ ಮುನ್ಸೂಚನೆ, ನೀರು ಹರಿಸುವಿಕೆ ಮತ್ತಿತರ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ನಿರಂತರವಾಗಿ ಜಲಾಶಯದ ಸ್ಥಿತಿಗತಿ, ಪ್ರವಾಹದ ನಿಯಂತ್ರಣದ ಕೊಠಡಿ ಸ್ಥಾಪನೆ ಮಾಡಲಾಗಿದೆ.

80 ಲೈಫ್‌ ಜಾಕೆಟ್‌, ಅಗ್ನಿಶಾಮಕ ದಳದಿಂದ ಅಣಕು ಕಾರ್ಯಾಚರಣೆ ನಡೆಸಲಾಗಿದೆ. ಹಾವು ಕಡಿತಕ್ಕೆ ಸೂಕ್ತ ಔಷಧಿ ಸಂಗ್ರಹ, ಆಹಾರ ಪದಾರ್ಥಗಳ ಸಂಗ್ರಹ ಮಾಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

36 ಕಾಳಜಿ ಕೇಂದ್ರ ಸ್ಥಾಪನೆಗೆ ಸಿದ್ಧತೆ: ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿ 6, ಸುರಪುರ ತಾಲ್ಲೂಕಿನಲ್ಲಿ 9, ವಡಗೇರಾ ತಾಲ್ಲೂಕಿನಲ್ಲಿ 10, ಶಹಾಪುರ ತಾಲ್ಲೂಕಿನಲ್ಲಿ 7, ಯಾದಗಿರಿ ತಾಲ್ಲೂಕಿನಲ್ಲಿ 4 ಸ್ಥಳಗಳು ಸೇರಿ ಒಟ್ಟು 36 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

‘ಜಿಲ್ಲೆಯ ನದಿಯಂಚಿನ ಗ್ರಾಮಗಳನ್ನು ಸ್ಥಳಾಂತರಿಸಲು ಮಾಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ, ಅಲ್ಲಿಂದ ಯಾವುದೇ ಸೂಚನೆ ಬಂದಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರವಾಹಕ್ಕೆ ತುತ್ತಾಗುವ ಕೊಳ್ಳೂರ(ಎಂ) ಸೇತುವೆ

ಶಹಾಪುರ: ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಪ್ರತಿ ವರ್ಷ ತುಸು ಹೆಚ್ಚಿನ ನೀರು ನಾರಾಯಣಪುರ ಜಲಾಶಯದಿಂದ ಬಿಡುಗಡೆ ಮಾಡಿದರೆ ಮುಳುಗುವುದು ಸಾಮಾನ್ಯವಾಗಿದೆ. ಅಲ್ಲದೆ ಪ್ರವಾಹಕ್ಕೂ ತುತ್ತಾಗುವುದು ಹೊಸದೇನು ಅಲ್ಲ. ಶಹಾಪುರ-ದೇವದುರ್ಗ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಕೊಂಡಿಯು ಇದಾಗಿದೆ.

ಸೇತುವೆಯು ಪದೇ ಪದೇ ಪ್ರವಾಹಕ್ಕೆ ತುತ್ತಾಗಿ ಮುಳುವುದನ್ನು ತಪ್ಪಿಸುವ ಸಲುವಾಗಿ ಕಳೆದ ವರ್ಷ ಹೆಚ್ಚಿನ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಭೇಟಿ ನೀಡಿ ಸೇತುವೆ ಎತ್ತರಿಸುವ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಅವರಿಗೆ ಸೂಚಿಸಿದ್ದರು. ಅಲ್ಲದೆ ಯಾದಗಿರಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಪ್ರವಾಹ ಸಂದರ್ಭದಲ್ಲಿ ಗ್ರಾಮಕ್ಕೆ ಭೇಟಿ ನೀಡಿದಾಗ ಸೇತುವೆ ಎತ್ತರಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸುವೆ ಎಂದು ಗ್ರಾಮಸ್ಥರ ಮುಂದೆ ವಾಗ್ದಾನ ಮಾಡಿದ್ದರು. ಅದು ಭರವಸೆಯಾಗಿಯೇ ಉಳಿದಿದೆ ಎನ್ನುತ್ತಾರೆ ಕೊಳ್ಳೂರ (ಎಂ) ಗ್ರಾಮದ ನಿವಾಸಿ ಹೊನ್ನಯ್ಯ ಗಟ್ಟಿ.

ಗೌಡೂರ: ತಾಲ್ಲೂಕಿನ ಗೌಡೂರ ಗ್ರಾಮದ 207 ಮನೆಗಳನ್ನು ಸ್ಥಳಾಂತರಿಸಲಾಗುವುದು ಎಂದು 2019ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು. ಆದರೆ, ಇಂದಿಗೂ ಸ್ಥಳಾಂತರದ ಚಕಾರವಿಲ್ಲ. ಎರಡು ವರ್ಷದಿಂದ ನಾವು ಪ್ರವಾಹದ ಹೊಡೆತಕ್ಕೆ ನಲುಗಿ ಹೋಗಿದ್ದೇವೆ ಎಂದು ಗೌಡೂರ ಗ್ರಾಮದ ನಿವಾಸಿ ದೇವಿಂದ್ರ ಛಲವಾದಿ ಆರೋಪಿಸಿದರು.

ಹುರಸಗುಂಡಗಿ: ಕಳೆದ ವರ್ಷ ಪ್ರವಾಹದಿಂದ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಬಳಿ ನಿರ್ಮಿಸಿರುವ ಸನ್ನತಿ ಬ್ರೀಜ್ ಕಂ ಬ್ಯಾರೇಜ್ ಹಿನ್ನೀರಿನ ಸಂಗ್ರಹ ನೀರು ಪ್ರವಾಹದ ನೀರಿನ ಸೆಳೆತಕ್ಕೆ ಹುರಸಗುಂಡಗಿ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದರು. ಸ್ಥಳಾಂತರಗೊಂಡಿರುವ ಹೊಸನಗರದಲ್ಲಿ ಅಗತ್ಯ ಸೌಲಭ್ಯ ನೀಡುವ ಭರವಸೆ ಇನ್ನೂ ಈಡೇರಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ರೋಜಾ: ತಾಲ್ಲೂಕಿನ ರೋಜಾ ಗ್ರಾಮವನ್ನು ಭೀಮಾ ನದಿಯ ನೀರು ಸುತ್ತುವರೆದಾಗ ದೋಣಿಯ ಮೂಲಕ ಗ್ರಾಮಸ್ಥರನ್ನು ಸ್ಥಳಾಂತರಿಸಿ ನಿರಾಶ್ರಿತ ಕೇಂದ್ರದಲ್ಲಿ ನೆಲೆಸಿದ್ದರು. ಗ್ರಾಮಕ್ಕೆ ಅಗತ್ಯ ಸೌಲಭ್ಯ ಹಾಗೂ ಪ್ರವಾಹದ ಪರಿಹಾರದ ಸಮರ್ಪಕವಾಗಿ ತಲುಪಲೇ ಇಲ್ಲ. ಸಾಂತ್ವನ, ಭರವಸೆ ಹೊರತಾಗಿ ಮತ್ತೇನೂ ಸಿಗಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಪ್ರವಾಹ ಹಾನಿಗೆ ಶಾಶ್ವತ ಪರಿಹಾರಕ್ಕೆ ಯಾವ ಸರ್ಕಾರಗಳು ಮುಂದಾಗುತ್ತಿಲ್ಲ. ಇಲ್ಲಿನ ನದಿ ದಂಡೆಯ ಜನತೆಯೂ ಪ್ರವಾಹ ನಮಗೆ ಶಾಪವೆಂದು ಅದಕ್ಕೆ ಹೊಂದಿಕೊಂಡು ಜೀವನ ಸಾಗುತ್ತಿದ್ದಾರೆ ಇದು ಸರಿಯಲ್ಲ ಎಂದು ಶಹಾಪುರದ ರೈತ ಮುಖಂಡ ಆರ್.ಚೆನ್ನಬಸ್ಸು ವನದುರ್ಗ ತಿಳಿಸಿದರು.

****

ಕೇವಲ 54 ಲಕ್ಷ ಪರಿಹಾರ

ಶಹಾಪುರ: 2019-20ರಲ್ಲಿ ಶಹಾಪುರ ತಾಲ್ಲೂಕಿನಲ್ಲಿ ಪ್ರವಾಹದಿಂದ ಹೆಚ್ಚಿನ ನಷ್ಟ ಉಂಟಾಗಿತ್ತು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಪ್ರವಾಹದಿಂದ ಆದ ನಷ್ಟ ₹6 ಕೋಟಿ ಅಂದಾಜಿಸಿ ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಸಿದ್ದರು. ಅದರಲ್ಲಿ ₹4 ಕೋಟಿ ಸರ್ಕಾರ ಮಂಜೂರಾತಿ ನೀಡಿತ್ತು. ಆದರೆ, ಅನುದಾನ ಬಂದಿದ್ದು ಮಾತ್ರ ₹54ಲಕ್ಷ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಆರೋಪಿಸಿದ್ದಾರೆ.

***

‘ಸಮರ್ಪಕ ಪರಿಹಾರ ದೊರಕಿಲ್ಲ’

ಸುರಪುರ: ನಾರಾಯಣಪುರ ಜಲಾಶಯದಿಂದ ಹೆಚ್ಚಿನ ನೀರನ್ನು ನದಿಗೆ ಹರಿ ಬಿಟ್ಟಾಗ ಪ್ರವಾಹ ಉಂಟಾಗಿ ತಾಲ್ಲೂಕಿನ ಬಂಡೋಳಿ, ಹಾವಿನಾಳ, ಹೆಮ್ಮಡಗಿ, ಸೂಗೂರ, ಮುಷ್ಟಹಳ್ಳಿ, ಶೆಳ್ಳಗಿ, ತಿಂಥಣಿ ಇತರ ಗ್ರಾಮಗಳ ಜನರು ಸಂಕಷ್ಟ ಎದುರಿಸುತ್ತಾರೆ. ನದಿ ಪಾತ್ರದ ಗುಡಿಸಲು, ಮನೆ, ಹೊಲಗಳು ಜಲಾವೃತವಾಗುತ್ತವೆ.

ಕಳೆದ ವರ್ಷ ನದಿಗೆ 4 ಲಕ್ಷ ಕ್ಯುಸೆಕ್‍ಗಿಂತ ಅಧಿಕ ನೀರು ಹರಿಸಿದ್ದರಿಂದ ಜನರು ಪರದಾಡಿದ್ದರು. ನಗರದ ಎಪಿಎಂಸಿಯಲ್ಲಿ ಕಾಳಜಿ ಕೇಂದ್ರ ತೆರೆದು ಜನರಿಗೆ ಆಶ್ರಯ ನೀಡಲಾಗಿತ್ತು. ನದಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲಾಗಿತ್ತು. ಕೆಲವು ದನಕರುಗಳು, ಕುರಿಗಳು ನೀರು ಪಾಲಾಗಿದ್ದವು. ಆದರೆ, ಸರ್ಕಾರ ಬೆಳೆ ಹಾನಿ ಪರಿಹಾರ ನೀಡಿದ್ದನ್ನು ಬಿಟ್ಟರೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ.

ಗ್ರಾಮಗಳು ಸ್ಥಳಾಂತರವಾಗುವಷ್ಟು ಸಮಸ್ಯೆಯೇನು ಆಗುವುದಿಲ್ಲ. 2010 ರಲ್ಲಿ ಬಂಡೋಳಿ ಮತ್ತು ತಿಂಥಣಿಯ ಭಾಗಶಃ ಗ್ರಾಮಗಳನ್ನು ಸ್ಥಳಾಂತರಿಸಲಾಗಿತ್ತು. ಬಂಡೋಳಿಯ ಹತ್ತಿರ ರಾಜ್ಯ ಹೆದ್ದಾರಿ ಪಕ್ಕ ನವಗ್ರಾಮ ನಿರ್ಮಿಸಲಾಗಿತ್ತು. ಆದರೆ, ಸಂತ್ರಸ್ಥರು ನವಗ್ರಾಮ ಮತ್ತು ತಮ್ಮ ಹಳೆಯ ಗ್ರಾಮ ಎರಡೂ ಕಡೆ ವಾಸಿಸುತ್ತಿದ್ದಾರೆ.
___

ಹೇಳಿಕೆಯಾಗಿ ಉಳಿದ ಗ್ರಾಮಗಳ ಸ್ಥಳಾಂತರ

ವಡಗೇರಾ: ಮಳೆಗಾಲ ಆರಂಭವಾದರೆ ಸಾಕು ನದಿ ತೀರದ ಗ್ರಾಮದ ಜನರಿಗೆ ಪ್ರತಿವರ್ಷ ಪ್ರವಾಹದ ಆತಂಕ ಕಾಡುತ್ತದೆ. ಅತಿ ನದಿ ತೀರದಲ್ಲಿ ಇರುವ ಗ್ರಾಮಗಳನ್ನು ಸ್ಥಳಾಂತರಿಸಲಾಗುತ್ತದೆ ಎಂದು ಪ್ರತಿ ವರ್ಷ ಹೇಳುತ್ತಾರೆ. ಆದರೆ, ಕೇವಲ ಹೇಳಿಕೆಯಾಗಿ ಉಳಿದೆ ಎಂದು ಗ್ರಾಮಸ್ಥರು ನೋವಿನಿಂದ ಹೇಳುತ್ತಾರೆ.

ಭೀಮಾ ನದಿಯ ಪ್ರವಾಹದಿಂದ ಅತಿ ಹೆಚ್ಚು ಆತಂಕ ಇರುವ ಶಿವನೂರು ಗ್ರಾಮಕ್ಕೆ ಕಳೆದ ವರ್ಷ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಭೇಟಿ ನೀಡಿ, ಗ್ರಾಮದ ಸ್ಥಳಾಂತರ ಕುರಿತು ಭರವಸೆ ನೀಡಿದ್ದರು. ಇದೇ ಗ್ರಾಮದ ಪಕ್ಕದಲ್ಲಿ ಭೂಮಿ ಖರೀದಿಸಿ ನಿಮಗೆ ಈ ನದಿಯ ಪ್ರವಾಹದಿಂದ ಮುಕ್ತಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ಅದು ಇಲ್ಲಿಯವರೆಗೂ ಇನ್ನೂ ನೆರವೇರಿಲ್ಲ ಎಂದು ಗ್ರಾಮದ ಮುಖಂಡ ವೆಂಕಟರಡ್ಡಿ ಹೇಳಿದರು.

‘ಯಕ್ಷಂತಿ ಗ್ರಾಮದ ಸ್ಥಳಾಂತರ ಕುರಿತು ಅಧಿಕಾರಿಗಳು ಹಲವು ಬಾರಿ ಸಭೆ ಮಾಡಿದರು. ಆದರೆ, ಅದು ಕೇವಲ ಕಾಟಾಚಾರದ ಸಭೆಯಾಗಿದೆ. ಗ್ರಾಮ ಸ್ಥಳಾಂತರ ಮಾಡಲು ಸಚಿವ ಶ್ರೀರಾಮುಲು ಒಂದು ವಾರದಲ್ಲಿ ಭೂಮಿ ಪಡೆದಿದ್ದರು. ಗ್ರಾಮವನ್ನು ಸ್ಥಳಾಂತರಿಸಲು ಗ್ರಾಮಕ್ಕೆ ಭೇಟಿ ನೀಡಿದಾಗ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಆದರೆ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗ್ರಾಮಸ್ಥ ನಿಂಗಣ್ಣ ಕರ್ಡಿ ಹೇಳಿದರು.

‘ಗೊಂದೇನೂರು, ಶಿವನೂರು ಮತ್ತು ಯಕ್ಷಂತಿ ಗ್ರಾಮಗಳ ಸ್ಥಳಾಂತರದ ಕುರಿತು ಸರ್ಕಾರದ ಪ್ರಸ್ತಾವ ಕಳಿಸಲಾಗಿದೆ’ ಎಂದು ತಹಶೀಲ್ದಾರ ಸುರೇಶ ಅಂಕಲಗಿ ಮಾಹಿತಿ ನೀಡಿದರು.

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ನಾಗೇಂದ್ರ, ದೇವೀಂದ್ರಪ್ಪ ಬಿ ಕ್ಯಾತನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT