ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಕುಂಟ: ಬಡ ವಿದ್ಯಾರ್ಥಿನಿ ಪಿಯುಸಿ ಟಾಪರ್‌

ತೋಟೇಂದ್ರ ಎಸ್. ಮಾಕಲ್
Published 27 ಮೇ 2024, 5:14 IST
Last Updated 27 ಮೇ 2024, 5:14 IST
ಅಕ್ಷರ ಗಾತ್ರ

ಚಿಂತಕುಂಟ (ಯರಗೋಳ): ಪ್ರೌಢಶಾಲೆಯ ಮುಖವನ್ನೇ ನೋಡದ ವಿದ್ಯಾರ್ಥಿನಿ ಶ್ರೀದೇವಿ, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 98 ಅಂಕ ಪಡೆದು, ಬೆಂಗಳೂರು ನಗರ ಜಿಲ್ಲೆಗೆ ಅಗ್ರಸ್ಥಾನ ಗಳಿಸಿದ್ದಾರೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯವರೆಗೆ ಅಧ್ಯಯನ, ಮೋಟ್ನಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ಮತ್ತು 7ನೇ ತರಗತಿ ಪೂರ್ಣಗೊಳಿಸಿ ಬಳಿಕ ಶಾಲೆ ಬಿಟ್ಟು, ಜೀವನೋಪಾಯಕ್ಕಾಗಿ ತಂದೆ- ತಾಯಿಗಳ ಜೊತೆ ಶ್ರೀದೇವಿ ಬೆಂಗಳೂರಿಗೆ ದುಡಿಯಲು ಹೋಗಿದ್ದರು.

(8, 9 ,10 ತರಗತಿ) ಪ್ರೌಢಶಾಲೆಗೆ ಹೋಗದೆ, ಬಾಹ್ಯ ಅಭ್ಯರ್ಥಿಯಾಗಿ 2021ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆದು ಶೇ 61 ಪ್ರತಿಶತ ಅಂಕಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು.

ಬೆಂಗಳೂರಿನ ಬಸವೇಶ್ವರ ನಗರದ ಬಿಬಿಎಂಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದ ಶ್ರೀದೇವಿ, 2023-24 ನೇ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.  ಇತಿಹಾಸ 98, ಅರ್ಥಶಾಸ್ತ್ರ 98, ರಾಜ್ಯಶಾಸ್ತ್ರ 100, ಕನ್ನಡ 98, ಇಂಗ್ಲಿಷ್ 94, ಸಮಾಜಶಾಸ್ತ್ರ 100, ಒಟ್ಟು 600ಕ್ಕೆ 588 ಅಂಕ ಪಡೆದಿದ್ದಾರೆ.

ಸಾಬಣ್ಣ, ಕಾಶಮ್ಮ ತಳವಾರ್ ದಂಪತಿಗೆ ಸ್ವಗ್ರಾಮ ಚಿಂತಕುಂಠದಲ್ಲಿ 3 ಎಕರೆ ಹೊಲವಿದ್ದು. ನಾಲ್ಕು ಜನ ಮಕ್ಕಳಿದ್ದಾರೆ. ಗಾರೆ (ಮನೆ ಕಟ್ಟುವ) ಕೆಲಸ ಮಾಡಿ, ಬೆಂಗಳೂರು ನಗರದ ಬಾಡಿಗೆ ಮನೆಯೆಲ್ಲಿ ಜೀವನ ಸಾಗಿಸುತ್ತಿದ್ದಾರೆ.

ತಂದೆ ಸಾಬಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ನೋಡ್ರಿ ನಮಗೆ ಏನೂ ಗೊತ್ತಾಗುವುದಿಲ್ಲ. ಬಡತನದ ಕಾರಣ ಪ್ರೌಢಶಾಲೆಗೆ ಹೋಗ್ಲಿಲ್ರಿ, ಆದ್ರೂ ಪರೀಕ್ಷೆ ಬರೆದು ಪಾಸಾದಳು. ನನ್ನ ಮಗಳು ಎಲ್ಲಿತನಕ ಓದ್ತಾಳ ಅಲ್ಲಿವರೆಗೆ ಓದುಸ್ತೀನಿ’ ಎಂದರು.

‘ನಾನು ಮುಂದೆ ಕಲಾ ವಿಭಾಗದಲ್ಲಿ ಪದವಿ ಅಧ್ಯಯನ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉನ್ನತ ಅಧಿಕಾರಿ ಆಗುವ ಕನಸಿದೆ. ಅದನ್ನು ನನಸು ಮಾಡಿಕೊಳ್ಳುತ್ತೇನೆ’ ಎಂದು ವಿದ್ಯಾರ್ಥಿನಿ ಶ್ರೀದೇವಿ ತಿಳಿಸಿದರು.

ವಿದ್ಯಾರ್ಥಿನಿ ಶ್ರೀದೇವಿ ಅಪ್ಪಟ ಗ್ರಾಮೀಣ ಪ್ರತಿಭೆ ಶ್ರಮವಹಿಸಿ ಅಧ್ಯಯನ ಮಾಡುತ್ತಿದ್ದಳು ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
ಈಶ್ವರಪ್ಪ ಪ್ರಾಂಶುಪಾಲರು ಬಿಬಿಎಂಪಿ ಸರ್ಕಾರಿ ಪ.ಪೂ. ಮಹಾವಿದ್ಯಾಲಯ ಬಸವೇಶ್ವರನಗರ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT