ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ, ಸ್ವಚ್ಛತೆ ಇಲ್ಲದ ವಸತಿ ನಿಲಯಗಳು

ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಪರದಾಟ
Last Updated 15 ಫೆಬ್ರುವರಿ 2021, 6:19 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ವಸತಿ ನಿಲಯಗಳು ಆರಂಭವಾಗಿದ್ದರೂ ಮೂಲ ಸೌಕರ್ಯ ವಂಚಿತವಾಗಿವೆ. ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳು ಮುಂದಾಗಿಲ್ಲ. ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗ ವಸತಿ ನಿಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಆದರೆ, ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ.

ಒಂದೊಂದು ಕಡೆ ಒಂದೊಂದು ಸಮಸ್ಯೆ ಕಂಡು ಬರುತ್ತಿದೆ. ನೀರಿನ ಸೌಲಭ್ಯ, ಬೆಡ್‌, ಕೋಣೆಗಳ ಕೊರತೆ, ಶೌಚಾಲಯ, ಕೋಣೆ, ವಿದ್ಯುತ್‌ ಹೀಗೆ ಸಮಸ್ಯೆಗಳ ಪಟ್ಟಿ ದೊಡ್ಡದಿದೆ. ಮೆಟ್ರಿಕ್‌ ಪೂರ್ವ ವಸತಿ ನಿಲಯಗಳಲ್ಲಿ 9, 10ನೇ ತರಗತಿ, ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಲ್ಲಿ ಪದವಿ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಪಿಯು ವಿದ್ಯಾರ್ಥಿಗಳು ಎಲ್ಲ ಕಡೆ ಪ್ರವೇಶ ಪಡೆದಿಲ್ಲ. ಆದರೆ, ಇದ್ದ ವಿದ್ಯಾರ್ಥಿಗಳಿಗೆ ಸೌಲಭ್ಯಗಳು ಇಲ್ಲದಂತಾಗಿವೆ.

ಶೌಚಕ್ಕೆ ಗುಡ್ಡವೇ ಆಶ್ರಯ: ನಗರದ ಅಂಬೇಡ್ಕರ್ ನಗರದಲ್ಲಿರುವ ಸರ್ಕಾರಿ ಸಾರ್ವಜನಿಕ ಬಾಲಕರ ವಸತಿ ನಿಲಯ, ಎಪಿಎಂಸಿ ಹಿಂಭಾಗದಲ್ಲಿರುವ ಬಾಲಕರ ವಸತಿ ನಿಲಯ, ಗಂಜ್ ಪ್ರದೇಶದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಬಾಲಕರ ವಸತಿ ನಿಲಯಗಳಲ್ಲಿ ಶೌಚಕ್ಕಾಗಿ ಬೆಟ್ಟ, ಗುಡ್ಡ ಆಶ್ರಯಿಸಿರುವುದು ಸಾಮಾನ್ಯವಾಗಿದೆ. ವಿದ್ಯಾರ್ಥಿಗಳು ಬೆಳಿಗ್ಗೆ, ಸಂಜೆ ಹೊತ್ತು ನೀರಿನ ಬಾಟಲಿ, ತಂಬಿಗೆ ಇಡಿದುಕೊಂಡು ಗುಡ್ಡಗಾಡು ಪ್ರದೇಶಕ್ಕೆ ತೆರಳುವ ದೃಶ್ಯ ಕಂಡು ಬರುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿದರೆ, ‘ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ, ನಿರ್ವಹಣೆ ಇಲ್ಲ. ಇದರಿಂದ ಹೊರಗಡೆ ಹೋಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ’ ಎನ್ನುವ ಉತ್ತರ ಬರುತ್ತಿದೆ.

ಶೌಚಾಲಯ, ಸ್ನಾನ ಗೃಹದ ಕೋಣೆಗಳಿಗೆ ಬಾಗಿಲುಗಳು ಇಲ್ಲ, ಸ್ವಚ್ಛತೆಯಂತೂ ಮೊದಲೇ ಇಲ್ಲ. ಅಂಬೇಡ್ಕರ್ ನಗರದಲ್ಲಿರುವ ಸರ್ಕಾರಿ ಸಾರ್ವಜನಿಕ ಬಾಲಕರ ವಸತಿ ನಿಲಯದಲ್ಲಿ ಶೌಚಾಲಯ ಬಳಕೆ ಮಾಡದೆ ಎಷ್ಟೊಂದು ತಿಂಗಳುಗಳಾಗಿವೆ ಎನ್ನುವಂತೆ ಕಂಡು ಬರುತ್ತಿವೆ.

ಹಾಸ್ಟೆಲ್‌ಗಳಲ್ಲಿ ನೀರಿನ ಕೊರತೆ: ನೀರಿನ ಸಮಸ್ಯೆ ವಿವಿಧ ವಸತಿ ನಿಲಯಗಳಲ್ಲಿ ಸಾಮಾನ್ಯವಾಗಿದೆ. ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರುತ್ತಿದೆ.

ಹೆಸರಿಗೆ ಮಾತ್ರ ಸಿಸಿ ಟಿವಿ ಕ್ಯಾಮರಾ: ನಗರದ ವಿವಿಧ ವಸತಿ ನಿಲಯಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ, ಅವು ನೋಡಲು ಮಾತ್ರ ಇದ್ದಂತೆ ಇವೆ. ಒಂದೊಂದು ಕಡೆ ನಾಲ್ಕರಿಂದ ಐದಾರು ಸಿಸಿಟಿವಿ ಕ್ಯಾಮರಾಗಳಿವೆ. ರೆಕಾರ್ಡಿಂಗ್‌ ಸೌಲಭ್ಯ ಇಲ್ಲ. ಇದರಿಂದ ಇವು ಇದ್ದೂ ಇಲ್ಲದಂತಾಗಿದೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.

‘ಯಾದಗಿರಿ ನಗರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ, ಲೈವ್‌ ಮಾತ್ರ ನೋಡಬಹುದು. ದಾಖಲು ವ್ಯವಸ್ಥೆಇಲ್ಲ. ಇದನ್ನು ಅಳವಡಿಸಿದ ಉದ್ದೇಶವೇ ಈಡೇರದಂತಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿಗಳು ದೂರಿದರು.

ಕ್ವಾರಂಟೈನ್ ಕೇಂದ್ರಗಳಾಗಿ ಬಳಕೆ: ಜಿಲ್ಲೆಯಲ್ಲಿ 2020ರ ಮೇ 12ರಂದು ಮೊದಲ ಬಾರಿಗೆ ಕೋವಿಡ್‌ ಪತ್ತೆಯಾಗಿತ್ತು. ಅದಕ್ಕೂ ಮುಂಚೆ ಮಹಾರಾಷ್ಟ್ರ, ಆಂಧ್ರ, ತೆಲಗಾಂಣ, ಬೆಂಗಳೂರು ಮುಂತಾದ ಕಡೆಗಳಿಂದ ವಾಪಸ್‌ ಬಂದಿದ್ದ ಕಾರ್ಮಿಕರನ್ನು ವಿವಿಧ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಮೊದಲಿಗೆ 28 ದಿನ ನಂತರ 14 ದಿನಗಳ ಕಾಲ ವಲಸೆ ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಇದರಿಂದವೂ ಕೆಲ ಕಡೆ ಬೆಡ್‌, ಕಾಟ್‌, ಕಿಟಿಕಿ, ಗಾಜು ಒಡೆದಿವೆ ಎನ್ನುವುದು ವಸತಿ ನಿಲಯಮೇಲ್ವಿಚಾರಕರ ಸಮಜಾಯಿಷಿ.

‘28 ಹಿಂದುಳಿದ ವರ್ಗ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ ಬಳಕೆಗಾಗಿ ಕೊಡಲಾಗಿತ್ತು. ಯಾದಗಿರಿ ತಾಲ್ಲೂಕಿನ ಬಂದಳ್ಳಿ ಏಕಲವ್ಯ ಶಾಲೆ ಇನ್ನೂ ಉದ್ಘಾಟನೆ ಆಗಿಲ್ಲ. ಅಷ್ಟರೊಳಗೆ ಕೊರೊನಾ ಕಾರಣದಿಂದ ವಿವಿಧ ಭಾಗದ ಜನರಿಗೆ ಕ್ವಾರಂಟೈನ್‌ಗಾಗಿ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಯವರೆಗೆ ನಮಗೆ ಹಸ್ತಾಂತರ ಮಾಡಿಲ್ಲ. ಪತ್ರವೂ ಬರೆಯಲಾಗಿದೆ’ ಎನ್ನುತ್ತಾರೆ ಜಿಲ್ಲಾ ಹಿಂದುಳಿದ ವರ್ಗ ಕಲ್ಯಾಣಾಧಿಕಾರಿ ಪ್ರಭು ದೊರೆ.

ಸುಸಜ್ಜಿತ ಕಟ್ಟಡಕ್ಕೆ ನಿರ್ವಹಣೆ ಇಲ್ಲ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಲಕ್ಷಾಂತರ ವೆಚ್ಚದಲ್ಲಿ ಸುಸಜ್ಜಿತ ವಸತಿ ನಿಲಯದ ಕಟ್ಟಡಗಳನ್ನು ಸರ್ಕಾರ ನಿರ್ಮಿಸಿದೆ. ಆದರೆ, ನಿರ್ವಹಣೆ ಇಲ್ಲದಿದ್ದರಿಂದ ಸ್ವಚ್ಛತೆ ಇಲ್ಲವಾಗಿದೆ. ವಸತಿನಿಲಯದ ಹಿಂಭಾಗ, ಮುಂಭಾಗದ ಆವರಣದಲ್ಲಿ ಸಾಕಷ್ಟು ಬಯಲು ಜಾಗವಿದೆ. ಅಲ್ಲಿ ಮುಳ್ಳು ಕಂಟಿ, ಜಾಲಿ ಗಿಡಗಳು ಬೆಳೆದಿದ್ದು, ತ್ಯಾಜ್ಯ ಎಸೆಯುವ ತಾಣವಾಗಿದೆ.

ಮೇಲ್ವಿಚಾರಕರು ವಿದ್ಯಾರ್ಥಿಗಳ ಜೊತೆಗೂಡಿ ಶ್ರಮ ವಹಿಸಿದರೆ ಕೈತೋಟ, ಉದ್ಯಾನ ನಿರ್ಮಿಸಲು ಸಾಧ್ಯ. ವಿವಿಧ ಜಾತಿಯ ಸಸಿಗಳನ್ನು ನೆಡಲು ಸ್ಥಳಾವಕಾಶ ಇದೆ. ವಸತಿ ನಿಲಯಗಳಿಗೆ ಮೇಲ್ವಿಚಾರಕರು ಸರಿಯಾಗಿ ಆಗಮಿಸುವುದಿಲ್ಲ ಎಂಬ ಆರೋಪವೂ ಇದೆ. ‘ಪ್ರಜಾವಾಣಿ’ ಪ್ರತಿನಿಧಿಗಳು ವಿವಿಧ ಹಾಸ್ಟೆಲ್‌ಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ಸೌಲಭ್ಯ ವಂಚಿತವಾಗಿರುವ ಬಗ್ಗೆ ದೂರಿನ ಸುರಿಮಳೆಯನ್ನೇ
ಸುರಿಸಿದರು.

ಸಂಪೂರ್ಣ ಸಿದ್ಧತೆಯತ್ತ 26 ವಸತಿ ನಿಲಯಗಳು

ಗುರುಮಠಕಲ್:ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯ 17 ಮೆಟ್ರಿಕ್ ಪೂರ್ವ, 8 ಮೆಟ್ರಿಕ್ ನಂತರದ ಹಾಗೂ 1 ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ 26 ವಸತಿ ನಿಲಯಗಳು ಕಾರ್ಯಾರಂಭಿಸಿದ್ದು, ಚಿಕ್ಕಪುಟ್ಟ ಕೊರತೆಗಳನ್ನೂ ನೀಗಿಸಿಕೊಳ್ಳುವತ್ತ ಕಾರ್ಯೋನ್ಮುಖವಾಗಿವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುರುಮಠಕಲ್ 5, ಕಂದಕೂರ ಮತ್ತು ಗಾಜರಕೋಟ ಗ್ರಾಮಗಳಲ್ಲಿ ತಲಾ ಎರಡು, ಮಾಧ್ವಾರ, ಎಲ್ಹೇರಿ, ಅನಪುರ ಗ್ರಾಮಗಳಲ್ಲಿ ತಲಾ ಒಂದು, ಕೊಂಕಲ್ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ ಎರಡು ವಸತಿ ನಿಲಯಗಳಿವೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಗುರುಮಠಕಲ್ 4, ಚಂಡರಕಿ, ಪುಟಪಾಕ, ಮಾದ್ವಾರ, ಕೊಂಕಲ್ ಎಲ್ಹೇರಿ ಹಾಗೂ ಕಂದಕೂರು ಗ್ರಾಮಗಳಲ್ಲಿ ತಲಾ ಒಂದು. ಅಲ್ಪಸಂಖ್ಯಾತರ ಇಲಾಖೆಗೆ ಸಂಬಂಧಿಸಿದ ಗುರುಮಠಕಲ್ ಪಟ್ಟಣದಲ್ಲಿ ಒಂದು ವಸತಿ ನಿಲಯ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ 26 ವಸತಿ ನಿಲಯಗಳಿವೆ. ಕೋವಿಡ್-19 ಸೋಂಕಿನ ಎಚ್ಚರಿಕಾ ಕ್ರಮವಾಗಿ ಲಾಕ್ ಡೌನ್ ಅವಧಿಯಿಂದ ಬಾಗಿಲು ಮುಚ್ಚಿದ್ದ ವಸತಿ ನಿಲಯಗಳು, ಕಳೆದ ನವೆಂಬರ್ ತಿಂಗಳಿಂದ ಪುನರಾರಂಭವಾಗಿವೆ. ಬಹುತೇಕ ಒಂದು ವರ್ಷ ಕಾಲ ಬಳಕೆ ಮಾಡದೆ ಬಿಟ್ಟಿದ್ದರಿಂದ ಬಹುತೇಕ ಎಲ್ಲ ವಸತಿ ನಿಲಯಗಳ ಕುಡಿಯುವ ನೀರಿನ ವ್ಯವಸ್ಥೆ ಹದಗೆಟ್ಟಿತ್ತು.

ಸದ್ಯಕ್ಕೆ ಕೇವಲ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ 9 ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳು, ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಪಿಯು ದ್ವಿತೀಯ, ಪದವಿ ಎರಡನೇ ಮತ್ತು ಕೊನೆಯ ವರ್ಷದ ವಿದ್ಯಾರ್ಥಿಗಳು ಮಾತ್ರ ಇದ್ದು, ಈಗ ಹೊಸ ಅರ್ಜಿಗಳನ್ನು ಕರೆಯಲಾಗಿದೆ.

ಕೆಲ ವಸತಿ ನಿಲಯಗಳಲ್ಲಿ ಬೆಡ್, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಶೌಚಾಲಯಗಳು ಸೇರಿದಂತೆ ಸ್ವಲ್ಪ ಸಮಸ್ಯೆಗಳಿದ್ದು, ಅವುಗಳನ್ನೂ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ. ಇನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಗುರುಮಠಕಲ್ ಹಳೆ ವಸತಿ ನಿಲಯದಲ್ಲಿ ಹೆಚ್ಚುವರಿ ಕೋಣೆಗಳು ನಿರ್ಮಾಣಗೊಳ್ಳುತ್ತಿವೆ. ‘ವಸತಿನಿಲಯಗಳ ಮೇಲ್ವಿಚಾರಕರಿಂದ ವಸತಿ ನಿಲಯಗಳ ಕೊರತೆ ಹಾಗೂ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಿ, ಬಹುತೇಕ ಎಲ್ಲ ನಿಲಯಗಳಲ್ಲಿನ ಚಿಕ್ಕಪುಟ್ಟ ದುರಸ್ತಿ ಮಾಡಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭು, ಸಮಾಜ ಕಲ್ಯಾಣ ಇಲಾಖೆಯ ಚನ್ನಬಸವ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ರಾಜು ಮಾಹಿತಿ ನೀಡಿದರು.

ಕಾಲೇಜಿಗೆ ತೆರಳಲು 5 ಕಿ.ಮೀ ಪ್ರಯಾಣ

ಶಹಾಪುರ: ನಗರದ ಹೊರವಲಯದ ಕನ್ಯಾಕೊಳ್ಳುರ ರಸ್ತೆಗೆ ಹೊಂದಿಕೊಂಡಂತೆ ಸರ್ಕಾರದ ವಿವಿಧ ಇಲಾಖೆಯ 10 ವಸತಿ ನಿಲಯಗಳು ಇವೆ. ಆದರೆ, ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜಿಗೆ ತೆರಳಬೇಕಾದರೆ 5.ಕಿಮೀ ದೂರ ಕ್ರಮಿಸಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗಿದೆ.

ಸಮಾಜ ಕಲ್ಯಾಣ ಇಲಾಖೆಯ 4, ಹಿಂದುಳಿದ ವರ್ಗಗಳ ಇಲಾಖೆಯ 4, ಅಲ್ಪಸಂಖ್ಯಾತ ಇಲಾಖೆಯ 2 ಹೀಗೆ ಒಟ್ಟು 10 ವಸತಿ ನಿಲಯಗಳಿವೆ. ವಿದ್ಯಾರ್ಥಿಗಳ ಸಂಖ್ಯೆ ಸಾವಿರ ಇದೆ. ಸಾಕಷ್ಟು ಬಾರಿ ವಿದ್ಯಾರ್ಥಿಗಳು ವಸತಿ ನಿಲಯದಿಂದ ಸಿಟಿ ಬಸ್ ಓಡಿಸುವಂತೆ ಪ್ರತಿಭಟನೆ ನಡೆಸಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೇವಲ ಒಂದು ದಿನ ಮಾತ್ರ ಬಸ್ ಓಡಿಸಿ ಬಂದ್ ಮಾಡಿದರು.

‘ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸಾರಿಗೆ ಬಸ್ ಓಡಿಸುವ ವ್ಯವಸ್ಥೆ ಕಲ್ಪಿಸಬೇಕು. ಗ್ರಂಥಾಲಯಕ್ಕೆ ದಿನಪತ್ರಿಕೆ ಬರುತ್ತಿಲ್ಲ. ವಸತಿ ನಿಲಯದ ಮೇಲ್ವಿಚಾರಕರು ಅಮವಾಸ್ಯೆ ಹಾಗೂ ಹುಣ್ಣಿಮೆ ದಿನಕ್ಕೆ ಬಂದು ಹೋಗುತ್ತಾರೆ. ಸರಿಯಾದ ನಿರ್ವಹಣೆ ಇಲ್ಲ’ ಎಂದು ವಸತಿ ನಿಲಯದ ವಿದ್ಯಾರ್ಥಿಗಳಾದ ರಾಜು ನಾಯಕ ಹುಣಸಗಿ, ಕಿಶನ ಗೋಗಿ ತಾಂಡಾ, ಚೆನ್ನಾರಡ್ಡಿ ಹೊಸಕೇರಾ ಆರೋಪಿಸಿದರೆ ಅವರ ಜೊತೆಯಲ್ಲಿ ಇದ್ದ ಇನ್ನುಳಿದ ವಿದ್ಯಾರ್ಥಿಗಳು ಧ್ವನಿಗೂಡಿಸಿದರು. ಕಳೆದ ನವೆಂಬರ್‌ 17ರಿಂದ ವಸತಿ ನಿಲಯಗಳು ಆರಂಭವಾಗಿವೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ವಸತಿ ನಿಲಯದಲ್ಲಿ ಪ್ರವೇಶ ಅರ್ಜಿ ಕರೆಯಲಾಗಿದೆ. ಇನ್ನೂ ಅದು ಅಂತಿಮ ಆಗಿಲ್ಲ.

‘ಶುಚಿ (ಪ್ಯಾಡ್) ವಿತರಿಸಿಲ್ಲ’: ಕಳೆದ ವರ್ಷ ಮಾರ್ಚ್ ತಿಂಗಳಿಂದ ಬಾಲಕಿಯರ ವಸತಿನಿಲಯಗಳಿಗೆ ಶುಚಿ (ಪ್ಯಾಡ್) ವಿತರಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಈಗ ಕಾಲೇಜು ಆರಂಭವಾಗಿವೆ. ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವಂತೆ ಆಗಿದೆ. ವಸತಿನಿಲಯಗಳ ಮೇಲ್ವಿಚಾರಕರು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರೂಇಂದಿಗೂ ಪೂರೈಕೆಯಾಗುತ್ತಿಲ್ಲ. ತಕ್ಷಣ ಶುಚಿ (ಪ್ಯಾಡ್) ವಿತರಿಸಬೇಕು. ಪ್ರತಿ ತಿಂಗಳಿಗೆ ಒಮ್ಮೆ ವಸತಿನಿಲಯದ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ವಸತಿನಿಲಯದಲ್ಲಿ ಪ್ರತ್ಯೇಕವಾದ ಆರೋಗ್ಯ ಕೋಣೆ ನಿರ್ಮಿಸಿ ಕಾಯಂ ಆಗಿ ವೈದ್ಯರನ್ನು ನೇಮಿಸಬೇಕು ಎಂದು ವಸತಿನಿಲಯಗಳ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.

ಯರಗೋಳ: ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್ ಸೌಲಭ್ಯ

ಯರಗೋಳ: ಗ್ರಾಮದ ವಾರ್ಡ್ ಸಂಖ್ಯೆ 4ರಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಟ್ಟಡ ಕುಸಿದು ಬಿದ್ದಿದೆ.

ವಿದ್ಯಾರ್ಥಿಗಳು ಬಾಡಿಗೆ ಕಟ್ಟಡದಲ್ಲಿ ವಾಸಿಸುವಂತಾಗಿದೆ. ಪುನರ್ ವಸತಿ ನಿಲಯ ನಿರ್ಮಾಣಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ. ಬಾಲಕರ ವಸತಿ ನಿಲಯ ಕುಡುಕರಿಗೆ ಆಶ್ರಯ ತಾಣವಾಗಿದೆ. 50 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದ್ದು, 2017-18ನೇ ಸಾಲಿನಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಣೆಯಾಗುತ್ತಿದೆ.

‘ಹೆಡಗಿಮದ್ರ ಗ್ರಾಮದಲ್ಲಿ 10 ವರ್ಷಗಳ ಹಿಂದೆ ಬಾಲಕಿಯರಿಗಾಗಿ ನಿರ್ಮಿಸಿರುವ ಕಸ್ತೂರ ಬಾ ವಸತಿ ನಿಲಯದ ಕಟ್ಟಡದ ಬಾಗಿಲು, ಕಿಟಕಿ ಮುರಿದು ಹೋಗಿವೆ. ವರ್ಷದಲ್ಲಿ ಕೆಲವು ದಿನಗಳು ಮಾತ್ರ ಬಾಗಿಲು ತೆರೆದಿರುತ್ತವೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಹೊನಗೇರಾ ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ ಕಾಂಪೌಂಡ್ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮದ ಜನರು ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗುತ್ತಿದೆ.

ಬಂದಳ್ಳಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 150 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದ್ದು, ಕೆಲವು ದಿನಗಳಿಂದ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿತ್ತು. ಅಧಿಕಾರಿಗಳು ನಿಷ್ಕಾಳಜಿ ವಹಿಸದೆ ಸಮಸ್ಯೆ ಬಗೆಹರಿಸಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹವಾಗಿದೆ.

ಹಾಸ್ಟೆಲ್‍ಗಳಲ್ಲಿ ಸಮಸ್ಯೆಗಳ ಸರಮಾಲೆ

ಸುರಪುರ:ನಗರದಲ್ಲಿ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಇಲಾಖೆಯ ಬಾಲಕಿಯರ 5, ಬಾಲಕರ 6 ಒಟ್ಟು 11 ಹಾಸ್ಟೆಲ್‍ಗಳಿವೆ.

ಎಲ್ಲವೂ ಸ್ವಂತ ಕಟ್ಟಡ ಹೊಂದಿವೆ. ಅದ್ಭುತ ಕಟ್ಟಡ ಹೊಂದಿದರೂ ಸೌಲಭ್ಯಗಳು ಮಾತ್ರ ಮರೀಚಿಕೆ. ಯಾವ ಹಾಸ್ಟೆಲ್‍ನಲ್ಲೂ ಗ್ರಂಥಾಲಯ ಇಲ್ಲ. ಶೌಚಾಲಯ ಮತ್ತು ನೀರಿನ ಸಮಸ್ಯೆ ಇದೆ. ಕ್ರೀಡಾ ಸಾಮಗ್ರಿಗಳು ಇಲ್ಲ.

ಅಡುಗೆ ಸಿಬ್ಬಂದಿ ಕೊರತೆ ಇದೆ. ಗುಣಮಟ್ಟದ ಆಹಾರ ಕೊಡುತ್ತಿಲ್ಲ. ಸ್ವಚ್ಛತೆ ಇಲ್ಲ. ಬಾಲಕಿಯರಿಗೆ ಭದ್ರತಾ ವ್ಯವಸ್ಥೆ ಒದಗಿಸಿಲ್ಲ. ನಿಲಯ ಮೇಲ್ವಿಚಾರಕರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ. ‘ಹಾಸ್ಟೆಲ್‍ಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ಒದಗಿಸಲು ಎಬಿವಿಪಿ ಹೋರಾಟ ಮಾಡುತ್ತಾ ಬಂದಿದೆ. ಆದರೂ ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯ ವಹಿಸುತ್ತಿವೆ’ ಎನ್ನುತ್ತಾರೆಎಬಿವಿಪಿ ಜಿಲ್ಲಾ ಸಂಚಾಲಕಕ್ಯಾತಪ್ಪ ಮೇದಾ.

ಹುಣಸಗಿ: ಸೌಲಭ್ಯಗಳ ಕೊರತೆ

ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಜ್ಜಲ, ನಾರಾಯಣಪುರ, ಕೊಡೇಕಲ್ಲ, ಗೆದ್ದಲಮರಿ ಸೇರಿದಂತೆ ಇತರ ಗ್ರಾಮಗಳಲ್ಲಿ ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ವಿವಿಧ ಇಲಾಖೆಯಡಿಯಲ್ಲಿ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಸಮಸ್ಯೆಗಳಿಂದ ಬಳಲುತ್ತಿವೆ. ಸರ್ಕಾರ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲು ಮುಂದಾಗಬೇಕಿದೆ ಎಂದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.

ಹುಣಸಗಿ ಪಟ್ಟಣದಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇಂದಿಗೂ ಖಾಸಗಿ (ಬಾಡಿಗೆ) ಕಟ್ಟಡದಲ್ಲಿಯೇ ಮುಂದುವರಿದಿವೆ. ಇದರಿಂದಾಗಿ ಮೂಲಸೌಲಭ್ಯದ ಕೊರತೆ ಸಮಸ್ಯೆಯಾಗಿದೆಯೇ ಉಳಿದಿದೆ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

‘ವಜ್ಜಲ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯವು ಸುಮಾರು 3 ದಶಕಗಳ ಹಿಂದೆ ನಿರ್ಮಿಸಲಾಗಿದ್ದು, ಇಂದಿಗೂ ದುರಸ್ತಿ ಭಾಗ್ಯ ಲಭಿಸಿಲ್ಲ. ಅಲ್ಲದೆ ಸ್ನಾನದ, ಶೌಚಾಲಯ ಕೋಣೆ ಇಲ್ಲ. ಸಾರ್ವಜನಿಕ ನಲ್ಲಿ ನೀರುಬಂದಾಗ ಮಾತ್ರ ಸ್ನಾನ ಮಾಡಬೇಕು’ ಎಂದು ವಿದ್ಯಾರ್ಥಿಗಳಾದ ನಾಗರಾಜ, ನಿಂಗನಗೌಡ ದೂರಿದರು.

‘ತಾಲ್ಲೂಕಿನಲ್ಲಿ ಈಗಾಗಲೇ ಸೊಳ್ಳೆ ಕಾಟ ಹೆಚ್ಚಾಗಿದ್ದು, ಬಹುತೇಕ ಹಾಸ್ಟೆಲ್‌ಗಳಲ್ಲಿ ಕಿಟಕಿ, ಬಾಗಿಲು ಸರಿಯಾಗಿಲ್ಲ. ಇದರಿಂದಾಗಿ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ’ ಎಂದು ವಿದ್ಯಾರ್ಥಿಗಳಾದ ವಿಶ್ವನಾಥ, ಶಿದ್ರಾಮರಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲ ಹಾಸ್ಟೆಲ್‌ಗಳಲ್ಲಿ ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಈಗ ಬಹುತೇಕ ನಿರುಪಯುಕ್ತವಾಗಿವೆ. ಆದ್ದರಿಂದ ಅಭ್ಯಾಸಕ್ಕೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಎಲ್ಲ ವಸತಿ ನಿಲಯಗಳಿಗೆ ಇನ್ವರ್ಟರ್‌ ಕಲ್ಪಿಸುವಂತೆ’ ವಿದ್ಯಾರ್ಥಿಗಳಾದ ದೇವರಾಜ, ರವಿ, ವರುಣ ಹೇಳಿದರು.

‘ನಮ್ಮ ವಸತಿ ನಿಲಯದ ದುರಸ್ತಿಗಾಗಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು,ಕೆಲವೇ ದಿನಗಳಲ್ಲಿಈ ಕಾರ್ಯ ಪೂರ್ಣವಾಗಲಿದೆ’ ಎಂದು ನಿಲಯ ಮೇಲ್ವಿಚಾರಕ ಹಣಮೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT