ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಾದ ಬಳಿಕ ಪ್ರಥಮ ಬಾರಿಗೆ ಪ್ರಧಾನಿ ಮೋದಿ ಆಗಮನ

ಕಾಲಜ್ಞಾನಿ ಬಸವಣ್ಣ ಕ್ಷೇತ್ರ, ಛಾಯಾ ಭಗವತಿಯ ಸನ್ನಿಧಾನಕ್ಕೆ ಆಗಮನ
Last Updated 19 ಜನವರಿ 2023, 5:19 IST
ಅಕ್ಷರ ಗಾತ್ರ

ಯಾದಗಿರಿ/ ಹುಣಸಗಿ: ಯಾದಗಿರಿ ಜಿಲ್ಲೆ ಘೋಷಣೆಯಾದ ಬಳಿಕ ಪ್ರಥಮ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಆಗಮಿಸುತ್ತಿದ್ದು, ಸುರಪುರ ಮತಕ್ಷೇತ್ರದ ಜನರು ಪುಳಕಿತರಾಗಿದ್ದಾರೆ.

ಕಾಲಜ್ಞಾನಿ ಕೊಡೇಕಲ್ಲ ಬಸವಣ್ಣ ಕ್ಷೇತ್ರ ಹಾಗೂ ಛಾಯಾ ಭಗವತಿಯ ಸನ್ನಿಧಾನವಾಗಿರುವ ಕೊಡೇಕಲ್ಲ ಗ್ರಾಮಕ್ಕೆ ಪ್ರಧಾನಿ ಮೋದಿಯವರು ಗುರುವಾರ ಮಧ್ಯಾಹ್ನ 12 ಗಂಟೆಗೆ ಆಗಮಿಸಲಿದ್ದಾರೆ. ಮೂರು ಹೆಲಿಪ್ಯಾಡ್‌ಗಳನ್ನು ರಚಿಸಲಾಗಿದ್ದು, ಹೆಲಿಪ್ಯಾಡ್‌ನಿಂದ ಕಾರ್ಯಕ್ರಮ ನಡೆಯುವ ವೇದಿಕೆಗೆ ರಸ್ತೆ ಡಾಂಬರೀಕರಣ ಮಾಡಲಾಗಿದೆ.

ವೇದಿಕೆಗೆ ಜರ್ಮನ್‌ ತಂತ್ರಜ್ಞಾನದ ಚಪ್ಪರ ಹಾಕಲಾಗಿದೆ. ಸುರಪುರ ಮತಕ್ಷೇತ್ರದಲ್ಲಿ ಪ್ರಧಾನಿಯನ್ನು ಕಣ್ಣಾರೆ ನೋಡಲು ಹಲವು ಉತ್ಸಾಕರಾಗಿದ್ದಾರೆ. ಅದರಲ್ಲೂ ಕೋಡೆಕಲ್ಲ ಗ್ರಾಮ ಶಾಸಕ ರಾಜೂಗೌಡ ಸ್ವತಂ ಊರು. ಹೀಗಾಗಿ ಪ್ರಧಾನಿಯನ್ನು ಶಾಸಕರು ಕರೆಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಕೊಡೇಕಲ್ಲ ಗ್ರಾಮದ ಮೋದಿ ಅಭಿಮಾನಿಯಾದ ಕಪ್ಪಡಿ ಸಂಗಯ್ಯ ಅವರು ಮುಖದಲ್ಲಿ ಹೊಳಪು ಇಮ್ಮಡಿಗೊಂಡಿದ್ದು, ಮೋದಿ ಅವರನ್ನು ನಮ್ಮ ಗ್ರಾಮದಲ್ಲಿಯೇ ಕಣ್ಣಾರೆ ಕಾಣುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದು ತಮ್ಮ ಮನದಾಳದ ಮಾತನ್ನು ‘ಪ್ರಜಾವಾಣಿ’ಗೆ ಹಂಚಿಕೊಂಡರು.

ಈ ಹಿಂದೆ ಜರುಗಿದ 2019 ರಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲೆಂದು ಹರಕೆ ಹೊತ್ತಿದ್ದರು.

‘ಕೊಡೇಕಲ್ಲನ ಕಾಲಜ್ಞಾನಿ ಬಸವೇಶ್ವರದಿಂದ ಮೈಸೂರಿನ ಕೆ.ಆರ್.ಪೇಟೆ ತಾಲ್ಲೂಕಿನ ಕಪ್ಪಡಿ ಕ್ಷೇತ್ರಕ್ಕೆ ಸುಮಾರು 600ಕ್ಕೂ ಹೆಚ್ಚು ಕೀ.ಮಿ ಪಾದಯಾತ್ರೆಯ ಮುಖಾಂತರ 15 ದಿನಗಳ ಕಾಲ ತೆರಳಿ ಹರಕೆ ತೀರಿಸಿದ್ದೆ. ಅವರನ್ನು ನಮ್ಮ ಕೊಡೇಕಲ್ಲ ಕ್ಷೇತ್ರದಲ್ಲಿ ಕಂಡು ಅವರೊಂದಿಗೆ ಮಾತನಾಡುವುದು ನಮ್ಮ ಜೀವನದ ಅವಿಸ್ಮರಣೀಯ ಕ್ಷಣವಾಗಿದೆ’ ಎಂದು ಹೇಳಿದರು.

‘ಮನೆಯಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಗುರುವಾರ ಮನೆಯಲ್ಲಿ ಸಿಹಿ ಮಾಡಿ ಊಟಮಾಡುತ್ತಿದ್ದೇವೆ’ ಎಂದು ಹೇಳಿದರು.

ಕೊಡೇಕಲ್ಲ ಗ್ರಾಮದ ಬಸವರಾಜ ಭದ್ರಗೋಳ ಪತ್ರಿಕೆಯೊಂದಿಗೆ ಮಾತನಾಡಿ, ‘ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾವು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿ ನಮ್ಮ ಪ್ರಧಾನಿಗಳು ಕಾರ್ಯನಿರ್ವಹಿಸಿದ್ದಾರೆ. ಅವರನ್ನು ನಮ್ಮ ಕಾಲಜ್ಞಾನಿಯ ಕ್ಷೇತ್ರದಲ್ಲಿ ಕಣ್ಣಾರೆ ಕಂಡು ಅವರ ಮಾತುಗಳನ್ನು ಆಲಿಸುವುದು ನಮ್ಮ ಸುದೈವ‘ ಎಂದು ಹೇಳಿದರು.

ಪೊಲೀಸ್ ಬಂದೊಬಸ್ತ್‌
ಜಿಲ್ಲಾ ಪೊಲೀಸ್ ವತಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಬಂದೋಬಸ್ತ್ ಮಾಡಲಾಗಿದೆ. ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಹೊರವಲಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವ ನಿಟ್ಟಿನಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ. ಇದರಿಂದಾಗಿ ಸೂಕ್ತ ಪೊಲೀಸ್ ಭದ್ರತೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

7 ಜನ ಎಸ್ಪಿ, 20 ಡಿವೈಎಸ್ಪಿ, 50 ಸಿಪಿಐ 125 ಪಿಎಸ್ಐ, 1,800 ಎಸ್ಸಿ, ಪಿಸಿ, 15 ಕೆಎಸ್‌ಆರ್‌ಪಿ ತುಕಡಿ, 13 ಡಿಎಆರ್, ಹಾಗೂ ಒಂದು ಗರುಡಾ ಪಡೆ ಜೊತೆಯಲ್ಲಿ ವಿಶೇಷ ಭದ್ರತಾ ಪಡೆ ನಿಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಸ್ಥಳದ ಪಕ್ಕದಲ್ಲಿಯೇ ಸುಮಾರು 10 ಕಡೆ ವಿವಿಧ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಮಾಡಲಾಗಿದೆ. ಅಲ್ಲದೇ ಅಲ್ಲಲ್ಲಿ 100 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.

ಕಪ್ಪು ಬಟ್ಟೆ ಪ್ರದರ್ಶನ ಮಾಡುವುದು, ಘೋಷಣೆ ಕೂಗುವಂತೆ ಚಟುವಟಿಕೆಗಳನ್ನು ನಿಷೇದಿಸಲಾಗಿದೆ. ಸಮಾರಂಭದ ಸ್ಥಳದಲ್ಲಿ 5 ಟೆಂಟ್‌ಗಳನ್ನು ಹಾಕಲಾಗಿದೆ.

ಪ್ರಧಾನಿ ಕಾರ್ಯಕ್ರಮ : ಬಸ್ ವ್ಯತ್ಯಯ
ಯಾದಗಿರಿ :
ಜನವರಿ 19 ರಂದು ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗೆ ವಿವಿಧ ಯೋಜನೆ, ಶಂಕುಸ್ಥಾಪನೆ ನೆರವೇರಿಸಲು ಆಗಮಿಸುತ್ತಿರುವ ಪ್ರಧಾನ ಮಂತ್ರಿಗಳ ಕಾರ್ಯಕ್ರಮಕ್ಕೆ ಬಸ್‌ಗಳು ಕರಾರು ಒಪ್ಪಂದದ ಮೇಲೆ ನೀಡುತ್ತಿರುವುದರಿಂದ ಗ್ರಾಮಾಂತರ ಮತ್ತು ಮುಖ್ಯ ಮಾರ್ಗಗಳಲ್ಲಿ ಸಂಚರಿಸುವ ಬಸ್‌ಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಯಾದಗಿರಿ ವಿಭಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಹರಿಬಾಬು ತಿಳಿಸಿದ್ದಾರೆ.

ಯಾದಗಿರಿ, ಕಲಬುರಗಿ ಜಿಲ್ಲೆಯಾದ್ಯಂತ ಹೊಸದಾಗಿ ರಚನೆಯಾದ ಕಂದಾಯ ಗ್ರಾಮಗಳ ಸುಮಾರು 24,324 ಫಲಾನುಭವಿಗಳಿಗೆ ಪ್ರಧಾನಿ ಮೋದಿಯವರು ಮಳಖೇಡದಲ್ಲಿ ಹಕ್ಕು ಪತ್ರಗಳನ್ನು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾದಗಿರಿ ಜಿಲ್ಲೆಯಾದ್ಯಂತ ರಚನೆಯಾದ ಸುಮಾರು 85 ಕಂದಾಯ ಗ್ರಾಮಗಳ ಫಲಾನುಭವಿಗಳನ್ನು ಕರೆದುಕೊಂಡು ಹೋಗಲು 485 ನಿಗಮದ ಬಸ್‌ಗಳು ಕರಾರು ಒಪ್ಪಂದದ ಮೇಲೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ನಿಮಿತ್ಯ ಯಾದಗಿರಿ ಜಿಲ್ಲೆಯಾದ್ಯಂತ ಜನವರಿ 19 ರಂದು ಗ್ರಾಮೀಣ ಭಾಗದಲ್ಲಿ ಹಾಗೂ ಪ್ರಮುಖ ಮಾರ್ಗಗಳಲ್ಲಿ ಬಸ್‌ಗಳ ಸೇವೆ ಒದಗಿಸಲು ಕಷ್ಟಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ನಿಗಮದೊಂದಿಗೆ ಸಹಕರಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧೂಮಪಾನ, ಮದ್ಯಪಾನ ಗುಟ್ಕಾ ವಸ್ತುಗಳ ನಿರ್ಭಂಧ

ಜನವರಿ 19ರ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹುಣಸಗಿ ತಾಲ್ಲೂಕಿನ ಕೊಡೇಕಲ್ ಗ್ರಾಮಕ್ಕೆ ಆಗಮಿಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವವರಿದ್ದಾರೆ. ಈ ಸಂಬಂಧ ಕೊಡೇಕಲ್ ಗ್ರಾಮದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ, ತಂಬಾಕು ಹಾಗೂ ತರೆ ನಶೆಯಾಗುವ ವಸ್ತುಗಳಿಗೆ ನಿರ್ಭಂದ ಮಾಡಲಾಗಿದೆ ಎಂದು ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2 ಲಕ್ಷ ಜನರಿಗೆ ಊಟದ ವ್ಯವಸ್ಥೆ

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಗೋಧಿ ಹುಗ್ಗಿ, ಪಲಾವ್, ಮೊಸರನ್ನ ಮತ್ತು ಉಪ್ಪಿನಕಾಯಿ ಸಿದ್ದಪಡಿಸುತ್ತಿದ್ದು, 200 ಬಾಣಸಿಗರು 600 ಕ್ಕೂ ಹೆಚ್ಚಿನ ಅಡುಗೆ ಸಿಬ್ಬಂದಿ ಅಡುಗೆ ತಯಾರಿಕೆಯಲ್ಲಿ ನಿರತವಾಗಿದ್ದಾರೆ. 2 ಲಕ್ಷಕ್ಕೂ ಹೆಚ್ಚಿನ ಜನತೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕ್ಯಾಟರಿಂಗ್ ಮಾಲೀಕ ಶಂಭು ತಿಳಿಸಿದರು.

ಸುರಪುರ ಮತಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳ ರಸ್ತೆ ಮತ್ತು ಕಾರ್ಯಕ್ರಮಕ್ಕೆ ಆಗಮಿಸುವ ಮಾರ್ಗಗಳಲ್ಲಿ ಫೆಕ್ಸ್ ಬ್ಯಾನರ್, ಬಂಟಿಂಗ್ಸ್‌ಗಳು ಹಾಗೂ ಬಾವುಟಗಳು ರಾರಾಜಿಸುತ್ತಿವೆ. 65 ಎಕರೆ ಪ್ರದೇಶದಲ್ಲಿ ಎಲ್ಲ ಜರ್ಮನ್ ಶೈಲಿಯ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, 1.25 ಲಕ್ಷ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್.ಆರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT