ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕೊರತೆ

ವಡಗೇರಾ ಸಮುದಾಯ ಆಸ್ಪತ್ರೆ ಒಳಾವರಣದಲ್ಲಿ ನೀರು ನಿಂತು ಮಲಿನ, ಸ್ವಚ್ಛತೆ ಕಾಪಾಡದ ಸಿಬ್ಬಂದಿ
Last Updated 3 ಜೂನ್ 2021, 4:50 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕೊರತೆ ಕಾಡುತ್ತಿದೆ. ಸ್ವಚ್ಛತೆಯಿಂದ ಇರಬೇಕು ಎಂದು ಹೇಳುವ ಇಲಾಖೆಯಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ.

ಜಿಲ್ಲೆಯ ವಡಗೇರಾ ಸಮುದಾಯ ಆರೋಗ್ಯದ ಒಳಾವರಣದಲ್ಲಿ ನೀರು ನಿಂತು ಮಲಿನಗೊಂಡಿದೆ. ಗಿಡ ಮರಗಳ ಕುಂಡಗಳು ಇದ್ದು, ನೀರು ನಿಂತಿದ್ದುಇದನ್ನು ತೆರವುಗೊಳಿಸಲು ಸಿಬ್ಬಂದಿ ಮುಂದಾಗದಿರುವುದು ಕಂಡು ಬಂದಿದೆ.

ಒಡೆದ ಕಿಟಿಕಿ ಗಾಜು: ಆರೋಗ್ಯ ಕೇಂದ್ರದ ಕಿಟಿಕಿ ಗಾಜು ಒಡೆದು ಹೋಗಿದ್ದು, ಅದನ್ನು ದುರಸ್ತಿ ಮಾಡಿಸುವ ಗೋಜಿಗೆ ವೈದ್ಯಾಧಿಕಾರಿಗಳು ಗಮನಹರಿಸಿಲ್ಲ. ಒಂದು ಭಾಗದ ಕಿಟಿಕಿ ಗಾಜು ಬಿದ್ದುಹೋಗಿದ್ದು, ಮತ್ತೊಂದು ಗಾಜು ಅಲ್ಪಸ್ವಲ್ಪ ಉಳಿದುಕೊಂಡಿದೆ.

ವಿವಿಧ ಆಸ್ಪತ್ರೆಗಳಲ್ಲೂ ಸ್ವಚ್ಛತೆ ಮರಿಚೀಕೆ: ಶಹಾಪುರ ಸಾರ್ವಜನಿಕ ಆಸ್ಪತ್ರೆಯ ಕುಡಿಯುವ ನೀರು ಘಟಕದ ಅಕ್ಕಪಕ್ಕದಲ್ಲಿ ನೀರು ಹರಿದುಹೋಗುತ್ತಿದ್ದರೂ ಅದನ್ನು ಸರಿಪಡಿಸುವ ಗೋಜಿಗೆ ಯಾರು ಮುಂದಾಗದಿರುವುದು ಸೋಜಿಗವಾಗಿದೆ.

ಇನ್ನು ಸುರಪುರ ಸಾರ್ವಜನಿಕ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನ ಅಕ್ಕಪಕ್ಕದ ವಾರ್ಡ್‌ಗಳಲ್ಲಿ ಸ್ವಚ್ಛತೆ ಇಲ್ಲದೆ ಬೆಳಿಗ್ಗೆ 11 ಗಂಟೆಯಾದರೂ ಸ್ವಚ್ಛತೆ ಮಾಡದೇ ಹಾಗೆ ಬಿಟ್ಟಿರುವುದು ಕಂಡು ಬರುತ್ತಿದೆ.

ಇನ್ನೂ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿಯೂ ಸ್ವಚ್ಛತೆ ಕಾಪಾಡುತ್ತಿಲ್ಲ ಎನ್ನುವ ದೂರುಗಳು ಆಗಾಗ ಕೇಳಿಬರುತ್ತಿವೆ. ಸೋಂಕಿತರು ಸ್ವಚ್ಛತೆ ಇಲ್ಲದಿರುವ ಬಗ್ಗೆ ತಮ್ಮ ಸಂಬಂಧಿಕರಿಗೆ ವಿಡಿಯೊ ಮಾಡಿ ಹಂಚಿಕೊಂಡಿದ್ದರು. ಆನಂತರ ಸ್ವಚ್ಛತೆ ಮಾಡಲಾಗಿತ್ತು.

ಗಬ್ಬುನಾರುತ್ತಿರುವ ಶೌಚಾಲಯಗಳು: ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗಡೆ ಮಾತ್ರವಲ್ಲದೇ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.

ಶೌಚಾಲಯಗಳಲ್ಲಿ ಮೂಗಿ ಮುಚ್ಚಿಕೊಂಡೆ ನೈಸರ್ಗಿಕ ಕ್ರಿಯೆ ಮುಗಿಸಬೇಕು. ಅಂಥ ವಾತಾವರಣ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಮಾಣವಾಗಿದೆ. ಕೊರೊನಾ ಜೊತೆಗೆ ಇಂಥ ಸ್ವಚ್ಛತೆ ಮಾಡುವುದು ಕೊರತೆ ಎದ್ದು ಕಾಣಬರುತ್ತಿದೆ.

‘ಗ್ರಾಮೀಣ ಭಾಗದಿಂದ ಬಂದ ಸಾರ್ವಜನಿಕರು ಸ್ವಚ್ಛತೆ ಕಾಪಾಡುತ್ತಿಲ್ಲ. ಇದರಿಂದ ಶೌಚಾಲಯಗಳಲ್ಲಿ ಅಸ್ವಚ್ಛತೆ ಇರುತ್ತಿದೆ. ಅವರದ್ದು ಇದರಲ್ಲಿ ತಪ್ಪಿದೆ. ನಮ್ಮ ಸಿಬ್ಬಂದಿ ಕಾಲಕಾಲಕ್ಕೆ ಸ್ವಚ್ಛತೆ ಮಾಡುತ್ತಾರೆ’ ಎನ್ನುತ್ತಾರೆ ವೈದ್ಯಾಧಿಕಾರಿಯೊಬ್ಬರು.

ಸಾರ್ವಜನಿಕರ ಬೇಜಾಬ್ದಾರಿ: ಆಸ್ಪತ್ರೆಗೆ ಬರುವ ಸಾರ್ವಜನಿಕರು ತಮ್ಮ ಜವಾಬ್ದಾರಿ ಮರೆತು ಬೇಕಾಬಿಟ್ಟಿ ಎಲ್ಲೆಂದರಲ್ಲೇ ಕಸ ಎಸೆಯುವುದು, ಮಾಸ್ಕ್‌ ಎಸೆಯುವುದರಿಂದ ಸ್ವಚ್ಛತೆ ಮಾಯವಾಗುತ್ತಿದೆ. ಶೌಚಾಲಯಗಳಲ್ಲಿ ನೀರು ಹರಿಸದಿರುವುದು ಮತ್ತೊಬ್ಬರಿಗೆ ಸಮಸ್ಯೆ ಉಂಟು ಮಾಡುತ್ತಿದೆ.

ಮಳೆಗಾಲ ಆರಂಭ: ಜಿಲ್ಲೆಯಲ್ಲಿ ಆಗಾಗ ಮಳೆ ಬೀಳುತ್ತಿದ್ದು, ಬಹುತೇಕ ಮಳೆಗಾಲಕ್ಕೆ ಕಾಟಲಿಟ್ಟಂತೆ ಆಗುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ಕೋವಿಡ್‌ ಕರ್ತವ್ಯದಲ್ಲಿ ಇದ್ದೇವೆ ಎಂದು ಸ್ವಚ್ಛತೆ ಕಡೆ ಗಮನಹರಿಸದೇ ಸಬೂಬು ಹೇಳುತ್ತಿದ್ದಾರೆ.

***

ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತಿವೆ. ಈಗ ಮಳೆಗಾಲ ಪ್ರಾರಂಭವಾಗಿದ್ದು, ಆಸ್ಪತ್ರೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛತೆ ಕಾಪಾಡಬೇಕು.
-ಫಕೀರ್‌ ಅಹಮದ್‌ ವಡಗೇರಾ, ಸಾಮಾಜಿಕ ಕಾರ್ಯಕರ್ತ

***

ಕ್ವಾರಂಟೈನ್‌ ಕೇಂದ್ರಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದು, ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿ ಸ್ವಚ್ಛತೆ ಕಾಪಾಡಬೇಕು. ಇದರ ಬಗ್ಗೆ ಮೇಲಧಿಕಾರಿಗಳು ಗಮನಹರಿಸಿ.
-ಸ್ಯಾಂಸನ್ ಮಾಳಿಕೇರಿ, ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ

***

ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡುವುದರಲ್ಲಿ ಸಾರ್ವಜನಿಕರ ಹೊಣೆಗಾರಿಕೆಯೂ ಇದೆ. ಹೊರಗುತ್ತಿಗೆ ಆಧಾರದಲ್ಲಿ ಡಿ ದರ್ಜೆಯ ಸಿಬ್ಬಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ತೆಗೆದುಕೊಳ್ಳಲಾಗಿದೆ.
-ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT