ಮಂಗಳವಾರ, ಜನವರಿ 28, 2020
21 °C
ಮಾವಿನ ಕೆರೆಯಲ್ಲಿ ಸಮರ್ಪಕವಾಗಿ ನಡೆಯದ ಹೂಳೆತ್ತುವ ಕಾಮಗಾರಿ, ಬೇಸಿಗೆಯಲ್ಲಿ ಸಂಕಷ್ಟ ತಂದಿದ್ದ ನೀರಿನ ಬವಣೆ

ಕಾಯಕಲ್ಪ ಕಾಣದೆ ಸೊರಗಿದ ಕೆರೆಗಳು

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ನಗರದ ಜನರ ಪಾಲಿಗೆ ಜೀವ ನದಿಯಂತೆ ಇರುವ ನಾಗರಕೆರೆ ಮತ್ತು ಮಾವಿನ ಕೆರೆಗಳು ಸೂಕ್ತ ಕಾಯಕಲ್ಪವಿಲ್ಲದೆ ಬರಡಾಗಿವೆ. ನೀರು ಸಂಗ್ರಹಿಸಿಕೊಳ್ಳಲು ನಗರಸಭೆಗೆ ಇಚ್ಛಾಶಕ್ತಿ ಕೊರತೆ ಕಾಡುತ್ತಿದ್ದು, ಕೆರೆಯಂಗಳ ಪಾಳು ಬಿದ್ದ ಕಂದಕವಾಗಿ ಮಾರ್ಪಟ್ಟಿದೆ.

ಕಳೆದ ಬೇಸಿಗೆ ಸಂದರ್ಭದಲ್ಲಿ ಅಂತರ್ಜಲ ಮಟ್ಟ ಕುಸಿತ ಉಂಟಾಗಿ ಕೆರೆಗೆ ಹೊಂದಿಕೊಂಡ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಎದುರಿಸಿದವು. ಕೊಳವೆಬಾವಿಗಳು ನೀರಿಲ್ಲದೇ ಬಣಗುಟ್ಟಿದವು. ಈಗ ಮತ್ತೆ ಬೇಸಿಗೆ ಆರಂಭವಾಗುತ್ತಿದ್ದು, ಹಿಂದಿನ ಸಂದರ್ಭ ಪುನರಾರ್ವನೆಯಾಗುವ ಸಾಧ್ಯತೆ ಹೆಚ್ಚಿದೆ.

ಕಳೆದ ಬೇಸಿಗೆಯಲ್ಲಿ ಮಹತ್ವಕಾಂಕ್ಷಿ ಯೋಜನೆಯಡಿ ನಗರದ ಮಾವಿನ ಕೆರೆಯಲ್ಲಿ ಹೂಳೆತ್ತುವ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಜನರ ನಿರಾಸಕ್ತಿ ಹಾಗೂ ಅಧಿಕಾರಿಗಳ ನಿಷ್ಕಾಳಜಿ ಪರಿಣಾಮ ಕೆರೆಯಂಗಳಲ್ಲಿ ಅರೆ–ಬರೆ ಹೂಳು ಹಾಗೆಯೇ ಉಳಿಯಿತು. ಕೆರೆಯಂಗಳ ಕಂದಕವಾಯಿತು. ಅಲ್ಲಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಅಲ್ಲದೆ ಕೆರೆಯ ಸುತ್ತಲೂ ವಾಯು ವಿಹಾರಕ್ಕಾಗಿ ಫರ್ಸಿ ಹಾಸಿ, ವಿಶ್ರಾಂತಿಗೆ ಬೆಂಚ್ ಹಾಗೂ ವೀಕ್ಷಣೆಯ ಗೋಪುರ ನಿರ್ಮಿಸಿದ್ದರು. ಈಗ ಅಲ್ಲಿ ಜಾಲಿ ಗಿಡಗಳದ್ದೇ ದರ್ಬಾರಾಗಿ ಮಾರ್ಪಟ್ಟಿದೆ. ಸರಿಯಾದ ನಿರ್ವಹಣೆ ಇಲ್ಲದೆ ಪ್ರವಾಸಿ ತಾಣದ ಕೇಂದ್ರದಿಂದ ನಗರದ ಜನ ವಂಚಿತಗೊಂಡಿದ್ದಾರೆ.

ನಗರಕ್ಕೆ ಹೊಂದಿಕೊಂಡಿರುವ ನಾಗರಕೆರೆಗೆ ಪ್ರತಿ ವರ್ಷ ವಿವಿಧ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹರಿದು ಬಂದರೂ ಕಾಮಗಾರಿ ಸರ್ಮಪವಾಗಿ ನಿರ್ವಹಣೆ ಆಗುತ್ತಿಲ್ಲ. ಕೆರೆ ಒತ್ತುವರಿ ಆಗಿದೆ. ಮಳೆಯ ನೀರು ಸಂಗ್ರಹವಾಗಬಾರದು ಎಂಬ ದೂರಾಲೋಚನೆ ಯಿಂದ ಕೆಲವರು ಕೆರೆಯ ಕೋಡಿಯನ್ನು ಒಡೆದು ನೀರು ಹರಿಬಿಡುವುದು ಹಲವು ವರ್ಷದಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಇದರ ನೇರ ಪರಿಣಾಮ ಜನರು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಾರೆ.

‘ನೀರು ಸಂಗ್ರಹಕ್ಕೆ ಪ್ರಾಮಾಣಿಕ ಯತ್ನವನ್ನು ಒಬ್ಬ ಅಧಿಕಾರಿಯೂ ಮಾಡುತ್ತಿಲ್ಲ. ನಾಗರಕೆರೆ ಮತ್ತು ಮಾವಿನಕೆರೆಯಲ್ಲಿ ಸಮರ್ಪಕವಾಗಿ ನೀರು ಸಂಗ್ರಹಗೊಂಡರೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದು’ ಎನ್ನುತ್ತಾರೆ ನಗರದ ನಿವಾಸಿಗಳು.

1992ರಲ್ಲಿ ಚಂದ್ರಶೇಖರ ಆರಬೋಳ ಅವರು ಪುರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಶಹಾಪುರವು ರಾಜ್ಯದಲ್ಲೇ ಉತ್ತಮ ಪುರಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪ್ರಶಸ್ತಿ ಗಳಿಸಿತ್ತು. ಆಗ 40 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ನಗರದ ಹೊರವಲಯದ ಫಿಲ್ಟರ್ ಬೆಡ್ ಬಳಿ 40 ಎಕರೆ ಜಮೀನು ಖರೀದಿಸಿ ಅದರಲ್ಲಿ 20 ಎಕರೆಗೂ ಹೆಚ್ಚು ವಿಶಾಲವಾದ ಪ್ರದೇಶದಲ್ಲಿ ಕೆರೆ ನಿರ್ಮಿಸಿ, ಶಹಾಪುರ ಶಾಖಾ ಕಾಲುವೆ (ಎಸ್‌ಬಿಸಿ) ಮೂಲಕ ಕೆರೆಗೆ ನೀರು ತುಂಬಿಸಲಾಗುತಿತ್ತು. ನಂತರ, ನಗರಕ್ಕೆ ನೀರು ಪೂರೈಸುವ ವ್ಯವಸ್ಥೆ 30 ವರ್ಷದಿಂದ ಸಾಗುತ್ತಾ ಬಂದಿದೆ. ಇಂದಿಗೂ ಶಾಶ್ವತ ಕುಡಿಯುವ ನೀರಿನ ಯೋಜನೆ ಮಾತ್ರ ಕಡತದಲ್ಲಿ ಉಳಿದುಕೊಂಡಿದೆ. ‘21 ಕಿ.ಮೀ ದೂರದ ಭೀಮಾ ನದಿಯಿಂದ ನಗರಕ್ಕೆ ನೀರು ಪೂರೈಕೆ ಭಾಗ್ಯ 30 ವರ್ಷದಿಂದ ದೊರಕಿಲ್ಲ’ ಎನ್ನುತ್ತಾರೆ ನಗರದ ನಿವಾಸಿ ಸುನಿಲ ಶಿರ್ಣಿ.

ಸದ್ಯ 61,982 ಜನಸಂಖ್ಯೆ ಹೊಂದಿರುವ ನಗರಸಭೆಗೆ ನೀರು ಪೂರೈಕೆ ಸವಾಲಾಗಿ ಪರಿಣಮಿಸಿದೆ. ತುಂಬಾ ಹಳೆಯದಾದ ಬೀಡ ಪೈಪ್ (ಸಿಮೆಂಟ್) ಅಳವಡಿಸಿದ್ದಾರೆ. ನೀರಿನ ರಭಸಕ್ಕೆ ಇಲ್ಲವೆ ತಗ್ಗು ಪ್ರದೇಶದಲ್ಲಿ ವಾಹನ ಸಂಚರಿಸಿದಾಗ ಪೈಪ್‌ ಒಡೆದರೆ ದುರಸ್ತಿ ಮಾಡಲು ಆಗದ ಸ್ಥಿತಿ ಇದೆ. ಕಬ್ಬಿಣ ಇಲ್ಲವೆ ಪ್ಲಾಸ್ಟಿಕ್ ಪೈಪ್‌ ಅಳವಡಿಸಿದರೆ ಸೋರಿಕೆಯ ಭಾಗವನ್ನು ತೆಗೆದು ದುರಸ್ತಿ ಮಾಡಬಹುದು. ಇದು ನಗರಸಭೆಗೆ ದೊಡ್ಡ ತಲೆನೋವಾಗಿದೆ. ‘4 ಕಡೆ ನೀರು ಸಂಗ್ರಹಿಸುವ ದೊಡ್ಡದಾದ ಟ್ಯಾಂಕ್ (ಓವರ್ ಹೆಡ್) ಇವೆ. ಅಲ್ಲದೇ ಇಂದಿರಾ ನಗರದ ಬಡಾವಣೆಯಲ್ಲಿ ಇನ್ನೊಂದು ನಿರ್ಮಿಸುತ್ತಿದ್ದಾರೆ’ ಎನ್ನುತ್ತಾರೆ ನಗರ ನಿವಾಸಿ ವಸಂತ ಸುರಪುರಕರ್.

ನಗರಕ್ಕೆ ನೀರಿನ ಬವಣೆ ನೀಗಿಸಬೇಕಾದರೆ ತುರ್ತಾಗಿ ಈ ಎರಡು ಕೆರೆಗಳಿಗೆ ನೀರು ತುಂಬಿಸಬೇಕು. ಭೀಮಾ ನದಿಯಿಂದ ನಗರಕ್ಕೆ ನೀರು ಪೂರೈಸುವ ಶಾಶ್ವತ ಯೋಜನೆ ಅನುಷ್ಠಾನಗೊಳಿಸಿದರೆ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಿಹೊಂದಲು ಸಾಧ್ಯ ಎಂದು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು