ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ: ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಗೆ ಸಿದ್ಧತೆ

Published 1 ಜುಲೈ 2024, 5:47 IST
Last Updated 1 ಜುಲೈ 2024, 5:47 IST
ಅಕ್ಷರ ಗಾತ್ರ

ಹುಣಸಗಿ: ಕಳೆದ ವರ್ಷ ಹಿಂಗಾರು ಹಂಗಾಮಿಗೆ ಕಾಲುವೆ ನೀರಿನ ಕೊರತೆಯಿಂದಾಗಿ ಭತ್ತ ನಾಟಿ ಮಾಡದೇ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಎಕರೆ ಪ್ರದೇಶದ ಅಸಂಖ್ಯಾತ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದರು.

ಈ ಬಾರಿ ಮುಂಗಾರು ಹಂಗಾಮಿಗೆ ನೀರು ಬರುವ ಸಾಧ್ಯತೆ ಇದೆ ಎಂದು ಈಗಾಗಲೇ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ನಾಟಿಗೆ ಅಣಿಯಾಗುತ್ತಿದ್ದಾರೆ. ಹುಣಸಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕಿನ ರೈತರು ಭತ್ತ ನಾಟಿಗೆ ಅಗತ್ಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.

‘ಕಳೆದ ಎರಡು ವಾರಗಳ ಹಿಂದೆಯೇ ಲಭ್ಯವಿರುವ ಹಳ್ಳ, ಕೊಳ್ಳ, ಜಲ ಮೂಲಗಳ ಪಕ್ಕದ ಜಮೀನುಗಳಲ್ಲಿ ಭತ್ತದ ಸಸಿ ಹಾಕಿಕೊಂಡಿದ್ದು, ಈಗಾಗಲೇ ಸಸಿಗಳು ಕೂಡಾ ಚೆನ್ನಾಗಿ ಬಂದಿವೆ. ಕಾಲುವೆಗೆ ನೀರು ಬಿಡುವ ಸಮಯಕ್ಕೆ ಕಾದು ಕುಳಿತಿದ್ದೇವೆ’ ಎಂಬ ಮಾತುಗಳು ರೈತ ವಲಯದಲ್ಲಿ ಕೇಳಿ ಬರುತ್ತಿವೆ.

ಕಳೆದ ಮುಂಗಾರು ಹಂಗಾಮಿನಲ್ಲಿ ಭತ್ತಕ್ಕೆ ಬಂಪರ್ ಬೆಲೆ ಲಭ್ಯವಾಗಿದ್ದು, ಪ್ರತಿಯೊಬ್ಬ ರೈತರಿಗೆ ಭತ್ತ ಕೈ ಹಿಡಿದಿತ್ತು. ಅಲ್ಲದೇ ಇಳುವರಿ ಕೂಡಾ ಎಕರೆಗೆ 45 ರಿಂದ 50 ಚೀಲ ಬಂದಿತ್ತು. ಆದರೆ ಜಲಾಶಯಗಳಲ್ಲಿ ನೀರಿನ ಕೊರತೆಯಿಂದ ಹಿಂಗಾರು ನಾಟಿ ಮಾಡದೇ ಇರುವುದರಿಂದಾಗಿ ಮುಂಗಾರಿನ ಲಾಭವನ್ನು ಕುಳಿತು ತಿಂದಂತಾಯಿತು’ ಎಂದು ದ್ಯಾಮನಹಾಳ ಗ್ರಾಮದ ರೈತ ಲಕ್ಷ್ಮಿಕಾಂತ ಕುಲಕರ್ಣಿ ಹಾಗೂ ಕಾಮನಟಗಿ ಗ್ರಾಮದ ರಂಗಪ್ಪ ಡಂಗಿ ಹೇಳಿದರು.

ಈ ಬಾರಿ ಜೂನ್ ಆರಂಭದಲ್ಲಿಯೇ ಎರಡು ಬಾರಿ ಟಿಲ್ಲರ್ ಹೊಡೆದು ಹೊಲ ಹದ ಮಾಡಿಟ್ಟುಕೊಂಡಿದ್ದೇವೆ. ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾದಲ್ಲಿ ಜುಲೈ ಮೊದಲ ವಾರದಲ್ಲಿ ಅವಳಿ ಜಲಾಶಯಕ್ಕೆ ನೀರು ಬರುವ ಸಾಧ್ಯತೆ ಇದ್ದು, ಕಾಲುವೆಗೆ ನೀರು ಬಂದ ತಕ್ಷಣವೇ ಪಟ್ಲರ್‌ ಹೊಡೆದು ಭತ್ತ ನಾಟಿ ಮಾಡುತ್ತೇವೆ’ ಎಂದು ವಜ್ಜಲ ಗ್ರಾಮದ ನಿಂಗನಗೌಡ ಬಸನಗೌಡ್ರ, ಬಸವರಾಜ ಮೇಟಿ ಹಾಗೂ ಶ್ರೀಶೈಲ ದೇವತಕಲ್ಲ ತಿಳಿಸಿದರು.

ಜಲಾಶಯದ ನೀರಿನ ಮಾಹಿತಿ:

‘33 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ 21.167 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 140 ಕ್ಯುಸೆಕ್ ನೀರು ಒಳ ಹರಿವು ಇದ್ದು ಯಾವುದೇ ಹೊರ ಹರಿವು ಇರುವುದಿಲ್ಲ’ ಎಂದು ನಾರಾಯಣಪುರ ಡ್ಯಾಂ ಡಿವಿಜನ್ ಮೂಲಗಳು ತಿಳಿಸಿವೆ.

‘ಇನ್ನು ಆಲಮಟ್ಟಿ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದಲ್ಲಿ 123 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಭಾನುವಾರ ಡೆಡ್ ಸ್ಟೋರೆಜ್ ಹೊರತು ಪಡಿಸಿ 17 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ’ ಎಂದು ಕೆಬಿಜೆಎನ್ಎಲ್ ಮೂಲಗಳಿಂದ ತಿಳಿದು ಬಂದಿದೆ. ‌

ಭಾನುವಾರ 10,500 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಇದರಿಂದಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ದಾಖಲಾದಲ್ಲಿ ಕೆಲವೇ ದಿನಗಳಲ್ಲಿ ಎರಡೂ ಜಲಾಶಯಗಳು ಭರ್ತಿಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT