ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಕಾಂಗ್ರೆಸ್‌ನಲ್ಲಿ ಹುರುಪು, ಬಿಜೆಪಿಗರಿನ್ನೂ ತಟಸ್ಥ

Published 28 ಮಾರ್ಚ್ 2024, 5:36 IST
Last Updated 28 ಮಾರ್ಚ್ 2024, 5:36 IST
ಅಕ್ಷರ ಗಾತ್ರ

ಗುರುಮಠಕಲ್‌: ಲೋಕಸಭಾ ಚುನಾವಣೆ ಘೋಷಣೆಯ ನಂತರ ಕಲಬುರಗಿ ಕ್ಷೇತ್ರಕ್ಕೆ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಿದೆ. ಜತೆಗೆ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಕಾಂಗ್ರೆಸ್‌ ಪಾಳಯದಲ್ಲಿ ಹುರುಪಿದ್ದರೆ, ಬಿಜೆಪಿ ಕಾರ್ಯಕರ್ತರಲ್ಲಿ ಚುನಾವಣಾ ಕಾವು ಕಾಣದಾಗಿದೆ ಮತ್ತು ಇಲ್ಲಿನ ಜೆಡಿಎಸ್‌ ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಕ್ಷೇತ್ರದಲ್ಲಿನ್ನೂ ಚುನಾವಣೆಯ ರಂಗೇರಿಲ್ಲ.

ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಧಾಕೃಷ್ಣ ದೊಡ್ಡಮನಿ ಅವರ ಹೆಸರು ಅಂತಿಮಗೊಂಡ ನಂತರ ತಾಲ್ಲೂಕು ಸೇರಿದಂತೆ ಗುರುಮಠಕಲ್‌ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಪಾಳಯ ಚುರುಕುಗೊಂಡಿದ್ದು, ‘ಆರ್.ಕೆ. ಸಾಬ್‌’ ಗೆಲುವಿಗೆ ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ.

ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣಾ ಕಣಕ್ಕೆ ಬಿಜೆಪಿ ಹಾಲಿ ಸಂಸದ ಡಾ.ಉಮೇಶ ಜಾಧವ ಅವರನ್ನೇ ಅಭ್ಯರ್ಥಿಯಾಗಿ ಘೋಷಿಸಿದೆ. ಆದರೆ, ಈವರೆಗೂ ಬಿಜೆಪಿಯ ಕಾರ್ಯಕರ್ತರಲ್ಲಿ ಚುನಾವಣೋತ್ಸಾಹ ಮೂಡಿಲ್ಲ ಎನ್ನುವುದು ಕೆಲ ರಾಜಕೀಯ ವಿಶ್ಲೇಷಕರ ಮಾತು.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಒಪ್ಪಂದದಂತೆ ಚುನಾವಣಾ ಕಣದಲ್ಲಿ ಜೆಡಿಎಸ್‌ ಅಭ್ಯರ್ಥಿಯಿಲ್ಲ. ಆದರೆ, ಈಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿಯವರಿದ್ದ ಚುನಾವಣಾ ಸಭೆಗೆ ಈ ಭಾಗದ ಜೆಡಿಎಸ್‌ ಪದಾಧಿಕಾರಿಗಳು, ಶಾಸಕರನ್ನೂ ಆಹ್ವಾನಿಸದಿರುವುದು ಬಿಜೆಪಿ-ಜೆಡಿಎಸ್‌ ನಡುವೆ ಹೊಗೆಯಾಡಿಸುತ್ತಿದ್ದು, ದಳಪತಿಗಳು ಸದ್ಯ ಮೌನಕ್ಕೆ ಶರಣಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗುರುಮಠಕಲ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾಗ ಇಲ್ಲಿನ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಸದಾ ಕೈಗೆಟಕುವ ನಾಯಕರಾಗಿದ್ದವರು ರಾಧಾಕೃಷ್ಣ ದೊಡ್ಡಮನಿ. ಜತೆಗೆ ಮತದಾರರ ನಾಡಿಮಿಡಿತ ಅರಿತಿರುವ ಅವರು ಈಗ ತಾವೇ ಅಭ್ಯರ್ಥಿಯಾದ್ದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ಹಿಮ್ಮಡಿಸಿದೆ. ‘ಆರ್.ಕೆ. ಸಾಬ್‌’ ಗೆಲುವಿಗೆ ಸಂಕಲ್ಪ ಮಾಡಿದ್ದೇವೆ ಎನ್ನುತ್ತಾರೆ ಕಾಂಗ್ರೆಸ್ ಧುರೀಣರು.

ಬಿಜೆಪಿ ತಯಾರಿ ಕುರಿತು ಮಾತನಾಡಲು ಪಕ್ಷದ ಮಂಡಲಾಧ್ಯಕ್ಷ ಕೈಗೆಟುಕರೆಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿವೆ. ಮಂಡಲ ಘಟಕದ ಅಧ್ಯಕ್ಷರಿಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ.

ಒಟ್ಟಾರೆಯಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಸದ್ಯದವರೆಗೆ ಲೋಕಸಭಾ ಚುನಾವಣಾ ಕಣವು ‘ಏಕಮುಖ’ದತ್ತ ವಾಲಿದಂತೆ ತೋರುತ್ತಿದ್ದು, ಮಾರ್ಚ್‌ 30ರಂದು ಪಟ್ಟಣದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯೊಂದಿಗೆ ‘ಚುನಾವಣಾ ಕಹಳೆ’ ಮೊಳಗಿಸುವ ತಯಾರಿ ನಡೆಸುತ್ತಿದೆ.

ಆರ್.ಕೆ. ಅವರು ಎಐಸಿಸಿ ಅಧ್ಯಕ್ಷರ ಕುಟುಂಬದವರಷ್ಟೇ ಅಲ್ಲ, ಕಾರ್ಯಕರ್ತರ ನೆಚ್ಚಿನ ನಾಯಕ. ಪಕ್ಷಕ್ಕಾಗಿ ಸಾಕಷ್ಟು ದುಡಿದ ಅನುಭವಿ. ಅವರ ಗೆಲುವಿಗೆ ನಮ್ಮೆಡನೆ ಎಲ್ಲರೂ ಕೆಲಸ ಮಾಡುತ್ತಿದ್ದಾರೆ
ಕೃಷ್ಣ ಚಪೆಟ್ಲಾ, ಗುರುಮಠಕಲ್‌ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT