ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಪುನೀತ್ ರಾಜ್‌ಕುಮಾರ ಪ್ರೇರಣೆ: ನೇತ್ರದಾನಕ್ಕೆ ಹೆಚ್ಚಿದ ಜಾಗೃತಿ

ನಾಯಕ ನಟ ಪುನೀತ್‌ ರಾಜ್‌ಕುಮಾರ ನಿಧನ ನಂತರ ಹಲವರಿಂದ ನೇತ್ರದಾನ ಅರ್ಜಿಗೆ ಸಹಿ
Last Updated 9 ನವೆಂಬರ್ 2021, 4:50 IST
ಅಕ್ಷರ ಗಾತ್ರ

ಯಾದಗಿರಿ: ಕನ್ನಡ ಚಲನಚಿತ್ರ ನಾಯಕ ನಟ ಪುನೀತ್ ರಾಜ್‌ಕುಮಾರ ನಿಧನ ನಂತರ ಅವರ ಕಣ್ಣು ನಾಲ್ವರು ಅಂಧರಿಗೆ ಬೆಳಕು ನೀಡಿದ್ದು, ಈ ಬಗ್ಗೆ ಜಿಲ್ಲೆಯಲ್ಲಿಯೂ ನೇತ್ರದಾನಕ್ಕೆ ಹೆಚ್ಚಿನ ಜಾಗೃತಿ ಬಂದಿದೆ.

ನಿಧನ ನಂತರ ಮಣ್ಣಾಗಿ ಹೋಗುವ ಕಣ್ಣುಗಳನ್ನು ಅಂಧರಿಗೆ ದಾನ ಮಾಡಿರುವ ದಿ.ನಟ ಪುನೀತ್‌ ಅವರ ಪ್ರೇರೇಪಣೆ ಜಿಲ್ಲೆಯ ಜನರಿಗೆ ಆಗಿದೆ.

ಜಿಲ್ಲೆಯಲ್ಲಿ ಈಚೆಗೆ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ 52 ಜನ ನೇತ್ರದಾನ ಮಾಡುವ ಅರ್ಜಿಗೆ ಸಹಿ ಮಾಡುವ ಮೂಲಕ ‘ಅಪ್ಪು’ವಿನಿಂದ ಪ್ರೇರಣೆ ಪಡೆದಿದ್ದಾರೆ. ಅಲ್ಲದೆ ಜಿಲ್ಲೆಯ ವಿವಿಧ ಕಡೆಯೂ ಶಿಬಿರಗಳ ಮೂಲಕ ನೇತ್ರದಾನಕ್ಕೆ ಒಲವು ತೋರಿಸುತ್ತಿದ್ದಾರೆ.

ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ 1ರಂದು ಸಾರ್ವಜನಿಕ ಜಿಲ್ಲಾಸ್ಪತ್ರೆಯ ಸಿಬ್ಬಂದಿ ನೇತ್ರದಾನ ಮಾಡಲು ಒಪ್ಪಿಕೊಳ್ಳುವುದರ ಜೊತೆಗೆ 45 ಅರ್ಜಿ ತೆಗೆದುಕೊಂಡು ಹೋಗಿದ್ದಾರೆ. ಸೋಮವಾರ ಶಹಾಪುರ ತಾಲ್ಲೂಕಿನಲ್ಲಿ 15 ಜನರು ನೇತ್ರದಾನಕ್ಕೆ ಸಹಿ ಮಾಡಿದ್ದಾರೆ. ಈ ಮೂಲಕ ನೇತ್ರದಾನಕ್ಕೆ ಮುಂದಡಿ ಇಟ್ಟಂತೆ ಆಗಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ನೇತ್ರದಾನ ಅರಿವೇ ಇರಲಿಲ್ಲ. ನಟ ಪುನೀತ್‌ ನಿಧನ ನಂತರ ಅಂಧರಿಗೆ ಬೆಳಕು ನೀಡಿದ್ದರಿಂದ ಜಿಲ್ಲೆಯ ಜನತೆಯೂ ಅಪ್ಪುವಿನಂತೆ ದಾನ ಮಾಡಲು ಮುಂದೆ ಬಂದಿದ್ದಾರೆ.

81 ಜನ ನೋಂದಣಿ
ಜಿಲ್ಲೆಯಲ್ಲಿ ನೇತ್ರದಾನ ಮಾಡಲು ಅಧಿಕೃತವಾಗಿ 81 ಜನ ಮುಂದೆ ಬಂದಿದ್ದಾರೆ. ನೂರಾರು ಜನರು ಅರ್ಜಿ ತೆಗೆದುಕೊಂಡು ಹೋಗಿದ್ದು, ಹಲವರು ಇನ್ನೂ ಅರ್ಜಿ ಭರ್ತಿ ಮಾಡಿ ಹಿಂದುರುಗಿಸಿಲ್ಲ ಎನ್ನುತ್ತವೆ ಅಂಧತ್ವ ನಿವಾರಣೆ ಇಲಾಖೆ ಸಿಬ್ಬಂದಿ.

ನೋಂದಣಿ ಮಾಡದಿದ್ದರೂ ದಾನ
ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಬೇಕು ಎಂದಿಲ್ಲ. ನೋಂದಣಿ ಮಾಡದಿದ್ದರೂ ವ್ಯಕ್ತಿಯ ನಿಧನ ನಂತರ ಅವರ ಕುಟುಂಬವರು ಒಪ್ಪಿಗೆ ನೀಡಿದರೆ ಈ ಪ್ರಕ್ರಿಯೆಯನ್ನು ಮಾಡಬಹುದಾಗಿದೆ.

‘ನಟ ಪುನೀತ್‌ ನೇತ್ರದಾನ ಮಾಡಿದ್ದರಿಂದ ಹಲವರಿಗೆ ಈ ಬಗ್ಗೆ ಜಾಗೃತಿ ಬಂದಿದೆ. ನಾವು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮೂಢನಂಬಿಕೆಯಿಂದ ದಾನಕ್ಕೆ ಮುಂದಾಗುತ್ತಿರಲಿಲ್ಲ. ಈಗ ಹಲವರು ಮುಂದೆ ಬಂದಿದ್ದಾರೆ. ನೇತ್ರದಾನ ಮಾಡದಿದ್ದರೂ ವ್ಯಕ್ತಿಯ ಮರಣ ನಂತರ ಆರೋಗ್ಯ ಇಲಾಖೆ ಸಹಾಯವಾಣಿ 104ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು’ ಎನ್ನುತ್ತಾರೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ ಕುಮಾರ.

ರಾಜ್ಯದಲ್ಲಿ 32 ನೇತ್ರ ಬ್ಯಾಂಕ್‌ಗಳು ಸೇವೆ ಸಲ್ಲಿಸುತ್ತಿದ್ದು, ಅದರಲ್ಲಿ 7 ಬ್ಯಾಂಕುಗಳು ಸರ್ಕಾರಿ ಸ್ವಾಮ್ಯದಲ್ಲಿವೆ. ಒಬ್ಬ ವ್ಯಕ್ತಿ ಮರಣ ಹೊಂದಿದ್ದ 6 ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ.

ಯಾರೂ ನೇತ್ರದಾನ ಮಾಡಬಹುದು
ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು ಯಾವುದೇ ಬೇಧವಿಲ್ಲದೇ ಎಲ್ಲರೂ ನೇತ್ರದಾನ ಮಾಡಬಹುದು. ಕೆಲವರು ಮುಂದಿನ ಜನ್ಮದಲ್ಲಿ ಕುರುಡರಾಗಿ ಹುಟ್ಟುತ್ತಾರೆ ಎನ್ನುವ ಮೂಢನಂಬಿಕೆಯಿಂದ ನೇತ್ರದಾನ ಮಾಡಲು ಒಪ್ಪುವುದಿಲ್ಲ. ಇದೆಲ್ಲವನ್ನು ಬಿಟ್ಟು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ನೀಡುವಂತೆ ಆಗುತ್ತದೆ. ನೇತ್ರ ಸಂಗ್ರಹಣೆಗೆ 20 ನಿಮಿಷ ಮಾತ್ರ ಬೇಕಾಗುತ್ತದೆ.

***

ನೇತ್ರದಾನ ಮಾಡುವುದು ಹೇಗೆ?
ನೇತ್ರದಾನ ಮಾಡಲು ಮನಸ್ಸಿದ್ದರೂ ಅದನ್ನು ಹೇಗೆ ಮಾಡಬೇಕು ಎನ್ನುವ ಗೊಂದಲ ಹಲವರಲ್ಲಿ ಇರಬಹುದು. ಹೀಗಾಗಿ ಸರ್ಕಾರವೇ ಜೀವಸಾರ್ಥಕತೆ ವೆಬ್‌ಸೈಟ್‌ ಮಾಡಿದ್ದು, ಅಲ್ಲಿಯೇ ಹೆಸರು ನೋಂದಾಯಿಸಬಹುದಾಗಿದೆ.ವೆಬ್‌ಸೈಟ್‌ನಲ್ಲಿಯೇ ಅರ್ಜಿ ಲಭ್ಯವಿದೆ. ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಭರ್ತಿ ಮಾಡಬಹುದು.ನೇತ್ರದಾನ ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ www.jeevasarthakathe.gov.in ಗೆ ಭೇಟಿ ನೀಡಬಹುದು ಅಥವಾ 24X7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು.

***

ಈಗ ನೇತ್ರದಾನಕ್ಕೆ ಹೆಚ್ಚಿನ ಜಾಗೃತಿ ಬಂದಿದ್ದು, ಹಲವರು ನೇತ್ರದಾನಕ್ಕೆ ಮುಂದೆ ಬಂದಿದ್ದಾರೆ. ನೇತ್ರಗಳ ಸಂಗ್ರಹಣೆಯ ನಂತರ ಮೃತರ ಮುಖ ವಿಕಾರವಾಗುವುದಿಲ್ಲ
ಡಾ.ಭಗವಂತ ಅನವಾರ, ಅಂಧತ್ವ ನಿವಾರಣಾ ಅಧಿಕಾರಿ

***

ಜಿಲ್ಲಾಸ್ಪತ್ರೆಯಲ್ಲಿ ನೇತ್ರ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಜೊತೆಗೆ ಹಲವರು ಮಾಹಿತಿ ಪಡೆದು ಅರ್ಜಿಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ
ಶೇಕ್‌ ಶುಕುರ, ನೇತ್ರದಾಧಿಕಾರಿ, ಜಿಲ್ಲಾಸ್ಪತ್ರೆ

***

ಜಿಲ್ಲಾಸ್ಪತ್ರೆಯಲ್ಲಿರುವ ನೇತ್ರಾಲಯಕ್ಕೆ ಬಂದು ವಿದ್ಯಾರ್ಥಿಗಳು ನೇತ್ರದಾನದ ಅರ್ಜಿಗೆ ಸಹಿ ಮಾಡಿ ತೆರಳುತ್ತಿದ್ದಾರೆ. ಜಾಗೃತಿ ಮೂಡಿರುವುದು ಸಂತಸದಾಯಕ
ಅರವಿಂದ ಕುಮಾರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT