ಗುರುವಾರ , ಏಪ್ರಿಲ್ 15, 2021
24 °C

57,284 ಮಕ್ಕಳಿಗೆ ಪೋಲಿಯೊ ಲಸಿಕೆ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ರಾಷ್ಟ್ರೀಯ ಕಾರ್ಯಕ್ರಮ ಪೋಲಿಯೊ ಲಸಿಕಾ ಅಭಿಯಾನದ ಯಶಸ್ವಿಗೆ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಬೇಕು’ ಎಂದು ತಹಶೀಲ್ದಾರ್ ಮತ್ತು ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಸುಬ್ಬಣ್ಣ ಜಮಖಂಡಿ ಸೂಚಿಸಿದರು.

ಬುಧವಾರ ಜರುಗಿದ ಲಸಿಕಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಜ.31 ರಿಂದ ಫೆ.2 ರ ವರೆಗೆ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ. ಈ ಕುರಿತು ಜಾಗೃತಿ ಮೂಡಿಸಲು ಪ್ರತಿ ಗ್ರಾಮಗಳಲ್ಲಿ ಡಂಗೂರ ಹಾಕಿಸಬೇಕು. ಮಕ್ಕಳನ್ನು ಬೂತ್‍ಗೆ ಕರೆತಂದು ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ಮಾತನಾಡಿ, 0 ದಿಂದ 5 ವರ್ಷದ ನಗರ ಪ್ರದೇಶದ-7017, ಗ್ರಾಮೀಣ ಪ್ರದೇಶದ-50,217 ಸೇರಿ ಒಟ್ಟು 57,284 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ 229 ತಂಡಗಳನ್ನು ರಚಿಸಲಾಗಿದೆ. 458-ವ್ಯಾಕ್ಸಿನೇಟರ್, 46-ಮೇಲ್ವಿಚಾರಕರನ್ನು ನಿಯಮಿಸಲಾಗಿದೆ. ಬಸ್ ನಿಲ್ದಾಣದಲ್ಲಿ 11-ಟ್ರಾಂಜಿಲ್ ಪಾಯಿಂಟ್ ಸ್ಥಾಪಿಸಲಾಗುವುದು’ ಎಂದರು.

‘ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 16 ಆರೋಗ್ಯ ಕೇಂದ್ರಗಳಲ್ಲಿ ಪೋಲಿಯೊ ಲಸಿಕೆಯನ್ನು ಶೀತ ವಾತಾವರಣದಲ್ಲಿ ಸಂಗ್ರಹಣೆ ಮಾಡಬೇಕಾಗಿರುವುದರಿಂದ 4 ದಿನಗಳವರೆಗೆ ತಡೆ ರಹಿತವಾಗಿ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಿ ಜೆಸ್ಕಾಂ ಇಲಾಖೆ ಅನುಕೂಲ ಕಲ್ಪಿಸಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಇಒ ಅಮರೇಶ, ಸಿಡಿಪಿಒ ಲಾಲಸಾಬ್ ಪೀರಾಪುರ, ಶಿಕ್ಷಣ ಇಲಾಖೆ ಹಣಮಂತ ಪೂಜಾರಿ, ನಗರಸಭೆ, ಸಾರಿಗೆ, ಜೆಸ್ಕಾಂ ಸೇರಿ ಇತರೆ ಇಲಾಖೆಯ ಅಧಿಕಾರಿಗಳಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು