ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ: 15ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ ಆರೋಪ

ರಾಜನಕೋಳೂರು ಗ್ರಾ.ಪಂ ಅಧ್ಯಕ್ಷೆ, ಸದಸ್ಯರ ಆರೋಪ
Published : 24 ಆಗಸ್ಟ್ 2024, 13:37 IST
Last Updated : 24 ಆಗಸ್ಟ್ 2024, 13:37 IST
ಫಾಲೋ ಮಾಡಿ
Comments

ಹುಣಸಗಿ: ತಾಲ್ಲೂಕಿನ ರಾಜನಕೋಳೂರು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ವಿವಿಧ ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋತಿಬಾಯಿ ರಾಠೋಡ, ಉಪಾಧ್ಯಕ್ಷ ಪ್ರಭುಗೌಡ ಮಾಲಿ ಪಾಟೀಲ ಹಾಗೂ ಸದಸ್ಯರು ಆರೋಪಿಸಿದರು.

ಹುಣಸಗಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷೆ ಮೋತಿಬಾಯಿ ರಾಠೋಡ, ಗಾಮ ಪಂಚಾಯಿತಿ 15ನೇ ಹಣಕಾಸು ಯೋಜನೆಯಡಿ ಮಂಜೂರಾಗಿರುವ ಅನುದಾನದಲ್ಲಿ ಅಕ್ರಮ ನಡೆದಿದೆ. ಈ ಅಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನನ್ನ ಗಮನಕ್ಕೂ ತರದೆ ಹಾಗೂ ವಿವಿಧ ಕಾಮಗಾರಿಗಳನ್ನು ನಿರ್ವಹಿಸದೆ, ಒಂದೇ ಏಜನ್ಸಿಗೆ ಮೂರು ಬಾರಿ, ₹ 3 ಲಕ್ಷದವರೆಗೆ ಹಣ ಪಾವತಿ ಮಾಡಿದ್ದಾರೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ರಾಜನಕೋಳೂರು ಗ್ರಾಮದ ಸಿಆರ್‌ಸಿ ಕಟ್ಟಡ ದುರಸ್ತಿ ಹಾಗೂ ರಾಜನಕೊಳೂರು ತಾಂಡಾದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ದುರಸ್ತಿ ಹಾಗೂ ಪೆಂಟಿಂಗ್ ಹೆಸರಿನಲ್ಲಿ ಒಂದೇ ಬಾರಿಗೆ ಮೂರು ಬಾರಿ ಒಂದೇ ಏಜೆನ್ಸಿಗೆ ಹಣ ಸಂದಾಯ ಮಾಡಿದ್ದಾರೆ. ಸಣ್ಣ ಪುಟ್ಟ ಪೈಪ್‌ಲೈನ್ ದುರಸ್ತಿ ಕಾರ್ಯದ ಬಿಲ್ ಪಾವತಿ ಮಾಡುವುದಿದೆ ಎಂದು ಹೇಳಿ ನನ್ನ ಡೊಂಗಲ್ ಪಡೆದು ನನ್ನ ಗಮನಕ್ಕೆ ಬಾರದಂತೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು. ಬ್ಯಾಂಕ್‌ನಿಂದ ಹಣ ವರ್ಗಾವಣೆಯ ಕುರಿತು ನನ್ನ ಮೊಬೈಲ್‌ಗೆ ಯಾವುದೇ ಸಂದೇಶ ಬರದಂತೆ ಮಾಡಿದ್ದಾರೆ ಎಂದು ದೂರಿದರು.

ಗ್ರಾ.ಪಂ. ಉಪಾಧ್ಯಕ್ಷ ಪ್ರಭುಗೌಡ ಮಾತನಾಡಿ, ಹಲವು ಚೆಕ್‌ಗಳಿಗೆ ಹಣ ಮಾತ್ರ ನಮೂದಿಸಿ ಯಾವುದೇ ಏಜೆನ್ಸಿಗಳ ಹೆಸರು ಬರೆಯದೆ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರ ಸಹಿಗಾಗಿ ನೀಡಿದ್ದಾರೆ ಎಂದು ಚೆಕ್ ಪ್ರದರ್ಶಿಸಿದರು. ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಂಡಿಲ್ಲ. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳನ್ನೇ ನಡೆಸಿಲ್ಲ. ಈ ಕುರಿತು ಆಗಸ್ಟ್‌ 13ರಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ಮನವಿ ಸಲ್ಲಿಸಿದರೂ   ಯಾವುದೇ ಕ್ರಮ ಕೈಗೊಂಡಿಲ್ಲ. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿ ಮಾಡಿಲ್ಲ. ಕೂಲಿ ಕಾರ್ಮಿಕರು ಕೆಲಸಕ್ಕೆ ಬಾರದಿದ್ದರೂ ಕೆಲವರಿಗೆ ಹಣ ಪಾವತಿಸಿದ್ದಾರೆ ಎಂದು ಸದಸ್ಯ ಶಿವಲಿಂಗಪ್ಪ ದೊಡ್ಡಮನಿ ಆರೋಪಿಸಿದರು.

ಸುಮಾರು ₹18 ರಿಂದ ₹20 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗವಾಗಿದೆ. ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹುಣಸಗಿ ತಾಲ್ಲೂಕು ಪಂಚಾಯಿತಿ ಹಾಗೂ ಯಾದಗಿರಿ ಜಿಲ್ಲಾ ಪಂಚಾಯಿತಿ ಎದುರು ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸದಸ್ಯರಾದ ಅಮರೇಗೌಡ ಪೊಲೀಸ್ ಪಾಟೀಲ, ಲೋಕನಾಯಕ ಪವಾರ, ಬಸವರಾಜ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT