ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಗಡಿಯ ಬದುಕು ಬವಣೆ–ಮನೆಯಲ್ಲಿ ತೆಲುಗು, ಶಾಲೆಯಲ್ಲಿ ಕನ್ನಡ!

ಶಾಲೆ, ಕಚೇರಿಗೆ ಸೀಮಿತವಾದ ಕನ್ನಡ ಬಳಕೆ, ಗಡಿಯಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ತೊಡಕು
Last Updated 19 ನವೆಂಬರ್ 2022, 4:49 IST
ಅಕ್ಷರ ಗಾತ್ರ

ಯಾದಗಿರಿ: ಕರ್ನಾಟಕದ ತೆಲಂಗಾಣ ಗಡಿ ಭಾಗದಲ್ಲಿ ಬಹುತೇಕ ಗ್ರಾಮಗಳ ಮನೆಗಳಲ್ಲಿ ತೆಲುಗು ಮಾತನಾಡಿದರೆ, ಶಾಲೆಯಲ್ಲಿ ಕನ್ನಡ ಪಠ್ಯ ಬೋಧನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಪಾಲಿಗೆ ಇದು ನುಂಗಲಾರದ ಬಿಸಿತುಪ್ಪವಾಗಿದೆ.

ಗುರುಮಠಕಲ್‌ ತಾಲ್ಲೂಕಿನ ಕೇಶ್ವಾರ, ಚಂಡ್ರಕಿ, ಪುಟಪಾಕ, ಜೈಗ್ರಾಮ, ಇಡ್ಲೂರು, ಸಂಕಲಾಪುರ, ಬಸಾಪುರ, ಗೊರೆನೂರ, ನಸಲವಾಯಿ, ನರಸಾಪುರ, ಮಡೇಪಲ್ಲಿ, ಅಜಾಲಾಪುರ, ಚಲ್ಹೇರಿ, ಯಾದಗಿರಿ ತಾಲ್ಲೂಕಿನ ಚಂದಾಪುರ, ಕುಂಟಿಮರಿ ಸೇರಿದಂತೆ ಇನ್ನಿತರ ಗ್ರಾಮಗಳಿವೆ. ಇವುಗಳಲ್ಲಿ ಕೆಲ ವರ್ಷಗಳಿಂದ ಶಾಲೆಗಳಲ್ಲಿ ತೆಲುಗಿನಲ್ಲಿ ಪಠ್ಯವನ್ನು ಅರ್ಥ ಮಾಡಿಸಲಾಗುತ್ತಿತ್ತು.

‘ಪ್ರಜಾವಾಣಿ‌’ ಪ್ರತಿನಿಧಿ ಗಡಿ ಭಾಗದ ಶಾಲೆಗಳಿಗೆ ಭೇಟಿ ನೀಡಿದ್ದಾಗ ವಿದ್ಯಾರ್ಥಿಗಳು, ಶಿಕ್ಷಕರು ಸಮಸ್ಯೆಯ ಗಂಭೀರತೆಯನ್ನು ತೆಗೆದಿಟ್ಟರು.

‘ಮನೆಯಲ್ಲಿ ಎಲ್ಲರೂ ತೆಲುಗು ಮಾತನಾಡುತ್ತೇವೆ. ನಮ್ಮ ಮಾತೃ ಭಾಷೆಯೇ ತೆಲುಗು. ಶಾಲೆಯಲ್ಲಿ ಶಿಕ್ಷಕರು ಕನ್ನಡದ ಪಠ್ಯ ಬೋಧನೆ ಮಾಡುತ್ತಾರೆ. ಆರಂಭದಲ್ಲಿ ಕನ್ನಡದ ಪಠ್ಯಕ್ರಮ ಅರ್ಥವಾಗುವುದಿಲ್ಲ. ಬರಬರುತ್ತಾ ಕನ್ನಡ ಭಾಷೆ ಬಗ್ಗೆ ತಿಳಿಯುತ್ತದೆ’ ಎನ್ನುವುದು ವಿದ್ಯಾರ್ಥಿಗಳ ಮಾತು.

ಇನ್ನೂ ಗಡಿ ಗ್ರಾಮಗಳಲ್ಲಿ ಭಾಷೆ ಸಮಸ್ಯೆಯಿಂದ ಅರ್ಧಕ್ಕೆ ಓದು ನಿಲ್ಲಿಸುವವರೇ ಹೆಚ್ಚು. ಚಲ್ಹೇರಿಯಂಥ ಗ್ರಾಮಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರಿ ನೌಕರರು ಸಿಗುವುದೇ ಅಪರೂಪವಾಗಿದೆ.

ಅಜಲಾಪುರ ಗ್ರಾಮ ಪಂಚಾಯಿತಿ ಸ್ಥಾನ ಹೊಂದಿದ್ದು, ಅಜಲಾಪುರ, ಚಲ್ಹೇರಿ, ಬದ್ದೇಪಲ್ಲಿ, ಬದ್ದೇಪಲ್ಲಿ ತಾಂಡಾ, ತುರುಕನದೊಡ್ಡಿ ವ್ಯಾಪ್ತಿಯನ್ನು ಹೊಂದಿದೆ.

ಅಜಲಾಪುರ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಿದ್ದು, ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಇದೇ ಶಾಲೆಗೆ ಆಗಮಿಸುತ್ತಾರೆ.

ಪ್ರೌಢಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದು, 8ನೇ ತರಗತಿಯಲ್ಲಿ 35 ವಿದ್ಯಾರ್ಥಿಗಳು. 9ನೇ ತರಗತಿಯಲ್ಲಿ 46, 10ನೇ ತರಗತಿಯಲ್ಲಿ 39 ವಿದ್ಯಾರ್ಥಿಗಳು ಇದ್ದಾರೆ.

ಯಾದಗಿರಿ ಜಿಲ್ಲಾ ಕೇಂದ್ರಕ್ಕಿಂತ ತೆಲಂಗಾಣದ ದೊಡ್ಡ ‍ಪಟ್ಟಣಗಲೇ ಹತ್ತಿರುವಾಗುತ್ತಿರುವುದರಿಂದ ವ್ಯಾಪಾರ ವಹಿವಾಟು ಹೆಚ್ಚಾಗಿದೆ.

ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತ: ತೆಲಂಗಾಣ ಗಡಿ ಭಾಗದ ಮುಖ್ಯ ರಸ್ತೆಗೆ ಮಾತ್ರ ಕರ್ನಾಟಕದ ಸರ್ಕಾರಿ ಬಸ್‌ಗಳು ಸಂಚಾರ ಮಾಡುತ್ತವೆ. ಆದರೆ, ಒಳಭಾಗದಲ್ಲಿ ಜೀಪ್‌ಗಳೇ ಗತಿ ಎನ್ನುವಂತೆ ಆಗಿದೆ. ಗುರುಮಠಕಲ್‌–ನಾರಾಯಣಪೇಟ, ನಾರಾಯಣಪೇಟ, ಚಲ್ಹೇರಿ–ಅಜಲಾಪುರ ಸೇರಿದಂತೆ ಇನ್ನಿತರ ಗ್ರಾಮಗಳ ಸಂಪರ್ಕ ಕೊಂಡಿಯಾಗಿಜೀಪ್‌ಗಳೇ ತಿರುಗಾಡುತ್ತವೆ. ಬೆಳಿಗ್ಗೆ, ರಾತ್ರಿ ವೇಳೆಯಲ್ಲಿ ಬಸ್‌ ಸಂಚಾರ ಇದ್ದರಿಂದ ವ್ಯಾಪಾರ–ವಹಿವಾಟಿಗೆ ಜೀಪ್‌ಗಳೇ ಆಧಾರವಾಗಿವೆ. ಪ್ರಯಾಣಿಕರು ಭರ್ತಿಯಾದ ನಂತರ ಜೀಪ್‌ಗಳು ಹೊರಡುತ್ತವೆ. ಟಾಪ್‌ ಪ್ರಯಾಣ ಇಲ್ಲಿ ಸಮಾನ್ಯವಾಗಿದೆ.

ಜಿಲ್ಲೆಯ ಗಡಿ ಗ್ರಾಮವಾಗಿದ್ದರಿಂದ ಕನ್ನಡಕ್ಕಿಂತ ತೆಲುಗು ಭಾಷೆಯನ್ನೇ ಹೆಚ್ಚು ಮಾತನಾಡುತ್ತಾರೆ. ಇದರಿಂದ ಶಾಲೆಗೆ ತೆರಳಿದಾಗ ಕನ್ನಡದ ಭಾಷೆ ಬಗ್ಗೆ ಗೊಂದಲ ಉಂಟು ಮಾಡಿಕೊಳ್ಳುತ್ತಾರೆ.

- ನಾಗೇಶ ಚಂದ್ರಶೇಖರ, ವಿದ್ಯಾರ್ಥಿ

ನಮ್ಮ ಮನೆಯಲ್ಲಿ ತೆಲುಗು ಮಾತನಾಡುತ್ತಿದ್ದು, ಶಾಲೆಯಲ್ಲಿ ಕನ್ನಡ ಬಳಕೆಯಲ್ಲಿದೆ. ಮನೆಯಲ್ಲಿ ತೆಲುಗು ಮಾತನಾಡಿ ಶಾಲೆಯಲ್ಲಿ ಕನ್ನಡ ಕಲಿಯುವುದು ಸವಾಲಾಗುತ್ತದೆ.

- ನವನೀತ, ವಿದ್ಯಾರ್ಥಿನಿ

ಅಜಲಾ‍ಪುರ ಪ್ರೌಢಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೂ ಕನ್ನಡ ಮಾತನಾಡಲು ಹೇಳಲಾಗುತ್ತಿದೆ. ಮನೆಯಲ್ಲಿ ತೆಲುಗು ಮಾತನಾಡುವುದರಿಂದ ಪಠ್ಯಕ್ಕೆ ಸಮಸ್ಯೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಲಾಗುತ್ತಿದೆ.
- ಶಿವಕುಮಾರ, ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT