ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಒಂದೇ ವಾರದಲ್ಲಿ 4 ಅಂಗಡಿಗಳ ಪರವಾನಗಿ ರದ್ದು

ಯಾದಗಿರಿ ತಾಲ್ಲೂಕಿನಲ್ಲೇ ಅಕ್ರಮ, ಗ್ರಾಹಕರಿಗೆ ಪಡಿತರ ನೀಡದ ನ್ಯಾಯಬೆಲೆ ಅಂಗಡಿಗಳ ಅಮಾನತು
Published 22 ಸೆಪ್ಟೆಂಬರ್ 2023, 5:29 IST
Last Updated 22 ಸೆಪ್ಟೆಂಬರ್ 2023, 5:29 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಗ್ರಾಹಕರಿಗೆ ಸಮರ್ಪಕ ಸೇವೆ ನೀಡದ 4 ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರದ್ದು ಮಾಡಿದೆ. ಈ ಮೂಲಕ ಬೇರೆಯವರಿಗೂ ಎಚ್ಚರಿಕೆ ನೀಡಿದೆ.

ಹಳಿಗೇರಾ, ಅಚ್ಚೋಲ, ಕೊಯಿಲೂರು, ಪಗಲಾಪುರ ಈ ನಾಲ್ಕು ಅಂಗಡಿಗಳು ಯಾದಗಿರಿ ತಾಲ್ಲೂಕಿನವೇ ಎನ್ನುವುದು ವಿಶೇಷವಾಗಿದೆ.

ಆಗಸ್ಟ್‌ 25ರಂದು ತಹಶೀಲ್ದಾರ್‌ರಿಂದ ವರದಿ ಬಂದಿದ್ದು, ಆ.28ರಂದು ಆಹಾರ ಇಲಾಖೆಯಿಂದ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. ಆದರೆ, ಉತ್ತರವೇ ನೀಡಿಲ್ಲ. ಹೀಗಾಗಿ ಸೆಪ್ಟೆಂಬರ್‌ 8ರಂದು ಹಳಿಗೇರಾ ನ್ಯಾಯ ಬೆಲೆ ಅಂಗಡಿ ಪರವಾನಗಿ ರದ್ದು ಮಾಡಲಾಗಿದೆ. ಅಚ್ಚೋಲ, ಕೊಯಿಲೂರು, ಪಗಲಾಪುರ ನ್ಯಾಯ ಬೆಲೆ ಅಂಗಡಿಗಳಿಗೂ ನೋಟಿಸ್‌ ನೀಡಿದ್ದರೂ ಸಮರ್ಪಕ ಉತ್ತರ ಬಂದಿಲ್ಲ. ಹೀಗಾಗಿ ಸೆಪ್ಟೆಂಬರ್‌ 12ರಂದು ಅಮಾನತು ಮಾಡಲಾಗಿದೆ.

ಯಾಕೆ ಅಮಾನತು?:

ನ್ಯಾಯ ಬೆಲೆ ಅಂಗಡಿ ಡೀಲರ್‌ಗಳು ಕಳೆದ ಮೂರು ನಾಲ್ಕು ತಿಂಗಳಿಂದ ಪಡಿತರ ಕಾರ್ಡ್‌ದಾರರಿಗೆ ಸಮರ್ಪಕವಾಗಿ ಆಹಾರ ಧ್ಯಾನ ಹಂಚುತ್ತಿಲ್ಲ. ಬೆರಳಚ್ಚು ತೆಗೆದುಕೊಂಡು ಆಹಾರ ಧಾನ್ಯ ಬಂದಿಲ್ಲ ಎಂದು ಕಾರ್ಡ್‌ದಾರರಿಗೆ ಹೇಳಿ ಕಳಿಸಿದ್ದಾರೆ. ತಿಂಗಳ ಪೂರ್ತಿ ಹಂಚದೇ ಒಂದೆರಡು ದಿನ ಮಾತ್ರ ವಿತರಣೆ ಮಾಡಿದ್ದಾರೆ. ಇದರಿಂದ ಕಾರ್ಡ್‌ದಾರರಿಗೆ ವಿತರಕ ವಂಚನೆ ಮಾಡಿದ್ದಾನೆ. ಆದ ಕಾರಣ ಡೀಲರ್ ವಿರುದ್ಧ ಗ್ರಾಮಸ್ಥರು ತಹಶೀಲ್ದಾರ್‌ಗೆ ಮನವಿ  ಮಾಡಿದ್ದರು. ಅದರಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಪಡಿತರ ಅಂಗಡಿಯಲ್ಲಿ ಜಾಗೃತಿ ಸಮಿತಿ ಸದಸ್ಯರ ಪಟ್ಟಿ, ದಾಸ್ತಾನುಫಲಕ, ನಾಮಫಲಕ, ಆಹಾರ ಧಾನ್ಯ ದರಪಟ್ಟಿ, ಪ್ರಾಧಿಕಾರ ಮಂಜೂರಾತಿ ಮಾಹಿತಿ ಪ್ರದರ್ಶನ ಮಾಡದಿರುವುದು ಈ ಸಂದರ್ಭದಲ್ಲಿ ಕಂಡುಬಂದಿದೆ. ಅಲ್ಲದೇ ನ್ಯಾಯಬೆಲೆ ಅಂಗಡಿಯಲ್ಲಿ ಯಾವುದೇ ತರಹದ ನೆಲೆಹಾಸಿಗೆ ಹಾಕದೆ ಆಹಾರ ಧ್ಯಾನ ವಿತರಣೆ ಮಾಡುವುದು ಮತ್ತು ಸ್ವಚ್ಛತೆ ಕಾಪಾಡದೇ ಇರುವುದು ಕಂಡು ಬಂದಿದೆ ಎಂದು ಆಹಾರ ಇಲಾಖೆ ನೀಡುವ ಮಾಹಿತಿಯಾಗಿದೆ.

ತಾಂಡಾಗಳಲ್ಲಿ ಆಹಾರ ಧ್ಯಾನ ಸರಿಯಾಗಿ ವಿತರಣೆ ಆಗುವುದಿಲ್ಲ ಎನ್ನುವ ಆರೋಪಗಳಿವೆ. 20 ಕೆ.ಜಿ ಅಕ್ಕಿ ಕೊಡಬೇಕಾದಲ್ಲಿ 15 ಕೆಜಿ ಕೊಡುವುದು, ಮುಂಚಿತವಾಗಿ ಬಯೋಮೆಟ್ರಿಕ್‌ ತೆಗೆದುಕೊಳ್ಳುವುದು ಮಾಡುವುದು ಗುಟ್ಟಾಗಿ ಉಳಿದಿಲ್ಲ.

‘ಸಹಕಾರ ಸಂಘ, ಎಸ್ಸಿ, ಎಸ್‌ಟಿ, ಮಹಿಳಾ ಕೇಂದ್ರಿತಾ ಸೇರಿದಂತೆ ಇನ್ನಿತರ ನ್ಯಾಯಬೆಲೆ ಅಂಗಡಿಗಳಿವೆ. ಆದರೆ, ಹಲವು ವರ್ಷಗಳಿಂದ ಡೀಲರ್‌ಗಳು ಬೇರೂರಿದ್ದರಿಂದ ಅವರಿಗೆ ಇದರಲ್ಲಿ ‘ಹಿಡಿತ’ ಸಿಕ್ಕಿದೆ. ಹೀಗಾಗಿ ಯಾರೇ ಬಂದರೂ ನಮ್ಮನ್ನು ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಪರವಾನಗಿ ರದ್ದು ಮಾಡುವ ಮೂಲಕ ಅಧಿಕಾರಿಗಳು ಶಾಕ್‌ ನೀಡಿದ್ದಾರೆ’ ಎಂದು ಗ್ರಾಹಕ ನಾಗಪ್ಪ ಪಾಟೀಲ ಹೇಳುತ್ತಾರೆ. 

ಜಿಲ್ಲೆಯ ಎಲ್ಲೊ ಒಂದು ಕಡೆ ಪಡಿತರ ವಿತರಣೆಯಲ್ಲಿ ಲೋಪ ಆಗಿರಬಹುದು. ಆದರೆ ಎಲ್ಲ ಕಡೆಯೂ ಅದೇ ವಾತಾವರಣ ಇದೆ ಎನ್ನುವುದು ಸರಿಯಲ್ಲ
ಆರ್.ಮಹಾದೇವಪ್ಪ ಅಬ್ಬೆತುಮಕೂರು, ಕಲ್ಯಾಣ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಜಿಲ್ಲೆಯಲ್ಲಿ ಪಡಿತರ ವಿತರಣೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು ಲೋಪ ಕಂಡು ಬಂದರೆ ನೋಟಿಸ್‌ ನೀಡಲಾಗುತ್ತದೆ. ಅಂಗಡಿಯವರು ಲೋಪ ಸರಿಪಡಿಸಿದ್ದರೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ
ಭೀಮರಾಯ ಎಂ., ಉಪ ನಿರ್ದೇಶಕ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ

‘ಗೃಹಲಕ್ಷ್ಮಿ‘ಗೆ ಯಜಮಾನಿ ಬದಲಾವಣೆ!

ಇನ್ನೂ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ಯಜಮಾನಿಯನ್ನು ಪಡಿತರ ಕಾರ್ಡ್‌ನಲ್ಲಿ ಬದಲಾವಣೆ ಮಾಡಿರುವುದು ಕಂಡು ಬಂದಿದೆ. ಒಂದು ಕುಟುಂಬದಲ್ಲಿದ್ದರೂ ಬೇರೆ ಬೇರೆ ಕಾರ್ಡ್‌ ಮಾಡಿಸಿಕೊಳ್ಳಲಾಗಿದೆ. ₹2000 ಗೃಹಲಕ್ಷ್ಮಿ ಯೋಜನೆಯಡಿ ಬರುವುದರಿಂದ ಅತ್ತೆ ಬದಲಾಗಿ ಸೊಸೆಯನ್ನು ಯಜಮಾನಿ ಮಾಡಲಾಗಿದೆ. ಇನ್ನು ಕೆಲವು ಕಡೆ ಸೊಸೆ ಅತ್ತೆಯನ್ನು ಇಬ್ಬರನ್ನು ಯಜಮಾನಿ ಮಾಡಲಾಗಿದೆ ಎಂದು ಆಹಾರ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT