ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ ತಾಲ್ಲೂಕಿನ ನಾಲ್ಕು ಕಡೆ ಗಣಿಗಾರಿಕೆ ಬಂದ್‌

ದೂಳಿನಿಂದ ಬೆಳೆ ಮೇಲೆ ಪ್ರತಿಕೂಲ ಪರಿಣಾಮ: ರೈತರ ಅಳಲು
Last Updated 27 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನ ದೋರನಹಳ್ಳಿ, ದಿಗ್ಗಿ, ಗೋಗಿ, ಗಂಗನಾಳ ಗ್ರಾಮದ ಬಳಿಯ ಕಲ್ಲು ಗಣಿಗಾರಿಕೆ ಹಾಗೂ ಗ್ರಾನೈಟ್ ಗಣಿಗಾರಿಕೆ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗಣಿಗಾರಿಕೆಯ ಸ್ಫೋಟದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಗಿತಗೊಳಿಸಿದ್ದಾರೆ. ಆದರೆ, ಸಂಗ್ರಹಿಸಿ ಇಟ್ಟಿರುವ ಜಲ್ಲಿಯನ್ನು ಟಿಪ್ಪರ್‌ಹಾಗೂ ಟ್ರ್ಯಾಕ್ಟರ್ ಮೂಲಕ ಸಾಗಣೆ ಮಾಡುವ ಕಾರ್ಯ ಭರದಿಂದ ಸಾಗಿದೆ.

ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದಾಗ ಕಚ್ಚಾ ಸಾಮಗ್ರಿಗಳು ಕಾಣಿಸಲಿಲ್ಲ. ವಿದ್ಯುತ್ ಸಂಪರ್ಕವಿತ್ತು. ಕಲ್ಲು ಪುಡಿ ಮಾಡುವ ಯಂತ್ರಗಳು ಬಂದ್ ಆಗಿದ್ದವು. ಸುಮಾರು 20ಅಡಿಆಳದ ಕಲ್ಲು ಕ್ವಾರಿಯಲ್ಲಿ ಸದ್ಯಕ್ಕೆ ಸ್ವಲ್ಪ ನೀರು ಸಂಗ್ರಹವಾಗಿವೆ. ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರನ್ನು ಪ್ರಶ್ನಿಸಿದಾಗ 15 ದಿನದಿಂದ ಬಂದ್ ಮಾಡಿದ್ದೇವೆ ಎಂದು ಉತ್ತರಿಸಿದರು.

‘ದೋರನಹಳ್ಳಿ ಗ್ರಾಮದ ಮಹಾಂತೇಶ್ವರ ಬೆಟ್ಟದ ಸುತ್ತಮುತ್ತ ನಾಲ್ಕು ಕಡೆ ಕಲ್ಲು ಕ್ವಾರಿ ಗಣಿಗಾರಿಕೆ ಹಲವು ವರ್ಷದಿಂದ ನಡೆದುಕೊಂಡು ಬರಲಾಗುತ್ತಿತ್ತು. ಸ್ಫೋಟ ವಸ್ತುಗಳನ್ನು ಉಪಯೋಗಿಸಿದಾಗ ನಾವು ಮನೆಯಲ್ಲಿ ಇದ್ದಾಗ ಭೂಮಿ ಕೂಡ ಕಂಪಿಸಿದ ಅನುಭವ ಆಗುತ್ತಿತ್ತು. ಇದನ್ನು ನಿಯಂತ್ರಿಸುವಂತೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದೆವು. ಆದರೆ, ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರು’ ಎಂದು ದೋರನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಾನಪ್ಪ ಹಾಲಬಾವಿ ದೂರಿದರು.

‘ಕಲ್ಲು ಗಣಿಕಾರಿಕೆಯಿಂದ ಅಲ್ಲಿನ ಸುತ್ತಮುತ್ತಲಿನ ಪ್ರದೇಶದ ಜಮೀನಿನಲ್ಲಿ ಯಾವ ಬೆಳೆ ಬೆಳೆಯುವ ಸ್ಥಿತಿಯಲ್ಲಿ ಇಲ್ಲ. ಕಂಕರ್‌ತುಂಬಿಕೊಂಡು ಸಾಗುವ ವಾಹನಗಳ ಓಡಾಟದಿಂದ ಹೊರ ಬರುವ ದೂಳು ಮತ್ತು ಗಣಿಗಾರಿಕೆಯಿಂದಬರುವ ದೂಳು ಬೆಳೆಯ ಮೇಲೆ ನಿಲ್ಲುತ್ತದೆ. ಇದರಿಂದ ಬೆಳೆ ಬೆಳೆಯದ ಸ್ಥಿತಿಯು ಎದುರಾಗಿದೆ. ಪರಿಸರಕ್ಕೆ ತೀವ್ರ ಹಾನಿ ಉಂಟಾದರೂಒಬ್ಬ ಪರಿಸರ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಆಗಮಿಸಿಲ್ಲ’ ಎಂದು ಆರೋಪಿಸುತ್ತಾರೆ ದೋರನಹಳ್ಳಿ ಗ್ರಾಮದ ಯುವಕ ಹಣಮಂತ ಗಡ್ಡಿಮನಿ.

***

ಗಂಗನಾಳ: ಗ್ರಾನೈಟ್ ಗಣಿಗಾರಿಕೆ ಬಂದ್

‘ಶಹಾಪುರ ತಾಲ್ಲೂಕಿನ ಗಂಗನಾಳ ಗ್ರಾಮದ ಹತ್ತಿರ ಎರಡು ಕಡೆ ಪಟ್ಟಾ ಜಮೀನಿನಲ್ಲಿ ಅಕ್ರಮವಾಗಿ ಗ್ರಾನೈಟ್ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾಗ ದಾಳಿ ಮಾಡಿ ತಪ್ಪಿತಸ್ಥರ ಮೇಲೆ ವರ್ಷದ ಹಿಂದೆ ಎರಡು ಪ್ರಕರಣ ದಾಖಲಿಸಿದ್ದೇವೆ’ ಎಂದು ಎಂದು ಗೋಗಿ ಠಾಣೆಯ ಪಿಎಸ್ಐ ಸೋಮಲಿಂಗ ಒಡೆಯರ್ ಮಾಹಿತಿ ನೀಡಿದ್ದಾರೆ.

ವಾರದ ಹಿಂದೆ ಅಲ್ಲಿನ ಸ್ಥಳಕ್ಕೆ ಭೇಟಿ ನೀಡಿದಾಗ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ. ಪರವಾನಗಿ ಪತ್ರ ತೆಗೆದುಕೊಂಡು ಬಂದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜೊತೆ ಸಮಾಲೋಚನೆ ನಡೆಸಿ ಪರಿಶೀಲಿಸಲಾಗುವುದು ಎಂದರು.

ಅಲ್ಲದೆ ತಾಲ್ಲೂಕಿನ ಹೊಸಕೇರಾ ಗ್ರಾಮದಲ್ಲಿ ನಡೆಯುತ್ತಿದ್ದ ಗ್ರಾನೈಟ್ ಕಲ್ಲು ಗಣಿಗಾರಿಕೆ ಬಂದ್ ಆಗಿ ವರ್ಷ ಕಳೆದಿದೆ. ಗೋಗಿ ಗ್ರಾಮದ ಬಳಿ ಬೇರೆಡೆಯಿಂದ ಕಲ್ಲು ತಂದು ಕಂಕರ್‌ಸಿದ್ಧಪಡಿಸುತ್ತಾರೆ. ಇವೆಲ್ಲವುಗಳ ಬಗ್ಗೆ ಸಮಗ್ರವಾದ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಸದ್ಯಕ್ಕೆ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ತಿಳಿಸಿದರು.

***

ಶಹಾಪುರ ತಾಲ್ಲೂಕಿನಲ್ಲಿ ಯಾವುದೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿಲ್ಲ. ಅಲ್ಲದೆ ಕಂದಾಯ ಇಲಾಖೆಯಿಂದ ಇದರ ಬಗ್ಗೆ ಸಮಗ್ರವಾಗಿ ವಿಚಾರಣೆ ನಡೆಸಲಾಗಿದೆ

-ಜಗನ್ನಾಥರೆಡ್ಡಿ, ತಹಶೀಲ್ದಾರ್, ಶಹಾಪುರ

***

ಮಹಾಂತೇಶ್ವರ ಬೆಟ್ಟದಲ್ಲಿ ಹಲವು ವರ್ಷದಿಂದ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಅಲ್ಲಿನ ಪ್ರದೇಶಕ್ಕೆ ಭೇಟಿ ನೀಡಿದಾಗ ಭಯಾನಕ ಸತ್ಯ ಕಾಣಿಸುತ್ತದೆ. ನಿಸರ್ಗದ ಸಂಪತ್ತು ಕೊಳ್ಳೆ ಹೊಡೆದಿದ್ದಾರೆ

-ಮಾನಪ್ಪ ಹಾಲಬಾವಿ, ಗ್ರಾ.ಪಂ ಸದಸ್ಯ, ದೋರನಹಳ್ಳಿ

***

ಕಲ್ಲು ಗಣಿಕಾರಿಗೆ ಹಾಗೂ ಕಂಕರ್ ಸಾಗಣೆಕೆಯ ವಾಹನದಿಂದ ಹೆಚ್ಚಿನ ಧೂಳು ಆವರಿಸಿ ಅಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆ ಬೆಳೆಯದ ಸ್ಥಿತಿ ನಿರ್ಮಾಣವಾಗಿದೆ.

-ಹಣಮಂತ ಗಡ್ಡಿಮನಿ,ದೋರನಹಳ್ಳಿಗ್ರಾಮದ ಯುವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT