ಶುಕ್ರವಾರ, ಜನವರಿ 27, 2023
27 °C

ಉದ್ಯೋಗ ಖಾತ್ರಿ ಕಾಮಗಾರಿ: ಬತ್ತಿದ ಬಾವಿಯಲ್ಲಿ ಚಿಮ್ಮಿದ ನೀರು

ತೋಟೇಂದ್ರ ಎಸ್ ಮಾಕಲ್ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ಸಮೀಪದ ಅಲ್ಲಿಪುರ ಗ್ರಾಮದಲ್ಲಿ ಹಲವು ದಶಕಗಳಿಂದ ಮುಚ್ಚಿಹೋಗಿದ್ದ ತೆರೆದ ಬಾವಿಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಇದೀಗ ಬಾವಿಯಲ್ಲಿ ನೀರು ಚಿಮ್ಮಿದ್ದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿದೆ.

ಗ್ರಾಮದ ಹೊರವಲಯದ ಕೆರೆಯ ಪಕ್ಕದಲ್ಲಿರುವ ದೊಡ್ಡದಾದ ‘ಊರ ಬಾವಿ’ಯಲ್ಲಿ ಹಲವು ದಶಕಗಳಿಂದ ಕಸ, ಕಡ್ಡಿ, ಕಲ್ಲು, ಮಣ್ಣು ತುಂಬಿಕೊಂಡಿತ್ತು. ಬಾವಿ ಸುತ್ತಲೂ ಖಾಲಿ ಜಾಗದಲ್ಲಿ ಗ್ರಾಮಸ್ಥರು ಅಕ್ರಮವಾಗಿ ತಿಪ್ಪೆ ಗುಂಡಿಗಳನ್ನು ನಿರ್ಮಿಸಿದ್ದರು.

ಯುವಕರ ಬೆಂಬಲದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಹಾಲಗೇರಿ ಇಚ್ಛಾಶಕ್ತಿಯಿಂದ ಉದ್ಯೋಗ ಖಾತ್ರಿ ಕಾಮಗಾರಿ ನಡೆಸಿ ಹಾಳು ಬಿದ್ದ ಬಾವಿಯನ್ನು ಸ್ವಚ್ಛಗೊಳಿಸಲಾಗಿದೆ. ಇದೀಗ ಬಾವಿಯಲ್ಲಿ ಮತ್ತೆ ನೀರು ಶೇಖರಣೆಗೊಂಡಿದೆ.

ಕೊರೊನಾ ಪರಿಣಾಮ ಗ್ರಾಮದಲ್ಲಿ ನಿರುದ್ಯೋಗಿ ಯುವಕರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬಾವಿ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡು ಮಾದರಿ ಕೆಲಸ ಮಾಡಿದ್ದನ್ನು ಕಂಡು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

20 ಅಡಿ ಆಳ, 80 ಅಡಿ ಅಗಲ, 100 ಅಡಿ ಉದ್ದವಿರುವ ಬಾವಿಯನ್ನು ಸ್ವಚ್ಛಗೊಳಿಸಲು 784 ಮಾನವ ದಿನಗಳು, ಕಲ್ಲಿನ ಗೋಡೆ, ಮೆಟ್ಟಿಲು ನಿರ್ಮಾಣಕ್ಕೆ ₹7.84 ಲಕ್ಷ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಪಂಚಾಯಿತಿ ಆಡಳಿತಾಧಿಕಾರಿ ಗ್ರಾಮಕ್ಕೆ ಆಗಮಿಸಿದಾಗ ಮುಚ್ಚಿದ ಬಾವಿಯನ್ನು ಗಮನಿಸಿ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಸ್ವಚ್ಛಗೊಳಿಸುವಂತೆ ಸಲಹೆ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಬಾವಿ ಸ್ವಚ್ಛಗೊಳಿಸಿದ್ದು, ನೀರು ತುಂಬಿ ಹರಿಯುತ್ತಿದೆ’ ಎಂದು ಅಭಿವೃದ್ಧಿ ಅಧಿಕಾರಿ ಶರಣಪ್ಪ ಹಾಲಗೇರಿ ಸಂತಸ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು