ಬುಧವಾರ, ಜನವರಿ 27, 2021
21 °C
ಮಾಸ್ಕ್‌, ಕೋವಿಡ್‌ ಪರೀಕ್ಷೆ, ಅನುಮತಿ ಪತ್ರ ಕಡ್ಡಾಯ

ಶಾಲಾ, ಕಾಲೇಜು ಆರಂಭಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಜನವರಿ 1ರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿ ಆರಂಭಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಶಾಲಾ–ಕಾಲೇಜು ಆವರಣ, ಕೋಣೆಗಳನ್ನು ಸ್ಯಾನಿಟೈಸರ್‌ ಸಿಂಪಡಿಸಿ ಸ್ವಚ್ಛತೆ ಮಾಡಲಾಗಿದೆ. ಅಂತರ ಕಾಪಾಡಿಕೊಳ್ಳಲು ಗುರುತು ಹಾಕಲಾಗಿದೆ. ಕಾಲೇಜುಗಳಲ್ಲಿ ಒಂದು ಬೆಂಚಿಗೆ ಇಬ್ಬರಂತೆ 1 ಕೊಠಡಿಗೆ ಗರಿಷ್ಠ 50 ವಿದ್ಯಾರ್ಥಿಗಳಿಗೆ ಆಸನ, ಕೈ ತೊಳೆಯಲು ನೀರು, ಸಾಬೂನಿನ ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ಹೊರಡಿಸಿದ ಸೂಚನೆಗಳನ್ನು ಪಾಲಿಸಲಿದ್ದಲ್ಲಿ ಗಂಭೀರ ಲೋಪ ಎಂದು ಪರಿಗಣಿಸಲಾಗುತ್ತಿದೆ.

ಕೋವಿಡ್‌ ಪರೀಕ್ಷೆ ಕಡ್ಡಾಯ: ಶಾಲಾ–ಕಾಲೇಜು ಅಧ್ಯಾಪಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ಆರಂಭದ ಕುರಿತು ಪೂರ್ವ ಸಿದ್ಧತೆಗಳ ಬಗ್ಗೆ ಅನುದಾನಿತ ಮತ್ತು ಅನುದಾನ ರಹಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯ ಗುರುಗಳ ಸಭೆ ನಡೆಸಲಾಗಿದೆ. ಜಿಲ್ಲೆಯ ಪಿಯು ಉಪನಿರ್ದೇಶಕರು ಕಾಲೇಜುಗಳ ಪ್ರಾಚಾರ್ಯರ ಸಭೆ ನಡೆಸಿದ್ದಾರೆ.

ಕಲಬುರ್ಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಡಿ.30ರಂದು ಸಭೆ ನಡೆದಿದೆ. ಈ ಸಭೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸುರಕ್ಷಿತಾ ದೃಷ್ಟಿಯಿಂದ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಶಾಲೆಗಳಲ್ಲಿ ಅನುಸರಿಸಬೇಕಾದ ಕ್ರಮಗಳು: ಕೋವಿಡ್-19 ಸಂಬಂಧ ಶಾಲೆಗಳಲ್ಲಿ ಅನುಸರಿಸಬೇಕಾದ ಎಸ್‍ಒಪಿ ಪಾಲಿಸಬೇಕು. ಶಾಲೆಯ ಎಲ್ಲಾ ಕೋಣೆಗಳನ್ನು ಹಾಗೂ ಶಾಲಾ ವಾಹನ ಸ್ಯಾನಿಟೈಜ್ ಮಾಡಬೇಕು. ಪ್ರತಿ ಶಾಲೆಯ ಮುಖ್ಯ ಗುರುಗಳು ತಮ್ಮ ಶಾಲೆಯ ಶಿಕ್ಷಕರು, ಸಿಬ್ಬಂದಿ ಸಭೆ ನಡೆಸಿ, ಈ ಬಗ್ಗೆ ಎಸ್‍ಒಪಿಯಂತೆ ಕ್ರಮವಹಿಸಬೇಕು. ಖಾಸಗಿ ಶಾಲೆಗಳ ಬಗ್ಗೆ ಸಿಆರ್‌ಪಿ ನಿಗಾ ವಹಿಸಬೇಕು.

ವಿದ್ಯಾಗಮ ಕಾರ್ಯಕ್ರಮದ ಹಾಗೂ ಎಸ್‍ಒಪಿ ಸುತ್ತೋಲೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ, ತಮ್ಮ ಬ್ಲಾಕ್‌ನ ಎಲ್ಲ ಶಾಲಾ ಮುಖ್ಯಸ್ಥರಿಗೆ ರವಾನಿಸಬೇಕು. ಶಾಲೆಗಳಿಗೆ ಥರ್ಮಲ್ ಸ್ಕ್ಯಾನರ್ ಒದಗಿಸಬೇಕು. ಖಾಸಗಿ ಶಾಲೆಯವರು ಅವರ ಆಡಳಿತ ಮಂಡಳಿಯ ಅನುದಾನದಲ್ಲಿ ಖರೀದಿಸಬೇಕು. ಪ್ರತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಆ ಶಾಲೆಯಲ್ಲಿ ಎಸ್‍ಒಪಿ ಅನುಷ್ಠಾನಗೊಳಿಸುವ ನೋಡಲ್ ಅಧಿಕಾರಿಯಾಗಿರುತ್ತಾರೆ. ಶಾಲೆಯ ಪ್ರತಿ ಮಗುವಿನ ಥರ್ಮಲ್ ಸ್ಕ್ಯಾನರ್ ಮಾಡುವ ಜವಾಬ್ದಾರಿ ಶಾಲೆಯ ದೈಹಿಕ ಶಿಕ್ಷಕ ಶಿಕ್ಷಕರದ್ದು.

ಒಂದು ಕೋಣೆಯಲ್ಲಿ 15 ಮಕ್ಕಳಿಗೆ ಪಾಠ ಬೋಧನೆ ಮಾಡಿಸಬೇಕು. ಕೋಣೆ ಗಳು ವಿಶಾಲವಾಗಿದ್ದರೆ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಮಕ್ಕಳನ್ನು ಕೂಡಿಸಬಹುದು. ಆದರೆ, ಎಸ್‍ಒಪಿಯಲ್ಲಿ ತಿಳಿಸಿದ ನಿರ್ದೇಶನ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು