ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | PM ವಿಶ್ವಕರ್ಮ ಯೋಜನೆ: ₹3 ಲಕ್ಷದವರೆಗೆ ಸಾಲ ಸೌಲಭ್ಯ, ಮುಗಿಬಿದ್ದ ಜನತೆ

Published 24 ಮೇ 2024, 6:02 IST
Last Updated 24 ಮೇ 2024, 6:02 IST
ಅಕ್ಷರ ಗಾತ್ರ

ಯಾದಗಿರಿ: ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಹಣಕಾಸು ಸಂಸ್ಥೆಗಳ ಮೂಲಕ ₹3 ಲಕ್ಷದವರೆಗೆ ಶೇ 5 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದ್ದು, ಇದಕ್ಕಾಗಿ ಗ್ರಾಮೀಣ ಭಾಗದ ಜನರು ಮುಗಿಬಿದ್ದಿದ್ದಾರೆ. ಇದರಿಂದ ತರಬೇತಿ ಕೇಂದ್ರ ಗೊಂದಲದ ಗೂಡಾಗಿ ಪರಿವರ್ತನೆಯಾಗಿದೆ.

ನಗರದ ಕೇಂದ್ರ ಬಸ್‌ ನಿಲ್ದಾಣ ಮುಂಭಾಗದ ಖಾಸಗಿ ಕಟ್ಟಡದಲ್ಲಿ ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರ ತೆಗೆಯಲಾಗಿದ್ದು, ನೂರಾರು ಫಲಾನುಭವಿಗಳು ಏಕಕಾಲಕ್ಕೆ ಕೇಂದ್ರಕ್ಕೆ ಆಗಮಿಸುವುದರಿಂದ ತರಬೇತಿ ಕಾರ್ಯ ಸುಗಮವಾಗಿ ನಡೆಯಲು ಕಷ್ಟವಾಗಿದೆ.

ಮೂರನೇ ಅಂತಸ್ತಿನಲ್ಲಿ ಕಟ್ಟಡ: ಪಿಎಂ ವಿಶ್ವಕರ್ಮ ಯೋಜನೆಯು ಕೇಂದ್ರ ಸರ್ಕಾರದ ಬಹು ಮುಖ್ಯ ಯೋಜನೆಯಾಗಿದ್ದು, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಆದರೆ, ಹಲವಾರು ದಿನಗಳಿಂದ ಅರ್ಜಿ ಸಲ್ಲಿಸಿದವರು ಏಕಕಾಲಕ್ಕೆ ಬರುವುದರಿಂದ ಜನ ಜಂಗುಳಿಯಾಗುತ್ತಿದೆ. ವೃತ್ತಿನಿರತರಿಗೆ 7 ದಿನದ ತರಬೇತಿ ಹಾಗೂ ಗೌರವಧನ ಕೊಡಲಾಗುತ್ತಿದೆ. ಇದರಿಂದ ಅರ್ಜಿಯಲ್ಲಿ ಹೆಸರು ಇಲ್ಲದಿದ್ದರೂ ಹಲವರು ಮುಗಿಬೀಳುತ್ತಿದ್ದಾರೆ.

ತರಬೇತಿ ಕೇಂದ್ರವೂ ಖಾಸಗಿ ಕಟ್ಟಡದಲ್ಲಿ ಮೂರನೇ ಅಂತಸ್ತಿನಲ್ಲಿದ್ದು, ವಯಸ್ಸಾದ ಫಲಾನುಭವಿಗಳು ಮೆಟ್ಟಿಲು ಹತ್ತಿ ತೆರಳಲು ತೊಂದರೆಪಡುತ್ತಿದ್ದಾರೆ.

ಹಸುಗೂಸು ಕಟ್ಟಿಕೊಂಡು ಬರುವ ಮಹಿಳೆಯರ ಗೋಳು ಹೇಳತೀರದು.

ವಿದ್ಯುತ್ ವ್ಯವಸ್ಥೆ ಇಲ್ಲ: ತರಬೇತಿ ಕೇಂದ್ರದಲ್ಲಿ ವಿದ್ಯುತ್‌ ಸಮಸ್ಯೆಯಾಗಿದ್ದು, ಫಲಾನುಭವಿಗಳು ಕುಳಿತುಕೊಳ್ಳಲು ಸರಿಯಾದ ಆಸನಗಳ ವ್ಯವಸ್ಥೆ ಇಲ್ಲ. ಇದರಿಂದ ಹೊರಗಡೆ ನಿಂತುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಕೂಡಲೇ ಸರಿಯಾದ ಕಟ್ಟಡದಲ್ಲಿ ತರಬೇತಿ ಕೇಂದ್ರವನ್ನು ನಡೆಸಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿದೆ.

‘ತರಬೇತಿ ಕೇಂದ್ರದಲ್ಲಿರುವವರು ತಮಗೆ ಬೇಕಾದವರಿಗೆ ಮಾತ್ರ ಅರ್ಜಿ ಪರಿಶೀಲನೆ ಮಾಡುತ್ತಿದ್ದಾರೆ. ನಾವು ಬಂದರೂ ನಾಳೆ ಬನ್ನಿ ಎಂದು ಹೇಳುತ್ತಿದ್ದಾರೆ. ಇದರಿಂದ ನಾವು ಯಾದಗಿರಿಗೆ ಬಂದು ಹೋಗುವಂತೆ ಆಗಿದೆ. ಕೂಡಲೇ ಸಂಬಂಧಿಸಿದವರು ಸೂಕ್ತವಾಗಿ ನಿರ್ವಹಣೆ ಮಾಡಬೇಕು’ ಎನ್ನುತ್ತಾರೆ ಫಲಾನುಭವಿಗಳಾದ ಬಸಮ್ಮ ಗುರುಸಣಗಿ, ಕಸ್ತೂರಮ್ಮ ಹೇಳುತ್ತಾರೆ.

ತರಬೇತಿ ಕೇಂದ್ರ ನಗರದ ಜನದಟ್ಟಣೆ ಪ್ರದೇಶದಲ್ಲಿದ್ದು, ವಾಹನ ನಿಲ್ಲಿಸಲು ಫಲಾನುಭವಿಗಳು ಸಂಕಷ್ಟ ಪಡುತ್ತಿದ್ದಾರೆ. ಬಿಸಿಲು ಇರುವ ಕಾರಣ ಜನತೆ ಅಕ್ಕಪ‍ಕ್ಕದ ಕಟ್ಟಡಗಳ ಮುಂದೆ ಜನತೆ ನಿಂತುಕೊಳ್ಳುತ್ತಿದ್ದಾರೆ. ಇದರಿಂದ ವ್ಯಾಪಾರಿಗಳು ಜನರನ್ನು ದೂರ ಕಳುಹಿಸುತ್ತಿದ್ದಾರೆ.

ಏನಿದು ಪಿಎಂ ವಿಶ್ವಕರ್ಮ ಯೋಜನೆ?

ಪಿಎಂ ವಿಶ್ವಕರ್ಮ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಇದರಡಿ 18 ವಿವಿಧ ವೃತ್ತಿಗಳ ಕುಶಲಕರ್ಮಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬಡಿಗ ಶಸ್ತ್ರ ತಯಾರಕರು ಕಮ್ಮಾರ ಕಲ್ಲುಕುಟಿಗ ಬಟ್ಟೆ ಚಾಪೆ-ಕಸ ಪೊರಕೆ ತಯಾರಕರು ಗೊಂಬೆ ಮತ್ತು ಆಟಿಕೆ ತಯಾರಕರು ದೋಣಿ ತಯಾರಿಸುವವರು ಕ್ಷೌರಿಕ ವೃತ್ತಿ ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು ಹೂಮಾಲೆ ತಯಾರಕರು ಆಗಸರು ಕುಂಬಾರ ವೃತ್ತಿ ಮೀನು ಬಲೆ ಹೆಣೆಯುವವರು ಶಿಲ್ಪಿ ಚಮ್ಮಾರ ಪಾದರಕ್ಷೆ ತಯಾರಕರು ಬೀಗ ತಯಾರಿಕಾ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿ ಮಾಡಿದೆ. ಕುಶಲಕರ್ಮಿ ಉಪಕರಣ ಪಡೆಯಲು ಸಹಾಯಧನ ಒಂದು ಲಕ್ಷದಿಂದ ಮೂರು ಲಕ್ಷದವರೆಗೆ ಸಾಲ ಕೇವಲ ಶೇ 5 ರಷ್ಟು ಬಡ್ಡಿಯೊಂದಿಗೆ ಪಡೆಯಬಹುದಾಗಿದೆ. ಈ ಯೋಜನೆಯು ಕುಶಲಕರ್ಮಿಗಳಿಗೆ ಉಪಯುಕ್ತವಾಗಿದ್ದು ತರಬೇತಿ ಸುಧಾರಿತ ಉಪಕರಣ ಪಡೆಯಲು ₹15000 ಹಾಗೂ ಸ್ವಯಂ ಉದ್ಯೋಗ ಆರಂಭಿಸಲು ₹3 ಲಕ್ಷ ವರೆಗೆ ಸಾಲ ಪಡೆಯಬಹುದಾಗಿದೆ.

ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರದಲ್ಲಿ ಫಲಾನುಭವಿಗಳು ನಿಂತಿರುವುದು
ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರದಲ್ಲಿ ಫಲಾನುಭವಿಗಳು ನಿಂತಿರುವುದು
ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಫಲಾನುಭವಿಗಳ ಜೊತೆಗೆ ಹಲವರು ಬರುತ್ತಿದ್ದು ತರಬೇತಿ ಕೇಂದ್ರದಲ್ಲಿ ಜನ ಜಂಗುಳಿ ಹೆಚ್ಚಾಗುತ್ತಿದೆ. ಯಾರಿಗೆ ಕರೆ ಮಾಡಿದ್ದಾರೊ ಅವರು ಮಾತ್ರವೇ ಬಂದರೆ ಸಮಸ್ಯೆಯಾಗುವುದಿಲ್ಲ
–ಮರೇಶ್‌, ಪಿಎಂ ವಿಶ್ವಕರ್ಮ ಜಿಲ್ಲಾ ಮೇಲ್ವಿಚಾರಕ
ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ನೂರಾರು ಫಲಾನುಭವಿಗಳು ಏಕಕಾಲದಲ್ಲಿ ಕೇಂದ್ರದಲ್ಲಿ ಸೇರುವುದರಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ. ಇದರಿಂದ ಫಲಾನುಭವಿಗಳಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸಿಕೊಡಬೇಕು
–ರಾಮು ಹೂಗಾರ, ಖಾನಾಪುರ ಫಲಾನುಭವಿ
ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರ ಸೂಕ್ತ ಕಟ್ಟಡದಲ್ಲಿ ಮಾಡಬೇಕು. ಈಗ ಇರುವ ಕಟ್ಟಡ ಸಂಪೂರ್ಣ ಅವೈಜ್ಞಾನಿಕವಾಗಿದೆ. ಯಾವುದೇ ಸೌಲಭ್ಯಗಳಿಲ್ಲ. ಇದರಿಂದ ಫಲಾನುಭವಿಗಳು ತೊಂದರೆ ಪಡುವಂತೆ ಆಗಿದೆ
–ಮಲ್ಲಮ್ಮ, ಫಲಾನುಭವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT