ಗುರುವಾರ , ಸೆಪ್ಟೆಂಬರ್ 23, 2021
24 °C
ಸಂಪೂರ್ಣ ಲಸಿಕಾಕರಣಕ್ಕೆ ಶ್ರಮಿಸಲು ಜಿ.ಪಂ ಸಿಇಒ ಶಿಲ್ಪಾ ಶರ್ಮಾ ಕರೆ

ಸುರಪುರ: ಲಸಿಕೆ ಪಡೆಯುವವರೆಗೂ ಪಡಿತರ ಇಲ್ಲ, ಶಿಲ್ಪಾ ಶರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಕೊರೊನಾ 3ನೇ ಅಲೆ ಬರುವ ಸಂಭವವಿರುವುದರಿಂದ 20 ದಿನದೊಳಗೆ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ 100 ರಷ್ಟು ಕೊರೊನಾ ಲಸಿಕೆ ಹಾಕಿಸಲು ಕಾರ್ಯಪಡೆಯ ಸಿಬ್ಬಂದಿ ಶ್ರಮಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಕರೆ ನೀಡಿದರು.

ತಾಲ್ಲೂಕಿನ ದೇವಿಕೇರಾದಲ್ಲಿ ಶುಕ್ರವಾರ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿ ನಂತರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಟಾಸ್ಕ್‌ ಫೋರ್ಸ್ ಸಭೆಯಲ್ಲಿ ಮಾತನಾಡಿದರು.

‘ಲಸಿಕೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಕೊರೊನಾ ಬಂದರೂ ಹೆಚ್ಚಿನ ಹಾನಿಯಾಗುವುದಿಲ್ಲ. ಶೀಘ್ರವಾಗಿ ಗುಣಮುಖರಾಗಬಹುದು. ಯಾದಗಿರಿ ಕೊರೊನಾ ಮುಕ್ತ ಜಿಲ್ಲೆಯಾಗುವಂತೆ ಪ್ರತಿಯೊಬ್ಬರೂ ಸಹಕರಿಸುವ ಅಗತ್ಯವಿದೆ’ ಎಂದರು.

‘ಗ್ರಾಮ ಪಂಚಾಯತಿ ಸದಸ್ಯರು ತಮ್ಮ ತಮ್ಮ ವಾರ್ಡ್‍ಗಳಲ್ಲಿರುವ 18 ವರ್ಷ ಮೇಲ್ಪಟ್ಟವರನ್ನು ಕರೆ ತಂದು ಲಸಿಕೆ ಕೊಡಿಸಬೇಕು. ಮನೆಯಿಂದ ಬರಲಿಕ್ಕೆ ಆಗದವರಿಗೆ ಮನೆಗೆ ಹೋಗಿ ಲಸಿಕೆ ಕೊಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ 5600 ಜನಸಂಖ್ಯೆಯಿದ್ದು, 18 ವರ್ಷ ಮೇಲ್ಪಟ್ಟವರು 3500 ಜನರಿದ್ದಾರೆ. ಇದರಲ್ಲಿ 950 ಜನರಿಗೆ ಲಸಿಕೆ ಹಾಕಲಾಗಿದೆ. ಶೇ 30ರಷ್ಟು ಲಸಿಕೆ ಹಾಕಲಾಗಿದೆ’ ಎಂದುದರು.

‘ಸ್ಥಳೀಯವಾಗಿ ಹೊರತು ಪಡಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಬೇರೆ ಜಿಲ್ಲೆಗಳಲ್ಲಿ ಹಾಕಿಸಿಕೊಂಡಿದ್ದರೆ ಅಂಥವರ ಮಾಹಿತಿ ಪಡೆದು ದಾಖಲಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳದಿದ್ದರೆ ಪಡಿತರ ಚೀಟಿ ರದ್ದುಪಡಿಸಲಾಗುವುದು ಎಂಬುದಾಗಿ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು. ಹಾಕಿಸಿಕೊಳ್ಳದವರ ಪಡಿತರವನ್ನು ತಡೆಹಿಡಿಯಬೇಕು. ಲಸಿಕೆ ಹಾಕಿಸಿಕೊಂಡ ಬಳಿಕವೇ ಪಡಿತರ ವಿತರಿಸಲು ಸೂಚಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ್, ಪಿಡಿಒ ಸಂಗೀತಾ ಸಜ್ಜನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬವ್ವ ಮಲ್ಲಪ್ಪ, ಸದಸ್ಯರಾದ ದಾನಮ್ಮ ದೇವಪ್ಪ, ಮಹಿಬೂಬ್, ಸಿದ್ದಮ್ಮ ಮಲ್ಲಪ್ಪ, ಗಂಗಾಧರ ನಾಯಕ, ಮಹಾದೇವಪ್ಪ ಮೋದಿ, ಸಮುದಾಯ ಆರೋಗ್ಯ ಅಧಿಕಾರಿ ಮಂಜುನಾಥ, ಆರೋಗ್ಯ ಸಹಾಯಕಿ ಬಶೀರಾ, ಅಂಗನವಾಡಿ ಕಾರ್ಯಕರ್ತೆಯರಾದ ಜಯಮಾಲಾ, ರೇಣುಕಾ, ಮುಖ್ಯ ಶಿಕ್ಷಕ ಆರ್.ಕೆ. ಕೋಡಿಹಾಳ, ಅಮರೇಶ, ತಾಂತ್ರಿಕ ಸಂಯೋಜಕ ವೆಂಕಟರೆಡ್ಡಿ, ಪಂಚಾಯಿತಿ ಸಿಬ್ಬಂದಿ ಲಕ್ಷ್ಮಣ ರತ್ತಾಳ, ದೌಲಸಾಬ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.