ಶುಕ್ರವಾರ, ಡಿಸೆಂಬರ್ 4, 2020
22 °C
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಸಮಾವೇಶದಲ್ಲಿ ಡಾ.ಸಂದೀಪಕುಮಾರ ಅಭಿಮತ

ರಾಜಕೀಯ ಬಿಜೆಪಿಗೆ ದೇಶಕಟ್ಟುವ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ರಾಜಕೀಯ ಕೆಲವರಿಗೆ ವ್ಯಾಪಾರ ಆಗಿದೆ. ಆದರೆ, ಬಿಜೆಪಿಗೆ ದೇಶಕಟ್ಟುವ ಕಾರ್ಯವಾಗಿದೆ. ಹೀಗಾಗಿ ಯುವ ಮೋರ್ಚಾದ ಮೇಲೆ ಅತೀವ ಜವಾಬ್ದಾರಿ ಇದೆ’ ಎಂದು ಬಿಜೆಪಿ ರಾಜ್ಯ ಯುವ ಘಟಕದ ಅಧ್ಯಕ್ಷ ಡಾ.ಸಂದೀಪಕುಮಾರ ಕೆ.ಸಿ., ಹೇಳಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಯುವ ಮೋರ್ಚಾ ಕಾರ್ಯಕರ್ತರ ಸಮಾವೇಶವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವ ಮೋರ್ಚಾದ ಪದಾಧಿಕಾರಿಗಳು ‌ಜವಾಬ್ದಾರಿಯನ್ನು ಅಧಿಕಾರ ಎಂದು ಭಾವಿಸದೇ ಕೆಲಸ ಮಾಡಬೇಕು. ಯುವ ಮೋರ್ಚಾ ಕಾರ್ಯಕರ್ತರ ಜವಾಬ್ದಾರಿ ಏನು ಎಂಬುದನ್ನು ಅರಿತುಕೊಳ್ಳಬೇಕು. ಪಕ್ಷ ಅಶಿಸ್ತು ಸಹಿಸುವುದಿಲ್ಲ. ಯುವ ಮೋರ್ಚಾ ಕಾರ್ಯಕರ್ತರ ನೇತೃತ್ವದಲ್ಲಿ ಜವಾಬ್ದಾರಿ ಸಿಕ್ಕಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಚುನಾವಣೆಗೆ ಸಿದ್ದರಾಗಿ: ‘ಮುಂಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಯುವ ಮೋರ್ಚಾ ಪದಾಧಿಕಾರಿಗಳು ಸಿದ್ದರಾಗಿ. ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಲು ಪಕ್ಷದ ವತಿಯಿಂದ ಯುವಕರಿಗೆ ಹೆಚ್ಚಿನ ಸ್ಥಾನ ನೀಡಬೇಕು. ಬಿಜೆಪಿ ಕಾರ್ಯಕರ್ತರ ಪಕ್ಷ. ಇಂಥ ಪಕ್ಷ ಬೇರೆ ಎಲ್ಲಿಯೂ ಇಲ್ಲ. ಪ್ರಪಂಚದಲ್ಲಿಯೇ ಬಿಜೆಪಿ ದೊಡ್ಡ ಪಕ್ಷವಾಗಿದೆ. ಬಿಜೆಪಿ ಸಂವಿಧಾನ ವಿರೋಧಿಯಲ್ಲ. ಅದರ ಆಶಯಗಳನ್ನು ಈಡೇರಿಸುವ ಪಕ್ಷವಾಗಿದೆ. ಭಾರತ ವಿಶ್ವಗುರು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡೋಣ’ ಎಂದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್‌ ಮಾತನಾಡಿ, ‘ಯುವಮೋರ್ಚಾ ಕಾರ್ಯಕರ್ತರು ಅತ್ಯಂತ ಅರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಡಾ ವೀರಬಸವಂತರಡ್ಡಿ ಮುದ್ನಾಳ ಮಾತನಾಡಿ, ‘ಬಿಜೆಪಿ ಬೇರೆ ಪಕ್ಷಗಳಿಗಿಂತ ಭಿನ್ನವಾಗಿದೆ. ಹಲವಾರು ವೈದ್ಯರು ಪಕ್ಷದಲ್ಲಿದ್ದಾರೆ. ವಿವಿಧ ಸ್ತರದ ಜನರು ಪಕ್ಷಕ್ಕೆ ಸೇರ್ಪಡೆಯಾಗಿ ಭಾರತ ಮಾತೆಯ ಸೇವೆ ಮಾಡಲು ಮುಂದಾಗಬೇಕು. ದೇಶಸೇವೆಗೆ ಬಿಜೆಪಿ ಯುವಮೋರ್ಚಾ ವೇದಿಕೆ’ ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಅಜಿತ್ ಹೆಗ್ಡೆ, ಉಪಾಧ್ಯಕ್ಷರಾದ ಪ್ರಶಾಂತ್ ಶೃಂಗೇರಿ, ವಸಂತಗೌಡ, ಕಾರ್ಯದರ್ಶಿಗಳಾದ ಅಂಬರೇಶ ರೈತನಗರ, ಈರಣ್ಣ ಅಂಗಡಿ, ಕಿರಣ್ ಪಾಲಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೇವೀಂದ್ರನಾಥ್ ನಾದ್, ವೆಂಕಟರಡ್ಡಿ ಅಬ್ಬೆತುಮಕೂರು ಮಾತನಾಡಿದರು.

ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಮೌನೇಶ್ ಬಳಗೇರ ಪ್ರಾಸ್ತಾವಿಕ ಮಾತನಾಡಿ, ರಾಜ್ಯ ಸಮಿತಿ ನಿರ್ದೇಶನಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಪಾಲನೆ ಮಾಡಿ ಜಿಲ್ಲೆಯಲ್ಲಿ ಹೋರಾಟ ರೂಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರವಾದ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಪದವಿ ಮಹಾವಿದ್ಯಾಲಯದಿಂದ ಬಸವೇಶ್ವರ ಕಲ್ಯಾಣ ಮಂಟಪದ ವರೆಗೆ ಬೈಕ್ ರ್‍ಯಾಲಿ ನಡೆಯಿತು.

ಈ ವೇಳೆ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಉಪಾಧ್ಯಕ್ಷೆ ಪ್ರಭಾವತಿ ಮಾರುತಿ ಕಲಾಲ್, ಯುಡಾ ಅಧ್ಯಕ್ಷ ಬಸವರಾಜ ಚಂಡರಕಿ, ನಗರಸಭೆ ಸದಸ್ಯರಾದ ಸುರೇಶ್ ಅಂಬಿಗರ, ಅಂಬಯ್ಯ ಶಾಬಾದಿ, ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಶರಣಗೌಡ ಕನ್ಯಕೋಳೂರ, ವಿರೂಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ಮಂಜುನಾಥ್ ಗುತ್ತೇದಾರ್, ಶಿವು ನಂದೇಪಲ್ಲಿ, ಸಾಯಬಣ್ಣ ಮಡಿವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಗುರುಸುಣಗಿ, ಮಲ್ಲು ಚಾಪೆಲ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.