ನಾಲ್ಕನೇ ಜಿಲ್ಲಾ ಕಸಾಪ ಸಮ್ಮೇಳನ ಲಾಂಛನ ಬಿಡುಗಡೆ

7

ನಾಲ್ಕನೇ ಜಿಲ್ಲಾ ಕಸಾಪ ಸಮ್ಮೇಳನ ಲಾಂಛನ ಬಿಡುಗಡೆ

Published:
Updated:
Deccan Herald

ಯಾದಗಿರಿ: ‘ಕನ್ನಡ ಸಾಹಿತ್ಯ ಸಮ್ಮೇಳನಗಳು ದೇಶದ ಸ್ಥಿತಿಗತಿಯನ್ನು ಪ್ರತಿಬಿಂಬಿಸುವ ವೇದಿಕೆಗಳಾಗಿದ್ದು, ಅಂತಹ ವೇದಿಕೆಗಳು ನಿರಂತರವಾಗಿಸುವುದರಿಂದ ಜನರನ್ನು ಜಾಗೃತರನ್ನಾಗಿಸಬಹುದು’ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಪ್ಪ ಎಸ್‌.ಹೊಟ್ಟಿ ಹೇಳಿದರು.

ನಾಲ್ಕನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಅಂಗವಾಗಿ ಬುಧವಾರ ವೀರಶೈವ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜಿಲ್ಲಾ ಕೇಂದ್ರದಲ್ಲಿ ಡಿ.24 ಮತ್ತು ಡಿ.25ರಂದು ನಾಲ್ಕನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಪೂರ್ವಸಿದ್ಧತೆಗಳು ಆರಂಭಗೊಂಡಿವೆ. ಮೊದಲಿಗೆ ಸಮ್ಮೇಳನದ ಲಾಂಛನ ಸಿದ್ಧತೆ ಪೂರ್ಣಗೊಂಡಿದೆ. ಕಲಾವಿದ ಸಂಗಣ್ಣ ದೋರನಹಳ್ಳಿ ರೂಪಿಸಿರುವ ಲಾಂಛನ ಜಿಲ್ಲೆಯ ಸಮಗ್ರತೆಯ ಪ್ರತೀಕವಾಗಿದೆ’ ಎಂದರು.

‘ಸಾಹಿತಿ ಸಿದ್ದರಾಮ ಹೊನ್ಕಲ್ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಹೆಸರಾಂತ ಸಾಹಿತಿ ಡಾ.ಸೋಮಶೇಖರ ಉದ್ಘಾಟಿಸಲಿದ್ದಾರೆ. ಪ್ರಸ್ತುತ ವಿದ್ಯಾಮಾನಗಳು, ವರ್ತಮಾನದ ಸಮಸ್ಯೆಗಳು, ಮಹಿಳಾಪರ ಚಿಂತನೆಗಳು, ಮಾಧ್ಯಮಗಳ ಪ್ರಸ್ತುತತೆ, ಜಿಲ್ಲೆಯ ಮತ್ತು ಹೈ.ಕ. ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ವಿವರಿಸಿದರು.

‘ಕವಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಎರಡು ಕವಿಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ದುಡಿದ ಮಹನೀಯರನ್ನು ಸತ್ಕರಿಸಲಾಗುವುದು. ವೈವಿಧ್ಯ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನದ ಮೆರುಗು ಹೆಚ್ಚಿಸಲಿವೆ’ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ,‘ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ನುಡಿ ಜಾತ್ರೆಯನ್ನು ಸ್ಮರಣೀಯವಾಗಿಸಲು ಶ್ರಮಿಸಲಾಗುತ್ತಿದೆ. ಸಮ್ಮೇಳನದ ಲಾಂಛನದಲ್ಲಿ ಚಿಂತನಳ್ಳಿಯ ಗವಿಸಿದ್ದಲಿಂಗೇಶ್ವರ, ಗುರುಮಠಕಲ್ ಜಲಪಾತ, ಯಾದಗಿರಿಯ ಐತಿಹಾಸಿಕ ಕೋಟೆ, ಶಹಾಪುರದ ಬುದ್ಧ ಮಲಗಿದ ದೃಶ್ಯ, ಗೋಗಿಯ ಚಂದಾ ಹುಸೇನಿ, ಸುರಪುರದ ವೇಣುಗೋಪಾಲ ಸ್ವಾಮಿ ಗುಡಿ, ಜಿಲ್ಲೆಯ ಪ್ರಮುಖ ಬೆಳೆ ಭತ್ತ ಹೀಗೆ ನಮ್ಮ ಜಿಲ್ಲೆಯ ಹಿರಿಮೆಯನ್ನು ಸಾರುವಲ್ಲಿ ಅದನ್ನು ವಿನ್ಯಾಸಗೊಳಿಸಲಾಗಿದೆ’ ಎಂದರು.

ನಾಲ್ಕನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕಾರ ಬಿಡುಗಡೆ ಮಾಡಿದರು.

ಪ್ರಕಾಶ ಅಂಗಡಿ ಕನ್ನೆಳ್ಳಿ, ಡಾ.ಭೀಮರಾಯ ಲಿಂಗೇರಿ, ನಾಗೇಂದ್ರ ಜಾಜಿ, ಡಾ.ಎಸ್.ಎಸ್. ನಾಯಕ,
ನೂರಂದಪ್ಪ ಲೇವಡಿ, ಬಸವಂತ್ರಾಯಗೌಡ ಮಾಪಾ, ಸಿ.ಎಂ. ಪಟ್ಟೇದಾರ, ಬಸವರಾಜ ಮೋಟ್ನಳ್ಳಿ, ಆರ್. ಮಹಾದೇವಪ್ಪ ಅಬ್ಬೆತುಮಕೂರು, ಚನ್ನಪ್ಪ ಠಾಣಾಗುಂದಿ ಇದ್ದರು. ಬಸವಂತರಾಯಗೌಡ, ನಾಗೇಂದ್ರ ಜಾಜಿ, ಮುಖ್ಯಗುರು ಹೇಮಲತಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !