ಬದ್ದೇಪಲ್ಲಿ ತಾಂಡಾದಲ್ಲಿ ‘ಮೇರಾ’ ಸಂಭ್ರಮ

ಸೈದಾಪುರ: ಬಂಜಾರ ಸಮುದಾಯದ ಸಾಂಪ್ರದಾಯಿಕ ‘ಮೇರಾ’ ಸಂಭ್ರಮ ಗುರುವಾರ ವೈಭವದಿಂದ ನಡೆಯಿತು.ಜಿಲ್ಲೆಯ ಎಲ್ಲ ತಾಂಡಾಗಳಲ್ಲಿಯೂ ಈ ಬಾರಿ ಎಲ್ಲಿಲ್ಲದ ಸಡಗರ ಕಂಡುಬಂತು.
ಸಮೀಪದ ಬದ್ದೇಪಲ್ಲಿ ತಾಂಡದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ತಾಂಡಾದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.
ಯುವತಿಯರು ಊರಿನ ಪ್ರತಿಯೊಂದು ಮನೆಯಿಂದ ದೀಪವನ್ನು ತಂದು ನಂತರ ಊರಿನ ನಾಯಕರು ಮನೆಗೆ ತೆರಳಿ ಆರತಿ ಬೆಳಗಿದರು. ಕೈಯಲ್ಲಿ ದೀಪ ಹಿಡಿದು ಓಣಿಯ ಮನೆಗಳಿಗೆ ತೆರಳಿ ಅಲ್ಲಿನ ಜಾನುವಾರುಗಳಿಗೆ ದೀಪ ಬೆಳಗಿದರು.
ದೀಪಾವಳಿ ಹಬ್ಬದ ಪೂರ್ವದ ಸುಮಾರು ಹದಿನೈದು ದಿನದಿಂದು ಊರಿನ ನಾಯಕರ ಮನೆಯ ಮುಂದೆ ಪ್ರತಿದಿನ ರಾತ್ರಿ ಜನಪದ ಹಾಡುಗಳನ್ನು ಆಡುತ್ತ ನೃತ್ಯ ಮಾಡುತ್ತ, ಎಲ್ಲರು ಒಂದಡೆ ಸೇರಿ ತಡ ರಾತ್ರಿಯವರೆಗೆ ಸಾಂಪ್ರದಾಯಿಕ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
ತರುಣಿಯರು ನವ ವಿನ್ಯಾಸದ ಅಲಂಕಾರಿಕ ಸಮವಸ್ತ್ರಗಳನ್ನು ಧರಿಸಿದ ಯುವತಿಯರು ಊರಿನ ಹೊರಗೆ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಕಾಡಿಗೆ ಹೋಗಿ ವಿವಿಧ ಹೂಗಳನ್ನು ತಂದು ಕುಲದೈವ ಸೇವಾಲಾಲ ಮಹಾರಾಜರಿಗೆ ಪೂಜೆ ಸಲ್ಲಿಸಿ ಪುಷ್ಪ ಸಮರ್ಪಿಸಿದರು. ಮನೆ ಮನೆಗೆ ತೆರಳಿ, ಸೆಗಣಿಯ ಗುಂಪುಗಳಿಗೆ ಹೂಗಳು ಸೇರಿಸಿ ಅದಕ್ಕೆ ಅಲಂಕಾರ ಮಾಡಿ ಪೂಜೆ ಮಾಡಿದರು.
ಲಂಬಾಣಿ ನೃತ್ಯಕ್ಕೆ ಹಲಿಗೆಯು ಮುಖ್ಯ ನಾದವಾಗಿದ್ದು, ಅದರ ನಾದಕ್ಕೆ ತಕ್ಕಂತೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು. ನೃತ್ಯ, ಹಾಡಿನ ಮುಖಾಂತರ ತಾಂಡಾದ ಮನೆಗಳಿಗೆ ‘ನಿಮ್ಮ ಬಾಳಿಗೆ ಬೆಳಕಾಗಲಿ’ ಎಂದು ಪ್ರಾರ್ಥಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.