ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ₹52 ಕೋಟಿ ಅನುದಾನ: ಸಚಿವ ಕೃಷ್ಣಭೈರೇಗೌಡ

ಪ್ರಗತಿ ಪರಿಶೀಲನಾ ಸಭೆ
Last Updated 1 ಡಿಸೆಂಬರ್ 2018, 9:37 IST
ಅಕ್ಷರ ಗಾತ್ರ

ಯಾದಗಿರಿ: ‘ಬರ ನಿರ್ವಹಣೆಗೆ ಜಿಲ್ಲೆಗೆ ಪ್ರಸಕ್ತ ವರ್ಷದಲ್ಲಿ ಸರ್ಕಾರ ₹52 ಕೋಟಿ ಅನುದಾನ ಒದಗಿಸಿದ್ದು, 688 ಬರ ಪರಿಹಾರ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಸಂಸದೀಯ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

‘ಮೂಲ ಅನುದಾನದ ಜತೆಗೆ ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ಪ್ರತಿ ತಾಲ್ಲೂಕಿಗೆ ಟಾಸ್ಕ್‌ ಫೋರ್ಸ್‌ಗೆ ₹50 ಲಕ್ಷ ಅನುದಾನ ಒದಗಿಸಲಾಗಿದೆ ಹಾಗೂ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ₹7 ಕೋಟಿ ಅನುದಾನ ಮೀಸಲಿದೆ. ಇದರಿಂದ ಜಿಲ್ಲೆಯ ಬರ ಪರಿಹಾರ ನಿರ್ವಹಣೆಗೆ ಅನುದಾನ ಕೊರತೆ ಇಲ್ಲ. ಆದರೂ, ಅಧಿಕಾರಿಗಳು ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಿದ್ದಾರೆ. ಇರುವ ಅನುದಾನ ಬಳಕೆ ಮಾಡಿ. ಅನುದಾನ ಬಳಕೆಗೆ ನಿಯಮ ಅಡ್ಡಿಯಾದರೆ ಮಾತ್ರ ನಿಯಮ ಸಡಿಲಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರೆ ಸಮಸ್ಯೆ ಬಗೆ ಹರಿಸಲಾಗುವುದು’ ಎಂದರು.

‘688 ಬರ ಪರಿಹಾರ ಕಾಮಗಾರಿಗಳಲ್ಲಿ 475 ಕಾಮಗಾರಿಗಳಿಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿ ಸಿಕ್ಕಿದೆ. 231 ಕಾಮಗಾರಿಗಳಿಗೆ ಕರಾರು ಒಪ್ಪಂದ ನಡೆದಿದೆ. 244 ಕಾಮಗಾರಿಗಳನ್ನು ಡಿ.10ರೊಳಗಾಗಿ ಕರಾರು ಒಪ್ಪಂದ ನಡೆಯಲಿದೆ. ಡಿ25ರ ಒಳಗಾಗಿ 213 ಕಾಮಗಾರಿಗಳು ಕರಾರು ಒಪ್ಪಂದ ಮಾಡಲಾಗುವುದು’ ಎಂದು ನಗರ ಮತ್ತು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸರಬರಾಜು ಇಲಾಖೆ ಮುಖ್ಯ ಎಂಜಿನಿಯರ್‌ ರಾಜ್‌ಕುಮಾರ್ ಸಭೆಗೆ ಮಾಹಿತಿ ನೀಡಿದರು.

ಅಧಿಕಾರಿಯ ವಿವರಕ್ಕೆ ತೃಪ್ತರಾಗದ ಸಚಿವ ಕೃಷ್ಣಭೈರೇಗೌಡ,‘ ಬೃಹತ್‌ ಕಾಮಗಾರಿಗಳನ್ನು ಹೊರತುಪಡಿಸಿ ₹5ಲಕ್ಷದೊಳಗಿನ ಎಲ್ಲ ಕಾಮಗಾರಿಗಳನ್ನು ಇನ್ನೆರಡು ದಿನಗಳಲ್ಲಿ ಆರಂಭಿಸಬೇಕು’ ಎಂದು ಸೂಚಿಸಿದರು.

ಕುಡಿಯುವ ನೀರು ಪೂರೈಕೆ ಯೋಜನೆ ಮತ್ತು ಸಣ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ಇದರಿಂದ ಸರ್ಕಾರದ ಅನುದಾನ ಪ್ರತಿ ವರ್ಷವೂ ಜಿಲ್ಲೆಯಿಂದ ಸರ್ಕಾರದ ಬೊಕ್ಕಸಕ್ಕೆ ವಾಪಸ್ ಹೋಗುತ್ತಿದೆ. ಇದಕ್ಕೆ ಕಾರಣವೇನು ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಡಿಸೆಂಬರ್‌ ಒಳಗೆ ಕಾಮಗಾರಿ ಆರಂಭಕ್ಕೆ ತಾಕೀತು:
ಕುಡಿಯುವ ನೀರು ಮತ್ತು ಬರಪರಿಹಾರ ಕಾಮಗಾರಿಗಳನ್ನು ಡಿ.25ರೊಳಗಾಗಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ ಪಡೆದು ಆರಂಭಿಸಬೇಕು. ಮಾರ್ಚ್ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳಿಸಬೇಕು’ ಎಂದು ಸಚಿವರು ಗ್ರಾಮೀಣ ಕುಡಿಯುವ ನೀರು ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ವೈಫಲ್ಯ ಕಂಡಿವೆ. ಅನುದಾನ ಕೂಡ ಬಳಕೆ ಆಗಿಲ್ಲ. ಮೂರು ಯೋಜನೆಗಳು ಸ್ಥಗಿತಗೊಂಡಿವೆ. ಅವುಗಳ ಪುನಶ್ಚೇತನಕ್ಕೆ ಪ್ರಸಕ್ತ ವರ್ಷದಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಮಾನವ ದಿನ 27ಲಕ್ಷಕ್ಕೆ ಏರಿಕೆ:
ಬರದಿಂದ ಗುಳೆ ಹೆಚ್ಚುವ ಸಾಧ್ಯತೆ ಇದೆ. ಗುಳೆ ನಿಯಂತ್ರಿಸಲು ಖಾತ್ರಿ ಯೋಜನೆಯಡಿ ಕೇವಲ 15 ಸಾವಿರ ಮಾನವ ದಿನಗಳು ಸಾಲುವುದಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕಿಶನ್‌ ರಾಥೋಡ ಸಚಿವರಿಗೆ ಮನವರಿಕೆ ಮಾಡಿದರು.

ತಕ್ಷಣ ಸ್ಪಂದಿಸಿದ ಸಚಿವ ಕೃಷ್ಣಭೈರೇಗೌಡ,‘ಗುಳೆ ಅತ್ಯಂತ ಹೆಚ್ಚು ಇರುವ ರಾಜ್ಯದ ಏಕೈಕ ಜಿಲ್ಲೆ ಯಾದಗಿರಿ. ಗುಳೆ ನಿಯಂತ್ರಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಿತ್ಯ ಮಾನವ ದಿನಗಳನ್ನು 27ಸಾವಿರಕ್ಕೆ ಹೆಚ್ಚಿಸಿ ಸೃಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಖಾಸಗಿ ವಲಯದಲ್ಲಿ ದಿನಕ್ಕೆ ₹200 ಕೂಲಿ ಸಿಗುತ್ತಿದೆ. ಖಾತ್ರಿ ಯೋಜನೆಯಡಿ ವ್ಯಕ್ತಿಗೆ ₹ 249 ನೀಡಲಾಗುತ್ತಿದೆ. ಜನರು ಖಾತ್ರಿ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

ರೇಷ್ಮೆ , ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತರಾಟೆ:
ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಹಾಗೂ ತೋಟಗಾರಿಕೆ ಬೆಳೆ ಪ್ರದೇಶ ವಿಸ್ತೀರ್ಣಗೊಂಡಿಲ್ಲ. ಒಂದು ಎಕರೆಯಲ್ಲಿ ರೇಷ್ಮೆ ಬೆಳೆದರೆ ಸರ್ಕಾರ ₹90 ಸಾವಿರ ಸಹಾಯ ಧನ ನೀಡುತ್ತದೆ. ಬಿತ್ತನೆ ನಿರ್ವಹಣೆ ಖರ್ಚು ಉಳಿದರೆ ರೇಷ್ಮೆ ಉತ್ಪನ್ನ ರೈತರಿಗೆ ಸಂಪೂರ್ಣ ಲಾಭ ನೀಡಿದಂತೆ. ಆದರೆ, ಜಿಲ್ಲೆಯಲ್ಲಿ ಕನಿಷ್ಠ ಪ್ರಗತಿ ಕೂಡ ಇಲ್ಲ. ತೋಟಗಾರಿಕೆ ಯೋಜನೆಗಳು ಕೂಡ ರೈತರಿಗೆ ತಲುಪಿಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತಿಕ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಹುಡುಕಿಕೊಂಡು ಬರುವ ರೈತರಿಗಷ್ಟೇ ಸೌಲಭ್ಯ ಕಲ್ಪಿಸುವ ರೂಢಿ ನಿಮಗಿದೆ. ರೈತರ ಮನೆ ಬಾಗಿಲಿಗೆ ಹೋಗಿ ಸರ್ಕಾರದ ಸಹಾಯಧನ ಮತ್ತು ಸೌಲಭ್ಯ ಕುರಿತು ಮಾಹಿತಿ ನೀಡುವ ಕೆಲಸ ಮಾಡಬೇಕು’ ಎಂದು ಸಚಿವರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಂಸದ ಬಿ.ವಿ.ನಾಯಕ್, ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ, ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT