ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಾದ್ಯಂತ ನವರಾತ್ರಿ ಉತ್ಸವಕ್ಕೆ ಚಾಲನೆ

ಭವಾನಿ ದೇವಿ ಗಂಗಾ ಸ್ನಾನ ಮೆರವಣಿಗೆ, ಗಮನಸೆಳೆದ ಕುದುರು ಕುಣಿತ
Published 16 ಅಕ್ಟೋಬರ್ 2023, 8:30 IST
Last Updated 16 ಅಕ್ಟೋಬರ್ 2023, 8:30 IST
ಅಕ್ಷರ ಗಾತ್ರ

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ದೇವಸ್ಥಾನ, ಮಠ, ಮಂದಿರಗಳಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಮೂರ್ತಿ ಪ್ರತಿಷ್ಠಾಪನೆ:

ನವರಾತ್ರಿ ಅಂಗವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗಾಂಧಿನಗರ ತಾಂಡಾ, ಚಕ್ರಕಟ್ಟ, ಬೆಟ್ಟ, ಗಂಜ್‌ ಪ್ರದೇಶ ಸೇರಿದಂತೆ ವಿವಿಧ ಕಡೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ, ಹವನ, ಹೋಮ ಮಾಡಲಾಯಿತು.

ಹಿಂದೂ ಸೇವಾ ಸಮಿತಿ:

ನಗರದ ಹಿಂದೂ ಸೇವಾ ಸಮಿತಿಯಿಂದ ಗಿರಿನಾಡಿನ ದಸರಾ ಉತ್ಸವಕ್ಕೆ ಚಾಲನೆ ನೀಡಲಾಯಿತು. ಈ ಅಂಗವಾಗಿ ಭವಾನಿ ದೇವಿಯನ್ನು ನಗರ ಹೊರವಲಯದ ಭೀಮಾ ನದಿಗೆ ತೆಗೆದುಕೊಂಡು ಹೋಗಿ ಗಂಗಾಸ್ನಾನ ಮಾಡಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಭೀಮಾ ನದಿಯಿಂದ ಹಳೆಯ ಬಸ್‌ ನಿಲ್ದಾಣ, ನೇತಾಜಿ ಸುಭಾಶ್ಚಂದ್ರ ಬೋಸ್‌ ವೃತ್ತ, ಲಾಲ್‌ ಬಹಾದ್ದೂರ್‌ ಶಾಸ್ತ್ರಿ ವೃತ್ತದಿಂದ ಭವಾನಿ ದೇವಸ್ಥಾನದ ವರೆಗೆ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಸಾಗಿತು.

ಕುದುರೆ ಕುಣಿತ:

ಮೆರವಣಿಗೆ ವೇಳೆ ಕುದುರೆ ಕುಣಿತ ಜನಾಕರ್ಷಿಸಿತು. ಹಲಗೆ ನಾದಕ್ಕೆ ತಕ್ಕಂತೆ ಶ್ವೇತ ಅಶ್ವ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಟ್ರ್ಯಾಕ್ಟರ್‌ನಲ್ಲಿ ಅಲಂಕಾರ:

ಭವಾನಿ ದೇವಿ ಮೂರ್ತಿಯನ್ನು ಸಿಂಗರಿಸಿದ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮೂಲಕ ಗಂಗಾ ಸ್ನಾನಕ್ಕೆ ಕರೆದೊಯ್ದು ಮಂದಿರದ ಬಳಿಗೆ ಕರೆತರಲಾಯಿತು.

ಟ್ರ್ಯಾಕ್ಟರ್‌ನಲ್ಲಿ ದೇವಿ ಮೂರ್ತಿಯನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಯುವಕರು ಕೇಸರಿ ಶಾಲು ಧರಿಸಿದ್ದರೆ, ಯುವತಿಯರು ಕಳಸ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಡೊಳ್ಳು ಕುಣಿತ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡೊಳ್ಳು ಕುಣಿತ ಆಯೋಜಿಸಲಾಗಿದ್ದು, ದಾರಿಯುದ್ದಕ್ಕೂ ಡೊಳ್ಳಿನ ಶಬ್ದಕ್ಕೆ ಯುವಕರು ನೃತ್ಯ ಮಾಡಿದರು.

ವಿದ್ಯುತ್‌ ದೀಪಗಳ ಅಲಂಕಾರ:

ದಸರಾ ಅಂಗವಾಗಿ ಲಾಲ್‌ಬಹಾದ್ದೂರ್‌ ಶಾಸ್ತ್ರಿ ವೃತ್ತದಿಂದ ಭವಾನಿ ದೇವಸ್ಥಾನದ ವರೆಗೆ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ವೃತ್ತದಲ್ಲಿ ಬೃಹದಾಕಾರ ಸ್ವಾಗತ ಕಮಾನು ಅಳವಡಿಸಲಾಗಿದೆ.

ದಾಂಡಿಯಾ ನೃತ್ಯ ಆಕರ್ಷಣೆ:

ಹಿಂದೂ ಸೇವಾ ಸಮಿತಿಯಿಂದ ಭವಾನಿ ಮಂದಿರದಲ್ಲಿ ಪ್ರತಿದಿನ ರಾತ್ರಿ 9ರಿಂದ12 ವರೆಗೆ ನಡೆಯುವ ದಾಂಡಿಯಾ ನೃತ್ಯ ಗಮನ ಸೆಳೆಯುತ್ತದೆ.

ಯಾದಗಿರಿ ನಗರದ ಹಿಂದೂ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ ಗಿರಿನಾಡಿನ ದಸರಾ ಉತ್ಸವದ ಮೆರವಣಿಗೆಯಲ್ಲಿ ಕುದುರೆ ಕುಣಿತ ಆಕರ್ಷಿಸಿತು
ಯಾದಗಿರಿ ನಗರದ ಹಿಂದೂ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ ಗಿರಿನಾಡಿನ ದಸರಾ ಉತ್ಸವದ ಮೆರವಣಿಗೆಯಲ್ಲಿ ಕುದುರೆ ಕುಣಿತ ಆಕರ್ಷಿಸಿತು
ಯಾದಗಿರಿ ತಾಲ್ಲೂಕಿನ ತಾಲ್ಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಭಗುಳಾಂಬಿಕಾ ದೇವಿಯ ಮೂರ್ತಿಗೆ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ವಿಶೇಷ ನೆರವೇರಿಸಿದರು
ಯಾದಗಿರಿ ತಾಲ್ಲೂಕಿನ ತಾಲ್ಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಭಗುಳಾಂಬಿಕಾ ದೇವಿಯ ಮೂರ್ತಿಗೆ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ವಿಶೇಷ ನೆರವೇರಿಸಿದರು

ಬೆಟ್ಟದಲ್ಲಿ ನವರಾತ್ರಿ ಸಂಭ್ರಮ

ಯಾದಗಿರಿ ನಗರದ ಬೆಟ್ಟದಲ್ಲಿನ ಭುವನೇಶ್ವರಿ ದೇವಿ ಮಂದಿರದಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆ ಹಾಗೂ ಹೋಮ ಹವನಗಳು ನಡೆದವು. ಮಕ್ಕಳ ನೃತ್ಯ ಗಾಯನ ವಚನ ಗಾಯನ ಭರತನಾಟ್ಯ ಶಿವತಾಂಡವ ನೃತ್ಯ ಜಾನಪದ ನೃತ್ಯ ಮಕ್ಕಳ ವೇಷಭೂಷಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿದ್ದು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಅಲ್ಲದೇ ತತ್ವಪದ ಭಕ್ತಿಗೀತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

‘ಆದಿಶಕ್ತಿ ಆರಾಧಿಸುವ ಪರಂಪರೆ’

ಯಾದಗಿರಿ: ‘ದುರ್ಗಾಮಾತೆಯು ಅತ್ಯಂತ ಶಕ್ತಿಶಾಲಿಯಾದ ದೇವತೆಯಾಗಿದ್ದು ಅವಳನ್ನು ಆದಿಶಕ್ತಿ ಎಂದು ಕರೆಯಲಾಗುತ್ತದೆ. ಈ ಆದಿಶಕ್ತಿಯನ್ನು ಕಾಳಿ ಪಾರ್ವತಿ ಗೌರಿ ಮಹಾಮಾಯಿ ಮುಂತಾದ ರೂಪಗಳಲ್ಲಿ ಆರಾಧಿಸುವ ಪರಂಪರೆ ನಮ್ಮದಾಗಿದೆ’ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ನುಡಿದರು. ತಾಲ್ಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ 9 ದಿನಗಳವರೆಗೆ ಮಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಭಗುಳಾಂಬಿಕಾ ದೇವಿಯ ಮೂರ್ತಿಗೆ ವಿಶೇಷ ಕುಂಕುಮಾರ್ಚಾನೆ ಪ್ರಾರ್ಥನೆ ನೆರವೇರಿಸಿ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನವರಾತ್ರಿ ಉತ್ಸವದಲ್ಲಿ ಪ್ರತಿಯೊಬ್ಬರು ಶ್ರದ್ಧೆ ಮತ್ತು ಭಕ್ತಿಗಳಿಂದ ಭಗುಳಾಂಬಿಕೆಯನ್ನು ಭಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದರು. ದುರ್ಗಾಮಾತೆಯನ್ನು ಶೈಲಪುತ್ರಿ ಬ್ರಹ್ಮಚಾರಿಣಿ ಚಂದ್ರಘಟದೇವಿ ಕೂಷ್ಮಾಂಡಿನಿ ದೇವಿ ಸ್ಕಂದಮಾತೆ ಕಾತ್ಯಾಯಿನಿ ಕಾಳರಾತ್ರಿ ಮಹಾಗೌರಿ ಸಿದ್ಧಿರಾತ್ರಿ ಹೀಗೆ ಒಂದೊಂದು ಹೆಸರಿನಲ್ಲಿ ನವರಾತ್ರಿಯ 9 ದಿನಗಳ ಕಾಲ ಭಕ್ತಿಯಿಂದ ಭಜಿಸಿದಲ್ಲಿ ಅವಳು ಭಕ್ತರ ಮನೋಕಾಮನೆಗಳನ್ನು ಈಡೇರಿಸುತ್ತಾಳೆ ಎಂದರು. ವಿವಿಧ ಗ್ರಾಮಗಳ ಕಲಾವಿದರಿಂದ ಚೌಡಕಿ ಹಾಡುಗಳು ಡೊಳ್ಳು ಕುಣಿತ ಕೋಲಾಟ ಕಣಿ ಹಲಗೆ ಮತ್ತು ದಾಂಡಿಯಾ ನೃತ್ಯ ಜರುಗಿತು. ವಿವಿಧ ಗ್ರಾಮಗಳ ಭಜನಾ ತಂಡದವರಿಂದ ಭಜನೆ ನಡೆಯಿತು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ದೇವಿಯ ಪಾರಾಯಣ ಮಾಡಿದರು. ಬಸವರಾಜ ಶಾಸ್ತ್ರಿ ಎಲೆಕೂಡಗಿ ಪೌರೋಹಿತ್ಯ ವಹಿಸಿ ವಿಶೇಷ ಪೂಜೆ ನೆರವೇರಿಸಿ ಕೊಟ್ಟರು. ಪಂಚ ಮಹಾ ಮಂಗಳಾರತಿ ನಂತರ ಸಹಸ್ರಾರು ಭಕ್ತರಿಗೆ ವಿಶೇಷ ಪ್ರಸಾದ ಉಣಬಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT