ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಮಣ್ಣೆತ್ತಿನ ಅಮಾವಾಸ್ಯೆ; ಪಿಒಪಿ ಹಾವಳಿ, ಬಣ್ಣ ಕಳೆದುಕೊಂಡ ಮಣ್ಣೆತ್ತು

ಕಾರ ಹುಣ್ಣಿಮೆಯಲ್ಲಿ ಜೀವಂತ ಎತ್ತು ಪೂಜೆ
Published 5 ಜುಲೈ 2024, 5:53 IST
Last Updated 5 ಜುಲೈ 2024, 5:53 IST
ಅಕ್ಷರ ಗಾತ್ರ

ಯಾದಗಿರಿ: ಜುಲೈ 5ರಂದು ಶುಕ್ರವಾರ ಮಣ್ಣೆತ್ತಿನ ಅಮಾವಾಸ್ಯೆ ಇದ್ದು, ವರ್ಷದಿಂದ ವರ್ಷಕ್ಕೆ ವ್ಯಾಪಾರ, ಸಂಪ್ರಾದಾಯ ಕಡಿಮೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎತ್ತುಗಳನ್ನು ಬಸವಣ್ಣನ ರೂಪ ಎಂದೇ ಪೂಜಿಸುತ್ತಾರೆ. ಮುಂಗಾರಿನ ಪ್ರಥಮ ಹಬ್ಬವಾಗಿ ಕಾರ ಹುಣ್ಣಿಮೆಯಲ್ಲಿ ಜೀವಂತ ಎತ್ತುಗಳನ್ನು ಪೂಜಿಸಿದರೆ, ಇದಾದ 15 ದಿನದ ನಂತರ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಮಾಡಲಾಗುತ್ತಿದೆ. ಮಳೆ, ಬೆಳೆ ಸಮೃದ್ಧಿಯಾಗಲಿ, ಉತ್ತು ಬಿತ್ತನೆಗೆ ಎತ್ತುಗಳಿಗೆ ಶಕ್ತಿ ನೀಡಲಿ ಎಂದು ಮಣ್ಣೆತ್ತಿನ (ಶುಕ್ರವಾರ) ಅಮಾವಾಸ್ಯೆಯಂದು ಪೂಜಿಸಲಾಗುತ್ತದೆ. ಆದರೆ, ಕಾಲ ಬದಲಾದಂತೆ ಆಚರಣೆಗಳು ಮರೆಯಾಗುತ್ತಿವೆ.

ನಗರದ ಚರ್ಚ್‌ ಮುಂಭಾಗದ ರಸ್ತೆ ಬಳಿ ಮಣ್ಣೆತ್ತಿನ ಅಮಾವಾಸ್ಯೆಗಾಗಿ ಮಣ್ಣಿನ ಎತ್ತುಗಳು, ಪಿಒಪಿ ಎತ್ತುಗಳು ಮಾರಾಟಕ್ಕೆ ಇಡಲಾಗಿದೆ. ನಗರದ ವಿವಿಧೆಡೆ ಪಿಒಪಿ ಎತ್ತುಗಳು ತಳ್ಳು ಗಾಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 

ಪಿಒಪಿಗಳ ಕಾರುಬಾರು: ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣೆತ್ತುಗಳ ಬದಲಿಗೆ ಪ್ಲಾಸ್ಟರ್‌ ಆ‍ಫ್ ಪ್ಯಾರೀಸ್ (ಪಿಒಪಿ) ಎತ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲೂ ಮಣ್ಣಿತ್ತಿನ ಜಾಗದಲ್ಲಿ ಆಕ್ರಮಿಸಿಕೊಂಡಿವೆ. ಬಣ್ಣ ಬಣ್ಣದ ಪಿಒಪಿಗಳು ಗ್ರಾಹಕರನ್ನು ಆಕರ್ಷಿಸುವುದರಿಂದ ಮಾರಾಟಕ್ಕೆ ಇಡಲಾಗಿದೆ ಎಂದು ವ್ಯಾಪಾರಿಗಳು ಹೇಳುವ ಮಾತಾಗಿದೆ.

‘ಕಲಬುರಗಿ, ಸೊಲ್ಲಾಪುರ, ಅಕ್ಕಲಕೋಟ ಸೇರಿದಂತೆ ವಿವಿಧೆಡೆಯಿಂದ ಪಿಒಪಿ ಎತ್ತು ತರಲಾಗಿದೆ. ದರ ಮತ್ತು ನೋಡುಗರಿಗೆ ಆಕರ್ಷಕವಾಗಿದ್ದರಿಂದ ಪಿಒಪಿ ಎತ್ತು ಖರೀದಿಸುತ್ತಾರೆ. ಆದರೆ, ಈ ಬಾರಿ ಮಣ್ಣೆತ್ತು ತಯಾರಿಸಲಾಗಿದೆ’ ಎಂದು ವ್ಯಾಪಾರಿ ಲಕ್ಷ್ಮೀ ಕುಂಬಾರ ಹೇಳುತ್ತಾರೆ.

‘ಮಣ್ಣಿನ ಜೋಡಿ ಎತ್ತುಗಳ ದರ ₹40ರಿಂದ ₹50 ಇದೆ. ಪಿಒಪಿ ಎತ್ತುಗಳ ದರ ₹ 50 ರಿಂದ ₹900ರವರೆಗೆ ಇದೆ. ಆದರೆ, ಮಣ್ಣಿನ ಎತ್ತುಗಳನ್ನು ಖರೀದಿಸುವವರು ಕಡಿಮೆ. ಸಂಪ್ರಾದಾಯವಾದಿಗಳು ಮಣ್ಣಿನ ಎತ್ತುಗಳನ್ನು ಖರೀದಿಸುತ್ತಾರೆ. ಈಗಿನ ಕಾಲದವರು ಪಿಒಪಿ ಎತ್ತುಗಳನ್ನೆ ಒಯ್ಯುತ್ತಾರೆ’ ಎಂದು ಶರಣಪ್ಪ ಕುಂಬಾರ ತಿಳಿಸಿದರು.

ಯಾದಗಿರಿಯ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದ ರಸ್ತೆ ಬಳಿ ಮಣ್ಣೆತ್ತಿನ ಅಮಾವಾಸ್ಯೆಗಾಗಿ ಪಿಒಪಿ ಎತ್ತುಗಳು ಮಾರಾಟಕ್ಕೆ ಇಡಲಾಗಿದೆ

ಯಾದಗಿರಿಯ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದ ರಸ್ತೆ ಬಳಿ ಮಣ್ಣೆತ್ತಿನ ಅಮಾವಾಸ್ಯೆಗಾಗಿ ಪಿಒಪಿ ಎತ್ತುಗಳು ಮಾರಾಟಕ್ಕೆ ಇಡಲಾಗಿದೆ

‘ಮೆರುಗು ಕಳೆದುಕೊಂಡಿದೆ ಮಣ್ಣೆತ್ತು’

‘ಮಣ್ಣೆತ್ತಿನ ಅಮಾವಾಸ್ಯೆ ಮೆರುಗು ಈಗ ಕಳೆದುಕೊಂಡಿದೆ. ಒಂದು ಕಾಲದಲ್ಲಿ ಸಾಂಪ್ರಾದಾಯ ಎಂದು ಮಣ್ಣೆತ್ತುಗಳನ್ನು ಪೂಜಿಸುತ್ತಿದ್ದರು. ಆದರೆ, ಈಗ ಹಳ್ಳಿ, ಪಟ್ಟಣ, ನಗರ ಪ್ರದೇಶದ ಜನ ಎತ್ತುಗಳನ್ನು ಸಾಕುವುದಿಲ್ಲ. ಹೀಗಾಗಿ ಅವುಗಳ ಮಹತ್ವ ತಿಳಿಯುತ್ತಿಲ್ಲ’ ಎನ್ನುತ್ತಾರೆ ವ್ಯಾಪಾರಿ ‌ವಿಶ್ವನಾಥ ಕುಂಬಾರ ಹೇಳುತ್ತಾರೆ.

‘ನಗರ ಪ್ರದೇಶದ ಜನ ಪ್ಲಾಸ್ಟರ್‌ ಆ‍ಫ್ ಪ್ಯಾರೀಸ್ (ಪಿಒಪಿ) ಎತ್ತುಗಳನ್ನು ತಮ್ಮ ಮನೆಯ ಶೋ ಕೇಸ್‌ನಲ್ಲಿ ಇಡಲು ಖರೀದಿ ಮಾಡುತ್ತಿದ್ದಾರೆ. ಆಚಾರ ವಿಚಾರ ಗೊತಿಲ್ಲದ ಕಾರಣ ವರ್ಷದಿಂದ ವರ್ಷಕ್ಕಿಂತ ಆಚರಣೆ ಕಡಿಮೆಯಾಗುತ್ತಿದೆ. ಈ ಬಾರಿ ಆರಂಭದಲ್ಲಿ ಮಾತ್ರ ಮಳೆಯಾಗಿದ್ದು, ಈಗ ರೈತಾಪಿ ವರ್ಗ ವರುಣನಿಗಾಗಿ ಎದುರು ನೋಡುತ್ತಿದ್ದಾರೆ. ನಮ್ಮದು ಹೊಟ್ಟೆ ಪಾಡು ಜೀವನ. ಹೀಗಾಗಿ ಕುಲ ಕಸುಬು ಮಾಡುತ್ತಿದ್ದೇವೆ. ಗುರುವಾರ ₹2–3 ಸಾವಿರ ವ್ಯಾಪಾರವಾಗಿದ್ದು, ಶುಕ್ರವಾರ ಅಮಾವಾಸ್ಯೆ ಕಾರಣ ₹7–8 ಸಾವಿರ ವ್ಯಾಪಾರ ಆಗುವ ನಿರೀಕ್ಷೆ’ ಎನ್ನುತ್ತಾರೆ ಅವರು.

ಪಿಒಒ ಎತ್ತುಗಳು ₹50ರಿಂದ ₹900 ತನಕ ದರ ಇವೆ. ಆದರೆ, ಸಂಪ್ರಾದಾಯದಂತೆ ಪೂಜಿಸುವವರು ಮಣ್ಣೆತ್ತುಗಳನ್ನು ಪೂಜಿಸಲು ಖರೀದಿ ಮಾಡುತ್ತಿದ್ದಾರೆ.
-ಅಮರಮ್ಮ ಕುಂಬಾರ, ವ್ಯಾಪಾರಿ
ಮಣ್ಣೆತ್ತುಗಳನ್ನು ಪೂಜಿಸಿ ಮನೆಯ ಮಾಳಿಗೆಯ ಮೂಲೆಯಲ್ಲಿಟ್ಟರೆ ಮಳೆ ಬಂದು ಕರಗಿ ಹೋಗುತ್ತದೆ. ಇದರಿಂದ ಈ ಬಾರಿಯ ಮಳೆಯನ್ನು ಅಂದಾಜಿಸಬಹುದಾಗಿದೆ.
-ಚನ್ನಬಸಯ್ಯ ಹಿರೇಮಠ, ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT