ಭಾನುವಾರ, ಸೆಪ್ಟೆಂಬರ್ 26, 2021
24 °C
ತಾಂತ್ರಿಕ ತರಬೇತಿ ಕಾರ್ಯಾಗಾರದಲ್ಲಿ ಅಧಿಕಾರಿಗಳತ್ತ ಚಾಟಿ ಬೀಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ

ಖಾತ್ರಿ ಕೆಲಸ ಅಂದ್ರೆ ಜನ ಮೂಗು ಮುರಿತಾರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಯಾದಗಿರಿ: ‘ನರೇಗಾ ಯೋಜನೆಯಡಿ ಕಾಮಗಾರಿ ಅನುಷ್ಠಾನ ನಿಯಮಗಳನ್ನು ಅಧ್ಯಯನ ಮಾಡದೆ ಕಾಮಗಾರಿ ನಡೆಸಲಾಗಿದೆ. ಇಂಥಾ ಕಾಮಗಾರಿಗಳಿಗೆ ಕೂಲಿಹಣ ಬಿಡುಗಡೆ ಮಾಡಲು ತಾಂತ್ರಿಕದೋಷಗಳು ಎದುರಾಗಿವೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಕಾಮಗಾರಿಗೆ ಬೆವರು ಹರಿಸಿದ ಕೂಲಿಕಾರ್ಮಿಕರಿಗೆ ಕೂಲಿ ದಕ್ಕಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಬುಧವಾರ ಹಮ್ಮಿಕೊಂಡಿದ್ದ ಖಾತ್ರಿ ಯೋಜನೆ ತರಬೇತಿ ಕಾರ್ಯಾಗಾರದಲ್ಲಿ ಅಧಿಕಾರಿಗಳತ್ತ ಚಾಟಿ ಬೀಸಿದರು.

‘ಖಾತ್ರಿ ಯೋಜನೆ ಕಾಮಗಾರಿ ಅಂದ ತಕ್ಷಣ ಜನರು ಬೆಚ್ಚಿಬೀಳುತ್ತಾರೆ. ಉಪವಾಸವಾದರೂ ಇದ್ದೇವು. ವರ್ಷವಾದರೂ ಕೂಲಿ ದಕ್ಕದ ಕೆಲಸ ಬೇಡ ಎಂದು ಕೂಲಿಕಾರ್ಮಿಕರು ಹಿಂದೇಟು ಹಾಕುತ್ತಾರೆ. ಇದರಿಂದ, ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ ಸಫಲವಾಗುತ್ತಿಲ್ಲ. ಇದಕ್ಕೆ ಕಾಮಗಾರಿ ಅನುಷ್ಠಾನಾಧಿಕಾರಿಗಳೇ ನೇರ ಹೊಣೆಗಾರರಾಗಿದ್ದಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಸುರಪುರ ತಾಲ್ಲೂಕಿನಲ್ಲಿ 2015-16ನೇ ಸಾಲಿನಲ್ಲಿ ಮುಗಿದ ಕಾಮಗಾರಿಗಳ ಹಣ ಬಿಡುಗಡೆ ಆಗಿಲ್ಲ. ಕಾಮಗಾರಿಗಳಲ್ಲಿ ದುಡಿದ ಕೂಲಿ ಕಾರ್ಮಿಕರಿಗೆ ಕೂಲಿ ನೀಡಿಲ್ಲ. ಕಾಮಗಾರಿ ಅನುಷ್ಠಾನ ಸಂದರ್ಭದಲ್ಲೇ ಅಧಿಕಾರಿಗಳು ನಿಯಮಗಳನ್ನು ಪಾಲಿಸದೇ ಇರುವುದು ಇದಕ್ಕೆ ಕಾರಣವಾಗಿದೆ. ಈ ಕುರಿತು ಅಧಿಕಾರಿಗಳ ಮಾಡಿರುವ ತಾಂತ್ರಿಕ ತಪ್ಪುಗಳು ಯಾವುವು? ಅವುಗಳನ್ನು ಸರಿಪಡಿಸಲು ಸಾಧ್ಯವೇ? ಎಂಬುದಾಗಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಬೇಕಿದೆ’ ಎಂದು ರಾಜಶೇಖರ್‌ ಗೌಡ ಜಿಲ್ಲಾ ಪಂಚಾಯಿತಿ ಸಿಇಒ ಕವಿತಾ ಎಸ್. ಮನ್ನಿಕೇರಿ ಅವರಿಗೆ ಸೂಚಿಸಿದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಿಶನ್‌ ರಾಥೋಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಲಿಂಗಪ್ಪ ಪುಟಗಿ, ಬಸವರಾಜ ಯಡಿಯಾಪುರ ಅವರು ಉದ್ಯೋಗ ಖಾತ್ರಿ ಯೋಜನೆ ವೈಫಲ್ಯ ಕುರಿತು ಅಧಿಕಾರಿಗಳ ವಿರುದ್ಧ ದೂರುಗಳ ಮಳೆ ಸುರಿಸಿದರು. ತರಬೇತಿ ಕಾರ್ಯಾಗಾರ ಒಂದು ರೀತಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯ ಸ್ವರೂಪ ಪಡೆಯಿತು.

‘ಕಾಮಗಾರಿ ಪೂರ್ಣಗೊಂಡು ಕಾರ್ಮಿಕರ ಕೂಲಿಹಣ ಬಾಕಿ ಇವೆ. ಅಂತಹ ಕಾಮಗಾರಿಗಳ ಬಾಕಿ ಹಣವನ್ನು ಒಂದು ವಾರದಲ್ಲಿ ವಿತರಣೆ ಆಗುವಂತೆ ಕ್ರಮವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಯಡಿಯಾಪುರ ಆಗ್ರಹಿಸಿದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಿಶನ್‌ ರಾಥೋಡ,‘ ಜಿಲ್ಲಾ ಪಂಚಾಯಿತಿ ಯೋಜನೆಗಳಲ್ಲಿ ಬೃಹತ್‌ ಅನುದಾನ ಇರುವ ಯೋಜನೆ ನರೇಗಾ ಆಗಿದೆ. ಗುಳೆ ತಪ್ಪಿಸುವ ಉದ್ದೇಶದಿಂದಲೇ ಈ ಯೋಜನೆ ಜಾರಿಗೊಂಡಿದೆ. ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಗುಳೆ ಹೋಗುವ ಜಿಲ್ಲೆ ನಮ್ಮದಾಗಿದೆ. ಇಲ್ಲಿ ಈ ಯೋಜನೆ ಯಶಸ್ವಿ ಆಗಬೇಕಿತ್ತು. ಆದರೆ, ವೈಫಲ್ಯ ಕಂಡಿದೆ. ಇದಕ್ಕೆ ಯಾರು ಕಾರಣ?’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಪುಟಗಿ ‘ಅಧಿಕಾರಿಗಳು ಯೋಜನಾ ನಿಯಮಗಳನ್ನು ಉಲ್ಲಂಘಿಸಿರುವ ಪರಿಣಾಮ ಖಾತ್ರಿ ಯೋಜನೆ ಕುಂಠಿತಕ್ಕೆ ಕಾರಣವಾಗಿದೆ. ಹಾಗಾಗಿ, ಈ ಯೋಜನೆ ಎಂದೊಡನೆ ಕಾರ್ಮಿಕರು ಮೂಗು ಮುರಿಯುವಂತಾಗಿದೆ. ಇನ್ನು ಮುಂದೆ ಇಂಥಾ ತಪ್ಪುಗಳು ಆಗಬಾರದು ಎಂಬ ಉದ್ದೇಶದಿಂದ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ಅಧಿಕಾರಿಗಳು ಪಾಲಿಸಬೇಕಾದ ನಿಯಮ, ದಾಖಲೆಪತ್ರಗಳ ಸಂಗ್ರಹ, ಅನುಸರಿಸಬೇಕಾದ ಕ್ರಮ ಕುರಿತು ತರಬೇತಿ ನೀಡಲಾಗುವುದು. ಯೋಜನೆಗಳ ಅನುಷ್ಠಾನಾಧಿಕಾರಿಗಳು ಈ ತರಬೇತಿ ಪಡೆದ ನಂತರವೂ ತಪ್ಪುಗಳನ್ನು ಎಸಗಿದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾರಾಯಣ ದೇವಲನಾಯ್ಕ, ಅಮರದೀಪ್‌, ಯಾದಗಿರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾಷು ಎಸ್. ರಾಠೋಡ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು