ಮಂಗಳವಾರ, ಜನವರಿ 18, 2022
15 °C

ಯಾದಗಿರಿ: ಕಾಯಂ ಶಿಕ್ಷಕರ ಕೊರತೆ: ಗುಣಮಟ್ಟ ಕುಸಿತ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಜವಾಹರ್ ನವೋದಯ ಮಹಾ ವಿದ್ಯಾಲಯದಲ್ಲಿನ ಕಾಯಂ ಶಿಕ್ಷಕರ ಕೊರತೆಯಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

‌ಹಲವು ವರ್ಷದಿಂದ ಕೆಲ ಶಿಕ್ಷಕರು ಖಾಯಂ ಠಿಕಾಣಿ ಹೂಡಿದ್ದಾರೆ. ನವೋದಯ ಮಹಾ ವಿದ್ಯಾಲಯಕ್ಕೆ ತುರ್ತಾಗಿ ಕಾಯಂ ಬೋಧಕರನ್ನು ಒದಗಿಸುವುದು ಅಗತ್ಯವಾಗಿದೆ ಎನ್ನುತ್ತಾರೆ ಪಾಲಕರು. 

ಹಲವು ವರ್ಷದಿಂದ ಕಾಯಂ ಶಿಕ್ಷಕರ ನೇಮಕಾತಿ ಸ್ಥಗಿತಗೊಂಡಿದೆ. ಹೊಸದಾಗಿ ಶಿಕ್ಷಕರು ಬಂದಿಲ್ಲ. ಎಲ್ಲವು ಅತಿಥಿ ಶಿಕ್ಷಕರ ಮೇಲೆ ಅವಲಂಬಿತವಾಗಿದೆ. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇರದ ಕಾರಣ, ಬೇಕಾಬಿಟ್ಟಿ ಪಾಠ ಮಾಡಿ ಹೋಗುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಹುದೊಡ್ಡ ತೊಡಕಾಗಿದೆ ಎಂದು ವಿದ್ಯಾರ್ಥಿ ಪಾಲಕರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ನೆರೆ ರಾಜ್ಯದಿಂದ ಆಗಮಿಸುವ ಪ್ರಾಚಾರ್ಯರಿಗೆ ಭಾಷಾ ಸಮಸ್ಯೆ ಕಾಡುತ್ತಿದೆ. ಆಡಳಿತದ ಮೇಲೆ ಹಿಡಿತ ಸಾಧಿಸಲು ತೊಡಕಾಗುತ್ತದೆ. ಗ್ರಾಮೀಣ ಪ್ರದೇಶದಿಂದ ಬಂದ ವಿದ್ಯಾರ್ಥಿಗಳ ಪಾಲಕರು ಮಕ್ಕಳ ಸಮಸ್ಯೆಯನ್ನು ಹೇಳಿಕೊಂಡಾಗ, ಪ್ರಾಚಾರ್ಯರು ಹಲವು ವರ್ಷದಿಂದ ಠಿಕಾಣಿ ಹೂಡಿರುವ ಶಿಕ್ಷಕರ ನೆರವು ಪಡೆದು ಅವರಿಂದ ಮಾಹಿತಿ ನೀಡುತ್ತಾರೆ. ನಾವು ಯಾವ ಶಿಕ್ಷಕರ ಹಾಗೂ ಸಿಬ್ಬಂದಿಯೇತರ ನೌಕರರ ವಿರುದ್ಧ ದೂರು ನೀಡುತ್ತಿದ್ದರೆ, ಅದೇ ವ್ಯಕ್ತಿಯಿಂದ ಉತ್ತರ ನೀಡಿದಾಗ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಹೆಚ್ಚಿಗೆ ಮಾತಾಡಿದರೆ ನಮ್ಮ ಮಕ್ಕಳಿಗೆ ತೊಂದರೆ ಕೊಡುತ್ತಾರೆ ಎಂಬ ಆತಂಕದಿಂದ ಇಷ್ಟು ವರ್ಷದಿಂದ ತಾಳ್ಮೆಯಿಂದ ಸಹಿಸಿಕೊಂಡಿದ್ದೇವೆ. ಇನ್ನಾದರು ಜಿಲ್ಲಾಧಿಕಾರಿಗಳು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಪಾಲಕರು ಮನವಿ ಮಾಡಿದರು.

ಅಗತ್ಯ ವಸ್ತುಗಳ ದರ ಯಥೇಚ್ಛವಾಗಿ ಏರಿಕೆ ಆಗುತ್ತಿದೆ. ಆದರೆ ವಿದ್ಯಾರ್ಥಿಗಳಿಗೆ ಊಟದ ವೆಚ್ಚವನ್ನು ಹೆಚ್ಚಿಸುವ ಚಿಂತನೆ ನಡೆಯುತ್ತಿಲ್ಲ. ಸರ್ಕಾರದ ನಿಗದಿಪಡಿಸಿದ ಹಣದಲ್ಲಿ ಹೊಂದಾಣಿಕೆ ಮಾಡಿ, ಊಟ ನೀಡಬೇಕು. ಇದು ನಮಗೆ ತಲೆ ನೋವಾಗಿ ಪರಿಣಮಿಸಿದೆ.

ತುಸು ಕಳಪೆ ಆಹಾರ ನೀಡಿದರೆ ಪಾಲಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟಿಸುತ್ತಾರೆ. ಗುಣಮಟ್ಟದ ಊಟ ನೀಡಬೇಕು ಎಂದರೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ವಿದ್ಯಾಲಯದಲ್ಲಿ 519 ವಿದ್ಯಾರ್ಥಿಗಳಿಗೆ ಏಕ ಕಾಲಕ್ಕೆ ಊಟ ನೀಡಲು ಹೆಚ್ಚಿನ ಅಡುಗೆ ಸಹಾಯಕರ ಅಗತ್ಯವಿದೆ ಎನ್ನುತ್ತಾರೆ ವಸತಿ ನಿಲಯದ ಮೇಲ್ವಿಚಾರಕರೊಬ್ಬರು.

ಪ್ರತಿ ತಿಂಗಳಿಗೆ ಒಮ್ಮೆ ವಿದ್ಯಾರ್ಥಿಗಳನ್ನು ಭೇಟಿಯಾಗಲು ಪಾಲಕರು ಆಗಮಿಸುತ್ತಾರೆ. ಆದರೆ, ಪಾಲಕರು ಕುಳಿತುಕೊಳ್ಳಲು ಪ್ರತ್ಯೇಕವಾದ ಕೋಣೆ ಇಲ್ಲ. ಬಯಲು ಜಾಗದಲ್ಲಿ ನಿಂತುಕೊಳ್ಳಬೇಕು. ಸಾಕಷ್ಟು ಬಾರಿ ಸಂಸದರ ನಿಧಿಯಿಂದ ಕೋಣೆ ನಿರ್ಮಿಸಲು ಮನವಿ ಮಾಡಿದ್ದರು ಅನುದಾನ ನೀಡಿಲ್ಲ. ಆಟದ ಮೈದಾನವು ಸರಿಯಾದ ನಿರ್ವಹಣೆ ಇಲ್ಲವಾಗಿದೆ. ಈ ಬಗ್ಗೆಯೂ ಗಮನಹರಿಸುವಂತೆ ಪಾಲಕರು ಮನವಿ ಮಾಡಿದ್ದಾರೆ.

*

ಮಹಾ ವಿದ್ಯಾಲಯದಲ್ಲಿ ಒಟ್ಟು 23 ಸಿಬ್ಬಂದಿ ಇದ್ದಾರೆ. 12 ಜನ ಅತಿಥಿ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ಅನ್ವಯ, ಪ್ರತಿ ವಿದ್ಯಾರ್ಥಿಗೆ ದಿನಕ್ಕೆ ₹63 ವೆಚ್ಚಮಾಡಲಾಗುತ್ತಿದೆ. ಹೊಸದಾಗಿ ಹಲವು ಬದಲಾವಣೆ ಮಾಡಲಾಗುತ್ತಿದೆ.
-ಬಿ.ಗೋವಿಂದರಾವ್, ನವೋದಯ ಪ್ರಾಚಾರ್ಯರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.