ಮಂಗಳವಾರ, ಜೂನ್ 22, 2021
22 °C
ಸುರಪುರ: ಕುಸಿದ ಬೇಡಿಕೆ, ಸಂಕಷ್ಟದಲ್ಲಿ ವ್ಯಾಪಾರಿಗಳು

ಲಾಕ್‌ಡೌನ್: ಕುಂದಿದ ತರಕಾರಿ ವ್ಯಾಪಾರ

ಅಶೋಕ ಸಾಲವಾಡಗಿ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಕೊರೊನಾ ತರಕಾರಿ ವ್ಯಾಪಾರಿಗಳ ದಿನದ ದುಡಿಮೆಯನ್ನು ಕಸಿದುಕೊಂಡು ಬಿಟ್ಟಿದೆ. ಲಾಕ್‌ಡೌನ್ ಜಾರಿಯಾದಾಗಿನಿಂದ ವ್ಯಾಪಾರಿಗಳು ಆತಂಕದಲ್ಲಿದ್ದಾರೆ. ತರಕಾರಿ ಬಿಕರಿಯಾಗದೆ ತಿಪ್ಪೆಗುಂಡಿ ಸೇರುತ್ತಿದೆ.

ಮೊದಲು ಸರ್ದಾರ್ ವಲ್ಲಭಭಾಯಿ ಪಟೇಲ ಕಟ್ಟೆಯ ಹತ್ತಿರದ ಅಗಸಿ ಒಳಗಡೆ ತರಕಾರಿ ಮಾರುಕಟ್ಟೆ ಇತ್ತು. ಮಾರುಕಟ್ಟೆಯ ಮಳಿಗೆಗಳನ್ನು ಹೊಸದಾಗಿ ಕಟ್ಟುವ ಸಲುವಾಗಿ ವ್ಯಾಪಾರಿಗಳನ್ನು ಎರಡು ವರ್ಷಗಳ ಹಿಂದೆ ತೆರೆವುಗೊಳಿಸಲಾಯಿತು. ಆಗಿನಿಂದ ಮುಖ್ಯ ಮಾರುಕಟ್ಟೆಯ ರಸ್ತೆಯ ಎರಡು ಬದಿಯಲ್ಲಿ ತರಕಾರಿ ವ್ಯಾಪಾರ ಆರಂಭವಾಯಿತು. ಸಹಜವಾಗಿ ಇದು ಸಂಚಾರಕ್ಕೆ ಮತ್ತು ಇತರ ವರ್ತಕರಿಗೆ ಅಡಚಣೆಯಾಯಿತು. ಕೆಲ ದಿನಗಳಲ್ಲಿ ಹೊಸ ಮಾರುಕಟ್ಟೆ ಆರಂಭವಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾ ದಿನ ಸಾಗಿಸಿದರು.

ಈಗ ಕೊರೊನಾ ಸೋಂಕು ಹೆಚ್ಚು ವ್ಯಾಪಿಸುತ್ತಿದ್ದರಿಂದ ಜನ ಸಂದಣಿ ತಪ್ಪಿಸಲು ತರಕಾರಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ. ರಾಣಿ ಜಾನಕಿದೇವಿ ಶಾಲೆಯ ಆವರಣದಲ್ಲಿ 35 ವ್ಯಾಪಾರಿಗಳಿಗೆ, ವಾಲ್ಮೀಕಿ ವೃತ್ತದಲ್ಲಿ 15 ವರ್ತಕರಿಗೆ, ಬಸ್‍ನಿಲ್ದಾಣದ ಹತ್ತಿರ ಇಬ್ಬರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಎಲ್ಲ ಸ್ಥಳದಿಂದ ಒಂದೂವರೆ ಕಿ.ಮೀ ಅಂತರದಲ್ಲಿರುವ ಎನ್‍ಜಿೊಕಚೇರಿ ಹತ್ತಿರ ಸಗಟು ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಈ ಸ್ಥಳ ಘಟ್ಟ ಪ್ರದೇಶದಲ್ಲಿದೆ. ಇಲ್ಲಿಗೆ ತರಕಾರಿ ತೆಗೆದುಕೊಂಡು ಹೋಗಲು ರೈತರಿಗೂ ತೊಂದರೆಯಾಗಿದೆ.

ತರಕಾರಿ ವ್ಯಾಪಾರಿಗಳು ಅಲ್ಲಿಗೆ ಹೋಗಿ ಸವಾಲಿನಲ್ಲಿ ಭಾಗವಹಿಸಿ ತರಕಾರಿ ಕೊಳ್ಳಬೇಕು. ದ್ವಿಚಕ್ರ ವಾಹನ ಇಲ್ಲದವರು ಪಾಡು ಅವರಿಗೇ ಗೊತ್ತು. ಸವಾಲಿನಲ್ಲಿ ಕೊಂಡ ತರಕಾರಿಯನ್ನು ತಮ್ಮ ಸ್ಥಳಕ್ಕೆ ತರಲು ಆಟೋ ಬೇಕು. ವ್ಯಾಪಾರದ ಸಮಯ ಮುಗಿದ ನಂತರ ಉಳಿದ ತರಕಾರಿ ಮನೆಗೆ ಒಯ್ಯಲು ಆಟೊ ಬೇಕು. ಇದಕ್ಕೆ ₹300 ರಿಂದ 400 ಖರ್ಚು ತಗಲುತ್ತದೆ.

ಕೊರೊನಾ ಭೀತಿಯಿಂದ ತರಕಾರಿ ಕೊಳ್ಳಲು ಮಾರುಕಟ್ಟೆಗೆ ಅಗಮಿಸುವವರ ಸಂಖ್ಯೆ ಕಡಿಮೆಯಾಗಿದೆ. ವ್ಯಾಪಾರಿಗಳು ಗ್ರಾಹಕರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದರ ಲಾಭ ಪಡೆದುಕೊಳ್ಳುತ್ತಿರುವ ಕೂಲಿ ಕಾರ್ಮಿಕರು, ಇತರರು ಪುಟ್ಟಿಯಲ್ಲಿ ತರಕಾರಿಯನ್ನು ತಲೆ ಮೇಲೆ ಹೊತ್ತುಕೊಂಡು ಮನೆ ಮನೆಗೆ ಮಾರಾಟ ಮಾಡುತ್ತಿದ್ದಾರೆ. ಇದು ತರಕಾರಿ ವ್ಯಾಪಾರಿಗಳ ವ್ಯಾಪಾರವನ್ನು ಕಸಿದುಕೊಂಡಿದೆ.

ಹೀಗಾಗಿ ತರಕಾರಿ ವ್ಯಾಪಾರಿಗಳು ಕಡಿಮೆ ಪ್ರಮಾಣದಲ್ಲಿ ತರಕಾರಿ ಖರೀದಿಸುತ್ತಿದ್ದಾರೆ. ಅದರಲ್ಲೂ ಬಹುತೇಕ ತರಕಾರಿ ಬಿಕರಿಯಾಗದೆ ಹಾಗೇ ಉಳಿಯುತ್ತದೆ. ಕೆಲ ತರಕಾರಿ ಕೆಟ್ಟು ಹೋಗುತ್ತಿದೆ. ವ್ಯಾಪಾರ ಸಮಯ ಮುಗಿದ ಮೇಲೆ ಕೆಟ್ಟುಹೋದ ಸಾಕಷ್ಟು ತರಕಾರಿ ಮೈದಾನದಲ್ಲಿ ಕಂಡು ಬರುತ್ತದೆ.

ದೊಡ್ಡ ವ್ಯಾಪಾರಿಗಳು ದಿನಕ್ಕೆ ಕಡಿಮೆ ಎಂದರೂ ₹10 ಸಾವಿರದವರೆಗೆ ವ್ಯಾಪಾರ ಮಾಡುತ್ತಿದ್ದರು. ಈಗ ಇದು ರೂ. 2 ಸಾವಿರಕ್ಕೆ ಇಳಿದಿದೆ. ಜೊತೆಗೆ ದಿನಾಲು ತರಕಾರಿ ಸಾಗಿಸಲು ₹400 ಬೇಕು. ಇನ್ನು ಚಿಕ್ಕ ವರ್ತಕರ ಪಾಡು ದೇವರೇ ಬಲ್ಲ. ಹೀಗಾಗಿ ತರಕಾರಿ ವರ್ತಕರು ಆತಂಕದಿಂದ ಕಾಲ ದೂಡುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು