ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಬೆಳೆ ಹಾನಿ ವಸ್ತುನಿಷ್ಠ ವರದಿ ನೀಡಲು ಮಾಣಿಕರೆಡ್ಡಿ ಕುರಕುಂದಿ ಆಗ್ರಹ

ಶೀಘ್ರ ಜಂಟಿ ಸಮೀಕ್ಷೆ ಮಾಡಿ, ಪರಿಹಾರ ಧನ ವಿತರಣೆಗೆ ಕ್ರಮಕೈಗೊಳ್ಳಿ: ಕುರಕುಂದಿ
Last Updated 22 ಅಕ್ಟೋಬರ್ 2020, 16:37 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹ, ಅಕಾಲಿಕ ಮಳೆಯಿಂದ ಸಾವಿರಾರು ಎಕರೆ ಜಮೀನು ಜೊತೆಗೆ ಲಕ್ಷಾಂತರ ರೈತರ ಜೀವನ ಹಾಳಾಗಿದೆ. ಹೀಗಾಗಿ ಅಧಿಕಾರಿಗಳು ಸರ್ಕಾರಕ್ಕೆ ವಸ್ತುನಿಷ್ಠ ವರದಿ ನೀಡಬೇಕು’ ಎಂದು ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ ಆಗ್ರಹಿಸಿದ್ದಾರೆ.

ವಡಗೇರಾ ತಾಲ್ಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ‌ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.

‘ಎರಡು ನದಿಗಳ ಪ್ರವಾಹ, ಅತಿವೃಷ್ಟಿಯಿಂದ ರೈತರು ಸರ್ವಸ್ವವನ್ನುಕಳೆದುಕೊಂಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳು ಬೆಳೆ ಹಾನಿ ತೀವ್ರತೆ ಕಡಿಮೆ ಆಗುವ ಮುಂಚೆಯೇ ಭೇಟಿ ನೀಡಿ ಸರ್ವೆ ಮಾಡಬೇಕು. ಎಲ್ಲ ಗ್ರಾಮ, ನದಿ ದಂಡೆಯಲ್ಲಿರುವ ಬೆಳೆಗಳು ಪೂರ್ತಿ ನಾಶವಾಗಿವೆ. ಹೀಗಾಗಿ ವಸ್ತುನಿಷ್ಠ ವರದಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಮನೆ ಕಳೆದುಕೊಂಡು ಹಲವರು ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಶೀಘ್ರ ಪರಿಹಾರದ ಧನ ವಿತರಿಸಬೇಕು. ಜಿಲ್ಲೆಯಲ್ಲಿ ಭತ್ತ, ಹತ್ತಿ ಬೆಳೆ ಹೆಚ್ಚು ಹಾನಿಯಾಗಿದೆ. ಭತ್ತಕ್ಕೆ ₹30 ಸಾವಿರ, ಹತ್ತಿಗೆ ₹15 ಸಾವಿರ ಎಕರೆಗೆ ಖರ್ಚು ಮಾಡಿದ್ದಾರೆ. ಅಧಿಕಾರಿಗಳು ಪ್ರಮಾಣಿಕವಾಗಿ ವರದಿ ಸಲ್ಲಿಸಬೇಕು. ವೈಜ್ಞಾನಿಕ ಬೆಲೆ ನಿಗದಿಮಾಡಬೇಕು. ಜಿಲ್ಲೆಯ ಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಡ ಹಾಕಿ ಪರಿಹಾರದ ಹಣ ಶೀಘ್ರ ಬರುವಂತೆ ಮಾಡಬೇಕು. ಪರಿಹಾರದ ವಿತರಣೆಯಲ್ಲಿ ಕೇಂದ್ರದ ಹೊಣೆಗಾರಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ಇಬ್ಬರು ಸಂಸ ದರು ಜಿಲ್ಲೆಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಬೇಕು’ ಎಂದು ಆಗ್ರಹಿಸಿದರು.

‘ಬೆಳೆ ಸಂಪೂರ್ಣ ಹಾಳಾಗಿದೆ. ಕಾಲುವೆ ಭಾಗದಲ್ಲಿ ಬೆಳೆದ ಬೆಳೆ ಮಾತ್ರ ಉಳಿದುಕೊಂಡಿದೆ. ಒಂದು ವರ್ಷದ ಅಭಿವೃದ್ಧಿ ಕಾಮಗಾರಿಗಳನ್ನು ಬಂದ್‌ ಮಾಡಿ ಆ ಎಲ್ಲ ಹಣವನ್ನು ರೈತರಿಗೆ ಕೊಡಬೇಕು. ರೈತರಲ್ಲಿ ಮುಂಗಾರು ಬೆಳೆಯಿಂದ ಈಗ ಯಾವುದೇ ಉತ್ಪನ್ನವೇ ಇಲ್ಲದಂತಾಗಿದೆ. ಪರಿಹಾರ ಕೊಡುವ ಕೆಲಸ ಮಾಡಬೇಕು. ವೈಜ್ಞಾನಿಕ ಬೆಲೆ ನಿರ್ಧಾರ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT