ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ ವಿಧಾನಸಭೆ ಉಪ ಚುನಾವಣೆ | ಭರ್ಜರಿ ಪ್ರಚಾರಕ್ಕೆ ಪ್ರಮುಖರ ದಂಡು

ಕ್ಷೇತ್ರ ಉಳಿಸಿಕೊಳ್ಳಲು ನಾಯಕರ ಬಿರುಸಿನ ಪ್ರಚಾರ
Published 29 ಏಪ್ರಿಲ್ 2024, 6:59 IST
Last Updated 29 ಏಪ್ರಿಲ್ 2024, 6:59 IST
ಅಕ್ಷರ ಗಾತ್ರ

ಯಾದಗಿರಿ: ಮೇ 7ರಂದು ಲೋಕಸಭೆ ಚುನಾವಣೆ ಜತೆಗೆ ಸುರಪುರ ವಿಧಾನ ಸಭಾ ಉಪಚುನಾವಣೆ ನಡೆಯಲಿದ್ದು, ರಾಜ್ಯ, ರಾಷ್ಟ್ರ ಮುಖಂಡರಿಂದ ಪ್ರಚಾರ ಕಾರ್ಯಗಳು ನಿಗದಿಯಾಗಿವೆ.

ಸುರಪುರ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎನ್ನುವ ಹಠದಿಂದ ಕಾಂಗ್ರೆಸ್‌ ಹಲವು ಸುತ್ತಿನ ‍ಪ್ರಚಾರ ಕಾರ್ಯಗಳನ್ನು ಹಮ್ಮಿಕೊಂಡಿದೆ. ಇದರ ಜತೆಗೆ ಬಿಜೆಪಿಯೂ ಕ್ಷೇತ್ರವನ್ನು ಮರಳಿ ಪಡೆಯಲು ತೀವ್ರ ಪ‍್ರಯತ್ನ ನಡೆಸುತ್ತಿದೆ. ಹೀಗಾಗಿ ಮುಖಂಡರು ಕ್ಷೇತ್ರದಲ್ಲಿಯೇ ಬೀಡುಬಿಟ್ಟು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನಿಂದ ರಾಜಾ ವೇಣುಗೋಪಾಲ ನಾಯಕ, ಬಿಜೆಪಿಯಿಂದ ನರಸಿಂಹ ನಾಯಕ (ರಾಜೂಗೌಡ) ಸ್ಪರ್ಧಿಸಿದ್ದು, ಜಿದ್ದಿಗೆ ಬಿದ್ದು, ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಇದರ ಜತೆಗೆ ತಮ್ಮ ಪಕ್ಷದ ಸ್ಟಾರ್‌ ಪ್ರಚಾರಕರಿಂದ ರೋಡ್‌ ಶೋ, ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಈಗಾಗಲೇ ಬಿಜೆ‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ಅವರು ತಾಂಡಾಗಳಲ್ಲಿ ಪ್ರಚಾರ ನಡೆಸಿ ಹೋಗಿದ್ದಾರೆ. ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಚಾರ ನಡೆಸಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಶಹಾಪುರ, ಹುಣಸಗಿಯಲ್ಲಿ ಶನಿವಾರ ಭರ್ಜರಿ ರೋಡ್‌ ಶೋ ನಡೆಸಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದೆ. ಅಲ್ಲದೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಒಂದು ದಿನ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸುತ್ತಾರೆ.

ಖರ್ಗೆ, ಸಿಎಂ ಪ್ರಚಾರ: ಕಾಂಗ್ರೆಸ್‌ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ನಾಯಕರು ಬಂದು ತಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಆ ಪ‍ಕ್ಷದ ಮುಖಂಡರು ತಿಳಿಸಿದ್ದಾರೆ.

ವಿಧಾನಸಭೆಗೆ ಚಿತ್ರನಟರು: ಹಿಂದೆ ನಡೆದ ವಿಧಾನಸಭಾ ಚುನಾವಣೆಗೆ ಚಲನಚಿತ್ರ ನಟರು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಕಳೆದ ವಿಧಾನಸಭಾ ಚುನಾವಣೆಗೆ ನಾಯಕ ನಟ ಸುದೀಪ್‌ ಸುರಪುರ, ಶಹಾಪುರ ಮತಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಆದರೆ, ಈ ಬಾರಿ ಇನ್ನೂ ಚಲನಚಿತ್ರ ನಟರ ಪ್ರಚಾರದ ಸುಳಿವು ಸಿಕ್ಕಿಲ್ಲ.

ಪ್ರಚಾರ ಸಮಯ ಬದಲಾವಣೆ

ಜಿಲ್ಲೆಯಲ್ಲಿ 42ರಿಂದ 43 ಡಿಗ್ರಿ ಸೆಲ್ಸಿಯಸ್‌ ತನಕ ಬಿಸಿಲಿನ ವಾತಾವರಣ ಇದ್ದು, ಇದರಿಂದ ಪ್ರಚಾರದ ಸಮಯವೂ ರಾಜಕೀಯ ಪಕ್ಷಗಳು ಬದಲಾವಣೆ ಮಾಡಿಕೊಂಡಿವೆ.

ಬೆಳಿಗ್ಗೆ 8ಗಂಟೆಯಿಂದ 11 ಗಂಟೆ ವರೆಗೆ ವಿವಿಧ ಗ್ರಾಮಗಳ ಸುತ್ತಾಟ ನಡೆಸಿದರೆ, ಸಂಜೆ ಇಳಿವೊತ್ತು ಆದ ನಂತರ ಪ್ರಚಾರ ಕಾರ್ಯಗಳಲ್ಲಿ ಆಯಾ ಪಕ್ಷದ ಮುಖಂಡರು ತೊಡಗಿಸಿಕೊಂಡಿದ್ದಾರೆ. ಬಿಸಿಲಿನ ವಾತಾವರಣದಿಂದ ಹೆಚ್ಚಿನ ಮತದಾರರು ಬೀದಿಗೆ ಇಳಿಯುತ್ತಿಲ್ಲ.

ಮಧ್ಯಾಹ್ನ ಪ್ರಚಾರ ಕಾರ್ಯಕ್ರಮವಿದ್ದರೆ ತಣ್ಣನೆಯ ನೀರು, ತಂಪು ಪಾನೀಯ ಇನ್ನಿತರ ಪಾನೀಯಗಳ ಮೊರೆ ಹೋಗುವಂತೆ ಆಗಿದೆ ಎಂದು ಮುಖಂಡರು ಮಾಹಿತಿ ನೀಡುತ್ತಾರೆ.

ಸುರಪುರದಲ್ಲಿ ಚುನಾವಣೆ ಹಲ್‌ಚಲ್‌

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಜೊತೆಯಲ್ಲಿ ಉಪ ಚುನಾವಣೆ ನಡೆಯಲಿದ್ದು, ಇದರಿಂದ ಚುನಾವಣಾ ಕಾವು ಬೇರೆಡೆಗಿಂತ ಇಲ್ಲಿ ಜೋರಾಗಿದೆ.

ಪ್ರತಿದಿನ ಒಂದೊಂದು ಪಕ್ಷದಿಂದ ರಾಜ್ಯ, ರಾಷ್ಟ್ರ ಮಟ್ಟದ ನಾಯಕರಿಂದ ಪ್ರಚಾರ ನಡೆಯುತ್ತಿದೆ. ಇದರಿಂದ ಜನರಿಗೆ ಚುನಾವಣಾ ಕಾವು ಜೋರಾಗಿದೆ. ಆಯಾ ಪಕ್ಷದ ಮುಖಂಡರಿಗೆ ಇಷ್ಟು ಜನರನ್ನು ಸೇರಿಸಬೇಕು ಎನ್ನುವ ಟಾರ್ಗೆಟ್‌ ನೀಡಲಾಗಿದ್ದು, ಅದರಂತೆ ಜನರನ್ನು ಸೇರಿಸುವ ಕಾರ್ಯದಲ್ಲಿ ಮುಖಂಡರು ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT